ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಒಟ್ಟು 9.77 ಲಕ್ಷ ಮತದಾರರು

ಮತದಾರರ ಪಟ್ಟಿ ಪರಿಷ್ಕರಿಸಿ ಅಂತಿಮ ಪಟ್ಟಿ ಸಿದ್ಧಪಡಿಸಿದ ಜಿಲ್ಲಾಡಳಿತ
Last Updated 19 ಜನವರಿ 2019, 20:09 IST
ಅಕ್ಷರ ಗಾತ್ರ

ಯಾದಗಿರಿ: ‘ವರ್ಷದ ಆರಂಭದಲ್ಲಿ ಜಿಲ್ಲಾಡಳಿತ ಚುನಾವಣಾ ಆಯೋಗದ ಸೂಚನೆ ಮೇರೆಗೆ ಆರಂಭಿಸಿದ್ದ ಮತದಾರರ ಪರಿಷ್ಕರಣೆ ಮುಗಿದಿದೆ. ಅಂತಿಮ ಪಟ್ಟಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 9,77,217 ಅರ್ಹ ಮತದಾರರು ಇದ್ದಾರೆ’ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲೆಯ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ ಜತೆಗೆ ಅಂತಿಮ ಮತದಾರರ ಪಟ್ಟಿಯ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಸುರಪುರ ವಿಧಾನಸಭಾ ಕ್ಷೇತ್ರದಲ್ಲಿ ಪುರುಷ ಮತದಾರರು-1,37,504, ಮಹಿಳೆಯರು- 1,36,100 ಸೇರಿ ಒಟ್ಟು 2,73,604 ಮತದಾರರಿದ್ದಾರೆ. ಶಹಾಪುರ ವಿಧಾನಸಭಾ ಕ್ಷೇತ್ರದಲ್ಲಿ ಪುರುಷರು- 1,13,422 , ಮಹಿಳೆಯರು-1,12,804 ಸೇರಿ ಒಟ್ಟು 2,26,226 ಮತದಾರರಿದ್ದಾರೆ. ಯಾದಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಪುರುಷರು-1,16,705, ಮಹಿಳೆಯರು-1,18,042 ಸೇರಿ ಒಟ್ಟು 2,34,747 ಮತದಾರರಿದ್ದಾರೆ. ಗುರುಮಠಕಲ್ ವಿಧಾನಸಭಾ ಕ್ಷೇತ್ರದಲ್ಲಿ ಪುರುಷರು-1,20,879, ಮಹಿಳೆಯರು-1,21,761 ಸೇರಿ ಒಟ್ಟು 2,42,640 ಮತದಾರರಿದ್ದಾರೆ. ಒಟ್ಟು ಜಿಲ್ಲೆಯಲ್ಲಿ 4,88,510 ಪುರುಷ ಮತದಾರರು, 4,88,707 ಮಹಿಳಾ ಮತದಾರರು ಇದ್ದಾರೆ’ ಎಂದು ವಿವರಿಸಿದರು.

‘ಒಬ್ಬ ಮಹಿಳಾ ಸೇವಾ ಮತದಾರರು ಸೇರಿದಂತೆ ಒಟ್ಟು 80 ಸೇವಾ ಮತದಾರರು ಇದ್ದಾರೆ. ಈ ವರ್ಷ 16,093 ಯುವ ಮತದಾರರು ಹೊಸದಾಗಿ ನೋಂದಾಯಿಸಿಕೊಂಡಿದ್ದಾರೆ. ಮತದಾರರ ಸೇರ್ಪಡೆ ಮತ್ತು ಪರಿಷ್ಕರಣೆ ನಿರಂತರವಾಗಿರುತ್ತದೆ. ಆದ್ದರಿಂದ ರಾಜಕೀಯ ಪಕ್ಷಗಳ ಮುಖಂಡರು ಇನ್ನೂ ಹೆಸರು ನೋಂದಾಯಿಸದ ಮತದಾರರ ವಿವರವನ್ನು ಸಂಬಂಧಪಟ್ಟ ಮತದಾರರ ನೋಂದಣಾಧಿಕಾರಿಗಳ ಗಮನಕ್ಕೆ ತರಬಹುದು’ ಎಂದರು.

‘ಮತದಾರರ ಪಟ್ಟಿಯಲ್ಲಿ ಭಾವಚಿತ್ರ ಅಳವಡಿಸುವ ಕಾರ್ಯ ಶೇ 99.91ರಷ್ಟು ಸಾಧಿಸಲಾಗಿದೆ. ಸುರಪುರ ಕ್ಷೇತ್ರದಲ್ಲಿ- 234, ಶಹಾಪುರ-93, ಯಾದಗಿರಿ- 63, ಗುರುಮಠಕಲ್-443 ಮತದಾರರ ಭಾವಚಿತ್ರ ಅಳವಡಿಸುವ ಕಾರ್ಯ ಬಾಕಿ ಇದೆ. ಈ ಕಾರ್ಯದಲ್ಲಿ ರಾಜಕೀಯ ಪಕ್ಷಗಳ ಸಹಕಾರ ಅಗತ್ಯವಾಗಿದೆ. ಅಂಗವಿಕಲ ಮತದಾರರಿಗೆ ಬರುವ ಲೋಕಸಭಾ ಚುನಾವಣೆಯಲ್ಲಿ ವ್ಹೀಲ್ ಚೇರ್ ವ್ಯವಸ್ಥೆ ಜತೆಗೆ ವಾಹನದ ವ್ಯವಸ್ಥೆ ಕೂಡ ಮಾಡಬಹುದು. ಆದ್ದರಿಂದ ಅಂಗವಿಕಲ ಮತದಾರರನ್ನು ಗುರುತಿಸಬೇಕು’ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ ಮಾತನಾಡಿ,‘ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಎಂಜಿನಿಯರ್‌ಗಳು ಈಗಾಗಲೇ ಪ್ರಾಥಮಿಕ ತಪಾಸಣೆ ಮಾಡಿದ ವಿದ್ಯುನ್ಮಾನ ಮತಯಂತ್ರ ಹಾಗೂ ಮತದಾನ ಖಾತ್ರಿ ಯಂತ್ರ (ವಿವಿ ಪ್ಯಾಟ್)ಗಳನ್ನು ಬಳಸಿಕೊಂಡು ಅಣಕು ಮತದಾನ (ಮಾಕ್ ಪೋಲ್) ಮಾಡಲಾಗಿದೆ. ಮುಖ್ಯವಾಗಿ ಎಲ್ಲಾ ರಾಜಕೀಯ ಪಕ್ಷದವರು ಬೂತ್ ಲೆವೆಲ್ ಏಜೆಂಟ್ (ಬಿಎಲ್‌ಎ)ರನ್ನು ನೇಮಕ ಮಾಡುವ ಮೂಲಕ ಚುನಾವಣೆ ಪ್ರಕ್ರಿಯೆಯಲ್ಲಿ ಅಗತ್ಯ ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ರಾಜಕೀಯ ಪಕ್ಷಗಳ ಮುಖಂಡರಿಗೆ ವಿತರಿಸಲಾಯಿತು.

ಸಭೆಯಲ್ಲಿ ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ, ಚುನಾವಣೆ ಶಾಖೆಯ ಶಿರಸ್ತೇದಾರ್ ಪರಶುರಾಮ, ಆಲಂಬಾಷಾ, ಖಲೀಲ್‌ಸಾಬ್ ಹಾಗೂ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಮರಿಗೌಡ ಪಾಟೀಲ್ ಹುಲಕಲ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶಿವರಾಜ್ ದಾಸನಕೇರಿ, ಜೆಡಿಎಸ್ ಪಕ್ಷದ ಬಾಲಪ್ಪ ಚಿಕ್ಕಮೇಟಿ, ಸಿಕಂದರ್, ಶಾಂತಪ್ಪ ಡಿ.ಜಾಧವ್, ಮೊಹ್ಮದ್ ಯಾಕೂಬ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT