ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಸಂಭ್ರಮದ ನಾಗರ ಪಂಚಮಿ

ನಾಗರಿಗೆ ಹಾಲೆರೆದ ಮಹಿಳೆಯರು, ಕೊಬ್ಬರಿ ಆಟ ಆಡಿ ಸಂಭ್ರಮಿಸಿದ ಚಿಣ್ಣರು
Last Updated 5 ಆಗಸ್ಟ್ 2019, 15:25 IST
ಅಕ್ಷರ ಗಾತ್ರ

ಯಾದಗಿರಿ: ನಾಗರ ಪಂಚಮಿ ಹಬ್ಬವನ್ನು ಸೋಮವಾರ ಜಿಲ್ಲೆಯಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಎಲ್ಲೆಲ್ಲೂ ಮಹಿಳೆಯರು, ಯುವತಿಯರು ಹೊಸ ಬಟ್ಟೆ ಧರಿಸಿ, ಕೈಯಲ್ಲಿ ನೈವೈದ್ಯ ಹಿಡಿದು ದೇವಸ್ಥಾನಗಳಿಗೆ ತೆರಳುತ್ತಿರುವುದು ಕಂಡುಬಂತು.

ಮುಂಜಾನೆಯಿಂದಲೇ ಹಬ್ಬದ ಸಡಗರ ಮನೆ ಮಾಡಿತ್ತು. ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು. ಮಹಿಳೆಯರು, ಕುಟುಂಬದವರೆಲ್ಲರೂ ಸೇರಿ ನಾಗರಕಲ್ಲು, ಹುತ್ತಗಳಿಗೆ ಹಾಲು ಎರೆದು ಪಂಚಮಿ ಆಚರಿಸಿದರು.

ನಾಗರ ಪಂಚಮಿ ಸಡಗರ ವಾರಗಟ್ಟಲೇ ಇರುತ್ತದೆ. ಆದರೂ ಮೊದಲ ಮೂರು ದಿನ ಮುಖ್ಯ ಆಚರಣೆಗಳು ನಡೆಯುತ್ತವೆ. ಮೊದಲ ದಿನ ರೊಟ್ಟಿ ಪಂಚಮಿ, ಮರುದಿನ ನಾಗರ ಚೌತಿ, ಅದರ ಮರು ದಿನ ನಾಗರ ಪಂಚಮಿ ಹಬ್ಬ ಆಚರಿಸುತ್ತಾರೆ.

ಮಹಿಳೆಯರು ಎಳ್ಳು ಹಚ್ಚಿ ತಯಾರಿಸಿದ ರೊಟ್ಟಿ, ಚಪಾತಿ, ಕಡ್ಲೇಕಾಳು ಉಸುಲಿ, ಬದನೆಕಾಯಿ ಎಣ್ಣೆಗಾಯಿ ಪಲ್ಯ, ತಂಬಿಟ್ಟು, ಶೇಂಗಾ, ಕಡ್ಲೆಚಟ್ನಿ ಸೇರಿದಂತೆ ಬಗೆಬಗೆಯ ಖಾದ್ಯಗಳನ್ನು ತಯಾರಿಸಿ ಬಂಧು, ಬಳಗ ನೆರೆ ಹೊರೆಯವರಿಗೆ ಹಂಚಿ ಸಂಭ್ರಮಪಟ್ಟರು.

ನಾಗಮೂರ್ತಿಗೆ ಅಭಿಷೇಕ: ನಗರದ ವಿವಿಧ ಬಡಾವಣೆಗಳಲ್ಲಿರುವ ನಾಗರ ಕಟ್ಟೆಗೆ ಆಗಮಿಸಿದ್ದ ಮಹಿಳೆಯರು ಹೊಸ ಬಟ್ಟೆ ಧರಿಸಿ ನೈವೈದ್ಯ ಮತ್ತು ಹಾಲಿನಿಂದ ಅಭಿಷೇಕ ನೆರವೇರಿಸುವುದು ಕಂಡುಬಂತು. ಹೊಸದಾಗಿ ದಾಂಪತ್ಯಕ್ಕೆ ಕಾಲಿಟ್ಟ ಹೆಣ್ಣುಮಕ್ಕಳು ತವರು ಮನೆಗೆ ಬಂದು ನಾಗರ ಪಂಚಮಿಯನ್ನು ಸಂಭ್ರಮದಿಂದ ಆಚರಿಸಿದರು.

ಪಂಚಮಿ ಹಬ್ಬದಲ್ಲಿ ಚಿಕ್ಕಮಕ್ಕಳು ಒಣ ಕೊಬ್ಬರಿ ಬಟ್ಟಲುಗಳನ್ನು ಬುಗರಿಯಂತೆ ಆಡಿಸಿ, ಅದು ತುಂಡಾದ ನಂತರ ತಿಂದು ಸಂತೋಷಪಟ್ಟರು. ದೊಡ್ಡವರು ಕಣ್ಣು ಕಟ್ಟಿಕೊಂಡು ಗುರಿ ಮುಟ್ಟುವ ಆಟ ಆಡಿ ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT