ಯಾದಗಿರಿ: ಡ್ರಗ್ಸ್ ಪ್ರಕರಣದಲ್ಲಿ ರಾಜಕಾರಣಿಗಳ ಮಕ್ಕಳು ಸೇರಿದಂತೆ ಯಾರೇ ತಪ್ಪು ಮಾಡಿದರೂ ಕ್ರಮ ಕೈಗೊಳ್ಳಲಾಗುತ್ತದೆ. ಇದಕ್ಕೆ ಕಾನೂನು ಇದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ನಗರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹ ಸಚಿವ ಬಸವರಾಜ ಬೊಮ್ಮಾಯಿ ಕಾನೂನು ಕ್ರಮ ತೆಗೆದುಕೊಳ್ಳುತ್ತಾರೆ. ಡ್ರಗ್ಸ್‌ನಲ್ಲಿ ರಾಜಕಾರಣಿಗಳ ಮಕ್ಕಳು ಭಾಗಿಯಾಗಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇದ್ದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಬಿಜೆಪಿ ನಾಯಕರು ಡ್ರಗ್ಸ್ ವಿಚಾರದಲ್ಲಿ ಮೌನವಾಗಿದ್ದಾರೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಮ್ಮ ಸರ್ಕಾರ ಬಂದ ಮೇಲೆ ಡ್ರಗ್ಸ್ ದಂಧೆ ಬಯಲಿಗೆಳೆದಿದ್ದೇವೆ ಎಂದರು.
ಮುಖ್ಯಮಂತ್ರಿ ಯಡಿಯೂರಪ್ಪನವರು ನೆರೆ ಪರಿಹಾರಕ್ಕೆ ನೆರವು ಕೋರಲು ದೆಹಲಿಗೆ ಗುರುವಾರ ತೆರಳುತ್ತಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡುತ್ತಾರೆ. ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಮಾಡಲ್ಲ. ಅಧಿವೇಶನ ಮುಗಿದ ಮೇಲೆ ಸಂಪುಟ ವಿಸ್ತರಣೆ ಮಾಡಲಾಗುತ್ತದೆ.
ನಮಗೆ ಈಗ ನೀಡಿರುವ ನೆರೆ ಪರಿಹಾರ ಕಡಿಮೆಯಿದೆ. ಎರಡನೇ ಕಂತಿನಲ್ಲಿ ₹395 ಕೋಟಿ ಕೊಟ್ಟಿದ್ದಾರೆ. ಅದೂ ಸಾಕಾಗಲ್ಲ. ಇನ್ನು ಹೆಚ್ಚು ಪರಿಹಾರ ಕೊಡಬೇಕು ಎನ್ನುವುದು ನಮ್ಮ ಬೇಡಿಕೆ ಇದೆ. ಕಳೆದ ಒಂದು ವಾರದಿಂದ ಕಲಬುರ್ಗಿ, ಯಾದಗಿರಿ ಭಾಗದಲ್ಲಿ ಮಳೆಯಾಗಿ ಪ್ರವಾಹ ಉಂಟಾಗಿದೆ. ಜಿಲ್ಲಾಧಿಕಾರಿಗಳಿಗೆ ಬೆಳೆ ಹಾನಿ ಬಗ್ಗೆ ಮಾಹಿತಿ ನೀಡಲು ಸೂಚನೆ ನೀಡಿದ್ದೇನೆ. ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗುತ್ತದೆ ಎಂದರು.
ಈಗಾಗಲೇ ಕೇಂದ್ರ ಅಧ್ಯಯನ ತಂಡ ರಾಜ್ಯಕ್ಕೆ ಭೇಟಿ ನೀಡಿ ವಾಸ್ತವಿಕ ಪರಿಸ್ಥಿತಿ ಗಮನಿಸಿ ಕೇಂದ್ರಕ್ಕೆ ವರದಿ ನೀಡಿವೆ. ಕೇಂದ್ರದಿಂದ ಹೆಚ್ಚಿನ ಪ್ರಮಾಣದಲ್ಲಿ ರಾಜ್ಯಕ್ಕೆ ನೆರೆ ಪರಿಹಾರ ಅನುದಾನ ಬಿಡುಗಡೆಯಾಗಲಿದೆ ಎಂದರು.
ಜಿಲ್ಲೆಯ ಗೋನಾಳ, ಗುಂಡಗುರ್ತಿ ಸೇರಿದಂತೆ ಹಲವಾರು ಗ್ರಾಮಗಳ ರೈತರ ಭೂಮಿ ಪಹಣಿಯಲ್ಲಿ ಹಾಗೂ ಕಬ್ಜದಲ್ಲಿ ವ್ಯತ್ಯಾಸ ಇರುವುದು ನನ್ನ ಗಮನಕ್ಕೆ ಬಂದಿದೆ. ಅಧಿಕಾರಿಗಳಿಗೆ ಸರಿಪಡಿಸಲು ಸೂಚಿಸಿದ್ದೇನೆ. ಕಂದಾಯ ಇಲಾಖೆಯಲ್ಲಿ ರೈತರ ವ್ಯಾಜ್ಯ ಪ್ರಕರಣಗಳು ಇತ್ಯರ್ಥವಾಗುತ್ತಿಲ್ಲ ಎಂಬ ದೂರು ಕೇಳಿ ಬರುತ್ತಿವೆ. ಅಧಿಕಾರಿಗಳು ಶೀಘ್ರವೇ ಇತ್ಯರ್ಥ ಪಡಿಸಬೇಕು ಎಂದು ಆದೇಶ ನೀಡಿದ್ದೇನೆ ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.