ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಶೇ 90ರಷ್ಟು ಮೊದಲ ಡೋಸ್‌

ಮನೆಮನೆಗೆ ಭೇಟಿ ನೀಡಿ ಲಸಿಕೆ ನೀಡುತ್ತಿರುವ ಆರೋಗ್ಯ ಸಿಬ್ಬಂದಿ; ವೃದ್ಧರಿಗೆ ಚುಚ್ಚುಮದ್ದು ಹಾಕಿಸಲು ಹರಸಾಹಸ
Last Updated 4 ಡಿಸೆಂಬರ್ 2021, 2:33 IST
ಅಕ್ಷರ ಗಾತ್ರ

ಯಾದಗಿರಿ: ಕೋವಿಡ್‌ ವಿರುದ್ಧ ಹೋರಾಡಲು ಜಿಲ್ಲೆಯಲ್ಲಿ 2021ರ ಜನವರಿ 16ರಿಂದ ಲಸಿಕೆ ನೀಡಲು ಆರಂಭಿಸಿದ್ದು, ಅಡೆತಡೆಗಳ ಮಧ್ಯೆಯೂ ಇಲ್ಲಿಯವರೆಗೆ ಮೊದಲ ಡೋಸ್‌ ಶೇ 90ರಷ್ಟು ಸಾಧನೆ ಮಾಡಲಾಗಿದೆ. ಎರಡನೇ ಡೋಸ್‌ ಶೇ 53ರಷ್ಟಾಗಿದೆ.

ಜಿಲ್ಲೆಯಲ್ಲಿ ಮೊದಲ ಬಾರಿಗೆ ಜಿಲ್ಲೆಯ ಐದು ಕಡೆ ಕೋವಿಡ್‌ ಲಸಿಕೆಗೆ ಚಾಲನೆ ನೀಡಲಾಗಿತ್ತು. ಆರೋಗ್ಯ ಇಲಾಖೆಯ ಡಿ ಗ್ರೂಪ್‌ ನೌಕರರಿಗೆ ನೀಡಲಾಗುತ್ತಿತ್ತು. ಆನಂತರ ವೈದ್ಯಕೀಯ ಸಿಬ್ಬಂದಿ, ಹಿರಿಯ ನಾಗರಿಕರಿಗೆ ಆನಂತರ ಎಲ್ಲ ವರ್ಗದ ಜನರಿಗೆ ಚುಚ್ಚುಮದ್ದು ನೀಡುತ್ತಾ ಬರಲಾಗಿದೆ.

ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಮೈಮೇಲೆ ದೇವರು ಬಂದಂತೆ ನಟಿಸಿ ಲಸಿಕೆ ಹಾಕಲು ಬಂದವರನ್ನೇ ಭಯ ಬೀಳಿಸಿರುವ ಪ್ರಸಂಗಗಳು ನಡೆದಿವೆ. ಅಲ್ಲದೇ ಆರೋಗ್ಯ ಸಿಬ್ಬಂದಿಯನ್ನು ಕಂಡರೆ ಕಾಲು ಕೀಳುವ ಪ್ರಸಂಗಗಳು ಈಗಲೂ ನಡೆಯುತ್ತಿದೆ. ಹಲ್ಲೆ ಮಾಡಲು ಬಂದವರು ಇದ್ದಾರೆ.

ಅಧಿಕಾರಿಗಳಿಗೆ ಟಾರ್ಗೆಟ್‌: ಆರೋಗ್ಯ ಇಲಾಖೆಯಿಂದ ಮಾತ್ರ ಲಸಿಕಾಕರಣ ಪೂರ್ಣಗೊಳ್ಳುವುದಿಲ್ಲ ಎಂದ ಅರಿತ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್‌ ಅವರು, ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಗುರಿ ನೀಡಿದ್ದಾರೆ. ಅದರಂತೆ ಅವರು ಕಾರ್ಯನಿರ್ವಹಿಸದಿದ್ದರೆ ಸೂಕ್ತ ಶಿಕ್ಷೆಯನ್ನು ನೀಡಲಾಗುತ್ತಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಇದರಿಂದ ಅಧಿಕಾರಿಗಳು ಹಗಲಿರುಳು ಲಸಿಕಾ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

‘ಪ್ರತಿಯೊಬ್ಬ ಅಧಿಕಾರಿಯು ಎಷ್ಟು ಜನಕ್ಕೆ ಲಸಿಕೆ ಹಾಕಿಸಿದ್ದಾರೆ ಮತ್ತು ಅವರ ಕಾರ್ಯವೈಖರಿಯನ್ನು ಸಂಪೂರ್ಣ ಮಾಹಿತಿ ಕಲೆ ಹಾಕಲಾಗುತ್ತದೆ. ನಿರ್ಲಕ್ಷ್ಯವಹಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.

ವಾರದಲ್ಲಿ ಲಸಿಕಾ ಮೇಳ: ವಾರದಲ್ಲಿ ಒಂದು ದಿನ ಲಸಿಕಾ ಮೇಳ ಎಂದು ನಿಗದಿಪಡಿಸಿ ಅಧಿಕಾರಿಗಳನ್ನು ಗ್ರಾಮೀಣ ಮಟ್ಟದಲ್ಲಿ ಹೋಗಿ ಜಾಗೃತಿ ಮೂಡಿಸಿ ಲಸಿಕೆ ಹಾಕಿಸಿಕೊಳ್ಳಲು ಪ್ರೇರೇಪಿಸಲಾಗುತ್ತಿದೆ.ಈಗ 15 ದಿನಗಳ ಕಾಲ ಪ್ರತಿದಿನ ಲಸಿಕಾ ಮೇಳ ಹಮ್ಮಿಕೊಂಡು 8ರಿಂದ 10 ಸಾವಿರ ಜನರಿಗೆ ಲಸಿಕೆ ನೀಡಲಾಗುತ್ತಿದೆ.

ಪ್ರತಿವಾರವಾರ ಬುಧವಾರ, ಮತ್ತೊಂದು ವಾರ ಶುಕ್ರವಾರ ಹೀಗೇ ಲಸಿಕೆಗೆ ಒಂದು ದಿನ ನಿಗದಿಗೊಳಿಸಿ ಶೇ 100ರಷ್ಟು ಲಸಿಕಾರಣ ಮಾಡಲು ಜಿಲ್ಲಾಡಳಿತ ಪಣತೊಟ್ಟಿದೆ.

ಗ್ರಾಮೀಣ ಭಾಗದಲ್ಲಿ ಬಿಳಿ, ಗುಲಾಬಿ ಬಣ್ಣ ಉಡುಗೆ ಕಂಡರೆ ಹಲವರು ಓಡಿಹೋಗುತ್ತಿದ್ದಾರೆ. ಗ್ರಾಮಗಳಲ್ಲಿ ಆರೋಗ್ಯ ಇಲಾಖೆ ಕಾರ್ಯಕರ್ತರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಮನೆಮನೆಗೆ ತೆರಳಿ ಲಸಿಕೆ ಹಾಕುತ್ತಿದ್ದಾರೆ. ಇವರು ಬಂದೊ ಡನೆ ಲಸಿಕೆ ಹಾಕಿಸಿಕೊಳ್ಳದವರು ಓಡಿ ಹೋಗುತ್ತಿದ್ದಾರೆ. ಅಧಿಕಾರಿಗಳು ಲಸಿಕೆ ಹಾಕಿಸಿಕೊಳ್ಳದವರು ಎಲ್ಲೇ ಸಿಕ್ಕರೂ ಅವರಿಗೆ ಚುಚ್ಚುಮದ್ದು ಹಾಕಿಸುತ್ತಿದ್ದಾರೆ.

ಹೊಲಕ್ಕೆ ತೆರಳುವವರು, ಅಡುಗೆ ಮನೆಯಲ್ಲಿದ್ದವರು ಸೇರಿದಂತೆ ಎಲ್ಲ ವರ್ಗದ ಜನರಿಗೆ ಮನೆ ಮನೆಗೆ ತೆರಳಿ ಲಸಿಕೆ ನೀಡಲಾಗುತ್ತಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಹೊಲ ಗದ್ದೆ, ಆಟೊ, ಬಸ್‌ ಪ್ರಯಾಣಿಕರು ಸೇರಿದಂತೆ ಎಲ್ಲ ಕಡೆಯೂ ಲಸಿಕಾರಣ ನಡೆಸುತ್ತಿದ್ದಾರೆ.

*ಗ್ರಾಮೀಣ ಭಾಗದಲ್ಲಿ ಕೆಲವೆಡೆ ಹಿರಿಯ ನಾಗರಿಕರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ಲಸಿಕೆ ತೆಗೆದುಕೊಂಡರೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ. ಎಲ್ಲರೂ ತೆಗೆದುಕೊಳ್ಳಬೇಕು

- ಡಾ.ರಾಗಪ್ರಿಯಾ ಆರ್‌., ಜಿಲ್ಲಾಧಿಕಾರಿ

*ಜಿಲ್ಲೆಯಲ್ಲಿ ಕೋವಿಡ್‌ ಲಸಿಕಾರಣ ಭರದಿಂದ ಸಾಗುತ್ತಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಜೊತೆಗೂಡಿ ಬೇರೆ ಇಲಾಖೆಗಳವರು ಸಾಥ್‌ ನೀಡುತ್ತಿದ್ದಾರೆ. ತಿಂಗಳಲ್ಲಿ ಪೂರ್ಣಗೊಳ್ಳಲಿದೆ

- ಡಾ.ಲಕ್ಷ್ಮೀಕಾಂತ ಒಂಟಿಪೀರ, ಆರ್‌ಸಿಎಚ್‌ಒ

*ಸಂಭವಿನೀಯ ಕೋವಿಡ್ ಮೂರನೇ ಅಲೆ ತಡೆಗೆ ಶೇ 100ರಷ್ಟು ಲಸಿಕಾಕರಣ ಪೂರ್ಣಗೊಳಿಸುವುದು ಅಗತ್ಯವಾಗಿದೆ. ಎಲ್ಲರೂ ಕೋವಿಡ್‌ ಲಸಿಕೆ ಪಡೆಯಿರಿ. ಜ್ವರ, ಮೈಕೈ ನೋವು ಸಾಮಾನ್ಯ. ಲಸಿಕೆ ಪಡೆಯುವದರಿಂದ ಯಾವುದೆ ದುಷ್ಪರಿಣಾಮ ಇಲ್ಲ

- ಡಾ.ಇಂದುಮತಿ ಕಾಮಶೆಟ್ಟಿ, ಡಿಎಚ್‌ಒ

*ಗ್ರಾಮಗಳಲ್ಲಿ ಕೋವಿಡ್‌ ಲಸಿಕೆ ನೀಡಲು ತೆರಳಿದಾಗ ಅವರ ಮನವೊಲಿಸಿ ಲಸಿಕೆ ನೀಡಲಾಗುತ್ತಿದೆ. ಒಪ್ಪದೇ ಇದ್ದಾಗ ಎಷ್ಟು ಸಮಯವಾದರೂ ಮನವೊಲಿಸುತ್ತೇವೆ

- ಪ್ರಭಾಕರ್‌ ಕವಿತಾಳ, ಉಪನಿರ್ದೇಶಕ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT