ಗಾಂಧೀಜಿ ತತ್ವಗಳು ಕಾರ್ಯರೂಪಕ್ಕೆ ಬರಲಿ: ವೆಂಕಟರೆಡ್ಡಿಗೌಡ ಮುದ್ನಾಳ

7
ಗಾಂಧಿ ಜಯಂತಿ150ನೇ ಜಯಂತಿ ಸಮಾರಂಭ

ಗಾಂಧೀಜಿ ತತ್ವಗಳು ಕಾರ್ಯರೂಪಕ್ಕೆ ಬರಲಿ: ವೆಂಕಟರೆಡ್ಡಿಗೌಡ ಮುದ್ನಾಳ

Published:
Updated:
Deccan Herald

ಯಾದಗಿರಿ: ‘ಮಹಾತ್ಮ ಗಾಂಧೀಜಿ ಅವರ ಸ್ಮರಣೆ ಮಾಡುವುದರ ಜತೆಗೆ ಅವರು ಪಾಲಿಸಿದ ತತ್ವಸಿದ್ಧಾಂತಗಳನ್ನು ನಿತ್ಯ ಜೀವನದಲ್ಲಿ ಕಾರ್ಯರೂಪಕ್ಕೆ ತಂದುಕೊಳ್ಳಬೇಕು’ ಎಂದು ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಹೇಳಿದರು.

ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮ ವರ್ಷಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ, ಬೇಟಿ ಬಚಾವೊ; ಬೇಟಿ ಪಡಾವೊ, ವೈಯಕ್ತಿಕ ಶೌಚಾಲಯ ನಿರ್ಮಾಣ ಸೇರಿದಂತೆ ಮುಂತಾದ ಯೋಜನೆಗಳ ಮೂಲಕ ಗಾಂಧೀಜಿ ಅವರ ತತ್ವಗಳನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ಇತ್ತೀಚೆಗೆ ಇಡೀ ದೇಶದಲ್ಲಿ ಜಾತಿ ಜಗಳ, ಅಂತರರಾಜ್ಯ ಜಗಳ ಹೆಚ್ಚಾಗುತ್ತಿದೆ. ನಾವೆಲ್ಲರೂ ಒಂದಾಗಿ ಗಾಂಧೀಜಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರೀ ಅವರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಮಾತನಾಡಿ,‘ಮಹಾತ್ಮ ಗಾಂಧೀಜಿ ಅವರು ಯಾವುದೇ ಕಾರ್ಯ ಇದ್ದರೂ, ಅವುಗಳ ಆಚರಣೆಗೆ ಹೆಚ್ಚು ಒತ್ತು ನೀಡುತ್ತಿದ್ದರು. ಬದಲಾವಣೆ ಆಗಬೇಕಾದರೆ ಅದು ನನ್ನಿಂದಲೇ ಆರಂಭವಾಗಲಿ ಎನ್ನುವ ಮನೋಭಾವ ಬೆಳೆಸಿಕೊಳ್ಳಬೇಕು. ಸ್ವಚ್ಛತಾ ಕಾರ್ಯವನ್ನು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಿಬ್ಬಂದಿ ಮಾಡುತ್ತಿಲ್ಲ ಎಂದು ಆರೋಪಿಸುವ ಬದಲು, ಅದಕ್ಕೆ ನಮ್ಮಿಂದ ಏನು ಸಾಧ್ಯ? ಎಂಬುದನ್ನು ಯೋಚಿಸಬೇಕು. ಅಧಿಕಾರಿಗಳ ಜವಾಬ್ದಾರಿ ಜತೆಗೆ ಸಾರ್ವಜನಿಕರ ಸಹಕಾರ ಸಿಕ್ಕಾಗ ಮಾತ್ರ ಅಭಿವೃದ್ಧಿ ವೇಗ ಪಡೆಯಲಿದೆ’ ಎಂದು ಹೇಳಿದರು.

‘ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಜಿಲ್ಲೆಯ ಪ್ರತಿಯೊಂದು ಕುಟುಂಬದ ನಾಗರಿಕರು ಮುಂದಾಗಬೇಕು. ಈ ಮೂಲಕ ಬಯಲು ಶೌಚಮುಕ್ತ ಜಿಲ್ಲೆಗೆ ಸಹಕರಿಸಬೇಕು. ಶೌಚಾಲಯ ನಿರ್ಮಿಸಿಕೊಳ್ಳಲು ಜಾಗವಿಲ್ಲ, ಹಣ ಇಲ್ಲ ಎಂದು ನೆಪ ಹೇಳಬಾರದು. ಸಮಸ್ಯೆ ಇದ್ದಲ್ಲಿ ಪರಿಹಾರವೂ ಇರುತ್ತದೆ. ಕಡಿಮೆ ಜಾಗ ಇದ್ದಲ್ಲಿ ಆಧುನಿಕ ಶೌಚಾಲಯಗಳನ್ನು ನಿರ್ಮಿಸಿಕೊಳ್ಳಬೇಕು. ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಸರ್ಕಾರದಿಂದ ಸಹಾಯಧನ ಕೂಡ ನೀಡಲಾಗುತ್ತಿದೆ’ ಎಂದು ತಿಳಿಸಿದರು.

ವಿದೇಶ ಪ್ರವಾಸದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವ ರಾಜಶೇಖರ ಬಿ.ಪಾಟೀಲ್ ಅವರ ಸಂದೇಶವನ್ನು ಸಮಾರಂಭದಲ್ಲಿ ಓದಲಾಯಿತು.

ದಾಸಬಾಳ ಮಠದ ವೀರೇಶ್ವರ ಸ್ವಾಮೀಜಿ, ಜಾಮೀಯತೆ ಮಸೀದಿಯ ಮೌಲ್ವಿ ಶೇಖ್ ಬುರಾನುದ್ದೀನ್, ಫಾದರ್ ಜೀ, ಜೈನಧರ್ಮದ ಬಾಬು ದೋಖಾ ಸರ್ವಧರ್ಮ ಸಂದೇಶ ನೀಡಿದರು. ಶುಭಂ ಪದವಿ ಮಹಾವಿದ್ಯಾಲಯದ ಉಪನ್ಯಾಸಕ ಗುರುಪ್ರಸಾದ ವೈದ್ಯ ಅವರು ಉಪನ್ಯಾಸ ನೀಡಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜನಪದ, ಮಾರ್ಚ್ ಆಫ್ ಕರ್ನಾಟಕ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೊರತಂದಿರುವ ಪಾಪು ಗಾಂಧಿ; ಗಾಂಧಿ ಬಾಪು ಆದ ಕಥೆ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.

ಆರ್.ವಿ. ವಿದ್ಯಾಸಂಸ್ಥೆ ಶಾಲೆಯ ಯುಕೆಜಿ ವಿದ್ಯಾರ್ಥಿ ಸಾಯಿಪ್ರಸಾದರೆಡ್ಡಿ ಅವರು ಮಹಾತ್ಮ ಗಾಂಧೀಜಿ ಅವರ ವೇಷಧಾರಿಯಾಗಿ ಸಭೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು.

ನಗರ ತ್ಯಾಜ್ಯ ಸ್ವಚ್ಛಗೊಳಿಸಿದ ಜಿಲ್ಲಾಧಿಕಾರಿ

‘ಸಾರ್ವಜನಿಕರು ವೈಯಕ್ತಿಕ ಶೌಚಾಲಯ ಕಟ್ಟಿಸಿಕೊಳ್ಳುವ ಮೂಲಕ ಆರೋಗ್ಯಯುತ ಜೀವನ ನಡೆಸಬೇಕು’ ಎಂದು ಜಿಲ್ಲಾಧಿಕಾ ಎಂ.ಕೂರ್ಮಾ ರಾವ್ ಸಲಹೆ ನೀಡಿದರು.

ನಗರದ ಕೇಂದ್ರ ಗ್ರಂಥಾಲಯದ ಬಳಿ ಮಂಗಳವಾರ ನಗರಸಭೆ ವತಿಯಿಂದ ಸಾರ್ವಜನಿಕರ ಸಹಯೋಗದೊಂದಿಗೆ ಮಹಾತ್ಮ ಗಾಂಧೀಜಿ ಅವರ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯದಲ್ಲಿ ಅವರು ಮಾತನಾಡಿದರು.

‘ನಮ್ಮ ಸುತ್ತಮುತ್ತಲಿನ ಪರಿಸರ ಚೆನ್ನಾಗಿದ್ದರೆ ಆರೋಗ್ಯ ಚೆನ್ನಾಗಿರುತ್ತದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಇದರಿಂದ ಯಾವುದೇ ಸಾಂಕ್ರಾಮಿಕ ರೋಗಗಳು ಹರಡುವುದಿಲ್ಲ’ ಎಂದರು.

ಜಿಲ್ಲಾಧಿಕಾರಿಗಳು ಕೂಡ ಸಾರ್ವಜನಿಕರೊಂದಿಗೆ ಸ್ವಚ್ಛತಾ ಕಾರ್ಯ ನಡೆಸಿದರು. ಈ ಸಂದರ್ಭದಲ್ಲಿ ಸಾರ್ವಜನಿಕರು ಸ್ಥಳೀಯ ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿಯವರ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಸಮಸ್ಯೆಗಳನ್ನು ಪರಿಹರಿಸುವಂತೆ ಸ್ಥಳದಲ್ಲಿದ್ದ ನಗರಸಭೆ ಪೌರಾಯುಕ್ತ ಸಂಗಪ್ಪ ಉಪಾಸೆ ಅವರಿಗೆ ಸೂಚಿಸಿದರು.

ನಗರಸಭೆ ವ್ಯವಸ್ಥಾಪಕ ಮಲ್ಲಿಕಾರ್ಜುನ, ಗ್ರಂಥಾಲಯ ಸಹಾಯಕ ಬಸನಗೌಡ ಪಾಟೀಲ್, ನಿಂಗಮ್ಮ, ಗೌತಮ್, ಎಂ.ಎನ್.ಪಟೇಲ್, ಭಾಗ್ಯಶ್ರೀ, ಖಾಸೀಂ, ಭೀಮರಾಯ ನಾಟೇಕಾರ, ಬಸವರಾಜ ಹಾಲಿಗೇರಾ, ಸಿದ್ರಾಮಪ್ಪ ನಾಟೇಕಾರ, ಹಣಮಂತ ವಲ್ಲ್ಯಾಪುರ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !