ಶನಿವಾರ, ಮೇ 15, 2021
25 °C
ಒಂದೊಂದು ಶಾಲೆಯಲ್ಲಿ ವಿಭಿನ್ನ ಸಮಸ್ಯೆ

ಯಾದಗಿರಿ: ಸೌಲಭ್ಯ ವಂಚಿತ ಸರ್ಕಾರಿ ಶಾಲೆಗಳು, ಗಮನ ಹರಿಸದ ಅಧಿಕಾರಿಗಳು

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯಲ್ಲಿರುವ ಬಹುತೇಕ ಸರ್ಕಾರಿ ಶಾಲೆಗಳು ಸೌಕರ್ಯ ಕೊರತೆ ಎದುರಿಸುತ್ತಿವೆ. ಕನಿಷ್ಠ ಸೌಲಭ್ಯಗಳು ಇಲ್ಲದೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪರದಾಡುತ್ತಿದ್ದಾರೆ.

ಆವರಣ ಗೋಡೆ, ಆಟದ ಮೈದಾನ ಇಲ್ಲದೆ ಇರುವ ಶಾಲೆಗಳೇ ಹೆಚ್ಚಿವೆ. ಶೌಚಾಲಯಗಳು ಹೆಸರಿಗೆ ಮಾತ್ರ ನಿರ್ಮಿಸದಂತಿವೆ. ಆದರೆ, ಬಳಕೆಯಾಗುತ್ತಿಲ್ಲ. ಕೆಲ ಕಡೆ ನೀರಿನ ಸಮಸ್ಯೆಯಿಂದ ಬಂದ್‌ ಮಾಡಲಾಗಿದೆ. ಹಲವು ಕಡೆ ಹುಡುಗರು ಬಯಲಿಗೆ ತೆರಳುತ್ತಿರುವುದು ತಪ್ಪಿಲ್ಲ.

928 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 1,38,140 ವಿದ್ಯಾರ್ಥಿಗಳು ಓದುತ್ತಿದ್ದಾರೆ. 122 ಸರ್ಕಾರಿ ಪ್ರೌಢಶಾಲೆಗಳಲ್ಲಿ 32,049 ವಿದ್ಯಾರ್ಥಿಗಳು ಇದ್ದಾರೆ.

ವಿದ್ಯಾರ್ಥಿಗಳ ದೈಹಿಕ ಕಸರತ್ತಿಗೆ ಮುಖ್ಯವಾಗಿ ಆಟ ಬೇಕು. ಆದರೆ, ಇದು ಸರ್ಕಾರಿ ಶಾಲೆಗಳಲ್ಲಿ ಮರೀಚಿಕೆಯಾಗಿದೆ. ಇದು ವಿದ್ಯಾರ್ಥಿಗಳ ದೈಹಿಕ ಬೆಳವಣಿಗೆ ಮೇಲೂ ಪ್ರಭಾವ ಬೀರುತ್ತಿದೆ. ಈಗ ಹೊಸದಾಗಿ ನಿರ್ಮಿಸುತ್ತಿರುವ ಪ್ರೌಢಶಾಲೆಗಳಲ್ಲಿ ಮಾತ್ರ ಆಟದ ಮೈದಾನಕ್ಕೆ ಜಾಗ ಮೀಸಲಿಡಲಾಗುತ್ತಿದೆ. ಆದರೆ, ಪ್ರಾಥಮಿಕ ಶಾಲೆಗಳಲ್ಲಿ ಮಾತ್ರ ಆಟದ ಮೈದಾನ ಕೊರತೆ ಇದೆ. 

ಕೆಲ ಶಾಲೆಗಳಲ್ಲಿ ಆವರಣ ಗೋಡೆ ಇರದ ಕಾರಣ ಹಂದಿ, ನಾಯಿ, ಬಿಡಾಡಿ ದನಗಳು ಶಾಲೆಯೊಳಗೆ ನುಗ್ಗುವುದು ಸಾಮಾನ್ಯವಾಗಿದೆ. ನಗರದ ಅಜೀಜ್ ಕಾಲೊನಿಯ ಉರ್ದು ಶಾಲೆಯಲ್ಲಿ ಆವರಣ ಗೋಡೆ ಇದ್ದರೂ ಹಂದಿಗಳು ನುಗ್ಗಿ ವಾಸ ಮಾಡುತ್ತಿರುವುದು ಕಂಡು ಬರುತ್ತಿದೆ.

ಯಾದಗಿರಿ ತಾಲ್ಲೂಕಿನ ಮುಂಡರಗಿ, ರಾಮಸಮುದ್ರ, ಮಸ್ಕನಹಳ್ಳಿ ಗ್ರಾಮಗಳಲ್ಲಿ ಆಟದ ಮೈದಾನವೇ ಇಲ್ಲ. ಖಾಸಗಿ ಬಯಲು ಜಾಗದಲ್ಲಿ ವಿದ್ಯಾರ್ಥಿಗಳು ಆಟವಾಡುತ್ತಿರುವುದು ಕಂಡು ಬಂದಿದೆ. ಆಟದ ಮೈದಾನದ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಯಾವುದೇ ಪ್ರಯೋಜವಾಗಿಲ್ಲ ಎನ್ನುವುದು ಶಿಕ್ಷಕರ ಅಳಲಾಗಿದೆ.

ಹಬ್ಬ ಹರಿದಿನಕ್ಕೆ ಶಾಲೆಗೆ ಗೈರು: ಜಿಲ್ಲೆಯಲ್ಲಿ ಈಗ ವಿವಿಧ ಗ್ರಾಮಗಳಲ್ಲಿ ಜಾತ್ರೆಗಳು ನಡೆಯುತ್ತಿವೆ. ಹೀಗಾಗಿ ಶಾಲೆ ಇರುವ ಗ್ರಾಮದಲ್ಲಿ ಜಾತ್ರೆ ಇದ್ದರೆ ವಿದ್ಯಾರ್ಥಿಗಳ ಹಾಜರಾತಿ ಬಹುತೇಕ ಕಡಿಮೆಯಾಗುತ್ತಿದೆ. ನಗರ ಪ್ರದೇಶದ ಕೆಲ ಶಾಲೆಗಳು ಸಮುದಾಯ ಭವನ, ದೇವಸ್ಥಾನಗಳಲ್ಲಿ ನಡೆಯುತ್ತಿವೆ. ಅಲ್ಲದೆ ಹಬ್ಬಗಳು ಬಂದರೂ ಶಾಲೆಗಳಿಗೆ ವಿದ್ಯಾರ್ಥಿಗಳು ಬರುತ್ತಿಲ್ಲ ಎನ್ನುತ್ತಾರೆ ಶಿಕ್ಷಕರು. 

ಯಾದಗಿರಿ ನಗರದ ಆರ್‌ಟಿಒ ಕಚೇರಿ ಹಿಂಭಾಗದಲ್ಲಿ ಹೊಸದಾಗಿ ನಿರ್ಮಿಸಿರುವ ಸ್ಟೇಷನ್‌ ಬಜಾರ್‌ ಪ‍್ರೌಢಶಾಲೆಯಲ್ಲಿ ಹುಡುಗರಿಗೆ ಶೌಚಾಲಯವೇ ಇಲ್ಲ. ಬಯಲೇ ಗತಿಯಾಗಿದೆ. ಹುಡುಗಿಯರಿಗೆ, ಶಿಕ್ಷಕರಿಗೆ ಮಾತ್ರ ಶೌಚಾಲಯ ನಿರ್ಮಿಸಲಾಗಿದೆ. ವಿದ್ಯಾರ್ಥಿಗಳು, ಶಿಕ್ಷಕರು ಬಯಲನ್ನೇ ಆಶ್ರಯಿಸಿರುವುದು ವಿಪರ್ಯಾಸವೇ ಸರಿ.

8,9, 10ನೇ ತರಗತಿಯ 465 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರೂ ಶೌಚಾಲಯ, ಆವರಣ ಗೋಡೆ, ಆಟದ ಮೈದಾನ ಇಲ್ಲದಂತಾಗಿದೆ. ಪ್ರಾರ್ಥನೆಗೆ ನಿಂತುಕೊಳ್ಳುವ ವೇಳೆ ಸಣ್ಣ ಹುಳುಗಳು ಕಡಿಯುತ್ತಿವೆ ಎಂದು ವಿದ್ಯಾರ್ಥಿನಿಯರು ಆರೋಪಿಸುತ್ತಾರೆ. ಈ ಶಾಲೆಯಲ್ಲಿ 14 ಶಿಕ್ಷಕರಿದ್ದು, 5 ಪುರುಷರು, 9 ಮಹಿಳಾ ಶಿಕ್ಷಕರು ಇದ್ದಾರೆ. ಆದರೆ, ಗಣಿತ ಶಿಕ್ಷಕರು ಇಲ್ಲದಿರುವುದು ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ.

ನಗರ ಪ್ರದೇಶದಲ್ಲಿ ಇಂಥ ಸಮಸ್ಯೆ ಕಂಡು ಬಂದರೆ ಇನ್ನೂ ಗ್ರಾಮೀಣ ಮಟ್ಟದಲ್ಲಿ ಯಾವ ರೀತಿ ಇರಬಹುದು ಎಂದು ಊಹಿಸಲು ಅಸಾಧ್ಯ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ವಿಷಯ ಶಿಕ್ಷಕರ ಕೊರತೆ
ಗಣಿತ, ವಿಜ್ಞಾನ, ಇಂಗ್ಲಿಷ್‌ ಶಿಕ್ಷಕರ ಕೊರತೆ ಇದೆ. ಜಿಲ್ಲೆಯಲ್ಲಿ 122 ಸರ್ಕಾರಿ ಪ್ರೌಢಶಾಲೆಗಳಿದ್ದು, ಇದರಲ್ಲಿ ವಿವಿಧ ವಿಷಯಗಳ 196 ಶಿಕ್ಷಕರ ಕೊರತೆ ಇದೆ ಎಂದು ಪ್ರಭಾರಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಶೋಕ ಭಜಂತ್ರಿ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಮಾಹಿತಿ ನೀಡಿದ್ದರು. ಇದು ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರುತ್ತಿದೆ.

ಕೆಲ ಶಿಕ್ಷಕರು ಶಾಲೆಗೆ ಹಾಜರಾಗದೇ ಬಿಇಒ, ಡಿಡಿಪಿಐ ಕಚೇರಿಗಳಿಗೆ ಅಲೆದಾಡಿ ಪಾಠ ಮಾಡದೆ ಕಾಲಹರಣ ಮಾಡುತ್ತಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯರು ಆರೋಪಿಸುತ್ತಾರೆ.

‘ನಾನು ಅಧ್ಯಕ್ಷನಾಗಿ ಒಂದು ವರ್ಷವಾಗುತ್ತಿದೆ. ಶಿಕ್ಷಣ ಇಲಾಖೆಯಲ್ಲಿ ಹಲವಾರು ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಆದರೆ, ಕೆಲ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹಿಂದಿನ ಡಿಡಿಪಿಐ ಶ್ರೀನಿವಾಸ ರೆಡ್ಡಿ ಜಿಲ್ಲೆಗೆ ಬಂದ ಅನುದಾನದ ಬಗ್ಗೆ ನನಗಾಗಲಿ, ಸದಸ್ಯರಿಗಾಗಲಿ ಮಾಹಿತಿ ನೀಡಿಲ್ಲ. ಇದರಿಂದ ಹಣ ಹಿಂದಿರುಗುವ ಸಂಭವ ಇದೆ. ಹಿರಿಯ ಅಧಿಕಾರಿಗಳನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿದಾಗ ಈ ವಿಷಯ ಬೆಳಕಿಗೆ ಬಂದಿದೆ’ ಎಂದು ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಲಿಂಗಪ್ಪ ಪುಟಗಿ ತಿಳಿಸಿದರು.

‘ಅಧಿಕಾರಿಗಳು ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ ಶ್ರಮಿಸುವ ಬದಲು ಕಾಲಹರಣ ಮಾಡುತ್ತಿದ್ದಾರೆ. ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಜಿಲ್ಲೆಯಲ್ಲಿ ಶಿಕ್ಷಣದ ಫಲಿತಾಂಶ ಸುಧಾರಣೆ ಆಗುತ್ತಿಲ್ಲ’ ಎಂದು ತಿಳಿಸಿದರು.

***

ನಮ್ಮ ಶಾಲೆಯಲ್ಲಿ 100 ವಿದ್ಯಾರ್ಥಿಗಳಿದ್ದು, ಮಕ್ಕಳಿಗೆ ಆಟವಾಡಲು ಆಟದ ಮೈದಾನದ ಕೊರತೆ ಇದೆ. ಶಾಲೆ ಮುಂಭಾಗದ ಖಾಸಗಿ ಜಾಗದಲ್ಲಿ ಮಕ್ಕಳಿಗೆ ಸಣ್ಣಪುಟ್ಟ ಆಟಗಳನ್ನು ಆಯೋಜಿಸಲಾಗುತ್ತಿದೆ. ಆಟದ ಮೈದಾನ ಇದ್ದರೆ ವಿದ್ಯಾರ್ಥಿಗಳಿಗೆ ಅನುಕೂಲ.
-ಕೆ.ಎಂ.ಮಂಜುನಾಥ, ಶಿಕ್ಷಕ, ಮಸ್ಕನಹಳ್ಳಿ

***

ಹುಡುಗರಿಗೆ ಶೌಚಾಲಯದ ಸಮಸ್ಯೆ ಇದೆ. ಆವರಣ ಗೋಡೆ ನಿರ್ಮಿಸಿ, ಆಟದ ಮೈದಾನಕ್ಕೆ ಸ್ಥಳವನ್ನು ಸಿದ್ಧ ಮಾಡಿಕೊಡಬೇಕು. ಶಾಲಾವರಣ ಸುತ್ತಮುತ್ತ ಖಾಲಿ ಜಾಗ ಇದ್ದು, ಗಿಡಮರ ಬೆಳೆಸಬೇಕು.
-ಆಕಾಶ ಪೂಜಾರಿ, ಸ್ಟೇಷನ್‌ ಬಜಾರ್‌ ಶಾಲಾ ವಿದ್ಯಾರ್ಥಿ

***

ಶಾಲೆಯಲ್ಲಿ ಫ್ಯಾನ್‌ ಇಲ್ಲ. ಬೇಸಿಗೆಯಲ್ಲಿ ಸಮಸ್ಯೆ ಆಗುತ್ತದೆ. ಆಟದ ಮೈದಾನದ ಜೊತೆಗೆ ಕ್ರೀಡಾ ಸಾಮಗ್ರಿ ಒದಗಿಸಿ ಕೊಡಬೇಕು. ಈ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು.
-ಭಾಗ್ಯಶ್ರೀ ಠಾಣಗುಂದಿ, 10ನೇ ತರಗತಿ ವಿದ್ಯಾರ್ಥಿನಿ

***

ಆಟದ ಮೈದಾನ, ಶೌಚಾಲಯ, ಆವರಣ ಗೋಡೆ ನಿರ್ಮಾಣಕ್ಕೆ 2020ರ ಆಗಸ್ಟ್‌ ತಿಂಗಳಲ್ಲಿ ₹68 ಲಕ್ಷ ಬಂದಿದ್ದು, ಅದನ್ನು ಬಳಸಿಕೊಂಡು ಸೌಕರ್ಯ ಕಲ್ಪಿಸಬೇಕು.
-ಶಿವಲಿಂಗಪ್ಪ ಪುಟಗಿ, ಜಿ.ಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ

***

ಹಂತ ಹಂತವಾಗಿ ಶಾಲೆಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲಾಗುವುದು. ಎಲ್ಲೆಲ್ಲಿ ಸಮಸ್ಯೆ ಇದೆ ಎನ್ನುವುದನ್ನು ಪಟ್ಟಿ ಮಾಡಿದ್ದೇವೆ. ಸರ್ಕಾರದ ಅನುದಾನ ‍ಪಡೆದು ಸೌಲಭ್ಯ ಒದಗಿಸಲಾಗುವುದು
-ಅಶೋಕ ಭಜಂತ್ರಿ, ಪ್ರಭಾರಿ ಡಿಡಿಪಿಐ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು