ಬುಧವಾರ, ನವೆಂಬರ್ 13, 2019
23 °C
ನವೆಂಬರ್‌ 11ರಿಂದ ಕುಷ್ಠರೋಗ ಪತ್ತೆ ಹಚ್ಚುವ ಆಂದೋಲನ: ಜಿಲ್ಲಾಧಿಕಾರಿ

ಕುಷ್ಠರೋಗ ಪತ್ತೆಗೆ 847 ತಂಡಗಳ ರಚನೆ

Published:
Updated:
Prajavani

ಯಾದಗಿರಿ: ‘ಸ್ಪರ್ಶ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯಾದ್ಯಂತ ನವೆಂಬರ್ 11ರಿಂದ 28ರವರೆಗೆ ಕುಷ್ಠರೋಗ ಪತ್ತೆ ಹಚ್ಚುವ ಆಂದೋಲನ ಹಮ್ಮಿಕೊಳ್ಳಲಾಗಿದೆ’ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕುಷ್ಠರೋಗ ಪತ್ತೆ ಹಚ್ಚುವ ಆಂದೋಲನದ ಅಂಗವಾಗಿ ನಡೆದ ಜಿಲ್ಲಾ ಸಮನ್ವಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

‘ಕುಷ್ಠರೋಗ ಮುಕ್ತ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಸಾರ್ವಜನಿಕರಿಗೆ ತಿಳಿವಳಿಕೆ ನೀಡಬೇಕು. ಶಾಲಾ-ಕಾಲೇಜುಗಳಲ್ಲಿ ಸ್ಪರ್ಶ ಕುಷ್ಠ ರೋಗದ ಕುರಿತು ಜಾಗೃತಿ ಮೂಡಿಸಬೇಕು. ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳು ಆಂದೋಲನದ ಅವಧಿಯಲ್ಲಿ ಮನೆ ಮನೆಗೆ ಭೇಟಿ ನೀಡಿ, ರೋಗದ ಬಗ್ಗೆ ಅರಿವು ಮೂಡಿಸಬೇಕು’ ಎಂದು ಸೂಚಿಸಿದರು.

‘ನವೆಂಬರ್ 10ರಂದು ಪೂರ್ವಭಾವಿಯಾಗಿ ಕುಷ್ಠರೋಗ ಪತ್ತೆ ಹಚ್ಚುವ ಆಂದೋಲನದ ಬಗ್ಗೆ ಪ್ರತಿ  ತಂಡದವರು ತಮ್ಮ ತಮ್ಮ ಗ್ರಾಮದಲ್ಲಿ ಸಮುದಾಯದ ಸಭೆ ನಡೆಸಬೇಕು. ತಾಲ್ಲೂಕು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತರಬೇತಿ ನಡೆಸಬೇಕು’ ಎಂದು ಸೂಚಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಭಗವಂತ ಅನವಾರ ಮಾತನಾಡಿ, ‘ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 43 ಜನ ಕುಷ್ಠರೋಗದ ಚಿಕಿತ್ಸೆ ಪಡೆಯುತ್ತಿದ್ದಾರೆ. 27 ಜನ ಗುಣಮುಖ ಹೊಂದಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 2.32,605 ಮನೆಗಳಿದ್ದು, ಕುಷ್ಠರೋಗ ಪತ್ತೆಗಾಗಿ 847 ತಂಡಗಳನ್ನು ರಚಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಪ್ರತಿಯೊಂದು ತಂಡದಲ್ಲಿ ಒಬ್ಬ ಆಶಾ ಕಾರ್ಯಕರ್ತೆ, ಮತ್ತೊಬ್ಬರು ವಾಲೆಂಟ್ರಿ ಇರುತ್ತಾರೆ. ಪ್ರತಿ 5 ತಂಡಕ್ಕೆ ಒಬ್ಬರು ಮೇಲ್ವಿಚಾರಕರಂತೆ ಒಟ್ಟು 168 ಮೇಲ್ವಿಚಾರಕರು ಇರುತ್ತಾರೆ’ ಎಂದು ಹೇಳಿದರು.

ಕುಷ್ಠರೋಗ ಎಂದರೇನು: ‘ಕುಷ್ಠರೋಗವು ಮೈಕೊಬ್ಯಾಕ್ಟಿರಿಯಂ ಲೆಪ್ರೆ ಎಂಬ ರೋಗಾಣುವಿನಿಂದ ಉಂಟಾಗುವ ಸಾಂಕ್ರಾಮಿಕ ರೋಗ. ಇದು ಮುಖ್ಯವಾಗಿ ನರಗಳು ಹಾಗೂ ಚರ್ಮದ ಮೇಲೆ ಪರಿಣಾಮ ಬಿರುತ್ತದೆ. ಚರ್ಮದ ಮೇಲಿನ ಯಾವುದೇ ತಿಳಿ, ಬಿಳಿ, ತಾಮ್ರ ಬಣ್ಣದ ಮಚ್ಚೆಗಳಿದ್ದರೆ ಗುಪ್ತವಾಗಿರಿಸದೆ ವೈದ್ಯರಿಗೆ ತೋರಿಸಬೇಕು. ಈ ಮಚ್ಚೆಗಳ ಮೇಲೆ ಸ್ಪರ್ಶಜ್ಞಾನ ಇರುವುದಿಲ್ಲ. ರೋಗವನ್ನು ಬಹುವಿಧ ಔಷಧಿ ಚಿಕಿತ್ಸೆಯಿಂದ ಗುಣಪಡಿಸಬಹುದು. ಈ ಔಷಧಿ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ದೊರೆಯುತ್ತದೆ ಎಂದರು.

ಡಿವೈಎಸ್‍ಪಿ ಯು.ಶರಣಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ನಾರಾಯಣಪ್ಪ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ.ಸೂರ್ಯಪ್ರಕಾಶ ಎಂ.ಕಂದಕೂರ, ನಗರಸಭೆ ಪೌರಾಯುಕ್ತ ರಮೇಶ ಸುಣಗಾರ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿರಾದಾರ ಶಂಕರ, ಜಿಲ್ಲಾ ಸಮನ್ವಯ ಸಮಿತಿ ಸದಸ್ಯ ರಾಯಪ್ಪ ಇದ್ದರು.

ಪ್ರತಿಕ್ರಿಯಿಸಿ (+)