ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಕ್ಕೇರಾ: ನೀಗದ ಕುಡಿಯುವ ನೀರಿನ ಬವಣೆ

Last Updated 7 ಏಪ್ರಿಲ್ 2022, 4:06 IST
ಅಕ್ಷರ ಗಾತ್ರ

ಕಕ್ಕೇರಾ: ಬಿಸಿಲಿನ ಧಗೆ ಏರುತ್ತಿದ್ದಂತೆಯೇ ಪಟ್ಟಣದಾದ್ಯಂತ ಕುಡಿಯುವ ನೀರಿನ ಕೊರತೆ ತೀವ್ರ ಗತಿಯಲ್ಲಿ ತಲೆದೂರುತ್ತಿದೆ. ಏಪ್ರಿಲ್ ಆರಂಭದಲ್ಲೇ ಈ ರೀತಿಯ ಅಭಾವ ಸೃಷ್ಟಿ ಆಗಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಪಟ್ಟಣದ 23 ವಾರ್ಡ್‌ಗಳಲ್ಲಿ ಸುಮಾರು 35 ಸಾವಿರ ಜನರು ಇದ್ದಾರೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಹಲವು ಕುಡಿಯುವ ನೀರಿನ ಘಟಕಗಳಿಗೆ ಚಾಲನೆ ನೀಡಿದ್ದರೂ ಜನರ ಮನೆ ಬಾಗಿಲಿಗೆ ನೀರು ತಲುಪುತ್ತಿಲ್ಲ.

‘ಶೆಟ್ಟರ ಓಣಿ, ಹಳೆಬಜಾರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಬಳಕೆಗೆ ಬಾರದೆ ಶಿಥಿಲ ಅವಸ್ಥೆಯ ಹಂತದಲ್ಲಿವೆ. ದುರಸ್ತಿ ಮಾಡುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಅಧಿಕಾರಿಗಳು ಕಾಲಹರಣ ಮಾಡುತ್ತಿದ್ದಾರೆ ಹೊರತು ಕ್ರಮ ತೆಗೆದುಕೊಳ್ಳುತ್ತಿಲ್ಲ’ ಎನ್ನುತ್ತಾರೆ ನಿವಾಸಿ ವೆಂಕಟೇಶ ದೊರೆ.

ಪಟ್ಟಣ ಹಾಗೂ ಗ್ರಾಮೀಣ ಭಾಗದ ಅನೇಕ ಕಡೆ ಶುದ್ಧ ಕುಡಿಯುವ ನೀರಿನ ಸಮಸ್ಯೆ ಪ್ರತಿ ವರ್ಷ ಸಾಮಾನ್ಯವಾಗಿದೆ. ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಶಾಶ್ವತ ಪರಿಹಾರಕ್ಕೆ ಮುಂದಾಗುತ್ತಿಲ್ಲ ಎಂಬುದು ಇಲ್ಲಿನವರ ವಾದ.

ಕುಡಿಯುವ ನೀರಿನ ಯೋಜನೆಯ ಅನುಷ್ಠಾನದ ಆರಂಭದಲ್ಲಿ ಅಧಿಕಾರಿ ಹಾಗೂ ಜನ ನಾಯಕರು ಉತ್ಸಾಹ ತೋರಿಸಿ, ಕಾಮಗಾರಿಗೆ ಚಾಲನೆ ನೀಡುತ್ತಾರೆ. ಆ ಬಳಿಕ ವರ್ಷಗಳೇ ಉರುಳಿದರೂ ಅನುಷ್ಠಾನಿತ ಯೋಜನೆ ಏನಾಯಿತು ಎಂಬದರ ಬಗ್ಗೆ ಯೋಚಿಸಲ್ಲ. ಅಪೂರ್ಣ ಕಾಮಗಾರಿ ನಡೆಸಿದ ಗುತ್ತಿಗೆದಾರ ಹಾಗೂ ಅಧಿಕಾರಿಗಳ ವಿರುದ್ಧ ಶಾಸಕರು ಕ್ರಮ ತೆಗೆದುಕೊಂಡರೇ ಯೋಜನೆಗಳು ಜಾರಿಯಾಗಿ ವಾರ್ಡ್‌ಗಳ ಜನರಿಗೆ ಕುಡಿಯುವ ನೀರು ಲಭ್ಯವಾಗುತ್ತಿತ್ತು ಎನ್ನುತ್ತಾರೆ ನಂದಪ್ಪ ಗಂಟಿ.

ಗುಗಲಗಟ್ಟಿಯಿಂದ ಪಟ್ಟಣದ ನಿವಾಸಿಗಳಿಗೆ ಶೀಘ್ರವೇಕುಡಿಯುವ ನೀರು ಸರಬರಾಜು ಮಾಡಿ. ಬೇಸಿಗೆಯ ಆರಂಭದಲ್ಲೇ ನೀರಿನ ಹಾಹಾಕಾರ ಶುರುವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಲಕ್ಷ್ಯವಹಿಸಬೇಕು ಎಂಬುದು ನಿವಾಸಿಗಳಾದ ಬಸವರಾಜ ಅಂಬಿಗರ, ಮಾನಪ್ಪ ಭಂಟನೂರು, ಸೋಮನಾಥ ಹುಡೇದ್ ಮನವಿ.

ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಎಲ್ಲ 23 ವಾರ್ಡ್‌ಗಳಿಗೆ ಶುದ್ಧ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸದಿದ್ದಲ್ಲಿ ಪ್ರತಿಭಟನೆ ಮಾಡುವುದಾಗಿ ಹೇಳುತ್ತಾರೆ ಮುಖಂಡ ಚಂದ್ರು ವಜ್ಜಲ್.

*
ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಡಿಮೆ ಇದೆ. ಪಟ್ಟಣದ ನಿವಾಸಿಒಗಳಿಗೆ ಶುದ್ಧವಾದ ಕುಡಿಯುವ ನೀರಿನ ಸಮಸ್ಯೆಯನ್ನು ಶೀಘ್ರವೇ ಬಗೆಹರಿಸಲಾಗುವುದು.
-ಪ್ರವೀಣಕುಮಾರ, ಪುರಸಭೆ ಮುಖ್ಯಾಧಿಕಾರಿ

*
ನಾವು ನಿತ್ಯ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದೇವೆ. ನೀರಿನ ಟ್ಯಾಂಕ್, ನಲ್ಲಿ, ಕೈಪಂಪ್‌ಗಳ ಮೂಲಕ ನೀರಿನ ವ್ಯವಸ್ಥೆ ಮಾಡಬೇಕು
-ನಂದಪ್ಪ ಗಂಟಿ, ನಿವಾಸಿ

*
ಗುಗಲಗಟ್ಟಿಯಿಂದ ಪಟ್ಟಣಕ್ಕೆ ಶುದ್ಧ ಕುಡಿಯುವ ನೀರು ಒದಗಿಸುವ ಕಾಮಗಾರಿ ಇನ್ನೂ ಪುರ್ಣಗೊಂಡಿಲ್ಲ. ಈ ಬೇಸಿಗೆ ಒಳಗೆ ಶಾಶ್ವತ ಕುಡಿಯುವ ನೀರು ಒದಗಿಸಿ
-ನಿಂಗಯ್ಯ ಬೂದಗುಂಪಿ, ಪಟ್ಟಣದ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT