ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖರ್ಗೆ ಅವರನ್ನು ಬಹುಮತದಿಂದ ಗೆಲ್ಲಿಸಿ

ಮಲ್ಲಿಕಾರ್ಜುನ ಖರ್ಗೆ ಪರ ಪ್ರಚಾರ ಸಭೆಯಲ್ಲಿ ಶಾಸಕ ನಾಗನಗೌಡ ಕಂದಕೂರ ಮನವಿ
Last Updated 21 ಏಪ್ರಿಲ್ 2019, 7:08 IST
ಅಕ್ಷರ ಗಾತ್ರ

ಯಾದಗಿರಿ: ‘ಯುವಕರು ಮೋದಿ ಅವರ ಬಣ್ಣದ ಮಾತಿಗೆ ಮರುಳಾಗಬಾರದು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿದಂತೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನೂ ಬಹುಮತದಿಂದ ಆರಿಸಬೇಕು‘ ಎಂದು ಶಾಸಕ ನಾಗನಗೌಡ ಕಂದಕೂರ ಮನವಿ ಮಾಡಿದರು.

ಗುರುಮಠಕಲ್ ಮತಕ್ಷೇತ್ರದ ಹತ್ತಿಕುಣಿ ಗ್ರಾಮದಲ್ಲಿ ಶನಿವಾರ ಏರ್ಪಡಿಸಿದ್ದ ಗುಲಬರ್ಗಾ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಚುನಾವಣೆ ಪೂರ್ವದಲ್ಲಿ ನೀಡಿದ್ದ ಯಾವ ಭರವಸೆಗಳನ್ನೂ ಮೋದಿ ಈಡೇರಿಸಿಲ್ಲ. ಅಂಗೈಯಲ್ಲೇ ಆಕಾಶ ತೋರಿಸಿದರು. ಮತ್ತೊಮ್ಮೆ ಅವರನ್ನು ಪ್ರಧಾನಿ ಮಾಡಿದರೆ ಕಾಗೆ ಹಾರಿಸುತ್ತಾರೆ‘ ಎಂದು ವ್ಯಂಗ್ಯವಾಡಿದರು.

‘ಮೋದಿ ಅವರು ತಾವುಚೌಕೀದಾರ್ ಎಂದು ಹೇಳುತ್ತಾರೆ. ಅವರು ಉದ್ಯಮಿಗಳನ್ನು ಕಾಯುವ ಚೌಕೀದಾರ್. ದೇಶದ 130 ಕೋಟಿ ಜನರಿಗೆ ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿದ್ದಾರೆ‘ ಎಂದು ದೂರಿದರು.

‘ಸಂಸತ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಮೋದಿ ಮತ್ತು ಅಮಿತ್ ಶಾ ಅವರಿಗೆ ನುಂಗಲಾರದ ತುತ್ತಾಗಿದ್ದಾರೆ. ಅವರುಉಮೇಶ್‌ ಜಾಧವ ಅವಿರಿಗೆ ಆಮಿಷವೊಡ್ಡಿಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸ್ಪರ್ಧಿಸುವಂತೆ ಮಾಡಿದ್ದಾರೆ. ಆದರೆ, ಖರ್ಗೆ ಗೆಲುವಿಗೆ ಗುರುಮಠಕಲ್ ಕ್ಷೇತ್ರ ವಿಶೇಷ ಕೊಡುಗೆ ನೀಡಬೇಕು. ಆ ನಿಟ್ಟಿನಲ್ಲಿ ಕಾರ್ಯಕರ್ತರು ಕೆಲಸ ಮಾಡಬೇಕು‘ ಎಂದರು.

‘ಜಾಧವ ಗುರುಮಠಕಲ್ ಕ್ಷೇತ್ರಕ್ಕೆ ಯಾವುದೇ ಕೊಡುಗೆ ನೀಡಿಲ್ಲ. ಅವರು ಶಾಸಕರಾಗಿ ಆಯ್ಕೆ ಆಗಿದ್ದ ಚಿಂಚೋಳಿ ಕ್ಷೇತ್ರವೂ ಗುಲಬರ್ಗಾ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವುದಿಲ್ಲ’ ಎಂದರು.

ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ‘ಮಲ್ಲಿಕಾರ್ಜುನ ಖರ್ಗೆ ಅವರು ಸಂಸದರಾಗಿ, ಕೇಂದ್ರ ಸಚಿವರಾಗಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಅದನ್ನು ನೋಡಿ ಮತ ಹಾಕಬೇಕು ಎಂದು ಮನವಿ‘ ಮಾಡಿದರು.

‘ನಮ್ಮ ಕುಟುಂಬ ಗುರುಮಠಕಲ್ ಕ್ಷೇತ್ರದ ಋಣ ತೀರಿಸಲು ಸಾಧ್ಯವಿಲ್ಲ. ಶಾಸಕ ನಾಗನಗೌಡ ಅವರು ಆದೇಶ ಮಾಡಿದರೆ ನಾನು ಆ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ಅಭಿವೃದ್ಧಿ ವಿಷಯದಲ್ಲಿ ತಾರತಮ್ಯ ಮಾಡುವುದಿಲ್ಲ‘ ಎಂದರು.

‘ಬಿಜೆಪಿ ಪ್ರಕಟಿಸಿರುವ ಪ್ರಣಾಳಿಕೆಯಲ್ಲಿ ಯುವಕರು, ರೈತರು, ಮಹಿಳೆಯರು, ಸಣ್ಣ ವ್ಯಾಪಾರಿಗಳು, ಉದ್ಯಮಿಗಳು, ಕಾರ್ಮಿಕರ ಪರವಾದ ಯಾವುದೇ ಯೋಜನೆ ಇಲ್ಲ. ಆದರೆ, ಕಾಂಗ್ರೆಸ್ ಆರ್ಥಿಕ ಸಮಾನತೆಗೆ ನ್ಯಾಯ್ ಯೋಜನೆಯನ್ನು ಪ್ರಣಾಳಿಕೆಯಲ್ಲಿ ಪ್ರಕಟಿಸಿದ್ದು, ಅದರಂತೆ ಬಡತನ ರೇಖೇಗಿಂತ ಕೆಳಗಿರುವವರಿಗೆ ಪ್ರತಿ ತಿಂಗಳು ₹6 ಸಾವಿರ ನೀಡಲಾಗುತ್ತದೆ‘ ಎಂದು ಹೇಳಿದರು.

‘ದೇಶ ಮೊದಲು ಎಂದು ಬಿಜೆಪಿಯವರು ಹೇಳುತ್ತಾರೆ. ಆದರೆ, ಅವರು ಸೈನಿಕರ ಸೇವೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಐದು ವರ್ಷದಲ್ಲಿ ಕೆಲಸ ಮಾಡಿದ್ದರೆ ಸೈನಿಕರ ಹೆಸರಲ್ಲಿ ಮತ ಕೇಳುವ ಪರಿಸ್ಥಿತಿ ಬರುತ್ತಿರಲಿಲ್ಲ‘ ಎಂದು ಹೇಳಿದರು.

‘ಉಮೇಶ್ ಜಾಧವ ಅವರು ಐದು ತಿಂಗಳ ಹಿಂದೆ ಮಲ್ಲಿಕಾರ್ಜುನ ಖರ್ಗೆ ಅವರು ಅವಿರೋಧವಾಗಿ ಆಯ್ಕೆ ಆಗಬೇಕು ಎಂದಿದ್ದರು. ಬಿಜೆಪಿಯವರಿಂದ ₹ 50 ಕೋಟಿ ಪಡೆದ ಮೇಲೆ ಖರ್ಗೆ ಅವರು ದೃತರಾಷ್ಟ್ರ, ನಾನು ದುರ್ಯೋಧನ ಆಗಿದ್ದೇನೆ‘ ಎಂದು ಕುಟುಕಿದರು.

ಬಸರೆಡ್ಡಿ ಪಾಟೀಲ್ ಅನಪೂರ, ಮಹಿಪಾಲರೆಡ್ಡಿ ಹತ್ತಿಕುಣಿ, ಚಿದಾನಂದಪ್ಪ ಕಾಳೆಬೆಳಗುಂದಿ, ಸಿದ್ಧಲಿಂಗರೆಡ್ಡಿ ಉಳ್ಳೆಸೂಗುರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT