ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಾಗಿ 10 ವರ್ಷ ಕಳೆದರೂ ಸುಸಜ್ಜಿತ ಕ್ರೀಡಾಂಗಣಗಳು ಇಲ್ಲ

ನೂತನ ತಾಲ್ಲೂಕುಗಳಲ್ಲಿ ಕ್ರೀಡಾಂಗಣವೇ ಇಲ್ಲ, ಇದ್ದ ಕಡೆ ನಿರ್ವಹಣೆ ಇಲ್ಲ
Last Updated 4 ಅಕ್ಟೋಬರ್ 2020, 16:26 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿರುವ ಕ್ರೀಡಾಂಗಣಗಳು ಅವ್ಯವಸ್ಥೆಯ ಆಗರವಾಗಿದ್ದು, ಉಪಯೋಗಕ್ಕೆ ಬಾರದಂತಿವೆ. ನೂತನ ತಾಲ್ಲೂಕುಗಳಲ್ಲಿ ಕ್ರೀಡಾಂಗಣವೇ ಇಲ್ಲ. ಇದರಿಂದ ಕ್ರೀಡಾಪಟುಗಳು ತೊಂದರೆ ಪಡುತ್ತಿದ್ದಾರೆ.

ಜಿಲ್ಲೆಯಾಗಿ 10 ವರ್ಷ ಕಳೆದರೂ ಸುಸಜ್ಜಿತ ಕ್ರೀಡಾಂಗಣಗಳು ಇಲ್ಲದೆ ಕ್ರೀಡಾಪಟುಗಳ ಭವಿಷ್ಯ ಅಯೋಮಯವಾಗಿದೆ. ಸದ್ಯ ಜಿಲ್ಲೆಯಲ್ಲಿರುವ ಕ್ರೀಡಾಂಗಣಗಳ್ಯಾವು ಸರಿಯಿಲ್ಲ. ಯಾದಗಿರಿ ಮತ್ತು ಶಹಾಪುರ ತಾಲ್ಲೂಕುಗಳಲ್ಲಿ ಕಾಮಗಾರಿ ನಡೆಯುತ್ತಿದ್ದು, ಕೊರೊನಾ ನಿಯಮಾವಳಿ ಮತ್ತು ಇನ್ನಿತರ ಕಾರಣದಿಂದ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ.

ಸುರಪುರ, ವಡಗೇರಾ ಮತ್ತು ಹುಣಸಗಿ ತಾಲ್ಲೂಕು ಕೇಂದ್ರಗಳಲ್ಲಿ ಸರ್ಕಾರಿ ಕ್ರೀಡಾಂಗಣವೇ ಇಲ್ಲ. ಗುರುಮಠಕಲ್‌ನಲ್ಲಿಕ್ರೀಡಾಂಗಣವಿದ್ದರೂ ಪ್ರಯೋಜನಕ್ಕೆ ಬಾರದಂತಿದೆ. ಹುಣಸಗಿ ತಾಲ್ಲೂಕಿನಲ್ಲಿ ಕೆಬಿಜೆಎನ್‌ಎಲ್‌ ವತಿಯಿಂದ ನಿರ್ಮಿಸಿದಕ್ರೀಡಾಂಗಣಗಳಿವೆ. ಆದರೆ, ನಿರ್ವಹಣೆ ಕೊರತೆ ಇದೆ.

ಮಾರ್ಚ್‌ನಲ್ಲಿ ಕೋಚ್‌ಗಳ ನೇಮಕವಾಗಬೇಕಿತ್ತು. ಆದರೆ, ಕೊರೊನಾ ಹಾವಳಿಯಿಂದ ನೇಮಕಾತಿ ಪ್ರಕ್ರಿಯೆಗೆ ಹಿನ್ನಡೆಯಾಗಿದೆ. ಯಾದಗಿರಿಯಲ್ಲಿ ಕ್ರೀಡಾ ಶಾಲೆ ಇದ್ದು, ಈಗ ಕೋವಿಡ್‌ ಕಾರಣದಿಂದ ಮುಚ್ಚಲಾಗಿದೆ. ಎಲ್ಲ ಕ್ರೀಡಾ ಚಟುವಟಿಕೆಗಳು ಸ್ಥಗಿತಗೊಂಡಿವೆ. ಮುಖ್ಯವಾಗಿ ಸಿಬ್ಬಂದಿ ಕೊರತೆಯನ್ನು ಕ್ರೀಡಾ ಇಲಾಖೆ ಎದುರಿಸುತ್ತಿದೆ.

‘ಐದು ಪೈಕಿ ಎರಡು ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಎಫ್‌ಡಿಎ,ಗ್ರೂಪ್‌ ಡಿ ಹುದ್ದೆಗಳು ಖಾಲಿ ಇವೆ. ಕೋಚ್‌ಗಳ ನೇಮಕವಾಗಿಲ್ಲ. ಹೊರ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡಿದ್ದವರನ್ನು ಮತ್ತೆ ಮರು ನಿಯುಕ್ತಿ ಮಾಡಿಕೊಂಡಿಲ್ಲ’ ಎನ್ನುತ್ತಾರೆ ಯುವ ಸಬಲೀಕರಣ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಸುಚೇತಾ ನೇಲವಗಿ.

‘ಮಾರ್ಚ್‌ ತಿಂಗಳಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಕೋವಿಡ್‌ ಕಾರಣದಿಂದ ಕಾಮಗಾರಿ ನಿಧಾನವಾಗುತ್ತಿದೆ. ಒಳಚರಂಡಿ, ಹೊರಚರಂಡಿ ಕಾಮಗಾರಿ ನಡೆಯುತ್ತಿದೆ. ಕ್ರೀಡಾ ಶಾಲೆಯಲ್ಲಿ 20 ವಿದ್ಯಾರ್ಥಿಗಳು ಇದ್ದರು. ಈಗ ಬಂದ್‌ ಆಗಿದೆ’ ಎಂದು ಅವರು ಹೇಳುತ್ತಾರೆ.

ಬಿರುಕು ಬಿಟ್ಟ ಕಟ್ಟಡ: ಜಿಲ್ಲಾ ಕ್ರೀಡಾಂಗಣದ ಪ್ರೇಕ್ಷಕರ ಗ್ಯಾಲರಿ ಬಿರುಕು ಬಿಟ್ಟಿದ್ದು, ಅಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಜೀವ ಭಯದಲ್ಲಿ ಕೆಲಸ ಮಾಡುತ್ತಿದ್ದಾರೆ.

₹1.50 ಕೋಟಿ ವೆಚ್ಚದಲ್ಲಿ ಕ್ರೀಡಾ ಸಂಕೀರ್ಣದ ಸುತ್ತುಗೋಡೆ ಹಾಗೂ ಭದ್ರತಾ ಕೋಣೆ ನಿರ್ಮಿಸಲಾಗಿದೆ. ಕಟ್ಟಡಕ್ಕೆ 2010ರಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು. ಮೂರು ವರ್ಷಗಳ ಕಾಮಗಾರಿ ನಂತರ 2013ರಲ್ಲಿ ಅಂದಿನ ಸಣ್ಣ ಕೈಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ನರಸಿಂಹ ನಾಯಕ (ರಾಜೂಗೌಡ) ಅವರು ಲೋಕಾರ್ಪಣೆ ಮಾಡಿದ್ದರು. 7 ವರ್ಷಗಳ ನಂತರ ಕಟ್ಟಡ ಬಿರುಕು ಬಿಟ್ಟಿದೆ.

ಪ್ರೇಕ್ಷಕರ ಗ್ಯಾಲರಿಯಲ್ಲಿ ನೀರು ನಿಂತು ಕೆಳ ಮಹಡಿಯಲ್ಲಿ ನೀರು ಜಿನುಗುತ್ತದೆ. ಇದರಿಂದ ಗೋಡೆಗಳು ಬಿರುಕು ಬಿಡಲು ಕಾರಣವಾಗಿದೆ. ಕಳಪೆ ಕಾಮಗಾರಿಯೇ ಇದಕ್ಕೆ ಕಾರಣ ಎನ್ನುವುದು ಕ್ರೀಡಾಭಿಮಾನಗಳ ಆರೋಪ.

ಕ್ರೀಡಾ ಶಾಲೆಗೆ ತೆರಳುವ ರಸ್ತೆಯೂ ಕೆಸರುಮಯವಾಗಿದ್ದು, ವಾಹನ ಚಲಿಸಲು ಸಾಧ್ಯವಿಲ್ಲದಷ್ಟು ಹದಗೆಟ್ಟಿದೆ. ಅಲ್ಲದೆ ಬೀದಿ ದೀಪಗಳು ಇಲ್ಲ. ಮಳೆಯಿಂದಾಗಿ ಕ್ರೀಡಾಂಗಣದ ರಸ್ತೆಗಳಲ್ಲಿ ಗುಂಡಿ ಬಿದ್ದಿವೆ.

ಟೆನ್ನಿಸ್ ಕೋರ್ಟ್ ಎರಡು ಅಡಿ ಕುಸಿತ: ಕ್ರೀಡಾಂಗಣ ಆವರಣದಲ್ಲಿರುವಟೆನ್ನಿಸ್ ಕೋರ್ಟ್ ಉಪಯೋಗಕ್ಕೆ ಬಾರದಂತಾಗಿದ್ದು, ಎರಡು ಅಡಿ ಭೂಮಿಯೊಳಗೆ ಕುಸಿದಿದೆ. ಈಗ ಮಳೆಯಲ್ಲಿ ಕಟ್ಟಡ ಸಂಪೂರ್ಣ ‍ಪಾಳು ಬಿದ್ದಿದೆ. ಕೋರ್ಟ್‌ಗೆ ತೆರಳುವ ರಸ್ತೆಯಲ್ಲಿ ನೀರು ನಿಂತಿದೆ.

ಜಿಮ್ ಇನ್ನೂ ತೆಗೆದಿಲ್ಲ: ಸರ್ಕಾರ ಜಿಮ್‌ ತೆಗೆಯಲು ಅನುಮತಿ ನೀಡಿದ್ದರೂ ಇಲ್ಲಿರುವ ಜಿಮ್‌ ಮಾತ್ರ ಇನ್ನೂ ತೆಗೆದಿಲ್ಲ. ಇದರಿಂದ ಜಿಮ್‌ನಲ್ಲಿ ಕಸರತ್ತು ನಡೆಸಲು ಸಾಧ್ಯವಾಗುತ್ತಿಲ್ಲ.

ಉಪಯೋಗಕ್ಕೆ ಬಾರದ ಈಜುಕೊಳ: 2019ರಲ್ಲಿ ಈಜುಕೊಳ ಉದ್ಘಾಟನೆಯಾಗಿದ್ದು, ಈಗ ಉಪಯೋಗಕ್ಕೆ ಬಾರದ ಸ್ಥಿತಿಯಲ್ಲಿದೆ. ಈಜುಕೊಳದ ಮುಂದೆ ರಸ್ತೆ ಅಗೆಯಲಾಗಿದ್ದು, ತೆರಳಲು ಸಾಧ್ಯವಿಲ್ಲದಂತಾಗಿದೆ. ಅಲ್ಲದೆ ನಿರ್ವಹಣೆ ಕೊರತೆ ಎದುರಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT