ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಂತ್ರಿಕ ನೈಪುಣ್ಯತೆಯ ಫಾಲನ್ಸ್ ಬಂಗ್ಲಾ

Last Updated 2 ಜನವರಿ 2022, 5:00 IST
ಅಕ್ಷರ ಗಾತ್ರ

ಸುರಪುರ: ಸುರಪುರವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಅನನ್ಯ ಆಡಳಿತ ನಡೆಸಿದ್ದ ಗೋಸಲ ದೊರೆಗಳ ಇತಿಹಾಸಕ್ಕೆ ಸೇತುವೆಯಾಗಿರುನ ನಗರದ ಕ್ಯಾಪ್ಟನ್ ಫಾಲನ್ಸ್ ಬಂಗ್ಲಾ (ಅರಮನೆ) ಪಾಳು ಬಿದ್ದಿದೆ.

ಆಂಗ್ಲೋ ಇಂಡಿಯನ್ ಶೈಲಿಯಲ್ಲಿ ನಿರ್ಮಾಣವಾದ ಈ ಕಟ್ಟಡ ಅಪರೂಪದ ವಾಸ್ತು ವಿನ್ಯಾಸ ಒಳಗೊಂಡಿದೆ. ಇದು ಹಂಪಿಯಲ್ಲಿನ ಕಮಲ ಮಹಲ್‌ ಅನ್ನೇ ಹೋಲುತ್ತದೆ. ಪ್ರಕೃತಿ ಸೌಂದರ್ಯದ ಸುಂದರ ತಪ್ಪಲು ಪ್ರದೇಶದಲ್ಲಿ ನಿರ್ಮಾಣ ಮಾಡಲಾಗಿದೆ.

ಅಂದಾಜು 3,000 ಚದರಡಿ ಯಲ್ಲಿ ನಿರ್ಮಿಸಿರುವ ಈ ಕಟ್ಟಡಕ್ಕೆ ಸುತ್ತ 8 ಬಾಗಿಲು ಇವೆ. 15 ಕಡೆ ಕಿಟಕಿ, 16 ವೆಂಟಿಲೇಟರ್‌ ಜೋಡಿಸಲಾಗಿದೆ. ವೃತ್ತಾಕಾರದಲ್ಲಿ ಇರುವ ಈ ಕಟ್ಟಡ ನೋಡುಗರನ್ನು ಸೆಳೆಯುತ್ತದೆ.

ವಿಶಾಲವಾದ ಹಜಾರ, 5 ಕೋಣೆ, ಅಡುಗೆ ಮನೆ, ಚಳಿಗಾಲದಲ್ಲಿ ಕಾಯಿಸಿಕೊಳ್ಳಲು ಆಂಗ್ಲ ಮಾದರಿಯ ಅಗ್ಗಷ್ಟಿಕೆ, ಶೌಚಾಲಯ, ಸ್ನಾನಗೃಹ, ಕೆಲಸಗಾರರ ಕೋಣೆಗಳು, ಅನತಿ ದೂರದಲ್ಲಿ ಸಿಬ್ಬಂದಿಯ ಕಟ್ಟಡವೂ ಇದೆ.

ನೈಸರ್ಗಿಕವಾಗಿ ಗಾಳಿ, ಬೆಳಕು ಕಟ್ಟಡದ ಎಲ್ಲ ಕೋಣೆಗಳಲ್ಲಿ ಪಸರಿಸುವಂತೆ ತಂತ್ರಜ್ಞಾನ ಅಳವಡಿಸಿರುವುದು ಅಂದಿನ ನೈಪುಣ್ಯಕ್ಕೆ ಸಾಕ್ಷಿಯಾಗಿದೆ. ಕಟ್ಟಡದ ಮೇಲೆ ನಿಂತು ಸುತ್ತಲಿನ ಪ್ರಕೃತಿ ಸಂಪತ್ತು ಕಣ್ತುಂಬಿ ಕೊಳ್ಳಬಹುದು. ದೂರದಲ್ಲಿ ಹರಿಯುವ ಕೃಷ್ಣೆಯೂ ಕಾಣುವುದು ಇಲ್ಲಿನ ವಿಶೇಷ.

ಕಟ್ಟಡದ ನಂತರ ಮುಂದೆ ಹಾದಿ ಇಲ್ಲ. ಕಡಿದಾದ ಕಲ್ಲು ಬಂಡೆಗಳಿವೆ. ಆಳವಾದ ಕಣಿವೆ ಇದೆ. ಬಂಗಲೆಯ ಮುಂದೆ ವಿಶಾಲವಾದ ಅಂಗಳ ಇದೆ. ಒಂದು ಬದಿಯಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿದ್ದು, ಅಲ್ಲಿಂದಲೂ ಕಣಿವೆಯ ದೃಶ್ಯಗಳು ಕಣ್ಣಿಗೆ ಮುದ ನೀಡುತ್ತವೆ.

ಇಂತಹ ಅಪರೂಪದ ಕಟ್ಟಡ ಈಗ ಸಂಪೂರ್ಣವಾಗಿ ಪಾಳು ಬಿದ್ದಿದೆ. 80ರ ದಶಕದಲ್ಲಿ ಇದು ಅತಿಥಿ ಗೃಹವಾಗಿತ್ತು. ನಂತರ ನಿರ್ವಹಣೆಯಿಲ್ಲದೆ ಪುಂಡರ ತಾಣವಾಗಿದೆ. ಅನೈತಿಕ ಚಟುವಟಿಕೆಗಳು ನಡೆಯುತ್ತವೆ. ಕಟ್ಟಡದ ಬೆಲೆ ಬಾಳುವ ಬಾಗಿಲು, ಕಿಟಕಿ ಕಳುವು ಮಾಡಲಾಗಿದೆ. ಪ್ರಕೃತಿ ಸೌದರ್ಯ ವೀಕ್ಷಿಸಲು ಹಾಕಿದ್ದ ಕಬ್ಬಿಣದ ಪೈಪ್‍ಗಳು, ಹಾಸು ಬಂಡೆಗಳನ್ನು ಕದ್ದೊಯ್ಯಲಾಗಿದೆ.

ಭೂತ ಬಂಗ್ಲಾ: ಭವ್ಯವಾದ ಫಾಲನ್ಸ್ ಬಂಗ್ಲಾ ಪಾಳು ಬಿದ್ದಿದ್ದು, ನಗರದಿಂದ ದೂರದ ನಿರ್ಜನ ಪ್ರದೇಶದಲ್ಲಿದೆ. ಹಗಲು ಮತ್ತು ಸಂಜೆ ವೇಳೆಗೆ ವಾಯುವಿಹಾರಿಗಳು ಬರುತ್ತಾರೆ. ವ್ಯಾಯಾಮ, ಯೋಗ ಮಾಡಿ ಪ್ರಕೃತಿ ಸೌಂದರ್ಯ ಸವಿಯುತ್ತಾರೆ. ಆದರೆ, ರಾತ್ರಿ ವೇಳೆ ಇಲ್ಲಿಗೆ ಬರಲು ಜನರು ಹೆದರುತ್ತಾರೆ. ಹಿಂದೆ ಹಲವು ಜನರು ಇಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಮಧ್ಯರಾತ್ರಿಯಲ್ಲಿ ಈ ಕಟ್ಟಡದಿಂದ ಭಯ ಮೂಡಿಸುವ ಕೆಟ್ಟ ಧ್ವನಿ ಕೇಳುತ್ತದೆ ಎಂಬುದು ಜನಜನಿತವಾಗಿದೆ. ಹೀಗಾಗಿ, ಈ ಕಟ್ಟಡಕ್ಕೆ ಜನ ‘ಭೂತ ಬಂಗ್ಲಾ’ ಎಂತಲೂ ಕರೆಯುತ್ತಾರೆ.

ವೆಂಕಟಪ್ಪನಾಯಕರ ಇತಿಹಾಸದ ಕೊಂಡಿ

ಸುರಪುರದ ದೊರೆ ನಾಲ್ವಡಿ ರಾಜಾ ವೆಂಕಟಪ್ಪನಾಯಕ 1857ರ ಫೆ.8ರಂದು ರುಕ್ಮಾಪುರದ ಅನಂತನ ಬಗಡಿದಲ್ಲಿ ಆಂಗ್ಲ ಸೇನಾಧಿಕಾರಿ ಕ್ಯಾಪ್ಟನ್ ನ್ಯೂಬರಿ ಅವರನ್ನು ಯುದ್ಧದಲ್ಲಿ ಸೋಲಿಸಿದ. ಆತನ ಈ ಶೌರ್ಯ ಎಲ್ಲೆಡೆ ಹಬ್ಬುತ್ತದೆ. ಇದರಿಂದಾಗಿ 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ದಕ್ಷಿಣ ಭಾರತದ ನೇತೃತ್ವವು ರಾಜಾ ವೆಂಕಟಪ್ಪನಾಯಕನಿಗೆ ಲಭಿಸುತ್ತದೆ.

ಸೋತ ಕೆಲ ತಿಂಗಳಲ್ಲಿ ಬ್ರಿಟಿಷ್ ಸೈನ್ಯ ಮರು ದಾಳಿ ಮಾಡಿ ಸುರಪುರವನ್ನು ವಶಪಡಿಸಿಕೊಂಡು, ಕೊಳ್ಳೆ ಹೊಡೆಯುತ್ತದೆ. ಯುದ್ಧದ ಬಳಿಕ ದೊರೆಗಳು ದಂಗೆ ಎಳದಂತೆ ತಡೆಯಲು ಬ್ರಿಟಿಷರು, ಸೈನ್ಯಪಡೆಯ ಜತೆಗೆ ಕ್ಯಾಪ್ಟನ್ ಫಾಲನ್ಸ್‌ ಅವರನ್ನು ನೇಮಕ ಮಾಡಿತು.

ತನ್ನ ವಾಸಕ್ಕಾಗಿ ಆತ ಈ ಕಟ್ಟಡ ನಿರ್ಮಿಸಿದ್ದ. ಇದುವೇ ಫಾಲನ್ಸ್ ಬಂಗ್ಲಾ. ಬ್ರಿಟಿಷ್ ಪ್ರತಿನಿಧಿಯಾಗಿದ್ದ ಮೆಡೋಜ ಟೇಲರ್ 1844ರಲ್ಲಿ ಟೇಲರ್ ಮಂಜಿಲ್ ಕಟ್ಟಿಸಿದ. ಅದರ ಮಾದರಿ ಇರಿಸಿಕೊಂಡು 1857ರಲ್ಲಿ ಫಾಲನ್ಸ್ ಬಂಗ್ಲಾ ನಿರ್ಮಾಣ ಮಾಡಲಾಯಿತು.

ಟೇಲರ್ ಮಂಜಿಲ್‍ದಂತೆ ಈ ಕಟ್ಟಡದಲ್ಲೂ ಒಂದು ಬಾಗಿಲು ಅಲುಗಾಡಿಸಿದರೆ ಎಲ್ಲ ಬಾಗಿಲುಗಳು ತೆರೆಯುತ್ತಿದ್ದವು. ಅಲುಗಾಡಿಸಲು ಈಗ ಬಾಗಿಲುಗಳೇ ಇಲ್ಲ. ಟೇಲರ್ ಮಂಜಿಲ್‍ ಅತಿಥಿಗೃಹವಾಗಿ ಅಭಿವೃದ್ಧಿ ಪಡಿಸಿ, ಫಾಲನ್ಸ್ ಬಂಗ್ಲಾವನ್ನು ಪಾಳು ಬಿಟ್ಟಿರುವುದು ಇತಿಹಾಸಕಾರರ ಅಸಮಾಧಾನಕ್ಕೆ ಕಾರಣವಾಗಿದೆ.

*ಸುರಪುರದ ಇತಿಹಾಸಕ್ಕೆ ಸಾಕ್ಷಿಯಾಗಿರುವ ನ್ಯೂಬರಿ ಸಮಾಧಿ ಮತ್ತು ಫಾಲನ್ಸ್ ಬಂಗ್ಲಾವನ್ನು ಸರ್ಕಾರ ಅಭಿವೃದ್ಧಿ ಪಡಿಸಬೇಕು

ಚಂದ್ರಕಾಂತ ಭಂಡಾರಿ, ನಿವೃತ್ತ ಎಸ್‌ಪಿ

*ಇತಿಹಾಸ ಸಾರುವ ಇಂತಹ ಅನೇಕ ಕಟ್ಟಡಗಳು, ಪಳಿಯುಳಿಕೆಗಳು ಇನ್ನು ಇವೆ. ಇತಿಹಾಸಕಾರರು ಅವುಗಳ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಡಬೇಕು

–ಕನಕಪ್ಪ ವಾಗಣಗೇರಿ, ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT