ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಗಣತಿಗೆ ನಿಖರ ಮಾಹಿತಿ ನೀಡಿ: ಎಂ.ಕೂರ್ಮಾರಾವ್

7ನೇ ಆರ್ಥಿಕ ಗಣತಿಗೆ ಜಿಲ್ಲಾಧಿಕಾರಿ ಚಾಲನೆ
Last Updated 29 ಜನವರಿ 2020, 9:22 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಾದ್ಯಂತ 7ನೇ ಆರ್ಥಿಕ ಗಣತಿ ನಡೆಯುತ್ತಿದ್ದು, ಸಾರ್ವಜನಿಕರು ಮತ್ತು ವ್ಯಾಪಾರಸ್ಥರು ಅಗತ್ಯ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಮನವಿ ಮಾಡಿದರು.

ಜಿಲ್ಲಾಧಿಕಾರಿ ಕಾರ್ಯಾಲಯದಲ್ಲಿ ಈಚೆಗೆ ಸಂಜೆ‘7ನೇ ಆರ್ಥಿಕ ಗಣತಿ’ ಕಾರ್ಯಕ್ಕೆ ಮೊಬೈಲ್ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

‌ಸಾರ್ವಜನಿಕರು ನಡೆಸುತ್ತಿರುವ ಆರ್ಥಿಕ ಚಟುವಟಿಕೆಗಳ ಬಗ್ಗೆ ಗಣತಿದಾರರು ಮಾಹಿತಿ ಸಂಗ್ರಹಿಸುವರು. ಇವರು ಸಂಗ್ರಹಿಸುವ ಮಾಹಿತಿಯು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ವಿವಿಧ ಅಭಿವೃದ್ಧಿ ಯೋಜನೆ ಮತ್ತು ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಮಹತ್ವದ್ದಾಗಿದೆ ಎಂದರು.

1977ರಲ್ಲಿ ಕೇಂದ್ರ ಸರ್ಕಾರ ಆರ್ಥಿಕ ಗಣತಿಗೆ ಚಾಲನೆ ನೀಡಿದೆ. ಪ್ರಸಕ್ತ ಆರ್ಥಿಕ ಗಣತಿ ಕಾರ್ಯವನ್ನು ಸಿ.ಎಸ್.ಸಿ ಮತ್ತು ಎನ್.ಎಸ್.ಎಸ್.ಒ ಅವರಿಗೆ ನೀಡಲಾಗಿದೆ. ಅಸಂಘಟಿತ ವಲಯದ ಆರ್ಥಿಕ ಶಕ್ತಿ ಕುರಿತು ಅವರನ್ನು ಸಬಲರನ್ನಾಗಿ ಮಾಡುವ ಉದ್ದೇಶದಿಂದ ಸದರಿ ಆರ್ಥಿಕ ಗಣತಿ ಕೈಗೊಳ್ಳಲಾಗಿದೆ. ಟೈಲರಿಂಗ್, ಬೀಡಿ ಕಟ್ಟುವುದು, ಹೈನುಗಾರಿಕೆ, ರಸ್ತೆಬದಿ ವಹಿವಾಟು, ಸೊಪ್ಪು, ತರಕಾರಿ ವ್ಯಾಪಾರ, ಹೈನುಗಾರಿಕೆ, ಮನೆಪಾಠ, ತಳ್ಳುಗಾಡಿಯ ವ್ಯಾಪಾರ, ಇತ್ಯಾದಿಯಾಗಿ ಪ್ರತಿ ವಹಿವಾಟಿನ ಸಮಗ್ರ ವರದಿಯನ್ನು ಭೇಟಿ ನೀಡಲಿರುವ ಗಣತಿದಾರರಿಗೆ ಸ್ಥಳೀಯರು ಸಂಪೂರ್ಣ ಸಹಕಾರ ನೀಡಬೇಕೆಂದು ಅವರು ಕೋರಿದರು.

ಸಿಎಎ-ಎನ್‍ಆರ್‌ಸಿಗೆ ಸಂಬಂಧವಿಲ್ಲ: ‌ಆರ್ಥಿಕ ಗಣತಿಗೂ ಮತ್ತು ಸಿಎಎ-ಎನ್‍ಆರ್‌ಸಿಗೂ ಯಾವುದೇ ಸಂಬಂಧವಿಲ್ಲ. ಆರ್ಥಿಕ ಗಣತಿ ಕಾರ್ಯವನ್ನು ಇ-ಆಡಳಿತ ಇಲಾಖೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ನಿರ್ವಹಿಸಲಾಗುತ್ತಿದೆ. ಗಣತಿದಾರರು ಮಾಹಿತಿ ಸಂಗ್ರಹಿಸಲು ಬಂದಾಗ ಸಾರ್ವಜನಿಕರು, ಉದ್ದಿಮೆದಾರರು ಅಗತ್ಯ ಮತ್ತು ನಿಖರ ಮಾಹಿತಿ ನೀಡಿ ಸಹಕರಿಸಬೇಕು. ದೇಶದ ಆರ್ಥಿಕ ವ್ಯವಸ್ಥೆಗೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ನಡೆಯುತ್ತಿರುವ ಆರ್ಥಿಕ ಗಣತಿಗೂ ಸಿಎಎ-ಎನ್‍ಆರ್‌ಸಿಗೂ ಯಾವುದೇ ಸಂಬಂಧವಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ, ಸಹಾಯಕ ಆಯುಕ್ತ ಶಂಕರಗೌಡ ಎಸ್.ಸೋಮನಾಳ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕಚೇರಿಯ ಸಹಾಯಕ ನಿರ್ದೇಶಕ ನಾಗರಾಜ ಅ.ನಾಗೂರು, ಸಹಾಯಕ ಸಾಂಖ್ಯಿಕ ಅಧಿಕಾರಿ ಚನ್ನಯ್ಯ ಬಿ.ಮೇಲಿನಮಠ, ಗಣತಿದಾರ ವೆಂಕಟೇಶ, ದೇವಪ್ಪ, ಮಂಜುನಾಥ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT