ಶನಿವಾರ, ಜೂನ್ 25, 2022
24 °C
ಜಿಲ್ಲೆಯಾದ್ಯಂತ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರ ಪ್ರತಿಭಟನೆ

ಬೇಗನೆ ಕೋವಿಡ್‌ ಲಸಿಕೆ ನೀಡಿ ಅಭಿಯಾನ: ಅಧಿಕಾರಿಗಳಿಗೆ ಮನವಿ ಸಲ್ಲಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ‘ರಾಜ್ಯದ ಜನತೆಗೆ ಬೇಗನೆ ಲಸಿಕೆ ನೀಡಿ; ಇಲ್ಲ ಅಧಿಕಾರ ಬಿಡಿ’ ಎನ್ನುವ ಅಭಿಯಾನವನ್ನು ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎನ್. ಭೀಮುನಾಯಕ ನೇತೃತ್ವದಲ್ಲಿ ಗುರುವಾರ ಜಿಲ್ಲೆಯಾದ್ಯಂತ ನಡೆಸಲಾಯಿತು.
‌ ನಿಗದಿತ ಸಮಯದೊಳಗೆ ಕೋವಿಡ್ ಲಸಿಕೆ ನೀಡುವಂತೆ ಒತ್ತಾಯಿಸಿ ಒಂದೇ ದಿನ, ಒಂದೇ ಸಮಯದಲ್ಲಿ ನಗರದಲ್ಲಿ 9 ಕಡೆ ಮತ್ತು ಜಿಲ್ಲೆಯಾದ್ಯಂತ ಹಲವಾರು ಕಡೆ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಮೇ 1ರಿಂದ 18 ವರ್ಷ ಮೇಲ್ಪಟ್ಟ ನಾಗರಿಕರಿಗೆ ಕೋವಿಡ್ ಲಸಿಕೆ ನೀಡುವುದಾಗಿ ಸರ್ಕಾರ ಘೋಷಣೆ ಮಾಡಲಾಗಿತ್ತು. ಆದರೆ, ಸಮರ್ಪಕವಾಗಿ ಲಸಿಕೆ ಪೂರೈಕೆ ಮಾಡದೇ ಸರ್ಕಾರ ವಿಫಲವಾಗಿದೆ. ಅದೇ ರೀತಿ ಪ್ರಧಾನಮಂತ್ರಿ ಜೂ.7 ರಂದು ದೇಶದ ಜನರನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ದೇಶದ ಎಲ್ಲ ನಾಗರಿಕರಿಗೂ ಉಚಿತ ಲಸಿಕೆ‌ ಕೊಡುವುದಾಗಿ ಘೋಷಿಸಿದ್ದಾರೆ. ಇದು ಸ್ವಾಗತಾರ್ಹ ಬೆಳವಣಿಗೆ. ಆದರೆ, ಈ ಹಿಂದಿನ ಘೋಷಣೆಯಂತೆ ಇದು ವಿಫಲವಾಗದೇ ತ್ವರಿತಗತಿಯಲ್ಲಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಕೋವಿಡ್ ಲಸಿಕೆ ಪೂರೈಕೆಯಾಗಬೇಕು ಎಂದು ಆಗ್ರಹಿಸಿದರು.

ಖಾಸಗಿ ಆಸ್ಪತ್ರೆಗಳಲ್ಲಿ ಶೇ 25 ರಷ್ಟು ಲಸಿಕೆ ಕೊಡುವ ಕಾರ್ಯಕ್ರಮ ಮುಂದುವರೆದರೆ ಮತ್ತೆ ಕಾಳಸಂತೆ ವ್ಯವಹಾರಗಳು, ದುಬಾರಿ ಬೆಲೆಯ ಹೊರೆ, ಅನಾರೋಗ್ಯಕರ ಸ್ಪರ್ಧೆ ಏರ್ಪಡುವುದರಿಂದ, ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರವೇ ಲಸಿಕೆ ಹಣ ಪಾವತಿಸಿ ಅಲ್ಲೂ ಉಚಿತವಾಗಿಯೇ ಸಾರ್ವಜನಿಕರಿಗೆ ಲಸಿಕೆ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿ ಚುನಾವಣೆಗಳ ಸಂದರ್ಭದಲ್ಲಿ ಸ್ಥಾಪಿಸಲಾಗುವ ಮತದಾನದ ಬೂತ್‌ಗಳ‌ ಮಾದರಿಯಲ್ಲೇ ಜನರಿಗೆ ಹತ್ತಿರದಲ್ಲೇ ಲಸಿಕೆ ಬೂತ್‌ ಸ್ಥಾಪಿಸಬೇಕು. ಪ್ರತಿಯೊಬ್ಬನಿಗೂ ಲಸಿಕೆ‌ ಸಿಗುವಂತೆ ನೋಡಿಕೊಳ್ಳಬೇಕು. ಲಸಿಕೆ ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಬಳಿಗೆ ಹೋಗುವಂತಾಗಬೇಕು.  ಮನೆ-ಮನೆಗೆ ತೆರಳಿ ಲಸಿಕೆ ನೀಡುವಂತಾಗಬೇಕು.

ಜಿಲ್ಲೆಯಲ್ಲಿ ಈಗಾಗಲೇ ಲಸಿಕೆ ಮಂದಗತಿಯಲ್ಲಿ ಸಾಗುತ್ತಿದ್ದು, ನಿರಂತರವಾಗಿ ಪ್ರತಿ ದಿನ ಮೊದಲನೇ ಡೋಸ್ ಹತ್ತು ಸಾವಿರಕ್ಕೂ ಹೆಚ್ಚು ಕೊಡುವಂತಾಗಬೇಕು. ಇದೇ ರೀತಿ 2ನೇ ಡೋಸ್ ಪ್ರತಿ ದಿನ ಐದು ಸಾವಿರಕ್ಕೂ ಹೆಚ್ಚು ನೀಡುವಂತಾಗಬೇಕು. ಜಿಲ್ಲೆಯಲ್ಲಿ ಲಸಿಕೆಯ ಕೊರತೆ ಆಗದಂತೆ ಜಿಲ್ಲೆಯ ಜವಾಬ್ದಾರಿಯುತ ಜನಪ್ರತಿನಿಧಿಗಳು, ಜಿಲ್ಲಾಡಳಿತ ಜಿಲ್ಲೆಯ ಬಗ್ಗೆ ಕಾಳಜಿ ವಹಿಸಿ ಕೋವಿಡ್ ಮುಕ್ತ ಜಿಲ್ಲೆಯನ್ನಾಗಿಸಲು ಶ್ರಮಿಸಬೇಕು ಎಂದು ಆಗ್ರಹಿಸಿದರು.

ಈ ವೇಳೆ ಮಲ್ಲು ಮಾಳಿಕೇರಿ, ಸಿದ್ದುನಾಯಕ ಹತ್ತಿಕುಣಿ, ಅಂಬರೇಶ ಹತ್ತಿಮನಿ, ವಿಶ್ವರಾಧ್ಯ ದಿಮ್ಮೆ, ಸಾಹೇಬಗೌಡ, ಕಾಶಿನಾಥ ನಾನೇಕ, ಸಿದ್ದಪ್ಪ ಕ್ಯಾಸಪನಳ್ಳಿ, ಸಿದ್ದಪ್ಪ ಕೊಯಿಲೂರ, ದೀಪಕ್ ಒಡೆಯರ್, ಬಸುನಾಯಕ ಭಾಗವಹಿಸಿದ್ದರು.

‘ಎಲ್ಲ ಅರ್ಹರಿಗೂ ಲಸಿಕೆ ಸಿಗಲಿ’

ಹುಣಸಗಿ: ಜೂನ್ ಅಂತ್ಯದ ಒಳಗಾಗಿ ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸೂಕ್ತ ಕ್ರಮ ಜರುಗಿಸುವಂತೆ ಕರವೇ ತಾಲ್ಲೂಕು ಅಧ್ಯಕ್ಷ ಶಿವಲಿಂಗ ಪಟ್ಟಣಶೆಟ್ಟಿ ಹೇಳಿದರು.

ಹುಣಸಗಿ ಪಟ್ಟಣದಲ್ಲಿ ಕೋವಿಡ್ ಲಸಿಕೆಯನ್ನು ನಿಗದಿತ ಕಾಲಮಿತಿಯೊಳಗೆ ನೀಡುವಂತೆ ಒತ್ತಾಯಿಸಿ ಕರವೇ ವತಿಯಿಂದ ಮನವಿ ಸಲ್ಲಿಸಿ ಮಾತನಾಡಿದರು.

ಕೋವಿಡ್ ನಿಯಂತ್ರಿಸುವಲ್ಲಿ ಸರ್ಕಾರ ಎಡವಿದ್ದು, ಅದನ್ನು ಉಚಿತ ಲಸಿಕೆ ನೀಡುವ ಮೂಲಕ ಸರಿಪಡಿಸಿ ಕೊಳ್ಳಬೇಕು ಎಂದು ಒತ್ತಾಯಿಸಿದರು.

 ಬಸವರಾಜ ಚನ್ನೂರ ಮಾತನಾಡಿದರು. ಕರವೇ ಪ್ರಮುಖ ಮೌನೇಶ ಚಿಂಚೊಳಿ, ಡಾ. ಬಸನಗೌಡ ವಜ್ಜಲ, ಮಲ್ಲು ಹೆಬ್ಬಾಳ, ಸಿದ್ದು ಮೈಲೇಶ್ವರ, ಬಸವರಾಜ ಕಾಮನಟಗಿ, ರಾಜು ಅವರಾದಿ, ನಿಂಗಣ್ಣ ಗುತ್ತೇದಾರ, ವೆಂಕಟೇಶ ದೊರಿ, ತಿರುಪತಿ, ಶೋಹಿಲ್ ಬಲಶೆಟ್ಟಿಹಾಳ ಸೇರಿದಂತೆ ಇತರರು ಇದ್ದರು.

ಸಕಾಲಕ್ಕೆ ಲಸಿಕೆ ನೀಡಲು ಆಗ್ರಹ

ಸೈದಾಪುರ: ’ಕೋವಿಡ್ ಲಸಿಕೆ ಪಡೆಯುವುದು ಪ್ರತಿಯೊಬ್ಬರ ಹಕ್ಕು. ಆದ್ದರಿಂದ ಎಲ್ಲರಿಗೂ ಬೇಗ ಲಸಿಕೆ ನೀಡಬೇಕು. ಇಲ್ಲವಾದರೆ, ಅಧಿಕಾರ ಬಿಡಬೇಕು‘ ಎಂದು ಕರವೇ ತಾಲ್ಲೂಕು ಸಂಘಟನಾ ಕಾರ್ಯದರ್ಶಿ ಬಸವರಾಜ ನಾಯಕ ಸರ್ಕಾರಕ್ಕೆ ಆಗ್ರಹಿಸಿದರು.

ಪಟ್ಟಣದ ಗ್ರಾಮ ಪಂಚಾಯಿತಿ, ನಾಡ ಕಚೇರಿ ಹಾಗೂ ಪ್ರಮುಖ ವೃತ್ತಗಳಲ್ಲಿ ಕರವೇ ಕಾರ್ಯಕರ್ತರು ಪ್ರತಿಭಟನೆ ಕೈಗೊಂಡರು.

ಜೂನ್ ಹಾಗೂ ಸೆಪ್ಟೆಂಬರ್‌ ಅಂತ್ಯ ದೊಳಗೆ ಪ್ರತಿಯೊಬ್ಬರಿಗೂ ಮೊದಲನೇ ಹಾಗೂ ಎರಡನೇ ಡೋಸ್ ಲಸಿಕೆಯನ್ನು ನೀಡುವ ಕಾರ್ಯ ಸಂಪೂರ್ಣವಾಗಿ ಮುಕ್ತಾಯ ವಾಗಬೇಕು. ಕೊರೊನಾ 3ನೇ ಅಲೆ ಯಿಂದ ಜನಸಾಮಾನ್ಯರನ್ನು ರಕ್ಷಿಸಿಸುವ ಕೆಲಸ ಬಹಳ ವೇಗವಾಗಿ ಸರ್ಕಾರ ಮಾಡಬೇಕು ಎಂದು ಆಗ್ರಹಿಸಿದರು.

ಆಸ್ಪತ್ರೆಗಳಲ್ಲಿ, ಲಸಿಕಾ ಕೇಂದ್ರಗಳಲ್ಲಿ ಲಸಿಕೆಗಾಗಿ ಜನಸಾಮಾನ್ಯರು ಕಾಯುವಂತಾಗಬಾರದು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಲಸಿಕೆಯ ಸುರಕ್ಷತೆ ಸಿಗಬೇಕು. ದೇಶದ ಜನರಿಗೆ ಸಾರ್ವತ್ರಿಕವಾಗಿ ಬೇಗ ಲಸಿಕೆಯನ್ನು ನೀಡಿ ನಾಡ ಜನರ ಪ್ರಾಣ ಕಾಪಾಡಿ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಹಕ್ಕೊತ್ತಾಯವಾಗಿದೆ ಎಂದರು.

ಕರವೇ ತಾಲ್ಲೂಕು ಉಪಾಧ್ಯಕ್ಷ ವೆಂಕಟರಾಮುಲು, ನರೇಂದ್ರ ಸೈದಾಪುರ, ಸಂತೋಷ ಕೂಡಲೂರು ಸೇರಿದಂತೆ ಇತರರಿದ್ದರು.

ಮಾಧ್ವಾರ ಗ್ರಾಮದಲ್ಲಿ ಪ್ರತಿಭಟನೆ: ಸಮೀಪದ ಮಾಧ್ವಾರ ಗ್ರಾಮದಲ್ಲಿ ನಡೆದ ಪ್ರತಿಭಟನೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಮಾಧ್ವಾರ ಗ್ರಾಮ ಘಟಕದ ಅಧ್ಯಕ್ಷ ಮೌನೇಶ ಮಾತನಾಡಿ, ಸರ್ಕಾರ  ಕೋವಿಡ್ ಲಸಿಕೆಯನ್ನು ಬೇಗ ನೀಡದೆ ಜನರ ಜೀವದ ಜೊತೆ ಆಟವಾಡುತ್ತಿದೆ. ಸರ್ಕಾರ ತಮ್ಮ ಜವಾಬ್ದಾರಿಯನ್ನು ಮರೆತು, ಲಸಿಕೆ ವಿತರಣೆಯಲ್ಲಿ ಹಣ ಗಳಿಸುವ ದಂದೆಯನ್ನು ಮಾಡುತ್ತಿದೆ. ಎಂದರು.

ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಆದೇಶಯ್ಯ ಸ್ವಾಮಿ, ದೇವಿಸಿಂಗ್ ಠಾಕೂರ್, ಅವಿನಾಶ್ ಕಲಾಲ್, ಅಶೋಕ ಬ್ಯಾಗಾರ್, ಜಾನು ಕಲಾಲ್ ಸೇರಿದಂತೆ ಇತರರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು