ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದ  ಗುಗಲಗಟ್ಟಿ ಶಾಲೆ

ವಸತಿ ಶಾಲೆ ಪ್ರವೇಶ ಪರೀಕ್ಷೆಗಳಿಗೆ ವಿಶೇಷ ತರಬೇತಿ
Last Updated 26 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಕಕ್ಕೇರಾ: ಸಮೀಪದ ಗುಗಲಗಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯು ಶಿಕ್ಷಕರ ಕಾರ್ಯವೈಖರಿ, ಶೈಕ್ಷಣಿಕ ಚಟುವಟಿಕೆಗಳಿಂದಾಗಿ ಗಮನ ಸೆಳೆಯುತ್ತಿದೆ. ಖಾಸಗಿ ಶಾಲೆಗಳಿಗೆ ಯಾವುದರಲ್ಲೂ ಕಡಿಮೆ ಇಲ್ಲ ಎಂದು ಸಾರ್ವಜನಿಕರು ಮತ್ತು ಪಾಲಕರ ಪ್ರಶಂಸೆಗೆ ಪಾತ್ರವಾಗಿದೆ.

ಮಕ್ಕಳನ್ನು ಸ್ಪರ್ಧಾತ್ಮಕ ಜಗತ್ತಿಗೆ ಅಣಿಗೊಳಿಸಲು ಇಲ್ಲಿನ ಶಿಕ್ಷಕರು ವಿಶೇಷ ಪ್ರಯತ್ನ ನಡೆಸುತ್ತಿದ್ದಾರೆ. ಇದರ ಫಲವಾಗಿ ಈ ಶಾಲೆಯ ವಿದ್ಯಾರ್ಥಿಗಳು ನವೋದಯ, ಮೊರಾರ್ಜಿ, ಕಿತ್ತೂರು ಚನ್ನಮ್ಮ ಶಾಲೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆ ಆಗಿದ್ದಾರೆ. ಶಿಕ್ಷಕರ ಜಾಣತನಕ್ಕೆ ಪೋಷಕರು, ಗ್ರಾಮಸ್ಥರು ಹಾಗೂ ತಾಲ್ಲೂಕು ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

‘ಶಾಲೆ ಬೆಳಿಗ್ಗೆ 8.30ಕ್ಕೆ ಹೋಗಿ ನವೋದಯ, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗೆ ಸಿದ್ಧತೆ ನಡೆಸುತ್ತೇವೆ ಪ್ರತಿನಿತ್ಯ ಗುಂಪು ಚರ್ಚೆ ಮಾಡುತ್ತೇವೆ’ ಎನ್ನುತ್ತಾನೆ ಐದನೇ ತರಗತಿಯ ವಿದ್ಯಾರ್ಥಿ ರಮೇಶ.

‘ವಿದ್ಯಾರ್ಥಿಗಳು ತಂಬಾ ಜಾಣರಿದ್ದಾರೆ. ಬೆಳಿಗ್ಗೆ 8.30ಕ್ಕೆ ವಿದ್ಯಾರ್ಥಿಗಳು ಆಗಮಿಸಿ, ಗುಂಪು ಚರ್ಚೆ ಮಾಡುತ್ತಾರೆ. ಅವರೆಲ್ಲ ನಮ್ಮ ಶಿಷ್ಯರು ಎಂಬುದು ನನಗೆ ಹೆಮ್ಮೆ ಎನ್ನಿಸುತ್ತದೆ. ಈ ಸಲ ಮೊರಾರ್ಜಿ ಹಾಗೂ ಚನ್ನಮ್ಮ ಶಾಲೆಗಳಿಗೆ ನಮ್ಮ ಶಾಲೆಯಲ್ಲಿ 5ನೇ ತರಗತಿಯ 27 ವಿದ್ಯಾರ್ಥಿಗಳಲ್ಲಿ 15 ರಿಂದ 20 ಮಕ್ಕಳು ಆಯ್ಕೆಯಾಗುವ ನಿರೀಕ್ಷೆ ಇದೆ’ ಎಂದು ಶಿಕ್ಷಕ ಗಿರೀಶ ಆಸಂಗಿ ಹೇಳುವಾಗ ಮಕ್ಕಳ ಮೇಲಿನ ಪ್ರೀತಿ ಹಾಗೂ ನಂಬಿಕೆ ಎದ್ದು ಕಾಣುತ್ತಿತ್ತು.

ಖಾಸಗಿ ಶಾಲೆಗಳಿಂತ ನಾವೇನು ಕಮ್ಮಿ ಎಂಬಂತೆ ಇಲ್ಲಿ ಮಕ್ಕಳಿಗೆ ಸುಸಜ್ಞಿತ ಕಟ್ಟಡ, ಪ್ರತ್ಯೇಕ ಶೌಚಾಲಯ, ಕ್ರೀಡಾಕೂಟ, ಅಕ್ಷರ ದಾಸೋಹ, ಉಚಿತ ಸಮವಸ್ತ್ರ, ಪ್ರತಿಭಾ ಕಾರಂಜಿ, ಉಚಿತ ಪಠ್ಯಪುಸ್ತಕ, ಶೈಕ್ಷಣಿಕ ಪ್ರವಾಸ, ನಲಿ–ಕಲಿ ಪದ್ಧತಿ, ಉಚಿತ ಸ್ಕೂಲ್ ಬ್ಯಾಗ್, ಉಚಿತ ಶೂ, ಸಾಕ್ಸ್, ಕ್ಷೀರಭಾಗ್ಯ, ಆರೋಗ್ಯ ತಪಾಸಣೆ, ವಿದ್ಯಾರ್ಥಿ ವೇತನ, ಕಲಿಕಾ ಕೇಂದ್ರ ಹೀಗೆ ಎಲ್ಲವೂ ಲಭ್ಯ. ನಮ್ಮ ಶಿಕ್ಷಕರು ಉತ್ತಮವಾಗಿ ಆಟ–ಪಾಠ ಕಲಿಸುತ್ತಾರೆ ಎಂದು ಸ್ಥಳೀಯರಾದ ಬಸವರಾಜ ಅಂಬಿಗೇರ ಹೇಳುತ್ತಾರೆ.

ಶಾಲೆಗೆ ಸುತ್ತಲೂ ಕಂಪೌಂಡ್‌ ವ್ಯವಸ್ಥೆ ಮಾಡಿದರೆ ಮಾದರಿ ಶಾಲೆ ಆಗುತ್ತದೆ ಎಂದು ಸ್ಥಳೀಯರಾದ ಸೋಮನಾಥ ಹುಡೇದ ಹೇಳುತ್ತಾರೆ.

ಶಾಲೆಗಳಲ್ಲಿ ಸಾಂಸ್ಕೃತಿಕ ಚಟುವಟಿಕೆಗಳನ್ನೂ ನಡೆಸುತ್ತಾರೆ. ಶಾಲಗೆ ವಿದ್ಯಾರ್ಥಿಗಳನ್ನು ಸೆಳೆಯುವ ಶಿಕ್ಷಕರ ಜಾಣತನಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT