ಶುಕ್ರವಾರ, ಸೆಪ್ಟೆಂಬರ್ 20, 2019
21 °C
ಸ್ವಯಂಪ್ರೇರಣೆಯಿಂದ ಲೈಸೆನ್ಸ್‌, ವಿವಿಧ ದಾಖಲಾತಿಗಳ ನವೀಕರಣ

ದಂಡಕ್ಕೆ ‘ಬಾಗಿದ’ ವಾಹನ ಚಾಲಕರು

Published:
Updated:
Prajavani

ಯಾದಗಿರಿ: ಜಿಲ್ಲೆಯಲ್ಲಿ ದುಬಾರಿ ‘ದಂಡ’ ಪ್ರಯೋಗಕ್ಕೆ ವಿವಿಧ ವಾಹನ ಚಾಲಕರು, ಸವಾರರು ಬಾಗಿದ್ದು, ಸ್ವಯಂ ಪ್ರೇರಿತವಾಗಿ ಚಾಲನಾ ಪರವಾನಗಿ, ವಿಮೆ, ವಾಹನ ಮಾಲಿನ್ಯ ನಿಯಂತ್ರಣ ಪರೀಕ್ಷೆ ಮತ್ತು ದಾಖಲಾತಿ ನವೀಕರಣದಂತಹ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ದಂಡ ಹೆಚ್ಚಳದಿಂದ ಹಲವರು ತಮ್ಮ ದಾಖಲಾತಿಗಳನ್ನು ಸರಿಪಡಿಸಿಕೊಳ್ಳುವ ಕೆಲಸದಲ್ಲಿ ನಿರತರಾದ್ದಾರೆ. ಹೀಗಾಗಿ ಬುಧವಾರ ಸಾರಿಗೆ ಕಚೇರಿಯಲ್ಲಿ ಜನರು ಸಾಲುಗಟ್ಟಿ ನಿಂತಿರುವುದು ಕಂಡುಬಂತು.

ಜಿಲ್ಲೆಯಲ್ಲಿ ಜನರು ವಾಹನ ಖರೀದಿಸಿದ ನಂತರ ಮತ್ತೆ ದಾಖಲಾತಿ ನವೀಕರಣ ಮಾಡಿಸುವ ಗೋಜಿಗೆ ಹೋಗುತ್ತಿರಲಿಲ್ಲ. ಈಗ ಅಂಥವರೆಲ್ಲ ಸ್ವಯಂ ಪ್ರೇರಿತವಾಗಿ ಕಚೇರಿಗೆ ಬಂದು ಸರಿಪಡಿಸಿಕೊಳ್ಳುತ್ತಿದ್ದಾರೆ.

ಸಾರಿಗೆ ಕಚೇರಿ, ವಿಮೆ, ವಾಹನ ಮಾಲಿನ್ಯ ನಿಯಂತ್ರಣ ಪರೀಕ್ಷೆ ಅಂಗಡಿಗಳ ಮುಂದೆ ವಾಹನ ಚಾಲಕರು ಸುಳಿದಾಡುತ್ತಿದ್ದಾರೆ. ಅಂಗಡಿಗಳ ಮಾಲೀಕರಿಗೆ ಬಿಡುವಿಲ್ಲದ ಕೆಲಸ ಶುರುವಾಗಿದೆ. ನಗರದ ಅಲ್ಲಲ್ಲಿ ಹೆಲ್ಮೆಟ್‌ ಧರಿಸಿದವರ ದರ್ಶನ ಸಿಗುತ್ತಿದೆ. ಅಲ್ಲದೆ ರಸ್ತೆ ಬದಿಯಲ್ಲಿಯೂ ಹೆಲ್ಮೆಟ್‌ ಮಾರಾಟವಾಗುತ್ತಿವೆ. ಇದೆಲ್ಲವೂ ಹೊಸ ಸಾರಿಗೆ ನಿಯಮದ ಜಾರಿಯಿಂದ ಆಗಿದೆ. 

‘ಮೊದಲು ಚಾಲನಾ ಪರವಾನಗಿ ಪಡೆಯಲು ಜನರು ಬರುತ್ತಿರಲಿಲ್ಲ. ಈಗ ತಾವೇ ಸ್ವಯಂ ಪ್ರೇರಿತರಾಗಿ ಅರ್ಜಿ ಹಾಕಲು ಬರುತ್ತಿದ್ದಾರೆ. ದಂಡ ಪ್ರಯೋಗದಿಂದ ಚಾಲಕರು, ವಾಹನ ಸವಾರರು ಎಚ್ಚೆತ್ತುಕೊಂಡಿದ್ದಾರೆ’ ಎನ್ನುತ್ತಾರೆ ಮೋಟಾರ್ ವಾಹನ ಸಾಂಸ್ಥಿಕ ಅಧಿಕಾರಿ ವೆಂಕಟಪ್ಪ.

‘ಚಾಲನಾ ಪರವಾನಗಿಗೆ ಅರ್ಜಿ ಹಾಕಲು ಹಿಂದೆ ಕನಿಷ್ಠ 40 ಜನರು ಬಂದರೆ ಅದು ಹೆಚ್ಚಳವಾಗಿತ್ತು. ಈಗ 80ಕ್ಕಿಂತ ಹೆಚ್ಚು ಜನ ಬರುತ್ತಿದ್ದಾರೆ. ಈಗ ಡಿಎಲ್ ಪಡೆಯುವ ವಿಧಾನ ಆನ್‌ಲೈನ್‌ ಆಗಿದ್ದರಿಂದ ಅಲ್ಲಿಯೂ ಹೆಚ್ಚು ಅರ್ಜಿಗಳು ದಾಖಲಾಗುತ್ತಿವೆ. ದಂಡದಿಂದ ಚಾಲನಾ ಪರವಾನಗಿ ಪಡೆಯುವವರ ಸಂಖ್ಯೆ ಹೆಚ್ಚಳವಾಗಿದೆ’ ಎನ್ನುತ್ತಾರೆ ಅವರು.

ಲಂಚ ಹೆಚ್ಚಳ: ಈ ಹಿಂದೆ ಸಾರಿಗೆ ನಿಯಮ ಉಲ್ಲಂಘಿಸಿದರೆ ಒಂದು ಸಾವಿರದ ಒಳಗೆ ಎಲ್ಲ ದಂಡವನ್ನು ಪಾವತಿಸಬಹುದಾಗಿತ್ತು. ಸಣ್ಣಪುಟ್ಟ ಉಲ್ಲಂಘನೆಗೆ ನೂರಿನ್ನೂರು ಕೊಟ್ಟು ವಾಹನ ಬಿಡಿಸಿಕೊಳ್ಳಬಹುದಿತ್ತು. ಈಗ ದಂಡ ಪ್ರಮಾಣ ಹೆಚ್ಚಳದಿಂದ ಲಂಚದ ಪ್ರಮಾಣವು ಹೆಚ್ಚಳವಾಗಿದೆ ಎಂದು ಹೆಸರು ಹೇಳಲಿಚ್ಛಿಸಿದ ವಾಹನ ಸವಾರರೊಬ್ಬರು ಹೇಳಿದರು.

ಹಿಂದೆ ದಂಡದಿಂದ ತಪ್ಪಿಸಿಕೊಳ್ಳಲು  ಸಂಚಾರ ವಿಭಾಗದ ಪೊಲೀಸರಿಗೆ ನೂರೋ ಇನ್ನೂರೋ ನೀಡಿ ವಾಹನ ಬಿಡಿಸಿಕೊಳ್ಳಬೇಕಾಗಿತ್ತು. ಈಗ ₹1,000ರಿಂದ 10,000 ಸಾವಿರ ತನಕ ದಂಡ ಇದೆ. ಹೀಗಾಗಿ ಒಂದು ಸಾವಿರದಿಂದ ಎರಡು ಸಾವಿರ ರೂಪಾಯಿವರೆಗೆ ಲಂಚ ನೀಡಬೇಕಾಗದ ಪರಿಸ್ಥಿತಿ ಉಂಟಾಗಿದೆ ಎಂದು ಪ್ರತಿಕ್ರಿಯಿಸಿದರು.

Post Comments (+)