ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಣಸಗಿ: ಶುದ್ಧ ಕುಡಿಯುವ ನೀರಿಗೆ ತತ್ವಾರ

ವಿದ್ಯುತ್ ಪೂರೈಕೆ ಸ್ಥಗಿತದಿಂದ ನೀರಿನ ಸಮಸ್ಯೆ; ಶಾಶ್ವತ ಪರಿಹಾರಕ್ಕೆ ಆಗ್ರಹ
Last Updated 3 ಮೇ 2022, 5:08 IST
ಅಕ್ಷರ ಗಾತ್ರ

ಹುಣಸಗಿ: ತಾಲ್ಲೂಕಿನ ಶ್ರೀನಿವಾಸಪುರ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಅದರ ಶಾಶ್ವತ ಪರಿಹಾರಕ್ಕೆ ಆದ್ಯತೆ ನೀಡಬೇಕಿದೆ.

ತಾಲೂಕಿನ ವಜ್ಜಲ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಈ ಗ್ರಾಮ ಬರುತ್ತಿದ್ದು, 400ಕ್ಕೂ ಹೆಚ್ಚು ಮನೆಗಳಿವೆ. ಬಹುತೇಕ ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ಕುಟುಂಬದ ಜನರೇ ಹೆಚ್ಚಾಗಿ ವಾಸಿಸುತ್ತಿದ್ದು, ನಿತ್ಯವೂ ನೀರಿನದ್ದೇ ಚಿಂತೆ ಎನ್ನುವಂತಾಗಿದೆ.

ಈ ಗ್ರಾಮದಲ್ಲಿ ಕಳೆದ 2008-09 ನೇ ಸಾಲಿನಲ್ಲಿ ಗ್ರಾಮದಲ್ಲಿ 3 ನೀರಿನ ತೊಟ್ಟಿಗಳನ್ನು ಅಳವಡಿಸಲಾಗಿದೆ. ಅವುಗಳಿಗೆ ಸರಿಯಾದ ನಲ್ಲಿ ಇಲ್ಲ. ವಿದ್ಯುತ್ ಸರಿಯಾಗಿ ಸಿಗುತ್ತಿಲ್ಲ. ಇದರಿಂದಾಗಿ ನೀರಿದ್ದರೂ ಗ್ರಾಮಕ್ಕೆ ಸರಿಯಾಗಿ ಪೂರೈಕೆಯಾಗುತ್ತಿಲ್ಲ ಎಂದು ಗ್ರಾಮಸ್ಥರಾದ ಸೋಮಣ್ಣ ಪೂಜಾರಿ ಹಾಗೂ ಭೀಮಣ್ಣ ಕಡದರಾಳ ದೂರಿದರು.

ಗ್ರಾಮಕ್ಕೆ ನೀರು ಪೂರೈಕೆಯಾಗುತ್ತಿರುವ (ಟಿಸಿ) ವಿದ್ಯುತ್ ಪರಿವರ್ತಕಕ್ಕೆ ಇಂದಿನವರೆಗೂ ನಿರಂತರ ಜ್ಯೋತಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಇದರಿಂದಾಗಿ ಕೇವಲ 3 ರಿಂದ 4 ತಾಸು ವಿದ್ಯುತ್ ಪೂರೈಕೆಯಾಗುತ್ತಿದೆ ಎಂದು ದ್ಯಾವಣ್ಣಗೌಡ ಹೇಳಿದರು.

₹72 ಲಕ್ಷ ವೆಚ್ಚದ ಯೋಜನೆ: ಕುಡಿಯುವ ನೀರಿನ ಯೋಜನೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೊಜನೆಯಡಿ ₹72 ಲಕ್ಷ ವೆಚ್ಚದಲ್ಲಿ ಶ್ರೀನಿವಾಸಪುರ, ಮಂಜಲಾಪುರಹಳ್ಳಿ ಹಾಗೂ ಕನಗಂಡನಹಳ್ಳಿ ಗ್ರಾಮಗಳಿಗೆ ನೀರು ಒದಗಿಸಲು ಆದ್ಯತೆ ನೀಡಲಾಗಿದೆ. ಆದರೆ, ಆ ಕೆಲಸ ಇನ್ನೂ ಪೂರ್ಣಗೊಂಡಿಲ್ಲ.

ಸದ್ಯ ಹಳ್ಳದ ಬಳಿ ತೆರೆದ ಬಾವಿ ತೋಡಲಾಗಿದ್ದು, ನೀರು ಕೂಡಾ ಸಾಕಷ್ಟು ಲಭ್ಯವಾಗಿದೆ. ಟ್ಯಾಂಕ್ ನಿರ್ಮಾಣ ಕಾರ್ಯವೂ ಪೂರ್ಣಗೊಂಡಿದ್ದು, ಪೈಪ್‌ಲೈನ್ ಸಂಪರ್ಕ ಕಲ್ಪಿಸಬೇಕಿದೆ. ಜೆಜೆಎಂ ಯೋಜನೆಯ ಅಡಿಯಲ್ಲಿ ಇನ್ನೂ ಮೂರು ತಿಂಗಳಲ್ಲಿ ಈ ಗ್ರಾಮಕ್ಕೆ ಮನೆಮನೆಗೆ ನೀರಿನ ಸಂಪರ್ಕ ಕಲ್ಪಿಸುವುದಾಗಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಹನುಮಂತಪ್ಪ ಮಾಹಿತಿ ನೀಡಿದರು.

ಆದರೆ, ಕೆಲಸ ವೇಗ ಹೆಚ್ಚಿಸುವ ಮೂಲಕ ಗ್ರಾಮಸ್ಥರ ಸಮಸ್ಯೆ ಪರಿಹಾರಕ್ಕೆ ಒತ್ತು ನೀಡಲಿ ಎಂದು ಜಯ ಕರ್ನಾಟಕ ರಕ್ಷಣಾ ಸೇನೆಯ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ಆಗ್ರಹಿಸಿದರು.

ಇದು ಮೂರು ಗ್ರಾಮಕ್ಕೆ ನೀರು ಪೂರೈಸುವಷ್ಟು ಸಾಮರ್ಥ್ಯದ ದೊಡ್ಡ ನೀರಿನ ತೊಟ್ಟಿ ನಿರ್ಮಿಸಿಲ್ಲ. ಆದ್ದರಿಂದ ಆಯಾ ಗ್ರಾಮದಲ್ಲಿರುವ ನೀರಿನ ಟ್ಯಾಂಕ್‌ಗಳಿಗೆ ನೇರವಾಗಿ ಸಂಪರ್ಕ ಕಲ್ಪಿಸುವ ಮೂಲಕ ನೀರು ಒದಗಿಸಲು ಆದ್ಯತೆ ನೀಡಬೇಕಿದೆ ಎಂದು ಗ್ರಾಮಸ್ಥರ ಒತ್ತಾಸೆಯಾಗಿದೆ.

*
3 ಗ್ರಾಮಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಕಾಮಗಾರಿ ಆರಂಭಿಸಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಪ್ರತಿಯೊಂದು ಮನೆಗೆ ನೀರು ಲಭ್ಯವಾಗಲಿದೆ
- ರಾಜೂಗೌಡ, ಸುರಪುರ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT