ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಅನುಷ್ಠಾನವಾಗದ 24x7 ನೀರು ಪೂರೈಕೆ, ತಪ್ಪದ ನೀರಿನ ಪರದಾಟ

ನಿರ್ಮಾಣ ಹಂತದಲ್ಲಿರುವ ನೂತನ ಜಾಕ್‌ವೆಲ್‌
Last Updated 30 ಮಾರ್ಚ್ 2022, 19:31 IST
ಅಕ್ಷರ ಗಾತ್ರ

ಯಾದಗಿರಿ: ನಗರಸಭೆ ವ್ಯಾಪ್ತಿಯ 31 ವಾರ್ಡ್‌ಗಳಿಗೆಭೀಮಾ ನದಿಯಿಂದ ದಿನ ಬಿಟ್ಟು ದಿನ ಕುಡಿಯುವ ನೀರು ಸರಬರಾಜು ಮಾಡುತ್ತಿರುವುದರಿಂದ ನಗರ ವಾಸಿಗಳಿಗೆ ತೊಂದರೆ ಆಗುತ್ತಿದೆ.

ನಗರ ಸಮೀಪದಲ್ಲೇ ಭೀಮಾನದಿ ಹರಿಯುತ್ತಿದ್ದರೂ 24X7 ನೀರು ಸೌಲಭ್ಯ ಕೇವಲ ಪ್ರಸ್ತಾವನೆಯಲ್ಲೇ ಉಳಿದಿದೆ.

ಸುಮಾರು 6 ದಶಕಗಳ ಹಿಂದೆಯೇ ಭೀಮಾನದಿಗೆ ಜಾಕ್‌ವೆಲ್‌ ನಿರ್ಮಾಣ ಮಾಡಲಾಗಿತ್ತು. ಅದು ಹಳೆಯದಾಗಿದ್ದು, ನಿರಂತರ ನೀರು ಪೂರೈಕೆ ಸವಾಲಾಗಿದೆ. ಒಂದು ದಿನ ಬಿಟ್ಟು ನೀರು ಪೂರೈಸುತ್ತಿರುವುದರಿಂದ ಕೆಲವು ಬಡಾವಣೆಗಳ ನಿವಾಸಿಗರಿಗೆ ಸಮರ್ಪಕವಾಗಿ ನೀರು ಸಿಗುತ್ತಿಲ್ಲ. ಹೀಗಾಗಿ, ಅವರು ನಗರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ.

ಬೇಸಿಗೆ ಅವಧಿಯಲ್ಲಿ ನೀರು ಪೂರೈಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ, ಎಲ್ಲ ಬಡಾವಣೆಗಳಿಗೆ ನೀರು ತಲುಪುತ್ತಿಲ್ಲ ಎನ್ನುವುದು ನಿವಾಸಿಗಳ ದೂರು.

ಬಡಾವಣೆಗಳಲ್ಲಿ ನಗರಸಭೆಯಿಂದ ಸುಮಾರು 86 ಕೈಪಂಪ್ (ಬೋರವೆಲ್)ಗಳು ಮತ್ತು 259 ಕಿರು ನೀರು ಸರಬರಾಜು ಕೊಳವೆಬಾವಿಗಳಿವೆ. ಇವುಗಳ ಮುಖಾಂತರ ನೀರು ಸರಬರಾಜು ಮಾಡಲಾಗುತ್ತಿದೆ.

ಗೃಹ ಮತ್ತು ವಾಣಿಜ್ಯ ಉದ್ದೇಶ ಸೇರಿ ನಗರಕ್ಕೆ ನಿತ್ಯ ಸುಮಾರು 10 ಎಂಎಲ್‌ಡಿ ನೀರಿನ ಅವಶ್ಯಕತೆ ಇದೆ. ಭೀಮಾ ನದಿ ಜತೆಗೆ ಕೈಪಂಪ್ (ಬೋರವೆಲ್) ಹಾಗೂ ಕಿರು ನೀರು ಸರಬರಾಜು ಕೊಳವೆ ಬಾವಿಗಳ ಮೂಲಕ ಸರಬರಾಜು ಮಾಡಲಾಗುತ್ತಿದೆ. ಸುಮಾರು 86 ಕೈಪಂಪ್ ಹಾಗೂ 259 ಕಿರು ನೀರು ಸರಬರಾಜು ಕೊಳವೆ ಬಾವಿಗಳಿವೆ. ಈ ಪೈಕಿ 32 ಕೈಪಂಪ್‌ ಹಾಗೂ 65 ಕಿರು ನೀರಿನ ಕೊಳವೆ ಬಾವಿಗಳು ದುರಸ್ತಿಯಲ್ಲಿವೆ. ರಿಪೇರಿ ಸಹ ಪ್ರಗತಿಯಲ್ಲಿದೆ ಎನ್ನುತ್ತಾರೆ ನಗರಸಭೆ ಅಧಿಕಾರಿಗಳು.

ಬೇಸಿಗೆ ಕಾಲದಲ್ಲಿ ಬಹಳಷ್ಟು ಕಡೆ ನೀರಿನ ಅವಶ್ಯಕತೆ ಇದ್ದರೂ ಅಧಿಕಾರಿಗಳು ಅವುಗಳ ತ್ವರಿತ ದುರಸ್ತಿಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬುವುದು ಸ್ಥಳೀಯರ ಆರೋಪ.

ನಗರದ ವಾರ್ಡ್ ಸಂಖ್ಯೆ 1, 2, 10, 18 ಮತ್ತು 24ರಲ್ಲಿ ಕೆಲವು ಹೊಸ ಬಡಾವಣೆಗಳು ನಿರ್ಮಾಣವಾಗಿವೆ. ಗುಡ್ಡದ ಮೇಲೂ ಮನೆಗಳು ನಿರ್ಮಾಣಗೊಂಡಿವೆ. ಈ ಭಾಗಗಳಲ್ಲಿ ನೀರು ಸರಬರಾಜು ಸಮಸ್ಯೆಯಾಗಿದೆ.

ದಿನದ 24 ಗಂಟೆಗಳಲ್ಲಿಯೂ ನೀರು ಸರಬರಾಜಿನ ಶಾಖೆಯ ಸಿಬ್ಬಂದಿ ತುರ್ತು ಸ್ಪಂದನಾ ತಂಡ ರಚಿಸಲಾಗಿದೆ ಎಂದು ಅಧಿಕಾರಿಗಳು ನೀಡುವ ಮಾಹಿತಿ.

ಕೆಯುಐಡಿಎಫ್‌ಸಿ- ಎನ್‌ಕೆಯು ಎಸ್‌ಐಪಿ ಯೋಜನೆಯಡಿ ರಾಜೀವ ಗಾಂಧಿ ನಗರ, ಮಾತಾ ಮಾಣಿಕೇಶ್ವರಿ ನಗರ, ನಜರತ ಕಾಲೊನಿ, ಮಿಲ್ಲತ್‌ ನಗರ, ಗಂಜ್ ಏರಿಯಾ, ಚಟ್ಟಿ ತೋಟ ಏರಿಯಾ, ಕೋಲಿವಾಡಾ ಪ್ರದೇಶಗಳಲ್ಲಿ ನಿರಂತರ ನೀರು ಸರಬರಾಜು ಮಾಡಲಾಗುತ್ತಿದೆ. ಉಳಿದ ಕಡೆ ನೀರಿನ ಅಭಾವ ಸಾಮಾನ್ಯವಾಗಿದೆ.

‘ಅಧಿಕಾರಿ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಕೂಗಳತೆಯ ದೂರದಲ್ಲಿ ಭೀಮಾನದಿ ಇದ್ದರೂ ನಗರದ ನಿವಾಸಿಗಳಿಗೆ ಸರಿಯಾಗಿ ನೀರು ಪೂರೈಕೆ ಆಗುತ್ತಿಲ್ಲ. ದಿನದಿಂದ ದಿನಕ್ಕೆ ನಗರ ಪ್ರದೇಶ ವಿಸ್ತಾರ ಆಗುತ್ತಿದೆ. ಅದಕ್ಕೆ ತಕ್ಕಂತೆ ನೀರಿನ ಪೂರೈಕೆ ಇಲ್ಲದಂತಾಗಿದೆ.ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಗಮನಹರಿಸಲಿ’ ಎನ್ನುತ್ತಾರೆ ನಗರ ನಿವಾಸಿ ಬಸವರಾಜ ಪಾಟೀಲ.

ಪಂಪ್‌ ಆಪರೇಟರ್‌ಗಳ ಕೊರತೆ
ನಗರಸಭೆ ವ್ಯಾಪ್ತಿಯಲ್ಲಿ ಪಂಪ್‌ ಆಪರೇಟರ್‌ಗಳ ತೀವ್ರ ಕೊರತೆ ಇದೆ. ಜೊತೆಗೆ ಸಹಾಯಕ ಪಂಪ್‌ ಆಪರೇಟರ್‌ಗಳ ಹುದ್ದೆ ಭರ್ತಿಯಾಗಿಲ್ಲ. ಇದರಿಂದ ಯಾವೂದಾದರೂ ದುರಸ್ತಿಗೆ ಬಂದರೆ ದಿನಗಟ್ಟಲೇ ಕಾಯಬೇಕಾದ ಪರಿಸ್ಥಿತಿ ಏರ್ಪಟ್ಟಿದೆ.

ತಲಾ 8 ಪಂಪ್‌ ಆಪರೇಟರ್‌ ಮತ್ತು ಸಹಾಯಕ ಪಂಪ್‌ ಆಪರೇಟರ್‌ಗಳ ಹುದ್ದೆ ಖಾಲಿ ಇದೆ. ದಿನಗೂಲಿ ಆಧಾರದ ಮೇಲೆ ಅವರನ್ನು ನೇಮಕ ಮಾಡಿಕೊಳ್ಳಲಾಗಿದೆ. ಇದರಿಂದ ನಗರದಲ್ಲಿ ನೀರಿನ ಬವಣೆ ತಪ್ಪುತ್ತಿಲ್ಲ. ಪೈಪ್‌ ಒಡೆದು ಹೊದರೆ ನೀರು ಪೋಲಾಗುವುದು, ಶೀಘ್ರ ದುರಸ್ತಿ ಆಗದಿರುವುದು ಸಾಮಾನ್ಯವಾಗಿದೆ.

ಹಳೆ ಜಾಕ್‌ವೆಲ್‌: ಬೇಸಿಗೆಗೆ ಸಮಸ್ಯೆ
ಭೀಮಾ ನದಿ ಪಕ್ಕದಲ್ಲಿ 50–60 ವರ್ಷಗಳ ಹಳೆಯದಾದ ಜಾಕ್‌ ವೆಲ್‌ ಇದ್ದು, ನಗರ ಬೆಳೆದಂತೆ ನೀರಿನ ಬೇಡಿಕೆ ತಕ್ಕಂತೆ ಪೂರೈಸಲು ಸವಾಲು ಆಗಿದೆ. ನಗರಕ್ಕೆ ನೀರು ಸರಬರಾಜು ಮಾಡುವ ಜಾಕ್‍ವೆಲ್ ಸ್ಥಳಾಂತರವಾಗಿಲ್ಲದಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ₹35 ಕೋಟಿ ವೆಚ್ಚದಲ್ಲಿ ನೂತನ ಜಾಕ್‌ವೆಲ್‌ ನಿರ್ಮಾಣ ಮಾಡಲಾಗುತ್ತಿದೆ. ಆದರೆ, ಕಾಮಗಾರಿ ಇನ್ನೂ ಪ್ರಗತಿಯಲ್ಲಿದೆ.

ಕುಡಿಯುವ ನೀರಿನ ಸಮಸ್ಯೆ ನೀಗಿಸಲು ನೂತನ ಜಾಕ್‌ವೆಲ್‌ ನಿರ್ಮಾಣಕ್ಕೆ ₹22 ಕೋಟಿ ಅಂದಾಜುವೆಚ್ಚ ತಯಾರಿಸಲಾಗಿತ್ತು. ಆದರೆ, ಕಾಮಗಾರಿಗೆ ₹29 ಕೋಟಿ ಅವಶ್ಯಕತೆ ಇತ್ತು. ಈಗ ಅದು ₹35 ಕೋಟಿಗೆ ತಲುಪಿದೆ. ಕಾಮಗಾರಿ ಪೂರ್ಣಗೊಳ್ಳುವ ವೇಳೆಗೆ ಇದು ಮತ್ತಷ್ಟು ಹೆಚ್ಚುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT