ಶಹಾಪುರ: ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬಂದು ಪ್ರವಾಹ ಉಂಟಾಗಿ ನದಿ ಪಾತ್ರದ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ. ಪ್ರವಾಹ ಇಳಿಮುಖವಾಗುತ್ತಿದ್ದು, ನದಿ ತಟದ ಗ್ರಾಮಸ್ಥರು ಮತ್ತೆ ಬದುಕು ಕಟ್ಟಿಕೊಳ್ಳುವ ಧಾವಂತದಲ್ಲಿ ಇದ್ದಾರೆ.
ಕೃಷ್ಣಾ ನದಿ ಪಾತ್ರದ ಮರಕಲ್, ಟೊಣ್ಣೂರ, ಕೊಳ್ಳೂರ(ಎಂ) ಗ್ರಾಮ ಸೇರಿದಂತೆ ಹಲವಾರು ಹಳ್ಳಿಯ ಜನತೆ ಪ್ರವಾಹದ ಸಂಕಟದ ಸವಾಲು ಹಾಗೂ ಸಮಸ್ಯೆ ಎದುರಿಸುತ್ತಾರೆ. ಬೆಳೆ ಹಾನಿ ರೈತರಿಗೆ ಸಂಕಷ್ಟ ಉಂಟು ಮಾಡಿದೆ. ನದಿಯ ನೀರು ಬೆಳೆಹಾನಿ ಉಂಟು ಮಾಡುವುದು ಬೇಸರದ ಸಂಗತಿ ಎನ್ನುತ್ತಾರೆ ಯಕ್ಷಿಂತಿ ಗ್ರಾಮದ ನಿಂಗಣ್ಣ.
‘ಕೃಷ್ಣಾ ನದಿಗೆ ಹೊಂದಿಕೊಂಡಿರುವ ಸಾವಿರಾರು ಎಕರೆ ಜಮೀನಿನಲ್ಲಿ ಭತ್ತ ನಾಟಿ ಮಾಡಿದ್ದರು. ನಂತರ ಹತ್ತಿ ಬಿತ್ತನೆ ಮಾಡಿದ್ದರು. ಪ್ರವಾಹದ ನೀರು ನಿಲುಗಡೆಯಿಂದ ಭತ್ತ, ಹತ್ತಿ ಹಾಗೂ ಇನ್ನಿತರ ಬೆಳೆ ಹಾನಿಯಾಗಿದೆ. ಅಲ್ಲದೆ ನದಿಯಲ್ಲಿ ಅಪಾಯ ಮಟ್ಟದ ನೀರು ಹರಿದು ಬರುತ್ತಿರುವುದರಿಂದ ವಿದ್ಯುತ್ ಮೋಟಾರ ಹೊರತೆಗೆದು ಹಾಕಿದ್ದರು. ಈಗ ಮೋಟಾರ್ ಅಳವಡಿಸಬೇಕು. 15 ದಿನದಿಂದ ಬೆಳೆಗೆ ನೀರಿಲ್ಲದೆ ಒಣಗಿವೆ. ಅದು ಕೂಡಾ ನಮಗೆ ಚಿಂತೆಯನ್ನುಂಟು ಮಾಡಿದೆ ಎನ್ನುತ್ತಾರೆ’ ಮರಕಲ್ ಗ್ರಾಮದ ಹಣಮಂತರಾಯ.
‘ಬೆಳೆ ಹಾನಿ ಬಗ್ಗೆ ಕಂದಾಯ ಹಾಗೂ ಕೃಷಿ ಇಲಾಖೆ ಜಂಟಿಯಾಗಿ ಸಮೀಕ್ಷೆ ನಡೆಸಿ ಗರಿಷ್ಠ ಮಟ್ಟದ ಬೆಳೆ ಪರಿಹಾರ ನೀಡಬೇಕು’ ಎಂದು ರೈತರು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.