ರಾಜ್ಯ ರೈತ ಸಂಘ ಪ್ರತಿಭಟನೆ

7
ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಒತ್ತಾಯ

ರಾಜ್ಯ ರೈತ ಸಂಘ ಪ್ರತಿಭಟನೆ

Published:
Updated:
Deccan Herald

ಯಾದಗಿರಿ: ಯಾದಗಿರಿ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಸಮಿತಿ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು.

ಜಿಲ್ಲೆಯಲ್ಲಿ ಮಳೆ ಆಗದ ಕಾರಣ ರೈತರು ಬರಗಾಲದಿಂದ ಕಂಗಾಲಾಗಿದ್ದಾರೆ. ರೈತರು ಕೆಲಸ ಅರಸಿ ನಗರಗಳಿಗೆ ಗುಳೆ ಹೋಗುವಂತೆ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಳೆಹಾನಿಯಿಂದ ರೈತರು ಆತ್ಮಹತ್ಯೆ ಮುಂದಾಗುತ್ತಿದ್ದಾರೆ. ಕೂಡಲೇ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.

ರೈತರು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಮಾಡಿರುವ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ಈಗಾಗಲೇ ಮನ್ನಾ ಮಾಡಿರುವ ₹2 ಲಕ್ಷ  ಸಾಲದ ಋಣ ಮುಕ್ತ ಪತ್ರವನ್ನು ರೈತರಿಗೆ ನೀಡಬೇಕು. ಮರು ಸಾಲ ನೀಡಬೇಕು. ವ್ಯವಸಾಯ ಸೇವಾ ಸಹಕಾರ ಬ್ಯಾಂಕುಗಳಲ್ಲಿ ಅವ್ಯವಹಾರ ನಡೆದಿದ್ದು, ನಿಜವಾದ ಫಲಾನುಭವಿಗಳಿಗೆ ಸಾಲ ನೀಡದೆ ತಮಗೆ ಬೇಕಾದವರಿಗೆ ಸಾಲ ನೀಡುತ್ತಾ ಅವ್ಯವಹಾರ ಮಾಡುತ್ತಿದ್ದಾರೆ. ಕೂಡಲೇ ಅಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಪ್ರತಿ ಎಕರೆಗೆ ₹ 20 ಸಾವಿರ ಪರಿಹಾರ ನೀಡಬೇಕು. ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಲುವೆಯ ಕೊನೆಯ ಭಾಗದ ರೈತರ ಹೊಲಗಳಿಗೆ ನೀರು ತಲುಪುತ್ತಿಲ್ಲ. ಕೂಡಲೇ ಕಾಲುವೆಗಳಿಗೆ ಗೇಟ್‌ಗಳನ್ನು ಅಳವಡಿಸಿ ನೀರು ಪೋಲಾಗದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ ಕೊನೆಯ ಭಾಗದ ರೈತರಿಗೆ ನೀರು ತಲುಪಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ರೈತರು ಬೆಳೆದ ಎಲ್ಲಾ ಬೆಳೆಗಳಿಗೆ ಬೆಂಬಲ ನೀಡಿ ಖರೀದಿ ಮಾಡಬೇಕು. ಕಟಾವಿಗೆ ಮುನ್ನಾ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಬೇಕು. ಡಾ. ಸ್ವಾಮಿನಾಥನ ವರದಿ ಜಾರಿ ಮಾಡಬೇಕು. ಈಗಾಗಲೇ ಕೇಂದ್ರ ಸರ್ಕಾರದಿಂದ ಘೋಷಣೆಯಾಗಿರುವ ಬೆಂಬಲ ಬೆಲೆಯನ್ನು ಕೂಡಲೇ ರೈತರಿಗೆ ನೀಡಬೇಕು ಎಂದು ಒತ್ತಾಯಿಸಿದರು.

ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಸತ್ಯಂಪೇಟ, ನಾಗರತ್ನ ಪಾಟೀಲ ಯಕ್ಷಿಂತಿ, ಅಯ್ಯಣ ಹಾಲಭಾವಿ, ಮಲ್ಕಣ್ಣ ಚಿಂತಿ, ಚಂದ್ರಕಲಾ ವಡಗೇರಿ, ದೇವಿಂದ್ರಪ್ಪಗೌಡ ವಡಗೇರಿ, ಬಸವರಾಜ ಕಮತಗಿ, ಮನುಮಗೌಡ ನಾರಾಯಣರಾವ, ಭೀಮರಾಯ ಯಡ್ಡಳ್ಳಿ, ಮಲ್ಲಣ್ಣ ವಡಗೇರಿ, ಭೀಮರಾಯ ಒಕ್ಕಲಿಗ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !