ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ರೋಣ್‌: 5 ನಿಮಿಷದಲ್ಲೇ 1 ಎಕರೆ ವ್ಯಾಪ್ತಿ ಕ್ರಿಮಿನಾಶಕ ಸಿಂಪಡಣೆ

ರೈತರ ಪಾಲಿಗೆ ವರದಾನ: ಕಾರ್ಮಿಕರಿಗೆ ನಿರಾಳಭಾವ
Last Updated 2 ಫೆಬ್ರುವರಿ 2019, 20:00 IST
ಅಕ್ಷರ ಗಾತ್ರ

ಸುರಪುರ: ದಾವಣಗೆರೆಯ ಎಂಜಿನಿಯರ್ ರಾಮಕೃಷ್ಣ ಎನ್.ಜಿ. ಅವರು ಎಂಬುವವರು ರೈತರ ಅನುಕೂಲಕ್ಕಾಗಿ ದ್ರೋಣ್ ಸಿದ್ಧಪಡಿಸಿದ್ದಾರೆ. ಈ ದ್ರೋಣ್ ಎಲ್ಲ ವಿಧದ ಬೆಳೆಗೆ ಅತ್ಯಂತ ಕಡಿಮೆ ಅವಧಿಯಲ್ಲಿ ಕ್ರಿಮಿನಾಶಕ ಸಿಂಪಡಿಸುತ್ತದೆ.

ತಾಲ್ಲೂಕಿನ ಭೈರಿಮರಡಿ ಗ್ರಾಮದ ಚಂದ್ರಶೇಖರ ರೆಡ್ಡಿ ಅವರ ದಾಳಿಂಬೆ ತೋಟದಲ್ಲಿ ಶನಿವಾರ ಪ್ರಾಯೋಗಿಕವಾಗಿ ದ್ರೋಣ್ ಕಾರ್ಯ ಪ್ರದರ್ಶಿಸಲಾಯಿತು. ಅದರ ಕಾರ್ಯವೈಖರಿ ಕಂಡು ಸಂತಸಪಟ್ಟ ರೈತರು ಮೊಬೈಲ್‌ಫೋನ್‌ಗಳಲ್ಲಿ ದ್ರೋಣ್ ಚಿತ್ರಗಳನ್ನು ಕ್ಲಿಕ್ಕಿಸಿಕೊಂಡರು.

‘ಅಗ್ರಿಕ್ಲೌಡ್ ಟೆಕ್ನಾಲಜಿ ಎಂಬ ಸಂಸ್ಥೆಯಡಿ ಈ ದ್ರೋಣ್ ತಯಾರಿಸಲಾಗಿದೆ. ಮೆಕ್ಯಾನಿಕಲ್, ಎರೋನಾಟಿಕಲ್ ಎಂಜಿನಿಯರ್‍ಗಳು ಸಲಹೆ ಮತ್ತು ಸಹಕಾರ ನೀಡಿದ್ದಾರೆ. ಪ್ರಗತಿಪರ ರೈತರು ಮಾರ್ಗದರ್ಶನ ನೀಡಿದ್ದಾರೆ’ ಎಂದು ಎಂಜಿನಿಯರ್ ಎನ್.ಜಿ.ರಾಮಕೃಷ್ಣ ’ಪ್ರಜಾವಾಣಿ‘ಗೆ ತಿಳಿಸಿದರು.

‘5 ನಿಮಿಷದಲ್ಲಿ 1 ಎಕರೆ ಜಮೀನಿಗೆ ಕ್ರಿಮಿನಾಶಕ ಸಿಂಪಡಿಸುವ ಸಾಮರ್ಥ್ಯ ದ್ರೋಣ್‌ ಹೊಂದಿದೆ. ಇದರಿಂದ ಕ್ರಿಮಿನಾಶಕ ಸಮವಾಗಿ ಸಿಂಪಡಣೆ ಆಗುವುದಲ್ಲದೇ ಹಣ ಮತ್ತು ಸಮಯದ ಉಳಿತಾಯವೂ ಆಗುತ್ತದೆ. ಯಾವುದೇ ಸಮಸ್ಯೆ ಕೂಡ ಆಗುವುದಿಲ್ಲ’ ಎಂದು ಅವರು ತಿಳಿಸಿದರು.

‘ದ್ರೋಣ್‌ನಿಂದ ಕ್ರಿಮಿನಾಶಕ ಸಿಂಪಡಿಸುವುದರಿಂದ ಯಾವುದೇ ಅಪಾಯ ಆಗಲ್ಲ. ಪ್ರಾಣಕ್ಕೆ ಎರವಾಗುವ ವಿಷಕಾರಿ ಕ್ರಿಮಿನಾಶಕ ಸಿಂಪಡಿಸುವ ಪ್ರಮೇಯ ಕಾರ್ಮಿಕರಿಗೆ ಇರುವುದಿಲ್ಲ. ಅವರು ಬೇರೆ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳಬಹುದು’ ಎಂದು ಅವರು ವಿವರಿಸಿದರು.

ದ್ರೋಣ್ ಪೈಲೆಟ್ ವಿನಯಕುಮಾರ, ಎಂಜಿನಿಯರ್‍ಗಳಾದ ಪ್ರವೀಣ ಮತ್ತು ಸಚಿನ್, ಜಮೀನು ಮಾಲಿಕ ಚಂದ್ರಶೇಖರರೆಡ್ಡಿ, ರಾಮಕೃಷ್ಣ ದ್ರೋಣ್ ಕಾರ್ಯನಿರ್ವಹಣೆ ಬಗ್ಗೆ ಹರ್ಷ ವ್ಯಕ್ತಪಡಿಸಿದರು.

ದ್ರೋಣ್ ಸಾಧನ ಸುಧಾರಣೆ ಕುರಿತು ರೈತರಾದ ವೆಂಕಟರೆಡ್ಡಿ, ಲಾಳೆಪಟೇಲ್, ಲಕ್ಷ್ಮಣನಾಯಕ ರಾಜವಾಳತಾಂಡಾ, ಸಿದ್ದು ಪಾಟೀಲ, ಬೈಲಪ್ಪಗೌಡ ಚಿಗರಿಹಾಳ, ಮೋಹನರೆಡ್ಡಿ, ಬಲಭೀಮ ಸಾಹುಕಾರ ಮಂಗಳೂರ, ಯಲ್ಲಯ್ಯಗೌಡ ಕಲಾಲ, ಕೃಷ್ಣಾರಾಮ, ಎಸ್. ಶ್ರೀನಿವಾಸನಾಯಕ ಓಂಗಲ್ ಸಲಹೆ ನೀಡಿದರು.

ವಿದೇಶದಿಂದ ಆಮದು ಮಾಡಿಕೊಳ್ಳುವ ಬದಲು ದೇಶೀಯ ಬಿಡಿಭಾಗಗಳು ದೊರೆತರೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ರೈತರು ಅದರ ಬಳಕೆಯತ್ತ ಆಸಕ್ತಿ ತೋರಿದರೆ, ಕಡಿಮೆ ಖರ್ಚಿನಲ್ಲಿ ದ್ರೋಣ್ ತಯಾರಿಸಬಹುದು. ದ್ರೋಣ್ ಬಾಡಿಗೆಗೆ ನೀಡುವ ಚಿಂತನೆಯೂ ಇದೆ. ರೈತರು ಒಗ್ಗೂಡಿ 200 ರಿಂದ 300 ಎಕರೆ ಜಮೀನುಗಳಿಗೆ ದ್ರೋಣ್‌ ಮೂಲಕ ಕ್ರಿಮಿನಾಶ ಸಿಂಪಡಿಸಿದರೆ, ಹಣ ಮತ್ತು ಸಮಯದ ಉಳಿತಾಯ ಆಗುತ್ತದೆ’ ಎಂದು ರಾಮಕೃಷ್ಣ ಎನ್‌.ಜಿ. ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT