ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಂಗಲ್ ಕಟ್ ಕಾರ್ಯಾಚರಣೆ ಸ್ಥಗಿತ; ವಿದ್ಯುತ್ ಜೋಡಿಕಂಬ ಮುಟ್ಟೀರಿ ಜೋಕೆ!

ಜೋಡಿಕಂಬಗಳಿಲ್ಲ ತಂತಿಬೇಲಿ ಸುರಕ್ಷತೆ
Last Updated 4 ನವೆಂಬರ್ 2018, 19:45 IST
ಅಕ್ಷರ ಗಾತ್ರ

ಯಾದಗಿರಿ: ಜೆಸ್ಕಾಂ ನಗರದಲ್ಲಿನ ಜೋಡಿಕಂಬಗಳಿಗೆ ಅಳವಡಿಸಿರುವ ವಿದ್ಯುತ್‌ ಪರಿವರ್ತಕಗಳು ನೆಲಮಟ್ಟದಲ್ಲಿ ಇದ್ದು, ಅಪಾಯಕಾರಿಯಾಗಿ ಪರಿಣಮಿಸಿವೆ.

ನಗರದ 31 ವಾರ್ಡುಗಳಲ್ಲಿ ಜೆಸ್ಕಾಂ ಅಳವಡಿಸಿರುವ ವಿದ್ಯುತ್‌ ಪರಿವರ್ತಕಗಳು ನೆಲಮಟ್ಟದಿಂದ ಕೇವಲ ನಾಲ್ಕೈದು ಅಡಿ ಎತ್ತರದಲ್ಲಿ ಅಳವಡಿಸಿದೆ. ಪರಿವರ್ತಕಕ್ಕೆ ಸಂಪರ್ಕ ಕಲ್ಪಿಸಿರುವ ವಿದ್ಯುತ್‌ ತಂತಿಗಳನ್ನು ನೆಲಮಟ್ಟದಲ್ಲಿ ಅಳವಡಿಸಿರುವುದರಿಂದ ಜೋಡಿಕಂಬಗಳು ಆಪಾಯ ಆಹ್ವಾನಿಸುತ್ತಿವೆ.

‘ವಿದ್ಯುತ್‌ ಕಂಬಗಳ ಬಗ್ಗೆ ಮತ್ತು ಪರಿವರ್ತಕಗಳ ಬಗ್ಗೆ ಆಗಾಗ ಜಾಗರೂಕತೆ ವಹಿಸಲು ಜೆಸ್ಕಾಂ ಸಿಬ್ಬಂದಿಯನ್ನೂ ಕೂಡ ನೇಮಿಸಿಕೊಂಡಿದೆ. ಆದರೆ, ಈ ಸಿಬ್ಬಂದಿ ವಿದ್ಯುತ್ ಪರಿವರ್ತಕ ಅಪಾಯಕಾರಿ ಆಗುತ್ತಿರುವ ಬಗ್ಗೆ ಜೆಸ್ಕಾಂಗೆ ಮನವರಿಕೆ ಮಾಡಿಕೊಟ್ಟಿಲ್ಲ. ಅಲ್ಲದೇ ನೆಲಮಟ್ಟದಲ್ಲಿ ಪರಿವರ್ತಕಗಳನ್ನು ಅಳವಡಿಸುವಂತೆಯೂ ಇಲ್ಲ ಎಂಬ ನಿಯಮ ಇದೆ. ಇಲಾಖೆ ಸಿಬ್ಬಂದಿ ಈ ನಿಯಮ ಉಲ್ಲಂಘಿಸಿ ಏಕೆ ಅಳವಡಿಸುತ್ತಿದೆಯೋ ಗೊತ್ತಿಲ್ಲ. ಈ ಕುರಿತು ಜೆಸ್ಕಾಂ ದೂರು ವಿಭಾಗಕ್ಕೆ ಹಲವು ಬಾರಿ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ’ಎಂದು ಇಲ್ಲಿನ ಬಸವೇಶ್ವರ ನಗರದ ನಿವಾಸಿಗಳಾದ ರತ್ನಮ್ಮ, ರಾಜುಕುಮಾರ್ ದೂರುತ್ತಾರೆ.

ಬಸವೇಶ್ವರ ನಗರ, ವಿಠಕಲ್‌ ನಗರ, ಸ್ಟೇಷನ್‌ ಏರಿಯಾಗಳು ನಗರದ ಹೃದಯ ಭಾಗದಲ್ಲಿರುವ ಬಡಾವಣೆಗಳು. ಇಲ್ಲಿ ಅಳವಡಿಸಲಾಗಿರುವ ವಿದ್ಯುತ್‌ ಪರಿವರ್ತಕಗಳಿಗೆ ಮರಗಿಡ, ಬಳ್ಳಿಗಳು ಮುತ್ತಿಕೊಂಡು ವಿದ್ಯುತ್‌ ನೆಲಮಟ್ಟಕ್ಕೂ ಪ್ರವಹಿಸುತ್ತಿವೆ. ಅವುಗಳನ್ನು ರಸ್ತೆ ಪಕ್ಕದಲ್ಲೇ ಅಳವಡಿಸಿರುವುದರಿಂದ ಜೋಡಿಕಂಬಗಳ ಸನಿಹದಲ್ಲಿ ಮಕ್ಕಳು ಹೆಚ್ಚಾಗಿ ಆಟ ಆಡುತ್ತಾರೆ. ಇಂಥಾ ಸಂದರ್ಭದಲ್ಲಿ ದುರಂತ ಸಂಭವ ಹೆಚ್ಚು. ಅಪಾಯಕಾರಿ ಆಗಿರುವ ಪರಿವರ್ತಕಗಳನ್ನು ಮೇಲಕ್ಕೆ ಅಳವಡಿಸುವಂತೆ ಮತ್ತು ಪರಿವರ್ತಕಗಳಿಗೆ ಮುತ್ತಿಕೊಂಡು ಅಪಾಯಕಾರಿ ಎನಿಸಿರುವ ಪರಿವರ್ತಕಗಳ ಬಗ್ಗೆ ಗಮನ ಹರಿಸುವಂತೆ ಜೆಸ್ಕಾಂ ಅಧಿಕಾರಿಗಳ ಗಮಕ್ಕೆ ತಂದರೂ ನಿರ್ಲಕ್ಷಿಸಿದ್ದಾರೆ ಎಂಬುದಾಗಿ ಲಕ್ಷ್ಮೀನಗರದ ಸಂತೋಷ್ ಪವಾರ್‌ ದೂರುತ್ತಾರೆ.

‘ಪರಿವರ್ತಕಗಳಿಗೆ ಹಬ್ಬುವ ಮರಗಿಡ– ಬಳ್ಳಿಗಳನ್ನು ಸಿಬ್ಬಂದಿ ಸ್ವಚ್ಛಗೊಳಿಸುವ ಹೊಣೆಗಾರಿಕೆ ಇಲಾಖೆ ನೀಡಿರುತ್ತದೆ. ಜಂಗಲ್‌ ಕಟ್‌ ಕಾರ್ಯಾಚರಣೆ ನಡೆಸುವ ಸಿಬ್ಬಂದಿ ವಿದ್ಯುತ್‌ ಕಂಬಗಳಿಗೆ ತಾಗುವ ಮರಗಿಡಗಳನ್ನು ಕತ್ತರಿಸಿ ಅಪಾಯಕಾರಿ ಆಗದಂತೆ ತಡೆಯುತ್ತಾರೆ. ಆದರೆ, ನಗರದಲ್ಲಿ ಜೆಸ್ಕಾಂ ಜಂಗಲ್ ಕಟ್ ಕಾರ್ಯಾಚರಣೆಯನ್ನೇ ನಿರ್ಲಕ್ಷಿಸಿದೆ. ವಿಭಾಗೀಯ ಅಧಿಕಾರಿಗಳು (ಎಸ್‌ಒ–ಸೆಕ್ಷನ್‌ ಆಫೀಸರ್) ಈ ಉಸ್ತುವಾರಿ ನೋಡಿಕೊಳ್ಳಬೇಕು. ಆದರೆ, ವಿಭಾಗೀಯ ಅಧಿಕಾರಿಗಳು ಈ ಸ್ಥಳ ಪರಿವೀಕ್ಷಣೆಯನ್ನೇ ಮರೆತಿದ್ದಾರೆ’ ಎಂದು ನಗರ ನಿವಾಸಿಗಳಾದ ಎಸ್‌.ಎಸ್‌.ನಾಯಕ, ರಾಮಣ್ಣ ಹೇಳುತ್ತಾರೆ.

ನಗರದಲ್ಲಿ 110, 33, 11ಕೆವಿ ಸಾಮರ್ಥ್ಯದ ವಿದ್ಯುತ್‌ ಪೂರೈಕೆ ಆಗುತ್ತದೆ. ಇಷ್ಟು ಸಾಮರ್ಥ್ಯದ ವಿದ್ಯುತ್‌ ಪ್ರವಹಿಸುವ ತಂತಿಗಳನ್ನು ಅಳವಡಿಸಿರುವ ಜೋಡಿಕಂಬಗಳಲ್ಲಿನ ಸುರಕ್ಷತಾ ಬಾಕ್ಸ್‌ಗಳು ಕೂಡ ಮುಚ್ಚಿರುವುದಿಲ್ಲ. ಈ ತಂತಿಗಳು ಮನುಷ್ಯರಿಗೆ ತಾಗಿದರೆ ಬದುಕುಳಿಯುವುದಿಲ್ಲ. ಪ್ರಾಣಾಂತಿಕವಾಗಬಲ್ಲ ಜೋಡಿಕಂಬಗಳ ಸುತ್ತಲೂ ತಂತಿಬೇಲಿ ನಿರ್ಮಿಸಿ ಭದ್ರತೆ ಹಾಗೂ ಸುರಕ್ಷತೆ ಕಾಪಾಡುವುದನ್ನು ಜೆಸ್ಕಾಂ ಮರೆತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT