ಸೋಮವಾರ, ಜೂಲೈ 6, 2020
28 °C
ಅರ್ಧ ಊರಿಗೆ ನೀರಿನ ಸಮಸ್ಯೆ, ಓವರ್‌ ಹೆಡ್‌ ಟ್ಯಾಂಕ್‌ ಇದ್ದರೂ ವ್ಯರ್ಥ

ಯಾದಗಿರಿಯ ಜೀನಕೇರಾದಲ್ಲಿ ‘ಜೀವಜಲ’ಕ್ಕೆ ಅಲೆದಾಟ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

‌ಯಾದಗಿರಿ: ತಾಲ್ಲೂಕಿನ ಜೀನಕೇರಾದಲ್ಲಿ ಜೀವಜಲಕ್ಕಾಗಿ ಗ್ರಾಮಸ್ಥರು ತೀವ್ರ ಪರದಾಡುತ್ತಿದ್ದಾರೆ. ಹೊಲಗಳಲ್ಲಿರುವ ಕೊಳವೆ ಬಾವಿಗಳಿಗೆ ತೆರಳಿ ನೀರು ಹೊತ್ತುಕೊಂಡು ಬರುವ ಪರಿಸ್ಥಿತಿ ಉಂಟಾಗಿದೆ. ಇದನ್ನು ನೀಗಿಸಬೇಕಾದ ಜನಪ್ರನಿಧಿಗಳು, ಅಧಿಕಾರಿಗಳು ಕಣ್ಮುಚ್ಚಿ ಕುಳಿತ್ತಿದ್ದಾರೆ ಎಂದು ಗ್ರಾಮಸ್ಥರ ಆರೋಪವಾಗಿದೆ.

ಕೌಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಗ್ರಾಮದಲ್ಲಿ 8 ಗ್ರಾಮ ಪಂಚಾಯಿತಿ ಸದಸ್ಯರು ಇದ್ದಾರೆ. ಆದರೆ, ಸಮಸ್ಯೆಗಳು ಮಾತ್ರ ನೂರಾರು ಇವೆ. ಈಗ ಬೇಸಿಗೆಯಾಗಿದ್ದರಿಂದ ನೀರಿನ ಸಮಸ್ಯೆ ತೀವ್ರವಾಗಿದೆ. ಇದ್ದ ಕೊಳವೆ ಬಾವಿ ಕೆಟ್ಟು ಹೋಗಿದೆ. ಇದರಿಂದ ನೀರಿಗಾಗಿ ಅಲೆದಾಟ ತಪ್ಪಿಲ್ಲ.

‘ಊರಿನಲ್ಲಿ ಓವರ್ ಹೆಡ್‌ ಟ್ಯಾಂಕ್‌ ಇದೆ. ಆದರೆ, ನಾಲ್ಕು ವರ್ಷಗಳಿಂದ ಅರ್ಧ ಊರಿಗೆ ನೀರು ಸರಬರಾಜು ಆಗಿಲ್ಲ. ಇದರಿಂದ ನಾವು ಹೊಲಗದ್ದೆಗಳಿಗೆ ಹೋಗಿ ಅವರ ಬಳಿ ಬೇಡಿಕೊಂಡು ನೀರು ತಂದುಕೊಳ್ಳುತ್ತೇವೆ. ನಮ್ಮ ಸಮಸ್ಯೆಯನ್ನು ಯಾರೂ ಬಗೆಹರಿಸಿಲ್ಲ’ ಎಂದು ಗ್ರಾಮದ ಹಿರಿಯರಾದ ಭೀಮರಾಯ ದೂರಿದರು.

ಗ್ರಾಮದಲ್ಲಿ 5–6 ಸಾವಿರ ಜನಸಂಖ್ಯೆ ಇದೆ. 1,500 ಮನೆಗಳಿವೆ. 2,600 ಮತದಾರರಿದ್ದಾರೆ. ಆದರೆ, ಸಮಸ್ಯೆಗಳು ಮಾತ್ರ ಪರಿಹಾರ ಆಗುತ್ತಿಲ್ಲ. ಗುಳೆ ಹೋಗಿದ್ದವರು ಮರಳಿ ಗ್ರಾಮಕ್ಕೆ ಬಂದಿದ್ದಾರೆ. ಆದರೆ, ನೀರಿನ ವ್ಯವಸ್ಥೆ ಇಲ್ಲದಿದ್ದರಿಂದ ಪರದಾಡುತ್ತಿದ್ದಾರೆ.

ನಲ್ಲಿಯಲ್ಲಿ ನೀರು ಬರಲ್ಲ

ನಾಲ್ಕು ವರ್ಷಗಳಿಂದ ಗ್ರಾಮದ ಮೇಲ್ಬಾಗದ ಮನೆಗಳಿಗೆ ಮಾತ್ರ ನೀರು ಸರಬರಾಜು ಆಗುತ್ತದೆ. ಕೆಳ ಭಾಗದಲ್ಲಿ ನೀರು ಬರುವುದಿಲ್ಲ. ಇದರಿಂದ ನಾವು ಖಾಸಗಿ ಕೊಳವೆ ಬಾವಿಗಳನ್ನು ನೆಚ್ಚಿಕೊಂಡು ಅವರ ಬಳಿ ನೀರು ತೆಗೆದುಕೊಳ್ಳುತ್ತೇವೆ. ನೀರಿನ ಸಮಸ್ಯೆ ನೀಗಿಸಲು ಎಲ್ಲರಿಗೂ ಮನವಿ ಮಾಡಿದ್ದೇವೆ ಎನ್ನುತ್ತಾರೆ ಗ್ರಾಮದ ಯುವಕರು. 

ಹೊಲದಲ್ಲಿ ನೀರು ತರಬೇಕು

ಗ್ರಾಮದ ಹೊರವಲಯದಲ್ಲಿ ಕೆಲವರು ಕೊಳವೆ ಬಾವಿ ಕೊರೆಸಿಕೊಂಡಿದ್ದಾರೆ. 2–3 ಕಿ.ಮೀ ಹೋಗಿ ನೀರು ತರಬೇಕು. ಸರಿಯಾದ ರಸ್ತೆ ಇಲ್ಲದಿರುವುದರಿಂದ ಬೈಕ್‌ನಲ್ಲಿ ತರಲು ಸಾಧ್ಯವಾಗುತ್ತಿಲ್ಲ. ಕೊಡವನ್ನು ತಲೆ ಮೇಲೆ ಹೊತ್ತುಕೊಂಡು ತರಬೇಕು. ಇದರಿಂದ ನಾವು ಹೈರಾಣಾಗಿದ್ದೇವೆ ಎನ್ನುತ್ತಾರೆ ಗ್ರಾಮದ ಮಹಿಳೆಯರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು