ವಡಗೇರಾ: ಪ್ರತಿಯೊಬ್ಬರು ತಮ್ಮ ಆರೋಗ್ಯದ ಕಡೆಗೆ ಗಮನ ಹರಿಸುವುದರ ಜತೆಗೆ ಪರಿಸರದ ಬಗ್ಗೆ ಕಾಳಜಿಯನ್ನು ವಹಿಸಬೇಕು ಎಂದು ತಾಪಂ ಇಒ ಮಲ್ಲಿಕಾರ್ಜುನ ಸಂಗ್ವಾರ್ ಹೇಳಿದರು.
ತಾಲ್ಲೂಕಿನ ಕೊಂಕಲ್ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ನೀತಿ ಆಯೋಗದ ಸಂಪೂರ್ಣತಾ ಅಭಿಯಾನ ಅಂಗವಾಗಿ ಆಯೋಜಿಸಿದ್ದ ಜಾಗೃತಾ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ಇಂದಿನ ಆಧುನಿಕ ಯುಗದಲ್ಲಿ ಪ್ರತಿಯೊಬ್ಬರು ಅವಸರದ ಜೀವನ ನಡೆಸುತ್ತಿದ್ದು, ತಮ್ಮ ಆರೋಗ್ಯದ ಬಗ್ಗೆ ಹಾಗೂ ಸ್ವಚ್ಚತೆಯ ಬಗ್ಗೆ ಕಾಳಜಿಯನ್ನು ವಹಿಸದೆ ಇರುವುದರಿಂದ ಅನೇಕ ರೋಗ ರುಜಿನಗಳಿಗೆ ಬಲಿಯಾಗುತ್ತಿದ್ದಾರೆ ಎಂದು ತಿಳಿಸಿದರು.
ಆರೋಗ್ಯ, ಶಿಕ್ಷಣ, ಗರ್ಭಿಣಿ ತಾಯಂದಿರ ಮತ್ತು ಮಕ್ಕಳ ಪೌಷ್ಟಿಕತೆ, ನೈರ್ಮಲ್ಯ, ಸ್ವಚ್ಛತೆ, ಕುಡಿಯುವ ನೀರು, ಪರಿಸರ ಸಂರಕ್ಷಣೆ ಬಗ್ಗೆ ಎಲ್ಲರೂ ಹೆಚ್ಚಿನ ಮಹತ್ವವನ್ನು ಕೊಡಬೇಕು ಆಗ ಮಾತ್ರ ಸದೃಢ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.
ಗರ್ಭಿಣಿಯರ ಆರೋಗ್ಯ ತಪಾಸಣೆ, ಹದಿಹರೆಯದ ಮಕ್ಕಳ ಅನಿಮೀಯಾ ಪರೀಕ್ಷೆ ಗ್ರಾಮದ ಹಿರಿಯ ನಾಗರಿಕರಿಗೆ ರಕ್ತದೊತ್ತಡ, ಡಯಾಬಿಟಿಸ್ ಪರೀಕ್ಷೆ ಮಾಡಿಸಲಾಯಿತು.
ಇದೇ ಸಮಯದಲ್ಲಿ ಪೌಷ್ಟಿಕ ಆಹಾರ ಮೇಳ ಏರ್ಪಡಿಸಿ ಪೌಷ್ಟಿಕತೆ ಬಗ್ಗೆ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲಾಯಿತು.
ಈ ವೇಳೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಲ್ಲಣ್ಣ ದೇಸಾಯಿ, ಆರೋಗ್ಯ ಇಲಾಖೆಯ ಸಮಾಲೋಚಕ ಶಶಿಕಾಂತ, ಮಹತ್ವಾಕಾಂಕ್ಷಿ ಯೋಜನೆಯ ತಾಲ್ಲೂಕು ಸಮಾಲೋಚಕಿ ಕಾವೇರಿ, ರಾಜೀವಗಾಂಧಿ ಪಂಚಾಯತ್ ರಾಜ್ ಸಮಾಲೋಚಕ ದೀಕ್ಷಿತ್, ಪಿರಾಮಲ್ ಫೌಂಡೇಷನ್ ಅನಿಲ್, ಶಿಕ್ಷಕರು, ಗ್ರಾಪಂ ಸದಸ್ಯರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರು, ಮುಖಂಡರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.