ಸೋಮವಾರ, ಡಿಸೆಂಬರ್ 6, 2021
27 °C
ಹಿರಿತನ ಕಳೆದುಕೊಂಡ ಬದನೆಕಾಯಿ, ಬೀನ್ಸ್‌ ದರ ಸ್ಥಿರ

ಯಾದಗಿರಿ: ಏರಿಳಿತ ಕಂಡ ತರಕಾರಿ ದರ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ತರಕಾರಿ ದರದಲ್ಲಿ ಏರಿಳಿತ ಕಂಡಿದೆ. ಒಂದೊಂದು ದಿನ ಒಂದು ದರಕ್ಕೆ ತರಕಾರಿ ಮಾರಾಟವಾಗುತ್ತಿದೆ.

ಟೊಮೆಟೊ, ದೊಣ್ಣೆಮೆಣಸಿನಕಾಯಿ, ಗೋಬಿ, ಸೌತೆಕಾಯಿ ದರ ಕಳೆದ ವಾರಕ್ಕಿಂತ ₹10ರಿಂದ ₹20 ಹೆಚ್ಚಳವಾಗಿದೆ. ಆದರೆ, ಒಂದೂವರೆ ತಿಂಗಳಿಂದ ಹಿರಿತನ ಮೆರೆದಿದ್ದ ಬದನೆಕಾಯಿ ದರ ₹20 ದರ ಇಳಿಕೆಯಾಗಿ ಕೆ.ಜಿಗೆ ₹80 ಮಾರಾಟವಾಗುತ್ತಿದೆ. ಕಳೆದ ವಾರದಿಂದಲೂ ಬೀನ್ಸ್‌ ಬೆಲೆ ₹120 ಇತ್ತು. ಈಗಲೂ ಅದೇ ದರ ಕಾಯ್ದುಕೊಂಡಿದೆ.

ಎರಡು ವಾರಗಳಿಂದ ಈರುಳ್ಳಿ ಬೆಲೆ ಏರಿಕೆ ಕಂಡು ಮತ್ತಷ್ಟು ಹೆಚ್ಚಳವಾಗುವ ಮುನ್ಸೂಚನೆ ನೀಡಿತ್ತು. ಆದರೆ, ಕಳೆದ ವಾರದಂತೆ ಈ ವಾರವೂ ₹40 ಕೆ.ಜಿಗೆ ಮಾರಾಟವಾಗುತ್ತಿದೆ. ಹಾಗಲಕಾಯಿ ಕಳೆದ ವಾರ ದರ ₹60 ಇತ್ತು. ಈವಾರ ₹20 ಹೆಚ್ಚಳವಾಗಿ ₹80ಕ್ಕೆ ಏರಿಕೆಯಾಗಿದೆ. ಚವಳೆಕಾಯಿ ಕಳೆದ ವಾರಕ್ಕಿಂತ ₹20 ದರ ಹೆಚ್ಚಳವಾಗಿದೆ. ಮೂಲಂಗಿ, ಮೆಣಸಿನಕಾಯಿ, ಸೋರೆಕಾಯಿ, ಬಿಟ್ ರೂಟ್, ಹೀರೆಕಾಯಿ, ಬೆಂಡೆಕಾಯಿ, ತೊಂಡೆಕಾಯಿ, ಕ್ಯಾಬೇಜ್ ಕಳೆದ ವಾರದಂತೆ ಯಥಾಸ್ಥಿತಿ ದರ ಮುಂದುವರೆದಿದೆ. ₹10ಗೆ ನಾಲ್ಕು ನಿಂಬೆ ಹಣ್ಣು ಮಾರಾಟವಾಗುತ್ತಿದೆ. ಕೆ.ಜಿ ಶುಂಠಿಗೆ ₹160 ದರವಿದೆ.

ಸೊಪ್ಪುಗಳ ದರ ಹೀಗಿದೆ: ಮಾರುಕಟ್ಟೆಗೆ ಸೊಪ್ಪುಗಳ ಆವಕವಿದ್ದರೂ ದರ ಮತ್ತು ಕಟ್ಟುಗಳಲ್ಲಿ ವ್ಯತ್ಯಾಸವಾಗಿದೆ. ಪಾಲಕ್ ಸೊಪ್ಪು ₹20ಕ್ಕೆ 3 ಕಟ್ಟು, ಸಬ್ಬಸಿಗೆ ₹10ಗೆ ಒಂದು ಕಟ್ಟು, ಮೆಂತೆ ಸೊಪ್ಪು ₹25ಗೆ ಒಂದು ಕಟ್ಟು, ರಾಜಗಿರಿ ಸೊಪ್ಪು ₹20ಗೆ ಮೂರು ಕಟ್ಟು, ಪುಂಡಿಪಲ್ಯೆ ₹20ಗೆ ಮೂರು ಕಟ್ಟು ಮಾರಾಟವಾಗುತ್ತಿದೆ. ಮೆಂತೆ ಸೊಪ್ಪು ಕಳೆದ ವಾರ ₹30ಗೆ ಒಂದರಂತೆ ಮಾರಾಟವಾಗುತ್ತಿತ್ತು.

ಕೋತಂಬರಿ ಸೊಪ್ಪು ದರ ಹೆಚ್ಚಳ: ಕಳೆದ ತಿಂಗಳಿನಿಂದಲೂ ಕೋತಂಬರಿ ಸೊಪ್ಪು ದರ ಏರಿಕೆಯಾಗುತ್ತಲಿದೆ. ₹30ಗೆ ಒಂದು ಕಟ್ಟು ತಿಂಗಳ ಹಿಂದೆ ಮಾರಾಟವಾಗುತ್ತಿತ್ತು. ಆದರೆ, ಈ ವಾರ ₹60ಗೆ ಒಂದು ಮಾರಾಟವಾಗುತ್ತಿದ್ದು, ಬೇಡಿಕೆ ಜೊತೆಗೆ ದರವೂ ಹೆಚ್ಚಳವಾಗಿದೆ ಎನ್ನುತ್ತಾರೆ ತರಕಾರಿ ವ್ಯಾಪಾರಿ ಮಹಮದ್‌ ಗೌಸ್‌. ಪುದೀನಾ ಬೆಲೆಯೂ ಏರಿಕೆಯಾಗಿದ್ದು, ₹40ಗೆ ಒಂದು ಕಟ್ಟು ಇದೆ.

₹200ಗೆ ನುಗ್ಗೆಕಾಯಿ ಬೆಲೆ ಹೆಚ್ಚಳ: ನುಗ್ಗೆಕಾಯಿ ಬೆಲೆ ಗಗನಕ್ಕೆ ಏರಿಕೆಯಾಗಿದೆ. ₹200 ಕೆ.ಜಿಗೆ ಮಾರಾಟವಾಗುತ್ತಿದೆ. ಮಾರುಕಟ್ಟೆಗೆ ಹೆಚ್ಚಿನ ಆವಕ ಬಾರದಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ ಎನ್ನುತ್ತಾರೆ ತರಕಾರಿ ವ್ಯಾಪಾರಿಗಳು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು