ಯಾದಗಿರಿ: ಜಿಲ್ಲಾ ಕೇಂದ್ರವಾಗಿ 14 ವರ್ಷಗಳು ಕಳೆದರೂ ಕೆಲವು ರೈಲುಗಳು ನಿಲುಗಡೆ ಆಗುತ್ತಿಲ್ಲ. ಆದರೆ, ವಾಡಿ ಮತ್ತು ಸೇಡಂನಲ್ಲಿ ಏಕ್ಸ್‌ಪ್ರೆಸ್ ರೈಲು ನಿಲುಗಡೆ ಆಗುತ್ತಿದ್ದು, ಯಾದಗಿರಿಯಲ್ಲಿ ನಿಲ್ಲಿಸಬೇಕು ಎಂದು ಸಾಮಾಜಿಕ ಹೋರಾಟಗಾರ ಉಮೇಶ.ಕೆ.ಮುದ್ನಾಳ ನೇತೃತ್ವದಲ್ಲಿ ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅವರಿಗೆ ಈಚೆಗೆ ಮನವಿ ಪತ್ರ ಸಲ್ಲಿಸಲಾಯಿತು.
ಆದಾಯದಲ್ಲಿ ಗುಂತಕಲ್ ಮತ್ತು ತಿರುಪತಿ ಬಿಟ್ಟರೆ 2ನೇ ಆದಾಯದಲ್ಲಿ ಯಾದಗಿರಿ ರೈಲ್ವೆ ನಿಲ್ದಾಣವಿದ್ದರೂ ಇಲ್ಲಿ ಸುಮಾರು 13 ಏಕ್ಸ್‌ಪ್ರೆಸ್ ರೈಲುಗಳು ನಿಲ್ಲುತ್ತಿಲ್ಲ. ಕೋವಿಡ್ ಸಮಯದಲ್ಲಿ ರದ್ದಾದ ಇಂಟರ್‌ಸಿಟಿ ಪ್ಯಾಸೆಂಜರ್ ರೈಲು ಇನ್ನೂವರೆಗೂ ಓಡಿಸುತ್ತಿಲ್ಲ. ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಯಾದಗಿರಿ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸಿ, ಸುಸಜ್ಜಿತ ನಿಲ್ದಾಣವನ್ನಾಗಿ ಮಾರ್ಪಡಿಸುವುದರ ಜೊತೆಗೆ ರೈಲ್ವೆ ನಿಲ್ದಾಣದ ಸ್ವಚ್ಛತೆ ಜೊತೆಗೆ ಶೌಚಾಲಯಗಳು ಹೆಚ್ಚಿನ ರೀತಿಯಲ್ಲಿ ನಿರ್ಮಾಣ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ನಮ್ಮ ಭಾಗದಿಂದ ಮುಂಬೈ ಮತ್ತು ಬೆಂಗಳೂರು ಮಹಾನಗರಗಳಿಗೆ ಗುಳೆ ಹೋಗುವ ಪ್ರಯಾಣಿಕರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಆದಕಾರಣ ಎಲ್ಲಾ ರೈಲು ಗಾಡಿಗಳಿಗೆ ಹೆಚ್ಚುವರಿಯಾಗಿ ಎರಡು ಜನರಲ್ ಬೋಗಿಗಳನ್ನೂ ಹೆಚ್ಚಿಸಿ ಈ ಭಾಗದ ಗುಳೆ ಹೋಗುವ ಕೂಲಿಕಾರರಿಗೆ, ಬಡ ರೈತರಿಗೆ ಅನೂಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಹಣಮಂತ ಅರಕೇರಾ, ಜಿ.ವೆಂಕಟೇಶ ಯಾದಗಿರಿ, ನಾಗಪ್ಪ ಪೋತಾಲ್, ಆಂಜನೇಯ ಬೆಳಗೇರಿ, ಬಾಬು ಖಾನ್, ಅಹ್ಮದ್ ಅಲಿ, ಮಹ್ಮದ್ ಇಮ್ರಾನ್, ಚಂದ್ರು ನಾಯ್ಕಲ್, ಪ್ರವೀಣ ತೋರಣತಿಪ್ಪಾ, ದುರ್ಗಪ್ಪ ಕೌಳೂರು, ಬನಶಂಕರ ಎಲ್ಹೇರಿ, ಸಾಬಯ್ಯ ಗುತ್ತೇದಾರ, ಶರಣು ನಾರಾಯಣಪೇಠ, ಶರಣು, ಲಕ್ಷ್ಮಣ ಜಿನಕೇರಿ, ಭೀಮರಾಯ ಗಣಪುರ, ರಫೀಕ್ ಪಟೇಲ್, ಮಹ್ಮದ್ ಇಮ್ರಾನ್, ಅಕ್ರಮ್ ಸಗರಿ, ರಫಿಕ್ ಪಟೇಲ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.