ಶನಿವಾರ, ಸೆಪ್ಟೆಂಬರ್ 25, 2021
22 °C
ಸುರಪುರ: ಪೂರ್ವಿಕರ ವೈಜ್ಞಾನಿಕ ದೃಷ್ಟಿಕೋನ; ಮನೆಗಳಿಗೆ ನೀರು ನುಗ್ಗದಂತೆ ವ್ಯವಸ್ಥೆ

ಪ್ರವಾಹಕ್ಕೆ ಜಗ್ಗದ ನದಿ ದಡದ ಗ್ರಾಮಗಳು

ಅಶೋಕ ಸಾಲವಾಡಗಿ Updated:

ಅಕ್ಷರ ಗಾತ್ರ : | |

Prajavani

ಸುರಪುರ: ತಾಲ್ಲೂಕಿನ ನದಿ ಪಾತ್ರದ ಗ್ರಾಮಗಳ ಹಿರಿಯರು ತಮ್ಮ ಮನೆಗಳನ್ನು ವೈಜ್ಞಾನಿಕ ದೃಷ್ಟಿಕೋನದಿಂದ ನಿರ್ಮಿಸಿದ್ದಾರೆ. ನದಿಗೆ ಎಷ್ಟೆ ಪ್ರವಾಹ ಬಂದರೂ ಮನೆಗಳು ಜಲಾವೃತವಾಗುವುದಿಲ್ಲ. ಪೂರ್ವಿಕರ ಈ ವಿಶಿಷ್ಟ ಯೋಚನೆ ಈಗ ಎಲ್ಲೆಡೆ ಚರ್ಚೆಗೆ ಬಂದಿದೆ.

ತಾಲ್ಲೂಕಿನಲ್ಲಿ ಹರಿಯುವ ಕೃಷ್ಣಾ ನದಿ ಪಾತ್ರದಲ್ಲಿ ಬಂಡೋಳಿ, ಲಿಂಗದಳ್ಳಿ, ತಿಂಥಣಿ, ಮುಷ್ಠಳ್ಳಿ, ಹೆಮ್ಮಡಗಿ, ಶೆಳ್ಳಗಿ, ಚೌಡೇಶ್ವರಿಹಾಳ, ಕರ್ನಾಳ, ಸೂಗೂರ, ಅಡ್ಡೊಡಗಿ, ಬೇವಿನಾಳ, ನೀಲಕಂಠರಾಯನಗಡ್ಡಿ, ಬೆಂಚಿಗಡ್ಡಿ, ಹೊಸೂರ ಗ್ರಾಮಗಳು ಬರುತ್ತವೆ. ಪ್ರವಾಹ ಹೆಚ್ಚಾದಾಗ ದೇವಪುರದ ಹಿರೇಹಳ್ಳಕ್ಕೆ ನೀರು ನುಗ್ಗಿ ದೇವಪುರ, ಹಾವಿನಾಳ, ಆಲ್ದಾಳ, ಅರಳಹಳ್ಳಿ ಗ್ರಾಮಗಳು ನೆರೆ ಪೀಡಿತವಾಗುತ್ತವೆ.

ವಿಶೇಷವೆಂದರೆ ಈ ಎಲ್ಲ ಗ್ರಾಮಗಳ ಮನೆಗಳಿಗೆ ಪ್ರವಾಹ ನೀರು ಆವರಿಸಿಲ್ಲ. 2019 ರಲ್ಲಿ ನಾರಾಯಣಪುರ ಜಲಶಯದಿಂದ 6.8 ಲಕ್ಷ ಕ್ಯೂಸೆಕ್ ನೀರು ಹರಿಸಿದಾಗ ಈ ಮನೆಗಳ ಹತ್ತಿರ ನೀರು ಬಂದಿತ್ತು. ಮನೆಗಳಿಗೆ ನೀರು ನುಗ್ಗಿರಲಿಲ್ಲ. ಮುಂಜಾಗ್ರತಾ ಕ್ರಮವಾಗಿ ಜನರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿತ್ತು.
ಪ್ರತಿ ಸಾರಿ ಪ್ರವಾಹ ಬಂದಾಗಲೂ ಈ ಗ್ರಾಮಗಳ ಜಮೀನುಗಳು ಮಾತ್ರ ಜಲಾವೃತವಾಗುತ್ತವೆ. ಬೆಳೆ ಹಾನಿ ಸಂಭವಿಸುತ್ತದೆ. ಆದರೆ ಇದುವರೆಗೂ ಪ್ರವಾಹದಿಂದ ಜೀವ ಹಾನಿ ಸಂಭವಿಸಿಲ್ಲ.

ನಾಗರೀಕತೆಗೆ ನೀರು ಅವಶ್ಯವಿರುವುದರಿಂದ ಅಂದಿನ ಜನರು ನದಿ ಪಾತ್ರದಲ್ಲಿ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ತಮ್ಮ ನಿವಾಸದ ಮನೆಗಳನ್ನು ಎತ್ತರದ ಪ್ರದೇಶಗಳಲ್ಲಿ ಕಟ್ಟಿಕೊಂಡಿರುವುದು ವಿಶೇಷ.  ಬೇರೆ ಜಲಾಶಯಗಳಿಂದ 3 ಲಕ್ಷ್ ಕ್ಯೂಸೆಕ್ ನೀರು ಹರಿಸಿದರೂ ಇಡೀ ಗ್ರಾಮಗಳೇ ಜಲಾವೃತವಾಗುತ್ತವೆ. ಇದಕ್ಕೆ ಹೋಲಿಸಿದರೆ ತಾಲ್ಲೂಕಿನ ನದಿ ಪಾತ್ರಗಳ ಗ್ರಾಮಗಳು ಸೇಫ್.

2009ರಲ್ಲಿ ದೊಡ್ಡ ಮಟ್ಟದ ಪ್ರವಾಹ ಬಂದಿತ್ತು. ಸಾಲದ್ದಕ್ಕೆ ಇದೇ ಸಮಯದಲ್ಲಿ ನಿರಂತರ ಮಳೆಯೂ ಬಂದು ಜನ ಜೀವನ ಅಸ್ತವ್ಯಸ್ತವಾಗಿತ್ತು. ಅಂದಿನ ಸರ್ಕಾರ 2010 ರಲ್ಲಿ ಪ್ರವಾಹ ಪೀಡಿತರಿಗೆ ಸುರಕ್ಷಿತ ಸ್ಥಳಗಳಲ್ಲಿ ‘ಆಸರೆ’ ಮನೆಗಳನ್ನು ನಿರ್ಮಿಸಿಕೊಟ್ಟಿತು.

ತಿಂಥಣಿ ಗ್ರಾಮಕ್ಕೆ 137, ಬಂಡೋಳಿ ಗ್ರಾಮಕ್ಕೆ 186, ಹೊಸೂರು ಗ್ರಾಮಕ್ಕೆ 200 ಮನೆಗಳು ನಿರ್ಮಾಣಗೊಂಡವು. ತಿಂಥಣಿ ಗ್ರಾಮದ ಪ್ರವಾಹ ಪೀಡಿತರು ಆಸರೆ ಮನೆ ಮತ್ತು ಹಳೆ ಮನೆ ಎರಡನ್ನೂ ಉಪಯೋಗಿಸುತ್ತಿದ್ದಾರೆ. ಬಂಡೋಳಿ ಗ್ರಾಮದ 7-8 ಕುಟುಂಬಗಳು ತಮ್ಮ ಹಳೆ ಮನೆಗಳಲ್ಲೆ ವಾಸಿಸುತ್ತಿವೆ. ಹೊಸೂರು ಹಳೆಯ ಊರು ಖಾಲಿಯಾಗಿದೆ. ಆದರೂ ಎಲ್ಲ ಗ್ರಾಮಗಳ ಹಳೆಯ ಮನೆಗಳು ಪ್ರವಾಹದಿಂದ ಸುರಕ್ಷಿತವಾಗಿವೆ.

ತಮ್ಮ ಮನೆಗಳು ಹಳೆಯದಾಗಿ ರುವುದರಿಂದ ಬಹುತೇಕರು ಆಸರೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಈ ಎಲ್ಲ ಅಂಶಗಳನ್ನು ಗಮನಿಸಿದಾಗ ಅಂದಿನ ಹಿರಿಯರ ವೈಜ್ಞಾನಿಕ ದೃಷ್ಟಿಕೋನ ಮೆಚ್ಚುಗೆಯಾಗುತ್ತದೆ. ಈ ಬಾರಿ ನದಿಗೆ ಸತತವಾಗಿ 4 ಲಕ್ಷ್ ಕ್ಯೂಸೆಕ್‍ಕ್ಕೂ ಅಧಿಕ ನೀರು ನದಿಗೆ ಹರಿಸಲಾಗಿದೆ. ಜಮೀನುಗಳು ಮಾತ್ರ ಹಾನಿಯಾಗಿವೆ. ಮನೆಗಳಿಗೆ ನೀರು ಸುಳಿದಿಲ್ಲ. ಜಮೀನಿನಲ್ಲಿ ಮನೆ ಮಾಡಿಕೊಂಡಿದ್ದ 15 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. 10 ಕಡೆ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು ಒಬ್ಬ ಸಂತ್ರಸ್ತನೂ ಇಲ್ಲ.

‘ಪ್ರವಾಹ ಬಿಟ್ಟು ಬಿಡದೆ ಕಾಡುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಎಲ್ಲ ನದಿ ಪಾತ್ರದ ಗ್ರಾಮಗಳನ್ನು ಸ್ಥಳಾಂತರಿಸಬೇಕು. ಪ್ರವಾಹಕ್ಕೆ ತುತ್ತಾಗುವ ಜಮೀನಿನ ಬದಲಿಗೆ ಬೇರೆಡೆ ಫಲವತ್ತಾದ ಭೂಮಿ ನೀಡಬೇಕು’ ಎಂಬುದು ನೆರೆ ಪೀಡಿತರ ಆಗ್ರಹ.

*ಪ್ರವಾಹದ ನೀರು ವ್ಯರ್ಥವಾಗದಂತೆ ವೈಜ್ಞಾನಿಕವಾಗಿ ಸದ್ಬಳಕೆಯಾಗುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದೆ. ಸರ್ಕಾರ ಸಂತ್ರಸ್ತರ ನೆರವಿಗೆ ಸದಾ ಸಿದ್ಧವಿರುತ್ತದೆ

*ರಾಜೂಗೌಡ, ಶಾಸಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು