ವಡಗೇರಾ: ಈ ಹಿಂದೆ ವಾರದಲ್ಲಿ 2 ದಿನ ಮೊಟ್ಟೆಗಳನ್ನು ವಿತರಿಸುವುದಕ್ಕೆ ಹೇಗೋ ಹಣವನ್ನು ಹೊಂದಿಸಿಕೊಂಡು ಮುಖ್ಯ ಶಿಕ್ಷಕರು ವಿದ್ಯಾರ್ಥಿಗಳಿಗೆ ಮೊಟ್ಟೆ, ಬಾಳೆ ಹಣ್ಣು, ಶೇಂಗಾ ಚಿಕ್ಕಿ ನೀಡುತ್ತಿದ್ದರು. ಆದರೆ ವಾರದಲ್ಲಿ 6 ದಿನ ಮೊಟ್ಟೆ ಖರೀದಿಸಲು ಕಷ್ಟವಾಗುತ್ತಿದೆ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.
ಸೆಪ್ಟೆಂಬರ್ 25ರಂದು ಅಜೀಂ ಪ್ರೇಮ್‌ಜಿ ಫೌಂಡೇಷನ್ ಸಹಭಾಗಿತ್ವದಲ್ಲಿ 2024-25 ನೇ ಸಾಲಿನಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢ ಹಾಗೂ ಅನುದಾನಿತ ಶಾಲಾ ವಿದ್ಯಾರ್ಥಿಗಳಿಗೆ ವಾರದಲ್ಲಿ 6 ದಿನ ಪೂರಕ ಪೌಷ್ಟಿಕ ಆಹಾರವನ್ನು ವಿತರಿಸುವ ಯೋಜನೆಯನ್ನು ವಡಗೇರಾ ತಾಲ್ಲೂಕಿನ ವ್ಯಾಪ್ತಿಯಲ್ಲಿ ಜಾರಿಗೆ ತರಲಾಗಿದೆ. ಆದರೆ ಮೊಟ್ಟೆಗಳನ್ನು ಖರೀದಿಸಲು ಅನುದಾನ ಬಿಡುಗಡೆ ಮಾಡಿಲ್ಲ. ವಿದ್ಯಾರ್ಥಿಗಳಿಗೆ ಮೊಟ್ಟೆಗಳನ್ನು ವಿತರಿಸಲು ಸಮಸ್ಯೆಯಾಗುತ್ತಿದೆ ಎಂದು ಬಹುತೇಕ ಮುಖ್ಯಶಿಕ್ಷಕರು ಹೇಳುತ್ತಿದ್ದಾರೆ.
ಅನುದಾನವಿಲ್ಲ: ಮೂರು ತಿಂಗಳವರೆಗೆ ಮೊಟ್ಟೆಗಾಗಿ ಯಾವುದೇ ಅನುದಾನ ಕೊಡುವುದಿಲ್ಲ. ಮುಖ್ಯಶಿಕ್ಷಕರೇ ಹಣವನ್ನು ಪಾವತಿಸಿ ಮೊಟ್ಟೆಗಳನ್ನು ತಂದು ಮಕ್ಕಳಿಗೆ ವಿತರಿಸಬೇಕು. ಮೂರು ತಿಂಗಳ ನಂತರ ಅನುದಾನ ಬರುತ್ತದೆ. ಆಗ ಬಿಲ್ ಸಂಬಂಧ ಪಟ್ಟ ಇಲಾಖೆಯವರಿಗೆ ಸಲ್ಲಿಸಿದರೆ ಅವರು ಹಣ ಪಾವತಿಸುತ್ತಾರೆ.
ದಿನಕ್ಕೆ ಸುಮಾರು 2 ಸಾವಿರ ಖರ್ಚು: ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸರಾಸರಿ ಮಕ್ಕಳ ಹಾಜರಾತಿ 300 ಇದೆ. ಒಂದು ಮೊಟ್ಟೆಗೆ ₹6 ರಂತೆ 300 ಮೊಟ್ಟೆಗಳಿಗೆ ₹1,800 ಖರ್ಚಾಗುತ್ತದೆ. ವಾರದಲ್ಲಿ 1,800 ಮೊಟ್ಟೆಗಳಿಗೆ ₹10,800 ಹಣ ಬೇಕು. ತಿಂಗಳಿಗೆ ಸುಮಾರು ₹43,200 ಸಾವಿರ ಖರ್ಚಾಗುತ್ತದೆ.
ಸಾಲ ಮಾಡಿ ಮೊಟ್ಟೆಗಳ ವಿತರಣೆ: ವಡಗೇರಾ ತಾಲ್ಲೂಕಿನ ವ್ಯಾಪ್ತಿಯಲ್ಲಿನ ಅನೇಕ ಶಾಲಾ ಮುಖ್ಯಶಿಕ್ಷಕರು ವಿದ್ಯಾರ್ಥಿಗಳಿಗೆ ಮೊಟ್ಟೆಗಳನ್ನು ವಿತರಿಸಲು ಸಾಲವನ್ನು ಮಾಡುತ್ತಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬರುವ ಸಂಬಳದಲ್ಲಿ ಕುಟುಂಬ ನಿರ್ವಹಣೆ, ವೈದ್ಯಕೀಯ ಖರ್ಚು, ಮಕ್ಕಳ ಶುಲ್ಕ ಕಟ್ಟಲು ಸಾಕಾಗುತ್ತದೆ. ಹಣವಿಲ್ಲದ ಕಾರಣ ಸಾಲವನ್ನು ಮಾಡಿ ಮೊಟ್ಟೆಗಳನ್ನು ಖರೀದಿಸುವುದು ಅನಿರ್ವಾಯವಾಗಿದೆ ಎಂದು ಶಾಲಾ ಮುಖ್ಯಶಿಕ್ಷಕರೊಬ್ಬರು ಹೇಳುತ್ತಾರೆ.
ಮೊಟ್ಟೆ ಹೊರುವ ಮುಖ್ಯಶಿಕ್ಷಕರು: ಮೊಟ್ಟೆಗಳನ್ನು ಮಾರಾಟ ಮಾಡುವ ಅಂಗಡಿಯ ಮಾಲೀಕರಿಗೆ ಶಾಲೆಗೆ ತಂದು ಮೊಟ್ಟೆಗಳನ್ನು ಸರಬರಾಜು ಮಾಡಿ ಎಂದು ಮುಖ್ಯಶಿಕ್ಷಕರು ಕೇಳಿದರೆ ಒಂದು ಮೊಟ್ಟೆಗೆ ₹7 ಕೊಟ್ಟರೆ ಮಾತ್ರ ಮೊಟ್ಟೆಗಳನ್ನು ಶಾಲೆಗೆ ಸರಬರಾಜು ಮಾಡಲಾಗುವುದು ಎಂದು ಹೇಳುತ್ತಾರೆ. ಆದರೆ ಸರ್ಕಾರ 1 ಮೊಟ್ಟೆಗೆ ₹6 ನಿಗದಿ ಮಾಡಿದೆ.
ಇದರಲ್ಲಿ ₹5.90 ಮೊಟ್ಟೆಯನ್ನು ಖರೀದಿಸಬೇಕು. ಒಂದು ಮೊಟ್ಟೆಗೆ 10 ಪೈಸೆಯಂತೆ ಮೊಟ್ಟೆ ಸುಲಿಯುವ ಬಿಸಿ ಊಟದ ಸಿಬ್ಬಂದಿಗೆ ಕೊಡಬೇಕು. ಹೀಗಾಗಿ ನಾವೇ ಮೊಟ್ಟೆಗಳನ್ನು ಶಾಲೆಗೆ ತೆಗೆದುಕೊಂಡು ಹೋಗುತಿದ್ದೇವೆ ಎಂದು ಮುಖ್ಯಶಿಕ್ಷಕರೊಬ್ಬರು ತಿಳಿಸಿದರು.
ಹೆಚ್ಚುವರಿ ಸಾಮಗ್ರಿ ಇಲ್ಲ: ಮೊಟ್ಟೆಗಳನ್ನು ಬೇಯಿಸಲು ಹೆಚ್ಚುವರಿ ಒಲೆ, ಬೋಗಣಿ ಹಾಗೂ ಸಿಲಿಂಡರ್ ಇಲ್ಲದಿರುವುದರಿಂದ ಹಾಗೂ ಹೆಚ್ಚುವರಿ ಅಡುಗೆ ಸಹಾಯಕರು ಇಲ್ಲದೆ ಮಕ್ಕಳಿಗೆ ಮೊಟ್ಟೆಗಳನ್ನು ವಿತರಿಸಲು ಸಮಸ್ಯೆಯಾಗುತ್ತಿದೆ ಎಂದು ಶಿಕ್ಷಕರು ಹೇಳುತ್ತಾರೆ.
ವಾರಕ್ಕೊಮ್ಮೆ ಮಕ್ಕಳ ಆನ್‌ಲೈನ್ ಹಾಜರಾತಿಯನ್ನು ಪರಿಗಣಿಸಿ ಅನುದಾನವನ್ನು ಬಿಡುಗಡೆ ಮಾಡಿದರೆ ವಿದ್ಯಾರ್ಥಿಗಳಿಗೆ ಮೊಟ್ಟೆಗಳನ್ನು ವಿತರಿಸಲು ಅನುಕೂಲವಾಗುತ್ತದೆಹೆಸರು ಹೇಳಲು ಇಚ್ಚಿಸದ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ
‘ಅನುದಾನ ಬಂದಾಗ ಖರ್ಚಿನ ರಸೀದಿ ಸಲ್ಲಿಸಿ’
‘ಸರ್ಕಾರದ ಅನುದಾನ ಬಂದಾಗ ಶಿಕ್ಷಕರು ತಾವು ಖರ್ಚು ಮಾಡಿದ ಹಣದ ರಸೀದಿಯನ್ನು ಸಲ್ಲಿಸಿ ಹಣವನ್ನು ಪಡೆಯಬೇಕು. ಇದು ಮೊದಲಿನಿಂದಲೂ ಬಂದ ಪದ್ಧತಿಯಾಗಿದೆ’ ಎಂದು ವಡಗೇರಿ ಬಿಆರ್‌ಸಿ ಶಾಂತಕುಮಾರ ‘ಪ್ರಜಾವಾಣಿ’ಗೆ ತಿಳಿಸಿದರು. ‘ಬಿಸಿ ಊಟಕ್ಕೆ ಬಳಸುವ ತರಕಾರಿಯ ಹಣವನ್ನು ಮುಖ್ಯಶಿಕ್ಷಕರೇ ಮೊದಲು ಖರ್ಚು ಮಾಡುತ್ತಾರೆ. ನಂತರ ಖರ್ಚು ಮಾಡಿದ ಹಣವನ್ನು ಪಡೆಯುತ್ತಾರೆ. ಮೊಟ್ಟೆಗಳ ಹಣವನ್ನು ಸಹ ಹಾಗೆಯೇ ಪಡೆಯಬೇಕು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.