ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಸರ್ಕಾರ ಬದ್ಧ: ಸಚಿವ ಬಿ.ಶ್ರೀರಾಮುಲು

ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ: ಸಚಿವರಿಂದ ರಾಷ್ಟ್ರ ಧ್ವಜಾರೋಹಣ
Last Updated 17 ಸೆಪ್ಟೆಂಬರ್ 2019, 14:32 IST
ಅಕ್ಷರ ಗಾತ್ರ

ಯಾದಗಿರಿ: ‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಐತಿಹಾಸಿಕ ನಿರ್ಧಾರ ತೆಗೆದುಕೊಂಡು ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ಬದಲಾಗಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಆರಂಭಿಸಿದ್ದಾರೆ. ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದರು.

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ನಗರಸಭೆ, ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಸಮಿತಿ ಹಾಗೂ ಭಾವೈಕ್ಯತಾ ಸಮಿತಿ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

‘ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ನೆರೆ ಹಾವಳಿಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿ ಅಪಾರ ಹಾನಿ ಸಂಭವಿಸಿದೆ. ಮಹಾರಾಷ್ಟ್ರದಲ್ಲಿ ಅತಿವೃಷ್ಟಿ ಕಾರಣ ಜಿಲ್ಲೆಯ ಕೃಷ್ಣಾ ಮತ್ತು ಭೀಮಾ ನದಿಗಳಲ್ಲಿ ಪ್ರವಾಹ ಉಂಟಾಗಿ, ಹಲವು ಜನ ಆಸ್ತಿ-ಮನೆ, ಜಾನುವಾರುಗಳನ್ನು ಕಳೆದುಕೊಂಡಿದ್ದಾರೆ. ರೈತರು ಬೆಳೆ ನಷ್ಟ ಅನುಭವಿಸಿದ್ದಾರೆ. ಹಾನಿ ಸಮೀಕ್ಷೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಸೂಕ್ತ ಪರಿಹಾರಕ್ಕೆ ಮನವಿ ಮಾಡಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ತಮ್ಮೊಂದಿಗಿದ್ದು, ರೈತರು ಹಾಗೂ ಸಾರ್ವಜನಿಕರು ಯಾವುದೇ ಕಾರಣಕ್ಕೂ ಆತಂಕ ಪಡಬಾರದು’ ಎಂದು ಮನವಿ ಮಾಡಿದರು.

78,118 ರೈತರ ಖಾತೆಗೆ ಹಣ:

‘ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಭೂ ಸಾಗುವಳಿ ಮಾಡುವ ಜಿಲ್ಲೆಯ ಎಲ್ಲಾ ರೈತರಿಗೆ ವರ್ಷಕ್ಕೆ ₹6000 ಗಳನ್ನು ಒಟ್ಟು 3 ಸಮಾನ ಕಂತುಗಳಲ್ಲಿ ನೇರವಾಗಿ ರೈತರ ಖಾತೆಗೆ ಜಮಾ ಆಗುತ್ತದೆ. ಈ ಯೋಜನೆಯಡಿ ಈಗಾಗಲೇ ಜಿಲ್ಲೆಯ 1.23 ಲಕ್ಷ ರೈತರು ನೋಂದಾಯಿಸಿದ್ದು, ಮೊದಲನೇ ಕಂತಿನಲ್ಲಿ 78,118 ರೈತರ ಖಾತೆಗೆ ಹಣ ಜಮಾ ಆಗಿದೆ’ ಎಂದರು.

ಶಾಸಕ ವೆಂಕಟರಡ್ಡಿಗೌಡ ಮುದ್ನಾಳ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ ವಜ್ಜಲ್, ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್, ಜಿಲ್ಲಾ ಪಂಚಾಯಿತಿ ಸಿಇಒ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನವಣೆ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಗಿರಿಜಮ್ಮ ಸದಾಶಿವಪ್ಪಗೌಡ ರೊಟ್ನಡಗಿ, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ, ಸಹಾಯಕ ಆಯುಕ್ತ ಶಂಕರಗೌಡ ಎಸ್.ಸೋಮನಾಳ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

ವಿವಿಧ ಕಾರ್ಯಕ್ರಮಗಳಿಗೆ ಚಾಲನೆ:

ಕಾಲೇಜು ಮೈದಾನದಲ್ಲಿ ‘ಆಯುಷ್ಮಾನ್ ಭಾರತ ಪಾಕ್ಷಿಕ’ ಜಾಥಾಕ್ಕೆ ಸಚಿವ ಬಿ.ಶ್ರೀರಾಮುಲು ಚಾಲನೆ ನೀಡಿದರು. ನಂತರ ಯಾದಗಿರಿ ತಹಶೀಲ್ದಾರ್ ಕಚೇರಿಯಲ್ಲಿ ಕರ್ನಾಟಕ ಒನ್ ಸೆಂಟರ್, ಜಿಲ್ಲಾ ಆಸ್ಪತ್ರೆಯಲ್ಲಿ ಬ್ಲಡ್ ಬ್ಯಾಂಕ್ ಹಾಗೂ ಜಿಲ್ಲಾಧಿಕಾರಿ ಕಾರ್ಯಾಲಯದಲ್ಲಿ ಇ-ಆಫೀಸ್ ಉದ್ಘಾಟಿಸಿದರು.

ಆಸ್ಪತ್ರೆಗಳಲ್ಲಿ ಕೊರತೆ ಇರುವ ವೈದ್ಯಕೀಯ ಉಪಕರಣ ಪೂರೈಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುವ ವೈದ್ಯರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು.

ಬಿ.ಶ್ರೀರಾಮುಲು,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT