ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮನಾಳ ಗ್ರಾಮದಲ್ಲಿ ‘ಹೈಟೆನ್ಷನ್‌’ ಭೀತಿ

ಶಹಾಪುರ ತಾಲ್ಲೂಕಿನ ಚಾಮನಾಳದಲ್ಲಿ ಹತ್ತಾರು ಮನೆಗಳ ಮೇಲೆ ಹಾದು ಹೋದ ವೈರ್‌
Last Updated 4 ಜೂನ್ 2021, 2:51 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ಶಹಾಪುರ ತಾಲ್ಲೂಕಿನ ಶಹಾಪುರ ತಾಲ್ಲೂಕಿನ ಚಾಮನಾಳ, ದಂಡ್ ಸೊಲಾಪುರ್‌ ಗ್ರಾಮದಲ್ಲಿ ಹತ್ತಾರು ಮನೆಗಳ ಮೇಲೆ ಹೈಟೆನ್ಷನ್ ತಂತಿ ಹಾದು ಹೋದ ಹೋಗಿದ್ದು, ಇಲ್ಲಿಯ ಜನರು ಜೀವ ಕೈಯಲ್ಲಿ ಹಿಡಿದುಕೊಂಡು ಜೀವನ ಸಾಗಿಸುತ್ತಿದ್ದಾರೆ.

ಮಾಳಿಗೆ ಮೇಲೆ ಕೈಗೆಟುವ ತಂತಿ ಹಾದು ಹೋಗಿದ್ದು, ಗ್ರಾಮಸ್ಥರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಹತ್ತಾರು ಬಾರಿ ಮನವಿ ಮಾಡಿದರೂ ಅಂದಾಜು ಪಟ್ಟಿ ತಯಾರಿಸುವುದರಲ್ಲಿಯೇ ಜೆಸ್ಕಾಂ ಅಧಿಕಾರಿಗಳು ಕಾಲ ಕಳೆಯುತ್ತಿದ್ದಾರೆ ಎನ್ನುವುದು ಅಲ್ಲಿಯ ನಿವಾಸಿಗಳ ಆರೋಪವಾಗಿದೆ.

‘ಗ್ರಾಮದ ಹತ್ತಾರು ಮನೆಗಳ ಮೇಲೆ ಹೈಟೆನ್ಷನ್ ತಂತಿ ಹಾದು ಹೋಗಿದ್ದು, ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದರೂ ಕ್ರಮ ಕೈಗೊಳ್ಳುತ್ತಿಲ್ಲ. ನಾನು ಮತ್ತು ಪತ್ನಿ ಜೀವ ಕಳೆದುಕೊಳ್ಳಬೇಕಾಗಿತ್ತು. ಕೂದಲೆಳೆಯಲ್ಲಿ ಅನಾಹುತ ತಪ್ಪಿಹೋಗಿದೆ. ಹಲವಾರು ಬಾರಿ ಮನೆಯ ಮೇಲೆ ತಂತಿ ಮುರಿದು ಬೀಳುತ್ತಿದೆ. ನಮಗಂತೂ ಜೀವ ಕೈಯಲ್ಲಿ ಇಟ್ಟುಕೊಂಡು ಸಾಗಿಸುವಂತೆ ಆಗಿದೆ’ ಎನ್ನುತ್ತಾರೆ ಗ್ರಾಮದ ನಿವೃತ್ತ ಶಿಕ್ಷಕ ಬಸಪ್ಪ ಸೋಮನಾಳಕರ.

‘ಕೆಲ ವರ್ಷಗಳ ಹಿಂದೆ ಶಾರ್ಟ್‌ ಸರ್ಕ್ಯೂಟ್‌ ಆಗಿ ಮನೆ ಮೇಲೆ ಬಿದ್ದು, ಅರ್ಧ ಮನೆ ಸುಟ್ಟುಹೋಗಿತ್ತು. ಮನೆಯಲ್ಲಿದ್ದ ಪತ್ನಿ ಅನಸೂಯ ಅವರ ಕೈ, ಕಾಲುಗಳಿಗೆ ಬೆಂಕಿಯ ಕಿಡಿ ಹತ್ತಿ ಮೂರ್ಛೆ ಬಂದು ಬಿದ್ದಿದ್ದರು. ನಾನು ಕೈ ಹಿಡಿದು ಎಬ್ಬಿಸಲು ಹೋದಾಗ ವಿದ್ಯುತ್ ಕಡಿತವಾಗಿತ್ತು. ಇದರಿಂದ ಜೀವ ಉಳಿಯಿತು. ಇಲ್ಲವಾದರೆ ನಮ್ಮ ಜೀವವೇ ಹೋಗುತ್ತಿತ್ತು. ಕಲಬರ್ಗಿಯ ಬಸವೇಶ್ವರ ಆಸ್ಪತ್ರೆಯಲ್ಲಿ 20 ದಿನಗಳ ಕಾಲ ಚಿಕಿತ್ಸೆ ಪಡೆದ ನಂತರ ಗುಣಮುಖರಾಗಿದ್ದಾರೆ. ಆದರೆ ಬಲಗೈ ಮೊಣಕೈ ಹತ್ತಿರ ಗಾಯದ ಗುರುತ ಶಾಶ್ವತವಾಗಿ ಉಳಿದಿದೆ’ ಎಂದು ಅವರು ಸ್ಮರಿಸಿದರು.

20 ಮನವಿ ಪತ್ರ ಸಲ್ಲಿಕೆ: ಮನೆಗಳ ಮೇಲೆ ಹಾದು ಹೋಗಿರುವ ವಿದ್ಯುತ್‌ ತಂತಿಯನ್ನು ಸ್ಥಳಾಂತರಿಸಲು ಸುಮಾರು 20 ಜನ 20 ಬಾರಿ ಜೆಸ್ಕಾಂ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗಿದೆ. ಆದರೆ, ಯಾವುದೇ ಸ್ಪಂದನೆ ಸಿಕ್ಕಿಲ್ಲ. ಮಾಳಿಗೆ ಮೇಲೆ ಯಾವುದೇ ವಸ್ತುವನ್ನು ಬಿಸಿಲಿಗೆ ಒಣಗಿ ಹಾಕಲು ಆಗದಂತ ಪರಿಸ್ಥಿತಿ ನಿರ್ಮಾಣವಾಗಿದೆ’ ಎನ್ನುವುದು ಗೋಪಾಲ ಚಿನ್ನಾ, ಆನಂದ, ನೀಲಪ್ಪ ಅವರ ದೂರಾಗಿದೆ.

‘ಈಗಾಗಲೇ ಮನೆಗೆ ಇಂತಿಷ್ಟು ಎಂದು ಹಣ ಸಂಗ್ರಹಿಸಲಾಗಿದೆ. ಈ ಹಿಂದೆ ಕೆಲವರು ಹಣ ತೆಗೆದುಕೊಂಡು ಹೋದರೂ ಮತ್ತೆ ಇತ್ತ ಬರಲಿಲ್ಲ. ಇನ್ನೂ ಕೆಲವೇ ದಿನಗಳಲ್ಲಿ ಮುಂಗಾರು ಹಂಗಾಮು ಆರಂಭವಾಗಲಿದ್ದು, ರೈತರು ಅತ್ತ ಗಮನಹರಿಸುತ್ತಾರೆ. ಮತ್ತೆ ಇದು ನನಗುದಿಗೆ ಬೀಳಲಿದೆ ಎನ್ನುತ್ತಾ ಅವರು.

ನೆಪಕ್ಕೆ ಅಂದಾಜು ಪಟ್ಟಿ ತಯಾರಿ: ಹಲವಾರು ಮನವಿ ಪತ್ರಗಳು ಸಲ್ಲಿಕೆಯಾದ ನಂತರ ನೆಪಕ್ಕೆ ಮಾತ್ರ ಅಂದಾಜು ಪಟ್ಟಿ ತಯಾರಿಸಲಾಗುತ್ತಿದೆ. ಆನಂತರ ನಾವು ಮರೆತು ಬಿಡುತ್ತೇವೆ. ಮತ್ತೆ ವೈರ್‌ ಮುರಿದು ಬಿದ್ದ ನಂತರವೇ ಸಮಸ್ಯೆಯ ಅನಾವರಣವಾಗುತ್ತಿದೆ ಎನ್ನುವುದು ಅಲ್ಲಿಯ ನಿವಾಸಿಗಳ ದೂರಾಗಿದೆ.

ಪರವಾನಗಿ ತೆಗೆದುಕೊಂಡಿಲ್ಲ: ‘ಗ್ರಾಮದಲ್ಲಿ ಹಲವಾರು ವರ್ಷಗಳಿಂದೆ ತಂತಿ ಅಳವಡಿಸಲಾಗಿದೆ. ಆದರೆ, ಮನೆ ನಿರ್ಮಾಣದ ವೇಳೆ ಪರವಾನಗಿ ತೆಗೆದುಕೊಳ್ಳಬೇಕು. ಆದರೆ, ‍ಪರವಾನಗಿ ತೆಗೆದುಕೊಂಡಿಲ್ಲ. ಇದರಿಂದ ಸಮಸ್ಯೆ ಆಗುತ್ತಿದೆ. ಅಲ್ಲದೇ ನಾವು ಸ್ಥಳಾಂತರ ಮಾಡಲು ಹೋದರೆ ಬೇರೆ ಭಾಗದವರು ಆಕ್ಷೇಪಣೆ ವ್ಯಕ್ತಪಡಿಸುತ್ತಿದ್ದಾರೆ. ಗ್ರಾಮಸ್ಥರೇ ಮಾತನಾಡಿಕೊಂಡು ಸಮಸ್ಯೆ ಬಗೆಹರಿಸಿದರೆ ನಾವು ಕಂಬಗಳನ್ನು ಸ್ಥಳಾಂತರ ಮಾಡಲು ಸಾಧ್ಯ’ ಎನ್ನುತ್ತಾರೆ ಶಹಾಪುರ ಜೆಸ್ಕಾಂ ಎಇಇ ಶಾಂತಪ್ಪ ಪೂಜಾರಿ ಅವರು.

‘ಈ ಗ್ರಾಮದ ಸರಹದ್ದು ಅರ್ಧ ಭಾಗ ಶಹಾಪುರ, ಇನ್ನೊಂದು ಭಾಗ ಸುರಪುರ ಜೆಸ್ಕಾಂ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ ಇದು ಕೂಡ ಸಮಸ್ಯೆಯಾಗಿದೆ. ಸ್ಥಳಾಂತರ ಮಾಡಲು ಜಾಗ ತೋರಿಸಿದರೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ಅವರು.

ಇದೇ ಮೇ 22ರಂದು ತಂತಿ ಮುರಿದು ಬಿದ್ದಿದ್ದು, ಬೆಂಕಿ ಹತ್ತಿಕೊಂಡಿತ್ತು. ವರ್ಷದಲ್ಲಿ ಹಲವಾರು ಬಾರಿ ವೈರ್‌ ಮುರಿದು ಬೀಳುತ್ತಿದೆ. ಜೆಸ್ಕಾಂ ಅಧಿಕಾರಿಗಳು ಇತ್ತ ಗಮನಹರಿಸಿ ಸಮಸ್ಯೆ ಸರಿಪಡಿಸಬೇಕು.
ಬಸಪ್ಪ ಸೋಮನಾಳಕರ, ನಿವೃತ್ತ ಶಿಕ್ಷಕ

ಮನೆಗಳ ಮೇಲೆ ಹಾದುಹೋಗಿರುವ ಹೈಟೆನ್ಷನ್ ತಂತಿ ಬೇರೆ ಕಡೆ ಸ್ಥಳಾತರಿಸಲು ಸೆಕ್ಷನ್‌ ಆಫೀಸರ್ ಪರಿಶೀಲನೆ ಮಾಡಿ ಅಂದಾಜುಪಟ್ಟಿ ತಯಾರಿಸಿದ್ದಾರೆ. ಶೀಘ್ರದಲ್ಲಿಯೇ ಬದಲಾಯಿಸಲಾಗುವುದು.
ಶಾಂತಪ್ಪ ಪೂಜಾರಿ, ಎಇಇ ಜೆಸ್ಕಾಂ ಶಹಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT