ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಹೊಸ ತಾಲ್ಲೂಕುಗಳಲ್ಲಿ ಕೋರ್ಟ್, ಕಚೇರಿಗೆ ಬರ

ಹಳೆ ತಾಲ್ಲೂಕುಗಳಲ್ಲಿ ಪ್ರಭಾರಿಗಳದ್ದೆ ಕಾರುಬಾರು, ಮೂರು ವರ್ಷಗಳಾದರೂ ತಪ್ಪಿಲ್ಲ ಅಲೆದಾಟ
Last Updated 11 ಅಕ್ಟೋಬರ್ 2020, 19:31 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಾಗಿ 10 ವರ್ಷಗಳಾಗಿದ್ದು, ನೂತನ ಮೂರು ತಾಲ್ಲೂಕುಗಳು ಘೋಷಣೆಯಾಗಿ 3 ವರ್ಷಗಳಾಗಿವೆ. ಆದರೆ, ಅಭಿವೃದ್ಧಿ ಮಾತ್ರ ನಿರೀಕ್ಷಿತ ವೇಗ ಪಡೆದಿಲ್ಲ.

ಯಾದಗಿರಿಯಿಂದ ಗುರುಮಠಕಲ್‌, ಶಹಾಪುರದಿಂದ ವಡಗೇರಾ, ಸುರಪುರದಿಂದ ಹುಣಸಗಿ ತಾಲ್ಲೂಕು ಬೇರ್ಪಡಿಸಿ 2017–18ನೇ ಸಾಲಿನಲ್ಲಿ ಘೋಷಣೆ ಮಾಡಲಾಗಿತ್ತು. ಆದರೆ, ಇಲ್ಲಿಯವರೆಗೆ ಸಮರ್ಪಕ ಕೋರ್ಟ್‌, ಕಚೇರಿಗಳೇ ಇಲ್ಲ. ಪ್ರಮುಖ ಇಲಾಖೆಗಳ ಕಚೇರಿಗಳು ಆರಂಭವಾಗದ ಕಾರಣ ಜನ ನಿತ್ಯ ಸಂಕಷ್ಟ ಎದುರಿಸುತ್ತಾರೆ.

ಸರ್ಕಾರ ನೂತನ ತಾಲ್ಲೂಕುಗಳನ್ನು ಘೋಷಣೆ ಮಾಡಿದ್ದು ಬಿಟ್ಟರೆ ಅನುದಾನ ನೀಡಿಲ್ಲ. ಇದರಿಂದ ಹೇಳಿಕೊಳ್ಳಲು ಮಾತ್ರವಾಗಿವೆ. ಅದರಲ್ಲೂ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ.

ವಡಗೇರಾ ತಾಲ್ಲೂಕು ಕೇಂದ್ರವಾದರೂ ಗ್ರಾಮ ಪಂಚಾಯಿತಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಹುಣಸಗಿ ಗ್ರಾಮ ಪಂಚಾಯಿತಿಯಿಂದ ಮೇಲ್ದರ್ಜೆಗೇರಿ ಪಟ್ಟಣ ಪಂಚಾಯಿತಿ ಆಗಿದೆ. ಒಂದು ಭಾಗವನ್ನು ನಿರ್ಲಕ್ಷ್ಯ ಮಾಡಲಾಗಿದೆ ಎಂದು ಆ ಭಾಗದ ಜನರು ಆರೋಪಿಸುತ್ತಾರೆ.

ಇದಲ್ಲದೆ ಹಳೆ ತಾಲ್ಲೂಕುಗಳಲ್ಲಿ ಪ್ರಭಾರಿ ಹುದ್ದೆಗಳಿಂದಲೇ ಕಾರ್ಯಭಾರ ಮಾಡಲಾಗುತ್ತಿದೆ. ಕೆಲಸ ಕಾರ್ಯಗಳು ಹಲವಾರು ತಿಂಗಳುಗಳು ಕಳೆದರೂ ಮುಗಿಯುವುದಿಲ್ಲ. ಹೊಸ ತಾಲ್ಲೂಕುಗಳಷ್ಟೆ ಹಳೆ ತಾಲ್ಲೂಕು ಕೇಂದ್ರಗಳಲ್ಲೂಹಲವಾರು ಸಮಸ್ಯೆಗಳು ಇವೆ.

ಆರೋಗ್ಯ, ಶಿಕ್ಷಣ, ಕೃಷಿ ಇಲಾಖೆಗಳುಇನ್ನೂ ತಾಲ್ಲೂಕುವಾರು ವಿಗಂಡಣೆಯಾಗಿಲ್ಲ. ಇದರಿಂದ ಕೊನೆ ಭಾಗದವರು ನೂರಾರು ಕಿ.ಮೀ ಹಾಗೂ ನೂರಿನ್ನೂರಿ ಖರ್ಚು ಮಾಡಿಕೊಂಡು ಬರುವ ಪರಿಸ್ಥಿತಿ ಇದೆ. ಇದಕ್ಕೆ ಯಾವಾಗ ಮುಕ್ತಿ ಸಿಗುತ್ತದೆ ಎಂದು ಅಲ್ಲಿನವರ ಪ್ರಶ್ನೆಯಾಗಿದೆ.

ಈಗಾಗಲೇ ಗುರುಮಠಕಲ್ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆದಿದೆ. ಆದರೆ, ವಡಗೇರಾ, ಹುಣಸಗಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರ ಹುದ್ದೆಗೂ ಚುನಾವಣೆ ನಿಗದಿಯಾಗಿತ್ತು. ಹೈಕೋರ್ಟ್‌ನಿಂದ ತಡೆಯಾಜ್ಞೆ ಇರುವುದರಿಂದ ಪ್ರಕ್ರಿಯೆ ಮುಂದೂಡಲ್ಪಟ್ಟಿದೆ.

‘ಹೊಸ ತಾಲ್ಲೂಕುಗಳಲ್ಲಿ ಅಗತ್ಯ ಮೂಲಸೌಕರ್ಯಗಳೇ ಇಲ್ಲ. ಬಹುತೇಕ ಕಚೇರಿಗಳಿಗೆ ಕಟ್ಟಡಗಳೂ ಇಲ್ಲದ ಪರಿಸ್ಥಿತಿ ಇದೆ. ಸರ್ಕಾರ, ಜಿಲ್ಲಾಡಳಿತ ಇತ್ತ ಗಮನಹರಿಸಿ ಅಭಿವೃದ್ಧಿ ಮಾಡಬೇಕು’ ಎನ್ನುತ್ತಾರೆ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎನ್.ಭೀಮುನಾಯಕ ಒತ್ತಾಯಿಸಿದರು.

‘ಜಿಲ್ಲೆಯ ಮೂರು ಹೊಸ ತಾಲ್ಲೂಕುಗಳಾದ ಗುರುಮಠಕಲ್, ವಡಗೇರಾ ಮತ್ತು ಹುಣಸಗಿ ತಾಲ್ಲೂಕುಗಳ ಆಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೂರು ತಾಲ್ಲೂಕುಗಳಿಗೆ ನಿಯಮಿತವಾಗಿ ಭೇಟಿ ನೀಡಿದ್ದೇನೆ. ಸಾಮಾನ್ಯ ಸಭೆಗಳನ್ನು ನಡೆಸಿ, 15ನೇ ಹಣಕಾಸು ಯೋಜನೆಯ ಕ್ರಿಯಾಯೋಜನೆಗಳನ್ನು ತಯಾರಿಸಿದ್ದೇನೆ’ ಎನ್ನುತ್ತಾರೆ ಆಡಳಿತ ಅಧಿಕಾರಿ ಮುಕ್ಕಣ್ಣ ಕರಿಗಾರ.

‘ಗುರುಮಠಕಲ್ ಮತ್ತು ಹುಣಸಗಿ ತಾಲ್ಲೂಕುಗಳಲ್ಲಿ ತಾಲ್ಲೂಕು ಪಂಚಾಯಿತಿಗಳಿಗೆ ಕಟ್ಟಡಗಳನ್ನು ಪಡೆದು ಕಾರ್ಯಾರಂಭ ಮಾಡಲಾಗಿದೆ. ಗುರುಮಠಕಲ್‌ನಲ್ಲಿ ಬಾಡಿಗೆ ಕಟ್ಟಡ, ಹುಣಸಗಿಯಲ್ಲಿ ಕೆಬಿಜೆಎನ್‌ಎಲ್ ಕಟ್ಟಡದಲ್ಲಿ ನಡೆಯುತ್ತಿದೆ. ವಡಗೇರಾದಲ್ಲಿ ಸೂಕ್ತ ಬಾಡಿಗೆ ಕಟ್ಟಡಕ್ಕಾಗಿ ನಾಲ್ಕೈದು ಬಾರಿ ಕಟ್ಟಡಗಳನ್ನು ನೋಡಿದ್ದೇನೆ. ತಾಲ್ಲೂಕು ಪಂಚಾಯತಿ ಕಾರ್ಯಾಲಯಕ್ಕೆ ಸೂಕ್ತವೆನ್ನಿಸಬಹುದಾದ ಕಟ್ಟಡಗಳು ದೊರೆಯದೆ ಇದ್ದುದರಿಂದ ಇತ್ತೀಚೆಗೆ ಒಂದು ಹೊಸ ಕಟ್ಟಡ ನೋಡಿದ್ದು ಸರ್ಕಾರಿ ನಿಯಮಗಳಂತೆ ಲೋಕೋಪಯೋಗಿ ಇಲಾಖೆಯಿಂದ ದರ ನಿಗದಿಪಡಿಸಿದ ಬಳಿಕ ಬಾಡಿಗೆ ಪಡೆಯಲಾಗುತ್ತದೆ’ ಎಂದು ವಿವರಿಸುತ್ತಾರೆ ಅವರು.

‘ತಾಲ್ಲೂಕು ಪಂಚಾಯಿತಿಗಳ ಆಡಳಿತಾಧಿಕಾರಿ ಹುದ್ದೆಯು ಅಧ್ಯಕ್ಷರ ಆಯ್ಕೆ ಆಗುವವರೆಗೆ ಇರುವ ತಾತ್ಕಾಲಿಕ ಆಡಳಿತ ವ್ಯವಸ್ಥೆಯೇ ಹೊರತು ಆಡಳಿತಾಧಿಕಾರಿಗಳಿಗೆ ಯಾವುದೇ ವಿಶೇಷ ಅನುದಾನ ಇರುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT