4
ಸೌಲಭ್ಯ ಇದ್ದರೂ ಸೇವೆ ನೀಡಲು ತಜ್ಞವೈದ್ಯಾಧಿಕಾರಿ, ಆರೋಗ್ಯ ಸಿಬ್ಬಂದಿ ಕೊರತೆ

ತಜ್ಞವೈದ್ಯರ ರಾತ್ರಿ ಪಾಳಿಯೂ, ಹಗಲು ಸೇವೆ ಅಲಭ್ಯವೂ

Published:
Updated:
ಯಾದಗಿರಿ ನಗರದಲ್ಲಿರುವ ಜಿಲ್ಲಾ ಆಸ್ಪತ್ರೆ

ಯಾದಗಿರಿ: ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ಸೌಲಭ್ಯಗಳಿದ್ದರೂ ಸಿಬ್ಬಂದಿ ಕೊರತೆಯಿಂದಾಗಿ ಪೂರ್ಣಪ್ರಮಾಣದಲ್ಲಿ ಆರೋಗ್ಯ ಸೇವೆ ಸಾರ್ವಜನಿಕರಿಗೆ ಲಭ್ಯವಾಗುತ್ತಿಲ್ಲ.

ವೈದ್ಯಕೀಯ ಮಂಡಳಿ, ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಯೋಜನೆ ಜಾರಿಗೊಳಿಸುವ ನಿಟ್ಟಿನಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿದ್ದ ಎಲ್ಲ ಹುದ್ದೆಗಳನ್ನು ಪದನಾಮಕರಿಸಿದ್ದು ಬಿಟ್ಟರೆ ವೈದ್ಯಕೀಯ ಹಾಗೂ ಆರೋಗ್ಯ ಸಿಬ್ಬಂದಿ ನೇಮಕಾತಿ ಕುರಿತು ಜಿಲ್ಲಾಡಳಿತ, ಸ್ಥಳೀಯ ಜನಪ್ರತಿನಿಧಿಗಳು ಗಂಭೀರ ಚಿಂತನೆ ನಡೆಸಿಲ್ಲ.

ಜಿಲ್ಲಾ ಆಸ್ಪತ್ರೆಯು ಸಕಲ ಸೌಲಭ್ಯಗಳನ್ನು ಪಡೆದಿದ್ದರೂ ಅವುಗಳನ್ನು ಬಳಸಿ ರೋಗಿಗಳಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಸಾಧ್ಯವಾಗಿಲ್ಲ. 100 ಹಾಸಿಗೆಗಳ ಸಾಮರ್ಥ್ಯ ಹೊಂದಿದ್ದ ಸಾರ್ವಜನಿಕ ಆಸ್ಪತ್ರೆ ಮೊದಲೇ ಸಿಬ್ಬಂದಿ ಕೊರತೆಯಿಂದ ನರಳುತ್ತಿತ್ತು. ಜಿಲ್ಲಾ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿದ ನಂತರವೂ ಅದೇ ಸಿಬ್ಬಂದಿ ಜಿಲ್ಲಾ ಆಸ್ಪತ್ರೆ ಸಾಮರ್ಥ್ಯ ನಿಭಾಯಿಸುತ್ತಿದ್ದಾರೆ. ಇದರ ಜತೆಗೆ ಸರ್ಕಾರ ಈಚೆಗೆ 150 ಹಾಸಿಗೆಗಳನ್ನು ಹೆಚ್ಚುವರಿಯಾಗಿ ಸೇರ್ಪಡೆ ಮಾಡಿ ಉನ್ನತೀಕರಿಸಿದೆ. ಇರುವ ವ್ಯವಸ್ಥೆಯನ್ನೇ ನಿಭಾಯಿಸಲು ಹೆಣಗುತ್ತಿರುವ ಸಿಬ್ಬಂದಿಗೆ ಈಗ 150 ಹೆಚ್ಚುವರಿ ಹಾಸಿಗೆ ನಿಭಾಯಿಸಬೇಕಾದ ಹೊರೆ ಬಿದ್ದಿದೆ.

ರಾತ್ರಿಪಾಳಿ ನಿರ್ವಹಿಸುವ ತಜ್ಞವೈದ್ಯರು:
ಜಿಲ್ಲಾ ಆಸ್ಪತ್ರೆಯಲ್ಲಿ ಹಗಲು–ರಾತ್ರಿ ಪಾಳಿ ಕರ್ತವ್ಯ ನಿರ್ವಹಿಸಲು ಒಟ್ಟು 6 ಮಂದಿ ಸಾಮಾನ್ಯ ವೈದ್ಯರ ಅಗತ್ಯ ಇದೆ. ಆದರೆ, ಇಲ್ಲಿ ಒಬ್ಬ ಸಾಮಾನ್ಯ ವೈದ್ಯರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜಿಲ್ಲಾ ಶಸ್ತ್ರಚಿಕಿತ್ಸಕರ ಹುದ್ದೆಯೂ ಖಾಲಿ ಇದೆ. ಅರವಳಿಕೆ ತಜ್ಞರು ಆರು ತಿಂಗಳಿಂದ ಆಡಳಿತಾತ್ಮಕ ಹೆಚ್ಚುವರಿ ಹುದ್ದೆ ನಿಭಾಯಿಸುತ್ತಿದ್ದಾರೆ.

ಇಲ್ಲಿ ಒಟ್ಟು 8 ಮಂದಿ ತಜ್ಞವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಸಾಮಾನ್ಯ ವೈದ್ಯರ ಕೊರತೆ ಹಿನ್ನೆಲೆಯಲ್ಲಿ ಈ ತಜ್ಞವೈದ್ಯರು ರಾತ್ರಿಪಾಳಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಾಗಾಗಿ, ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ತಜ್ಞವೈದ್ಯರ ಕೊರತೆ ಕಾಡುತ್ತದೆ. ಸೌಲಭ್ಯ, ತಜ್ಞವೈದ್ಯರು ಇದ್ದರೂ ಸಾರ್ವಜನಿಕರಿಗೆ ಸೇವೆ ಮರೀಚಿಕೆಯಾಗಿದೆ. ಈ ಕಾರಣಕ್ಕಾಗಿಯೇ ಇಲ್ಲಿನ ಸಿಬ್ಬಂದಿ ಬಹುತೇಕ ರೋಗಿಗಳಿಗೆ ರಾಯಚೂರಿನ ರಿಮ್ಸ್‌ ಹಾದಿ ತೋರಿಸುತ್ತಾರೆ.

‘ಎ’ ದರ್ಜೆಯಿಂದ ‘ಡಿ’ ದರ್ಜೆ ಸಿಬ್ಬಂದಿವರೆಗಿನ ಒಟ್ಟು 110 ಪೈಕಿ 75 ಮಂದಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರಲ್ಲಿ ಕಾಯಂ ಸಿಬ್ಬಂದಿ ಕೊರತೆಯೂ ಇದೆ. ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ನೇಮಿಸಲಾಗಿದೆ. ಮುಖ್ಯವಾಗಿ ಶುಶ್ರೂಷಕಿಯರ ಹುದ್ದೆ ಖಾಲಿ ಇವೆ. ಖಾಲಿ ಇರುವ ‘ಡಿ’ ದರ್ಜೆಯ 11 ಹುದ್ದೆಗಳಲ್ಲೂ ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ನೇಮಿಸಲಾಗಿದೆ’ ಎಂದು ಪ್ರಭಾರ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಂಜೀವಕುಮಾರ ರಾಯಚೂರ್‌ಕರ್ ತಿಳಿಸಿದರು.

ನವಜಾತ ಶಿಶು ವಿಭಾಗ ಅನಾಥ: ನವಜಾತ ಶಿಶುಗಳ ಆರೈಕೆಗಾಗಿ ಇಲ್ಲಿ ಸ್ಥಾಪಿಸಿರುವ ನವಜಾತ ಶಿಶು ಚಿಕಿತ್ಸಾ ಘಟಕ ಮಕ್ಕಳ ತಜ್ಞವೈದ್ಯರ ಕೊರತೆಯಿಂದಾಗಿ ಅನಾಥವಾಗಿದೆ. ಉಷ್ಣಾಂಶ ಕೊರತೆ, ಉಸಿರಾಟ ತೊಂದರೆ, ಕಡಿಮೆ ತೂಕ ಸೇರಿದಂತೆ  ಮಗು ಜನಿಸಿದ ತಕ್ಷಣ ಉಂಟಾಗುವ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ನಿವಾರಿಸಲು ಈ ಘಟಕ ಸ್ಥಾಪನೆಯಾಗಿದ್ದರೂ, ಸಿಬ್ಬಂದಿ ಕೊರತೆಯಿಂದಾಗಿ ಬಿಕೋ ಎನ್ನುತ್ತಿದೆ.

ಅಲ್ಲದೇ ಈ ಘಟಕದಲ್ಲಿ ಮುಖ್ಯವಾಗಿ ಇರಲೇಬೇಕಾದ ಆಪ್ತಸಮಾಲೋಚಕ ಹುದ್ದೆಯೂ ಖಾಲಿ ಇದೆ. ಹುಟ್ಟಿದ ಮಗುವಿಗೆ ಎದೆ ಹಾಲುಣಿಸುವ ಬಗೆ ಮತ್ತು ನವಜಾತ ಮಕ್ಕಳ ಆರೈಕೆ, ಬಾಣಂತಿ ಆರೈಕೆ ಕುರಿತು ಆರೋಗ್ಯ ಸಲಹೆ ನೀಡುವ ಕರ್ತವ್ಯವನ್ನು ಆಪ್ತ ಸಮಾಲೋಚಕರು ನಿರ್ವಹಿಸುತ್ತಾರೆ. ಇಲ್ಲಿ ಅವರ ಕೊರತೆಯೂ ಇರುವುದರಿಂದ ಚೊಚ್ಚಲ ಬಾಣಂತಿಯರು ನೂರಾರು ಸಮಸ್ಯೆಗಳನ್ನು ಎದುರಿಸುವಂತಾಗಿದೆ.

ನವಜಾತ ಶಿಶು ಆರೈಕೆ ಘಟಕ ಹಾಗೂ ಮಕ್ಕಳ ಪೌಷ್ಠಿಕಾಂಶ ಪುನಶ್ಚೇತನ ವಿಭಾಗ ಜಿಲ್ಲಾ ಆಸ್ಪತ್ರೆ ಆಡಳಿತದ ಅಧೀನದಲ್ಲಿ ಬರುವುದಿಲ್ಲ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧೀನಕ್ಕೆ ಒಳಪಡುತ್ತದೆ. ಎರಡೂ ಘಟಕಗಳಿಗೆ ಸಿಬ್ಬಂದಿ ನಿಯೋಜನೆ ಮಾಡುವ ಅಧಿಕಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಇದೆ. ಅದರ ಮೇಲ್ವಿಚಾರಣೆ ಜಿಲ್ಲಾ ಆಸ್ಪತ್ರೆಗೆ ವಹಿಸಲಾಗಿದೆ.

ಹಾಗಾಗಿ, ಮಕ್ಕಳ ಪೌಷ್ಠಿಕಾಂಶ ಪುನಶ್ಚೇತನ ವಿಭಾಗದಲ್ಲಿ ಸ್ವಲ್ಪಮಟ್ಟಿಗೆ ಸಿಬ್ಬಂದಿ ಆಗಾಗ ಮಕ್ಕಳ ಆರೋಗ್ಯದ ಕಡೆಗೆ ಗಮನ ನೀಡುತ್ತಾರೆ. ಆದರೆ, ನವಜಾತ ಶಿಶು ಆರೈಕೆ ಘಟಕದಿಂದ ಮಾತ್ರ ಸಾರ್ವಜನಿಕರಿಗೆ ಸೇವೆ ಸಿಗುತ್ತಿಲ್ಲ.

ಜಿಲ್ಲಾ ಆಸ್ಪತ್ರೆಯ ಸಾಮರ್ಥ್ಯಕ್ಕೆ ತಕ್ಕಂತೆ ಸಿಬ್ಬಂದಿ ಇದ್ದರೆ ಉತ್ತಮ ಸೇವೆ ನೀಡಬಹುದು. ಸಿಬ್ಬಂದಿ ಕೊರತೆ ಮಧ್ಯೆಯೂ ಅಲ್ಪ ಸಿಬ್ಬಂದಿ ಯಾವುದೇ ಸಮಸ್ಯೆ ಉಂಟಾಗದಂತೆ ಸೇವೆ ಒದಗಿಸುತ್ತಿದ್ದಾರೆ.
ಡಾ.ಸಂಜೀವ್‌ಕುಮಾರ್ ರಾಯಚೂರಕರ್, ಪ್ರಭಾರ ಜಿಲ್ಲಾ ಶಸ್ತ್ರತಜ್ಞ

ನವಜಾತ ಶಿಶು ಘಟಕಕ್ಕೆ ಸಿಬ್ಬಂದಿ ನೇಮಕ ಮಾಡುವ ಹಿನ್ನೆಲೆಯಲ್ಲಿ ಆರ್‌ಸಿಎಚ್ ಅಧಿಕಾರಿ ನೇಮಕ ಪ್ರಕ್ರಿಯೆ ನಡೆಸಿದ್ದಾರೆ. ಆದರೆ, ನೇಮಕಾತಿಗೆ ಆಕ್ಷೇಪಣೆ ಬಂದಿರುವ ಹಿನ್ನೆಲೆಯಲ್ಲಿ ನೇಮಕ ವಿಳಂಬವಾಗಿದೆ. ಶೀಘ್ರ ಸಿಬ್ಬಂದಿ ನೇಮಕವಾಗಲಿದ್ದಾರೆ.
ಡಾ.ಭಗವಂತ ಅನವಾರ, ಪ್ರಭಾರ ಜಿಲ್ಲಾ ಆರೋಗ್ಯ ಕತ್ತು ಕುಟುಂಬ ಕಲ್ಯಾಣ ಅಧಿಕಾರಿ

ಜಿಲ್ಲಾ ಆಸ್ಪತ್ರೆಯಲ್ಲಿ ನರರೋಗ ತಜ್ಞರಿಲ್ಲ. ಅದಕ್ಕಾಗಿ ನೂರು ಕಿಲೋ ಮೀಟರ್ ದೂರದ ಕಲಬುರ್ಗಿ ಇಲ್ಲವೇ ರಾಯಚೂರು ಜಿಲ್ಲೆಗಳನ್ನೇ ಜನರು ಆಶ್ರಯಿಸಿದ್ದಾರೆ. ಆಸ್ಪತ್ರೆ ಇದ್ದರೂ ಚಿಕಿತ್ಸೆ ಇಲ್ಲದಂತಾಗಿದೆ.
ಯಶವಂತಪ್ಪ ಮುಳ್ಳಗಸಿ, ಯಾದಗಿರಿ ನಿವಾಸಿ

ಆರೋಗ್ಯ ಸೇವೆ ಸಮರ್ಪಕವಾಗಿ ಸಿಗದೇ ಇರುವ ಕಾರಣ ಜಿಲ್ಲೆಯಲ್ಲಿ ಮಕ್ಕಳ ಹಾಗೂ ಬಾಣಂತಿಯರ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಅದನ್ನು ಸರ್ಕಾರ, ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಗಂಭೀರವಾಗಿ ತೆಗೆದುಕೊಂಡಿಲ್ಲ.
– ಉಮೇಶ್ ಕೆ. ಮುದ್ನಾಳ, ಸಾಮಾಜಿಕ ಹೋರಾಟಗಾರ

ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡ ಕೂಡಲೇ ಜಿಲ್ಲಾ ಆಸ್ಪತ್ರೆಗೆ ಬರುತ್ತೇನೆ. ಈಚೆಗೆ ನೇತ್ರ ಚಿಕಿತ್ಸೆಯೂ ಮಾಡಿಸಿಕೊಂಡಿದ್ದೇನೆ. ಉತ್ತಮ ಸೇವೆ ಸಿಗುತ್ತಿದೆ.
ಮಹಾದೇವಮ್ಮ, ಮುಂಡರಗಿ ಗ್ರಾಮ

ಖಾಸಗಿ ಆಸ್ಪತ್ರೆಗಳಲ್ಲೂ ಸಮರ್ಪಕ ಚಿಕಿತ್ಸೆ ಸಿಗುತ್ತಿಲ್ಲ. ಹಾಗಾಗಿ, ಜಿಲ್ಲಾ ಆಸ್ಪತ್ರೆಯನ್ನೇ ಹೆಚ್ಚು ಅವಲಂಬಿಸಬೇಕಾಗಿದೆ. ಆದರೆ, ರೋಗಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ತಕ್ಷಣ ಚಿಕಿತ್ಸೆ ದೊರೆಯುವುದಿಲ್ಲ.
ಭೀಮವ್ವ, ಯಾದಗಿರಿ

ಏನಿಲ್ಲ...
* ನರರೋಗ ತಜ್ಞರ ಸೇವೆ ಇಲ್ಲ
* ನವಜಾತ ಶಿಶು ನಿಗಾ ಘಟಕದಲ್ಲಿ ಸಿಬ್ಬಂದಿ ಇಲ್ಲ
* ಆಪ್ತ ಸಮಾಲೋಚಕರಿಲ್ಲ

 ಏನಿದೆ...
* ಉತ್ತಮ ನೇತ್ರ ಚಿಕಿತ್ಸಾ ಘಟಕ
* ಸುಸಜ್ಜಿತ ಆಪರೇಷನ್‌ ಥೇಟರ್
* ಅನುಭವಿ ನೇತ್ರತಜ್ಞರು
* ಸ್ತ್ರೀರೋಗ ತಜ್ಞರ ಸೇವೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !