ಮಂಗಳವಾರ, ಡಿಸೆಂಬರ್ 10, 2019
19 °C
ಕೃಷ್ಣಾ ಮೇಲ್ದಂಡೆ ಯೋಜನೆ ಸಲಹಾ ಸಮಿತಿ ಸಭೆ ಇಂದು

ಐಸಿಸಿ ಸಭೆಯತ್ತ ರೈತರ ಚಿತ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: 2019–20ನೇ ಸಾಲಿನ ಹಿಂಗಾರು ಹಂಗಾಮಿನ ಬೆಳೆ ನಿರ್ಧರಿಸಲು ನವೆಂಬರ್ 17ರಂದು ಮಧ್ಯಾಹ್ನ 3 ಗಂಟೆಗೆ ಆಲಮಟ್ಟಿಯ ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ನಡೆಯಲಿದೆ.

ಭತ್ತದ ಬೆಳೆ 100 ದಿನಗಳ ಅವಧಿಯಾದ್ದಾಗಿದ್ದು, ಈಗಾಗಲೇ ಬೆಳೆದಿರುವ ಭತ್ತ ಕಟಾವು ಹಂತಕ್ಕೆ ಬಂದಿದೆ. ಬಸವಸಾಗರ ಜಲಾಶಯವು ತುಂಬಿದೆ. ಹೀಗಾಗಿ ಎರಡನೇ ಬೆಳೆಗೆ ನೀರು ನಿಗದಿಪಡಿಸಲು ಜನಪ್ರತಿನಿಧಿಗಳು ಮತ್ತು ರೈತರು ಆಗ್ರಹಿಸುತ್ತಿದ್ದರು. ಐಸಿಸಿ ಸಭೆಗೆ ಕಾಲ ಕೂಡಿ ಬಂದಿದ್ದು, ಅಲ್ಲಿ ಕೈಗೊಳ್ಳುವ ನಿರ್ಧಾರದ ಮೇಲೆ ರೈತರು ಬೆಳೆ ಬೆಳೆಯಲಿದ್ದಾರೆ.

ಚಾಲುಬಂದಿ ಕ್ರಮ: ಕಾಲುವೆಗೆ ಎರಡು ವಾರ ನೀರು ಚಾಲು ಮಾಡಿ, ಒಂದು ವಾರ ಬಂದ್ ಮಾಡಬೇಕು. ಆಗ ಮಾತ್ರ ರೈತರಿಗೆ ಸಮಸ್ಯೆ ಆಗುವುದಿಲ್ಲ. ವಿತರಣಾ ಕಾಲುವೆಗೆ ಕೂಡ ಈ ಕ್ರಮ ಅನುಸರಿಸಬೇಕು ಎನ್ನುವುದು ರೈತರ ಆಗ್ರಹವಾಗಿದೆ.

ಆರಂಭದಿಂದಲೂ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ರೈತ ಮುಖಂಡರು ಭಾಗವಹಿಸಿ ರೈತರ ಸಮಸ್ಯೆ ಬಗ್ಗೆ ಧ್ವನಿ ಎತ್ತುತ್ತಿದ್ದರು. 2014ರ ನಂತರ ರೈತ ಮುಖಂಡರನ್ನು ಸಭೆಗೆ ಸೇರಿಸಿಕೊಳ್ಳದೆ ಕೇವಲ ಆಯಾ ಭಾಗದ ಜನಪ್ರತಿನಿಧಿಗಳು, ಅಧಿಕಾರಿಗಳು ಮಾತ್ರ ‍ಪಾಲ್ಗೊಳ್ಳುತ್ತಾರೆ. ಇದರಿಂದ ಅವರಿಗೆ ರೈತರ ನಿಜವಾದ ಸಮಸ್ಯೆ ಅರ್ಥವಾಗುವುದಿಲ್ಲ ಎನ್ನುವ ಆರೋಪವಿದೆ.

‘ಸಭೆಗೆ ರೈತ ಮುಖಂಡರನ್ನು ಸೇರಿಸಿಕೊಳ್ಳಲು ಈಗಾಗಲೇ ಕೆಬಿಜೆಎನ್‌ಎಲ್‌ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಪ್ರಮುಖ ಹೆಸರನ್ನು ಕೊಡಲಾಗಿತ್ತು. ಆದರೂ ಯಾವುದೇ ಮಾಹಿತಿ ನೀಡಿಲ್ಲ. ಇದರಿಂದ ರೈತರ ಪರ ಧ್ವನಿ ಎತ್ತಲು ಸಾಧ್ಯ ಇಲ್ಲದಂತಾಗಿದೆ’ ಎಂದು ರೈತ ಮಹಿಳೆ ಮಹಾದೇವಿ ಬೇನಾಳಮಠ  ಬೇಸರ ವ್ಯಕ್ತಪಡಿಸಿದರು.

 ***

ಏಪ್ರಿಲ್ ಕೊನೆವರೆಗೆ ನಿರಂತರವಾಗಿ ನೀರು ನೀಡಬೇಕು. ನಾರಾಯಣಪುರದಲ್ಲಿ ಐಸಿಸಿ ಸಭೆಯಾದರೆ ನಿಖರ ಮಾಹಿತಿ ಸಿಗಲಿದೆ
– ಮಹಾದೇವಿ ಬೇನಾಳಮಠ, ರೈತ ಮುಖಂಡರು

***

ಐಸಿಸಿ ಸಭೆಯಲ್ಲಿ ಈಗ ಜನಪ್ರತಿನಿಧಿಗಳು, ಅಧಿಕಾರಿಗಳು ಮಾತ್ರ ಭಾಗವಹಿಸುತ್ತಿದ್ದಾರೆ. ಇದರಿಂದ ರೈತರ ಸಮಸ್ಯೆ ಬಗೆಹರಿಯುವುದಿಲ್ಲ.
– ಎಂ.ಆರ್.ಖಾಜಿ, ಐಸಿಸಿ ಮಾಜಿ ಸದಸ್ಯ

***

ಎರಡನೇ ಬೆಳೆ ನೀರು ಹರಿಸಬೇಕು. ಇಲ್ಲದಿದ್ದರೆ ರೈತರು ಮಹಾರಾಷ್ಟ್ರದತ್ತ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.
– ನಾಗಣ್ಣ ದಂಡಿನ್, ಐಸಿಸಿ ಮಾಜಿ ಸದಸ್ಯ

***

ಭಾನುವಾರ ಆಲಮಟ್ಟಿಯಲ್ಲಿ ನಡೆಯುವ ಸಭೆಯಲ್ಲಿ ನೀರು ಬಿಡುವ ನಿರ್ಧಾರ ಕೈಗೊಳ್ಳಲಾಗುತ್ತದೆ. ಆ ನಂತರ ಹೇಗೆ ನೀರು ಹರಿಸಬೇಕು ಎನ್ನುವುದು ತಿಳಿಯಲಿದೆ.
– ಆರ್‌. ಎಲ್‌. ಹಳ್ಳೂರು, ನಾರಾಯಣಪುರ ಆಣೆಕಟ್ಟು ಸಹಾಯಕ ವಿಭಾಗಾಧಿಕಾರಿ

ಪ್ರತಿಕ್ರಿಯಿಸಿ (+)