ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡೇಚೂರು | ಭೂಮಿ ಬಿಟ್ಟುಕೊಡೇವು: ರೈತರ ಬಿಗಿಪಟ್ಟು

ಹೆಚ್ಚುವರಿ ಭೂ ಸ್ವಾಧೀನಕ್ಕೆ ರೈತರಿಂದ ತೀವ್ರ ಪ್ರತಿಭಟನೆ
Last Updated 26 ಸೆಪ್ಟೆಂಬರ್ 2021, 15:56 IST
ಅಕ್ಷರ ಗಾತ್ರ

ಸೈದಾಪುರ: 'ದಶಕದ ಹಿಂದೆ ಭೂ ಸ್ವಾಧೀನ ಪಡೆದುಕೊಂಡ ಭೂಮಿಯಲ್ಲಿ ಯಾವುದೇ ಅಭಿವೃದ್ಧಿ ಕಾಣದಿದ್ದರೂ, ಹೆಚ್ಚುವರಿಯಾಗಿ ಭೂ ಸ್ವಾಧೀನ ಪ್ರಕ್ರಿಯೆಗೆ ನಮ್ಮ ಭೂಮಿಯನ್ನು ನಮ್ಮ ಜೀವ ಇರುವವರೆಗೂ ನೀಡಲಾರೆವು’ ಎಂದು ರೈತ ಮುಖಂಡ ನಿರಂಜನ ಪಾಟೀಲ ಶೆಟ್ಟಿಹಳ್ಳಿ ಹೇಳಿದರು.

ಸಮೀಪದ ಕಡೇಚೂರು-ಬಾಡಿಯಾಳ ಕೈಗಾರಿಕ ಪ್ರದೇಶಕ್ಕೆ ಹೆಚ್ಚುವರಿ ಭೂ ಸ್ವಾಧೀನಕ್ಕೆ ಮುಂದಾಗಿರುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಕಡೇಚೂರು, ಶೆಟ್ಟಿಹಳ್ಳಿ, ರಾಚನಳ್ಳಿ, ದದ್ದಲ್ ಗ್ರಾಮದ ರೈತರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ಸರ್ಕಾರವು ಈ ಭಾಗದ ಜನರು ಗುಳೆ ಹೋಗುವುದನ್ನು ತಪ್ಪಿಸಲು ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸಿ ಉದ್ಯೋಗದ ಭರವಸೆಯನ್ನು ನೀಡಿ, 2011ರಲ್ಲಿ ರೈತರಿಂದ ಕರ್ನಾಟಕ ರಾಜ್ಯ ಕೈಗಾರಿಕ ಅಭಿವೃದ್ಧಿ ಮಂಡಳಿ ಮೂಲಕ 3,232.22 ಎಕರೆ ಭೂಮಿಯನ್ನು ಪಡೆದುಕೊಂಡಿತ್ತು. ಆದರೆ ಇಲ್ಲಿಯವರೆಗೂ ಬೃಹತ್ ಕೈಗಾರಿಕೆಯನ್ನು ಸ್ಥಾಪಿಸುವುದಾಗಲಿ, ಉದ್ಯೋಗವನ್ನು ದೊರಕಿಸಿಕೊಡುವಲ್ಲಿ ಸರ್ಕಾರವು ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈಗ ಮತ್ತೇ ಹೆಚ್ಚುರಿಯಾಗಿ 3269.29 ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ರೈತರಿಂದ ಸ್ವಾಧೀನ ಪಡೆಸಿಕೊಳ್ಳಲು ಮುಂದಾಗಿರುವ ಸರ್ಕಾರದ ಕ್ರಮವನ್ನು ಈ ಭಾಗದ ರೈತರು ವ್ಯಾಪಕವಾಗಿ ವಿರೋಧಿಸುತ್ತೇವೆ. ಈಗಾಗಲೇ ಇರುವ ಕಡೇಚೂರು-ಬಾಡಿಯಾಳ ಕೈಗಾರಿಕ ಪ್ರದೇಶದಲ್ಲಿ ಪರಿಸರಕ್ಕೆ ಹಾನಿಯಾಗದಂತಹ, ಮತ್ತು ಸ್ಥಳೀಯರಿಗೆ ದೊಡ್ಡ ಮಟ್ಟದಲ್ಲಿ ಉದ್ಯೋಗ ಅವಕಾಶವನ್ನು ಸೃಷ್ಠಿಸುವ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸಲು ಸರ್ಕಾರವು ಮುಂದಾಗಬೇಕು. ಅದನ್ನು ಬಿಟ್ಟು ಹೆಚ್ಚುವರಿಯಾಗಿ ಭೂ ಸ್ವಾಧೀನ ಪ್ರಕ್ರಿಯೆ ಆರಂಭಿಸಿದರೆ ಈ ಭಾಗದ ರೈತರಿಂದ ಬೃಹತ್ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ಸಿದ್ದಣ್ಣಗೌಡ ಪಾಟೀಲ ಕಡೇಚೂರು, ದೇವಪ್ಪಗೌಡ ಕಲಾಲ್ ರಾಚನಳ್ಳಿ, ಶಾಂತಪ್ಪಗೌಡ, ಶಿವರಾಜಗೌಡ, ಮೋಹನರೆಡ್ಡಿ, ಹಣಮಂತ ಕುದುರಿ, ಈಶಪ್ಪಗೌಡ, ಬಸಣ್ಣಗೌಡ, ರಾಜಪ್ಪಗೌಡ, ಶರಣಗೌಡ, ಮಲ್ಲಿಕಾರ್ಜುನ ಶೆಟ್ಟಿಹಳ್ಳಿ, ಬಹದ್ದೂರ್ ಅಲಿ, ಸಿದ್ದಣ್ಣ ಮಾಸ್ತಾರ, ಜಲ್ಲಪ್ಪ ಪೂಜಾರಿ, ಬಾಬು ಯರ್ರಾ ಇದ್ದರು.

* ಸ್ವಾಧೀನ ಪಡಿಸಿಕೊಂಡ ಭೂಮಿಗೆ ಕಡಿಮೆ ಬೆಲೆ ನೀಡಿ ಅದನ್ನು ಕೆಮಿಕಲ್ ಕಾರ್ಖಾನೆಗಳ ಮಾಲೀಕರಿಗೆ ದುಬಾರಿ ಹಣಕ್ಕೆ ಮಾರಾಟ ಮಾಡಲಾಗುತ್ತಿದೆ. ಇದರಿಂದ ಭೂಮಿಯನ್ನು ಕಳೆದುಕೊಂಡ ರೈತರು ತುಂಬಾ ನಷ್ಟ ಅನುಭವಿಸುವಂತಾಗಿದೆ.

– ಶ್ರೀದೇವಿ ಪಾಟೀಲಅ ಶೆಟ್ಟಿಹಳ್ಳಿ, ರೈತ ಮುಖಂಡೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT