ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ: ಮತಪೆಟ್ಟಿಗೆ ಸೇರಿದ 255 ಅಭ್ಯರ್ಥಿಗಳ ಭವಿಷ್ಯ

ಗುರುಮಠಕಲ್ ಪುರಸಭೆ ಶೇ 70.06, ಸುರಪುರ ಶೇ66.51, ಯಾದಗಿರಿ ಶೇ 56.27 ರಷ್ಟು ಮತದಾನ
Last Updated 31 ಆಗಸ್ಟ್ 2018, 16:23 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿನ ಮೂರು ನಗರ ಸ್ಥಳೀಯ ಸಂಸ್ಥೆಗಳಿಗೆ ಶುಕ್ರವಾರ ಸಣ್ಣಪುಟ್ಟ ಗೊಂದಲಗಳನ್ನು ಹೊರತುಪಡಿಸಿದರೆ 134 ಗಳಲ್ಲಿ ಮತದಾನ ಬಹತೇಕ ಶಾಂತಿಯುತವಾಗಿ ನಡೆದಿದ್ದು, ಶೇ 61.72ರಷ್ಟು ಮತದಾನ ಆಗಿದೆ.

ನಗರದ ಒಟ್ಟು 30 ವಾರ್ಡುಗಳಲ್ಲಿನ 62 ಮತಗಟ್ಟೆ ಕೇಂದ್ರಗಳಲ್ಲಿ ಬೆಳಿಗ್ಗೆ 7ರಿಂದ ಮತದಾನ ಆರಂಭಗೊಂಡಿತು. 9 ಗಂಟೆಯವರೆಗೂ ಶೇ7.33ರಷ್ಟು ಮತದಾನ ನಿಧಾನಗತಿಯಲ್ಲಿ ಆರಂಭಗೊಂಡಿತು. ಈ ಸಮಯದಲ್ಲಿ ಸುರಪುರದಲ್ಲಿ ಶೇ 13.51, ಗುರುಮಠಕಲ್‌ನಲ್ಲಿ 12.19ರಷ್ಟು ಮತದಾನ ಹೆಚ್ಚಿಗೆ ಆಗಿತ್ತು. ನಂತರ 11ಗಂಟೆಗೆ ಮತದಾನ ನಿಧಾನವಾಗಿ ಚುರುಕು ಪಡೆಯಿತು. ಈ ಸಂದರ್ಭದಲ್ಲಿ ಯಾದಗಿರಿಯಲ್ಲಿ ಶೇ 20.04, ಸುರಪುರದಲ್ಲಿ ಶೇ 30.51, ಗುರಮಠಕಲ್‌ನಲ್ಲಿ ಶೇ29.49ರಷ್ಟು ಮತದಾನವಾಗಿತ್ತು.

ಸೂರ್ಯ ನೆತ್ತಿಗೆ ಬರುವ ಹೊತ್ತಿಗೆ ಮತದಾನ ಮಾಡಲು ನಾಗರಿಕರು ಮನೆಬಿಟ್ಟು ಹೊರಬರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮತದಾರರನ್ನು ಅಭ್ಯರ್ಥಿಗಳ ಬೆಂಬಲಿಗರು ಮತಪಟ್ಟಿ ನೀಡುವ ಮೂಲಕ ಮತದಾನಕ್ಕೆ ಸಹಕರಿಸುತ್ತಿದ್ದರು. ಮಧ್ಯಾಹ್ನ 1 ಗಂಟೆಯ ಹೊತ್ತಿಗೆ ಯಾದಗಿರಿಯಲ್ಲಿ ನಿಧಾನವಾಗಿದ್ದ ಮತದಾನ ಮತ್ತಷ್ಟೂ ಚುರುಕುಗೊಂಡಿತ್ತು.

ಮಧ್ಯಾಹ್ನ 1ಗಂಟೆ ಹೊತ್ತಿಗೆ ಯಾದಗಿರಿಯಲ್ಲಿ ಶೇ 33.72. ಸುರಪುರದಲ್ಲಿ ಶೇ 46.62, ಗುರುಮಠಕಲ್‌ನಲ್ಲಿ 46.02ರಷ್ಟು ಮತದಾನ ನಡೆದಿತ್ತು. ಸಂಜೆ ಹೊತ್ತಿಗೆ ಮತದಾನ ಮಾಡುವವರು ಲಗುಬಗೆಯಿಂದ ಮತಗಟ್ಟೆ ಕೇಂದ್ರಗಳತ್ತ ಧಾವಿಸುತ್ತಿದ್ದರು. ಅವಸರದಿಂದ ಓಡೋಡಿ ಬಂದವರಿಗೆ ಅಭ್ಯರ್ಥಿಗಳ ಬೆಂಬಲಿಗರು ಮತಪಟ್ಟಿಯಲ್ಲಿ ಹೆಸರು ಹುಡುಕಿ ಗುರುತಿವ ಚೀಟಿ ಕೊಟ್ಟು ಕಳುಹಿಸುತ್ತಿದ್ದರು. ಸಂಜೆಯಾಗುತ್ತಲೇ ಅಭ್ಯರ್ಥಿಗಳೇ ಮತದಾರರ ಮನೆನೆಗೆ ಹೋಗಿ ಮತದಾರರಿಗೆ ಮತದಾನ ಮಾಡುವಂತೆ ಮನವಿ ಕೂಡ ಮಾಡಿಕೊಳ್ಳುತ್ತಿದ್ದರು.

ಸಂಜೆ 3 ಗಂಟೆಯ ಹೊತ್ತಿಗೆ ಯಾದಗಿರಿಯಲ್ಲಿ ಶೇ 43.52, ಸುರಪುರದಲ್ಲಿ ಶೇ 57.38, ಗುರುಮಠಕಲ್‌ನಲ್ಲಿ ಶೇ 56.79 ಸೇರಿ ಒಟ್ಟಾರೆ ಜಿಲ್ಲೆಯಲ್ಲಿ ಶೇ 52.56ರಷ್ಟು ಮತದಾನ ನಡೆದಿತ್ತು. ಇನ್ನೆರಡು ಗಂಟೆಯಲ್ಲಿ ಮತದಾನ ಪ್ರಕ್ರಿಯೆ ಚುರುಕು ಪಡೆಯಿತು.

ಸಂಜೆ 5ರ ಹೊತ್ತಿಗೆ ಯಾದಗಿರಿಯಲ್ಲಿ ಶೇ 56.27, ಸುರಪುರದಲ್ಲಿ ಶೇ66.51, ಗುರುಮಠಕಲ್‌ನಲ್ಲಿ ಶೇ70.06ರಷ್ಟು ಮತದಾನ ನಡೆದಿದೆ.

ಹಕ್ಕು ಚಲಾಯಿಸಿದ 79,094 ಮತದಾರರು

ಮೂರು ನಗರ ಸ್ಥಳೀಯ ಸಂಸ್ಥೆಗಳ ಒಟ್ಟು 1,28,147 ಮತದಾರರಲ್ಲಿ ಶುಕ್ರವಾರ ಒಟ್ಟು 79, 094 ಮತಚಲಾಯಿಸಿದ್ದಾರೆ. ಯಾದಗಿರಿಯಲ್ಲಿ ಒಟ್ಟು 65, 972 ಮತದಾರರಲ್ಲಿ ಅಂತಿಮ ಮತದಾನ ವರದಿ ಬಂದಾಗ 37,121 ಮಂದಿ ಮತಹಕ್ಕು ಚಲಾಯಿಸಿದ್ದರು. ಸುರಪುರದಲ್ಲಿ ಒಟ್ಟು 44,705 ಮತದಾರರಲ್ಲಿ 29,733 ಮತದಾರರು ಹಾಗೂ ಗುರುಮಠಕಲ್‌ ಪುರಸಭೆಯಲ್ಲಿ ಒಟ್ಟು 17,470 ಮತದಾರರಲ್ಲಿ 12,240 ಮತದಾರರು ಹಕ್ಕು ಚಲಾಯಿಸಿದ್ದರಿಂದ ಜಿಲ್ಲೆಯಲ್ಲಿ ಶೇ 61.72ರಷ್ಟು ಮತದಾನ ಆಗಿದೆ ಎಂಬುದಾಗಿ ಜಿಲ್ಲಾ ಹೆಚ್ಚುವರಿ ಚುನಾವಣಾಧಿಕಾರಿ ಪ್ರಕಾಶ್ ಜಿ. ರಜಪೂತ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ನಕಲಿ ಮತದಾನ: ಆಕ್ಷೇಪ

ಯಾದಗಿರಿ ನಗರದ 13ನೇ ವಾರ್ಡಿನಲ್ಲಿ ಮತಪಟ್ಟಿಯಿಂದ ಕೈಬಿಟ್ಟ ಆರು ಮಂದಿ ಮತದಾರರಿಗೆ ಮತಗಟ್ಟೆ ಅಧಿಕಾರಿಗಳು ಮತದಾನಕ್ಕೆ ಅವಕಾಶ ಕಲ್ಪಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಅಭ್ಯರ್ಥಿ ವೀಣಾ ಮೋದಿ ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಆಕ್ಷೇಪ ಎತ್ತಿದರು.

ವಿಷಯ ತಿಳಿದು ಶಾಸಕ ವೆಂಟಕರೆಡ್ಡಿ ಮುದ್ನಾಳ ಮತಗಟ್ಟೆ ಕೇಂದ್ರಕ್ಕೆ ಭೇಟಿ ನೀಡಿ ಈ ಕುರಿತು ಮತಗಟ್ಟೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡುವಂತೆ ಅವರು ವೀಣಾ ಮೋದಿ ಅವರಿಗೆ ಸಲಹೆ ನೀಡಿದರು.

‘ಏಜೆಂಟರುಗಳ ಸಮ್ಮುಖದಲ್ಲಿಯೇ ಮತದಾನ ನಡೆದಿದೆ. ಆರೋಪಕ್ಕೆ ಯಾವುದೇ ಆಧಾರವಿಲ್ಲ. ಯಾವುದೇ ನಕಲಿ ಮತದಾನ ನಡೆದಿಲ್ಲ’ ಎಂದು ಮತಗಟ್ಟೆ ಚುನಾವಣಾಧಿಕಾರಿ ಆಸಿಫ್‌ ಉಲ್ಲಾ ತಿಳಿಸಿದರು.

*************
ಜಿಲ್ಲೆಯ ಮೂರು ನಗರ ಸ್ಥಳೀಯ ಸಂಸ್ಥೆಗಳಿಗೆ ಶಾಂತಿಯುತವಾಗಿ ಮತದಾನ ನಡೆದಿದೆ. ಎಲ್ಲೂ ಅಹಿತರಕರ ಘಟನೆ ನಡೆಯದಂತೆ ಪೊಲೀಸರು ಭದ್ರತೆ ಒಗಿಸಿದ್ದಾರೆ.
– ಪ್ರಕಾಶ್‌ ಜಿ. ರಜಪೂತ್,ಹೆಚ್ಚುವರಿ ಜಿಲ್ಲಾಧಿಕಾರಿ ಯಾದಗಿರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT