ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಕೃಷಿ ಕಾಯ್ದೆ ವಾಪಸ್‌- ವಿಜಯೋತ್ಸವ

ರೈತರ ಹರ್ಷ, ಸಿಹಿ ಹಂಚಿ ಸಂಭ್ರಮಾಚರಣೆ, ರೈತರಿಗೆ ಸಂದ ಜಯ
Last Updated 20 ನವೆಂಬರ್ 2021, 4:20 IST
ಅಕ್ಷರ ಗಾತ್ರ

ಯಾದಗಿರಿ: ಕೇಂದ್ರ ಸರ್ಕಾರ ಮೂರು ಕರಾಳ ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದರಿಂದ ಜಿಲ್ಲೆಯ ವಿವಿಧ ಕಡೆ ವಿಜಯೋತ್ಸವ ನಡೆಯಿತು. ರೈತರು ಸಿಹಿ ಹಂಚಿ ಈ ನಿರ್ಧಾರ ಸ್ವಾಗತಿಸಿದರು.

ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಜಿಲ್ಲೆಯಿಂದಹಲವಾರು ರೈತರು ತೆರಳಿದ್ದರು. ಹಲವರು ಜಿಲ್ಲೆಯಲ್ಲಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ, ಬಂದ್‌ ಕೈಗೊಂಡಿದ್ದರು.

’700 ಹುತಾತ್ಮ ರೈತರ ಜೀವ ಕೊಟ್ಟು ರೈತರು ಗಳಿಸಿದ ವಿಜಯ. ಅವರ ಪರಿಶ್ರಮದಾಯಕ ಹೋರಾಟಗಳಿಂದ, ಬಲಿದಾನಗಳಿಂದ ಗಳಿಸಿದ ವಿಜಯ. ಹುತಾತ್ಮ ರೈತರಿಗೆ ಹೃದಯದಾಳದ ಶ್ರದ್ಧಾಂಜಲಿಗಳು‘ ಎಂದು ರೈತ ಪರ ಸಂಘಟನೆಗಳು ಹೇಳಿವೆ.

ರೈತ-ಕೃಷಿ ಕಾರ್ಮಿಕರ ಸಂಘಟನೆಯ (ಆರ್‌ಕೆಎಸ್) ಜಿಲ್ಲಾ ಸಮಿತಿಯಿಂದ ನಗರದ ಸುಭಾಷ ವೃತ್ತದಲ್ಲಿ ರೈತರು ವಿಜಯೋತ್ಸವ ಆಚರಿಸಿದರು.

ಈ ವೇಳೆ ಮಾತನಾಡಿದ ಮುಖಂಡರು, ‘ವಿದ್ಯುತ್ ಮಸೂದೆ ವಾಪಸ್ ತೆಗೆದುಕೊಂಡಿಲ್ಲ. ಉತ್ಪಾದನಾ ವೆಚ್ಚದ ಮೇಲೆ ಶೇ 50ರಷ್ಟು ಹೆಚ್ಚಿರುವ ಕನಿಷ್ಠ ಬೆಂಬಲ ಬೆಲೆಯಲ್ಲಿ ಎಲ್ಲಾ ಬೆಳೆಗಳನ್ನು ಖರೀದಿಸುವುದನ್ನು ಖಚಿತಪಡಿಸುತ್ತವೆ ಎಂದು ಘೋಷಿಸಿಲ್ಲ. ದೇಶದ ಎಲ್ಲೆಡೆ ರೈತರ ಮೇಲೆ ಹಾಕಿರುವ ಮೊಕದ್ದಮೆಗಳನ್ನು ವಾಪಸ್ ತೆಗೆದುಕೊಂಡಿಲ್ಲ. ರೈತರ ಚಳವಳಿಯ ಮೇಲೆ ದಾಳಿ ಮಾಡಿದವರಿಗೆ ಶಿಕ್ಷೆಯಾಗಿಲ್ಲ’ ಎಂದರು. ಹುತಾತ್ಮ ರೈತರ ಕುಟುಂಬಗಳ ಜವಾಬ್ದಾರಿಯನ್ನು ಮೋದಿ ಸರ್ಕಾರ ತೆಗೆದುಕೊಳ್ಳಬೇಕು ಆಗ್ರಹಿಸಿದರು.

ಆರ್‌ಕೆಎಸ್ ಜಿಲ್ಲಾ ಅಧ್ಯಕ್ಷ ಶರಣಗೌಡ ಗೂಗಲ್, ಎಐಯುಟಿಯುಸಿ ರಾಜ್ಯ ಕಾರ್ಯದರ್ಶಿ ಕೆ.ಸೋಮಶೇಖರ್, ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ರಾಮಲಿಂಗಪ್ಪ ಬಿ.ಎನ್, ಆರ್‌ಕೆಎಸ್ ಜಿಲ್ಲಾ ಸಹ ಕಾರ್ಯದರ್ಶಿ ಜಮಾಲ್‌ಸಾಬ್, ಎಐಡಿಎಸ್‌ಒನ ಮಹ್ಮದ್ ಅಶ್ರಫ್, ಶಂಕರಲಿಂಗ, ಪ್ರಮುಖರಾದ ಭೀಮರಡ್ಡಿ, ಬಸವರಾಜ, ವಿಶ್ವರಾಧ್ಯ, ದೇವಿಂದ್ರಪ್ಪ, ನಿಂಗಪ್ಪ, ಸಿದ್ರಾಮಪ್ಪ ಇದ್ದರು.

***

ರೈತರ ಶಕ್ತಿ ಕೇಂದ್ರ ಸರ್ಕಾರಕ್ಕೆ ಮನವರಿಕೆ ಆಗಿದೆ. ಪ್ರತಿಭಟನೆಗೆ ಮಣಿದು ರದ್ದು ಮಾಡುವ ಮಾತನ್ನು ಸರ್ಕಾರ ಶೀಘ್ರ ಜಾರಿಗೊಳಿಸಬೇಕು

- ಮಲ್ಲಿಕಾರ್ಜುನ ಸತ್ಯಂಪೇಟೆ, ರಾಜ್ಯ ರೈತ ಸಂಘದ ವಿಭಾಗೀಯ ಕಾರ್ಯದರ್ಶಿ

***

ಕರಾಳ ಕೃಷಿ ಕಾಯ್ದೆಗಳನ್ನು ಸರ್ಕಾರ ಹಿಂತೆಗೆದುಕೊಳ್ಳುತ್ತದೆ ಎಂದು ಪ್ರಧಾನಿ ಹೇಳಿರುವುದರಿಂದ ರೈತರ ಹೋರಾಟಕ್ಕೆ ಜಯ ಸಿಕ್ಕಿದೆ. 6 ಬಾರಿ ದೆಹಲಿಗೆ ತೆರಳಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದೇನೆ

- ಸುಭಾಷ ಐಕೂರ, ರಾಜ್ಯ ಸಂಚಾಲಕ, ರೈತ ಸಂಘ ಹಾಗೂ ಹಸಿರು ಸೇನೆ

***

ಕೇಂದ್ರ ಸರ್ಕಾರ ವಿಧಿ ಇಲ್ಲದೇ ಕಾಯ್ದೆಗಳನ್ನು ರದ್ದು ಮಾಡಿದೆ. ಈ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸಿದ ಅನೇಕ ರೈತರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ

- ಭಾಸ್ಕರರಾವ ಮೂಡಬೂಳ, ರೈತ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT