ಗುರುವಾರ , ಡಿಸೆಂಬರ್ 5, 2019
22 °C
ಯಾದಗಿರಿ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆ

‘ಹಿಂಗಾರು ಬಿತ್ತನೆ ಶೇ.75 ಪೂರ್ಣ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ‘ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಹಿಂಗಾರು ಬಿತ್ತನೆ ಶೇಕಡ 75 ರಷ್ಟು ಪೂರ್ಣಗೊಂಡಿದೆ. ರೈತರಿಗೆ ಶೇಂಗಾ, ಕಡಲೆ ಮತ್ತು ಜೋಳದ ಬೀಜಗಳನ್ನು ಸಮರ್ಪಕವಾಗಿ ವಿತರಿಸಲಾಗಿದೆ’ ಎಂದು ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ಧೂಳಪ್ಪ ಹೊಸಳ್ಳಿ  ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಅಧ್ಯಕ್ಷೆ ಭೀಮವ್ವ ಅಚ್ಚೋಲ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾಹಿತಿ ನೀಡಿದರು.

‘ಈ ವರ್ಷ ಬೀಜ ಪೂರೈಕೆ ತಡವಾಗಿದ್ದರಿಂದ ವಿತರಣೆಯಲ್ಲಿ ವಿಳಂಬವಾಗಿದೆ. ಆದರೂ ಜಿಲ್ಲೆಯ ಎಲ್ಲ ರೈತ ಸಂಪರ್ಕ ಕೇಂದ್ರಗಳಿಂದ 4139 ಕ್ವಿಂಟಲ್‌ ಶೇಂಗಾ, 93 ಕ್ವಿಂಟಲ್‌ ಕಡಲೆ ಮತ್ತು 13 ಕ್ವಿಂಟಲ್ ಹಿಂಗಾರು ಜೋಳದ ಬಿತ್ತನೆ ಬೀಜಗಳನ್ನು ವಿತರಿಸಲಾಗಿದೆ’ ಎಂದರು.

ಅಧಿಕಾರಿಯ ಮಾಹಿತಿಗೆ ತೃಪ್ತರಾಗದ ಸದಸ್ಯರು ‘ಸಮಯಕ್ಕೆ ಸರಿಯಾಗಿ ಶೇಂಗಾ ವಿತರಿಸದ ಕಾರಣ ಹತ್ತಿಕುಣಿ ರೈತ ಸಂಪರ್ಕ ಕೇಂದ್ರದಲ್ಲಿ ರೈತರ ಮೇಲೆ ಲಾಠಿ ಪ್ರಹಾರ ನಡೆದಿದೆ. ಇದಕ್ಕೆ ಯಾರು ಹೊಣೆ? ರೈತರನ್ನು ಮರುಳು ಮಾಡಲು ಹೊರಟಿದ್ದೀರಿ ನೀವು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಬೇಕು, ನನೆಗುದಿ ಬಿದ್ದಿರುವ ಕೃಷಿ ಹೊಂಡಗಳ ಕಾಮಗಾರಿಯನ್ನು ಅವುಗಳನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಂದು ಪೂರ್ಣಗೊಳಿಸಬೇಕು’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಬಸವರಾಜ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಕಳೆದ ಬಾರಿಯ ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ದಾರಗಳು ಮತ್ತು ಕೈಗೊಂಡ ಕಾಮಗಾರಿಯ ಕುರಿತು ಮೊದಲು ಮಾಹಿ ನೀಡಿ. ಬಳಿಕ ಸಭೆ ನಡೆಸಿ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯರು ಸಭೆಯಲ್ಲಿ ಪಟ್ಟು ಹಿಡಿದರು. ಇದಕ್ಕೆ ಸ್ಪಂದಿಸಿದ ಇಒ ಅವರು ‘ಮೊದಲು ಈ ಸಭೆಯ ವಿಷಯಗಳನ್ನು ಚರ್ಚೆ ಮಾಡೋಣ. ನಂತರ ಅದರ ಕುರಿತು ಅಧಿಕಾರಿಗಳು ಉತ್ತರಿಸುತ್ತಾರೆ’ ಎಂದರು.

ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ರಾಮಲಿಂಗಮ್ಮ ಕೌಡಿ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ಪ್ರತಿಕ್ರಿಯಿಸಿ (+)