ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜ್ಞಾವಂತರಾಗದ ಹೊರತು ಏಳಿಗೆ ಅಸಾಧ್ಯ

ಚರ್ಚಾಗೋಷ್ಠಿಯಲ್ಲಿ ಹಿರಿಯ ಸಾಹಿತಿ ಡಾ.ಬಸವರಾಜ ಸಬರದ ಕರೆ
Last Updated 25 ಡಿಸೆಂಬರ್ 2018, 17:03 IST
ಅಕ್ಷರ ಗಾತ್ರ

ಯಾದಗಿರಿ: ಬೆಂಗಳೂರು ಮತ್ತು ಮೈಸೂರು ನಗರಗಳಿಗೆ 150 ಕಿಲೋ ಮೀಟರ್‌ ದೂರದದಿಂದ ಕುಡಿಯುವ ನೀರು ತರಲು ಸಾಧ್ಯವಿದೆ. ಆದರೆ, ಕೇವಲ 20 ಕಿಲೋ ಮೀಟರ್ ದೂರದ ಕೃಷ್ಣೆ–ಭೀಮಾ ಒಡಲಿಂದ ನೀರು ತರಲು ಸಾಧ್ಯವಾಗಿಲ್ಲ. ಈಗಲೂ ಹಳ್ಳಿಗಳು ಬಾಯಾರಿಕೆಯಿಂದ ಬಳಲುತ್ತಿವೆ. ಅಲ್ಲಿನ ರಾಜಕಾರಣಿಗಳಿಗೆ ಇರುವ ಬದ್ಧತೆ ಇಲ್ಲಿನವರಿಗೆ ಏಕಿಲ್ಲ? ಇಂಥಾ ಸವಾಲುಗಳನ್ನು ಜನರು ಪ್ರಶ್ನಿಸಬೇಕು’ ಎಂದು ಹಿರಿಯ ಸಾಹಿತಿ ಡಾ.ಬಸವರಾಜ ಸಬರದ ಕರೆ ನೀಡಿದರು.

ಇಲ್ಲಿನ ಹಿಂದಿ ಪ್ರಚಾರ ಸಭಾ ಆವರಣದಲ್ಲಿ ಜಿಲ್ಲಾ ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಹೈದರಾಬಾದ್‌ ಕರ್ನಾಟಕ ಕನ್ನಡ ಬೆಳವಣಿಗೆ’ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ನಿಜಾಮರ –ಅರಸೊತ್ತಿಗೆ ಕಾಲದಲ್ಲಿ ಮೈಸೂರು ಅರಸು ಆಭರಣ ಅಡವಿಟ್ಟು ಕೆರೆ–ಕಟ್ಟೆ, ಜಲಾಶಯ ನಿರ್ಮಿಸಿದರೆ, ಹೈದರಾಬಾದ್ ಕರ್ನಾಟದಲ್ಲಿ ನಿಜಾಮರು ಜನರನ್ನು ಸದೆ ಬಡಿದು ರಕ್ತ ಹೀರುತ್ತಿದ್ದರು. ಅಲ್ಲಿನ ಜನರು ಶೈಕ್ಷಣಿಕವಾಗಿ ಮುಂದುವರೆಯಲು ಅರಸು ಶಾಲೆಗಳನ್ನು ತೆರೆದರೆ, ಇಲ್ಲಿನ ಮಕ್ಕಳು ಸಬಲರಿಗೆ ಗಲಾಮರಾಗಬೇಕಾಯಿತು. ಈ ಸ್ಥಿತಿ ಈಗಲೂ ಅಸ್ತಿತ್ವದಲ್ಲಿ ಇದೆ. ಇದಕ್ಕೆ ಸರ್ಕಾರದ ತಾರತಮ್ಯ ನೀತಿ ಮತ್ತು ಇಲ್ಲಿನ ಜನರ ಅಜ್ಞಾನ ಕಾರಣವಾಗಿದೆ’ ಎಂದರು.

‘ಕನ್ನಡ ಸಂಸ್ಕೃತಿ ಮತ್ತು ಸಾಂಸ್ಕೃತಿಕ ಚರಿತ್ರೆಯನ್ನು ಮೈಸೂರು–ಬೆಂಗಳೂರಿನವರು ತಿರುಚಿದ್ದಾರೆ. ಕನ್ನಡದ ಮೊಟ್ಟಮೊದಲ ವಚನಕಾರ ಮುದನೂರಿನ ಜೇಡರ ದಾಸಿಮಯ್ಯ ಹಾಗೂ ಆಧುನಿಕ ವಚನಕಾರ ದೇವದುರ್ಗದ ಆದಿ ಅಮಾತೆಪ್ಪ. ಆದರೆ, ಅಲ್ಲಿನ ವಿಶ್ವವಿದ್ಯಾಲಯಗಳು ಹೊರತಂದಿರುವ ಸಂಪುಟ ಚರಿತ್ರೆಗಳಲ್ಲಿ ಇವರ ಪ್ರಸ್ತಾಪವೇ ಇಲ್ಲ. ಬೃಹತ್‌ ಮಂಟೇಸ್ವಾಮಿ ಕಾವ್ಯ ರಾಜ್ಯದ ಮೂಲೆ–ಮೂಲೆಗಳಲ್ಲೂ ಖ್ಯಾತಿಗಳಿಸುತ್ತಿದೆ. ಆದರೆ, ಮಂಟೇಸ್ವಾಮಿಗೆ ಗುರುವಾಗಿದ್ದ ಕೊಡೇಕಲ್‌ ಬಸವಣ್ಣನನ್ನು ಈಗಲೂ ಅಜ್ಞಾತವಾಗಿಸಿದ್ದೇವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗಡಿ ಭಾಗದಲ್ಲಿ ಕನ್ನಡದ ಸ್ಥಿತಿ ಗತಿ ಕುರಿತು ಪ್ರಭಾಕರ ಜೋಷಿ ಮಾತನಾಡಿ,‘ಗಡಿಭಾಗದಲ್ಲಿ ಸಮಸ್ಯೆಗಳು ನೆರಳಿನಂತೆ ಕಾಡುತ್ತಿವೆ. ಮರಾಠಿ, ತೆಲುಗು, ತಮಿಳು, ಮಲಿಯಾಳಂ ಭಾಷೆಯ ನಡುವೆ ಕನ್ನಡ ಉಳಿಸಿಕೊಳ್ಳಲು ಹೋರಾಟ ನಡೆಸಬೇಕಾಗಿದೆ. ಕನ್ನಡ ಭಾಷೆ ಅಭಿಮಾನ ಭಾಷೆಯಾದರೆ ಸಾಲದು ಅನುಷ್ಠಾನ ಭಾಷೆಯಾಗಬೇಕು. ಭಾಷೆ ನಡುವೆ ವೈಮನಸ್ಸು ಹುಟ್ಟಬಾರದು. ಪರಸ್ಪರ ಸೌಹಾರ್ದವಾಗಿ ಬೆಳೆಸಬೇಕು’ ಎಂದರು.

ಹೈದರಾಬಾದ್‌ ಕರ್ನಾಟಕ ಕನ್ನಡ ಕಟ್ಟಿದವರು ಕುರಿತು ನಿವೃತ್ತ ಪ್ರಾಚಾರ್ಯ ಡಾ.ಸ್ವಾಮಿರಾವ ಕುಲಕರ್ಣಿ ಮಾತನಾಡಿ,‘ಕನ್ನಡದ ಉಳಿವಿಗೆ ಸುರಪುರ ಸಂಸ್ಥಾನದ ಕೊಡುಗೆ ಅಪಾರವಿದೆ. ಬ್ರಿಟಿಷ್ ಹಾಗೂ ನಿಜಾಮರ ಆಳ್ವಿಕೆಯ ಸಂದಿಗ್ದ ಸ್ಥಿತಿಯಲ್ಲಿ ಕನ್ನಡವನ್ನು ಉಳಿಸಿ ಬೆಳೆಸಿರುವುದು ಗಮನಾರ್ಹವಾಗಿದೆ. ಪತ್ರಿಕೆಯ ಮಹತ್ವ ಹೆಚ್ಚಾಗಿದೆ. 1930ರಲ್ಲಿ ರಂಗಂಪೇಟೆಯಲ್ಲಿ ಕನ್ನಡ ಸಾಹಿತ್ಯ ಸಂಘ ಸ್ಥಾಪನೆ ಮಾಡಿದ್ದರು. ಅದರಲ್ಲಿ ದಿವಂಗತ ಬುದಿವಂತಶೆಟ್ಟಿ ಅವರ ಕೊಡುಗೆ ಅಪಾರವಾಗಿದೆ. 1948ರಲ್ಲಿ ಯಾದಗಿರಿಯಿಂದ ಸ್ವರಾಜ್ ಪತ್ರಿಕೆಯನ್ನು ದತ್ತಾತ್ರೆಯ ಅವರಾದಿ ಸಂಪಾದಕತ್ವದಲ್ಲಿ ಆರಂಭವಾಗಿತ್ತು. ನಿಜಾಮ ಅರಸು ಇದನ್ನು ಮುಟ್ಟುಗೋಲು ಹಾಕಿಕೊಂಡಿತು. ಪತ್ರಕರ್ತರೊಬ್ಬರು ಜೈಲು ಸೇರಬೇಕಾಯಿತು’ ಎಂದರು.

ಶಾಂತಪ್ಪ ಬೂದಿಹಾಳ, ಗವಿಸಿದ್ದಪ್ಪ ಕಕ್ಕೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT