ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಜನ ನಮ್ಮ ಧ್ವನಿ: ಹೆಸರಿಗೆ ಮಾತ್ರ ಸರ್ಕಾರಿ ಇಂಗ್ಲಿಷ್‌ ಮಾಧ್ಯಮ ಶಾಲೆ!

2019–20ರಲ್ಲಿ ಇಂಗ್ಲಿಷ್ ಮಾಧ್ಯಮ ಆರಂಭ, ನೇಮಕವಾಗದ ಶಿಕ್ಷಕರು, ಕೊಠಡಿಗಳ ಕೊರತೆ
Last Updated 3 ಜುಲೈ 2022, 16:08 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ 2019–20ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಸುಮಾರು 20 ಶಾಲೆಗಳಲ್ಲಿ ಸರ್ಕಾರಿ ಇಂಗ್ಲಿಷ್ ಮಾಧ್ಯಮ ಆರಂಭಿಸಿದ್ದರೂ ಪ್ರತ್ಯೇಕ ಶಿಕ್ಷಕರನ್ನು ನೇಮಿಸಿಲ್ಲ.

ಹಳ್ಳಿ, ನಗರ, ಪಟ್ಟಣಗಳ ಪೋಷಕರು ತಮ್ಮ ಮಗುವನ್ನು ಇಂಗ್ಲಿಷ್ ಮಾಧ್ಯಮ ಶಾಲೆಗೆ ಸೇರಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಾರೆ. ಇಂಥ ಪೋಷಕರ ಆರ್ಥಿಕ ಸ್ಥಿತಿಗತಿ ಅರಿತು ಸರ್ಕಾರವೇ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆ ಆರಂಭಿಸಿದೆ.

2019ರಲ್ಲಿ ಅಂದಿನ ರಾಜ್ಯ ಸರ್ಕಾರ ಬಡವರಿಗೂ ಇಂಗ್ಲಿಷ್ ಮಾಧ್ಯಮ ಶಿಕ್ಷಣ ಉಚಿತವಾಗಿ ದೊರಕಲಿ ಎಂಬ ಉದ್ದೇಶದಿಂದ ಆಯ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ಆರಂಭಿಸಿತು. ಮೊದಲಿಗೆ 20 ಶಾಲೆಗಳಲ್ಲಿ ಆರಂಭಿಸಲಾಯಿತು. ನಂತರ ಬೇಡಿಕೆಗೆ ತಕ್ಕಂತೆ ಆಯ್ದ ಶಾಲೆಗಳಲ್ಲಿ ತರಗತಿಗಳನ್ನು ಆರಂಭಿಸಲಾಗಿದೆ. ಕನಿಷ್ಠ 20 ಮತ್ತು ಗರಿಷ್ಠ 30 ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳಲಾಗುತ್ತಿದೆ. 30 ಮಕ್ಕಳನ್ನು ದಾಖಲಿಸಿಕೊಳ್ಳುವ ಅಧಿಕಾರ ಆಯಾ ಶಾಲೆಯ ಮುಖ್ಯ ಶಿಕ್ಷಕರ ಜವಾಬ್ದಾರಿಯಾಗಿದೆ.

ಇಂಗ್ಲಿಷ್ ಮಾಧ್ಯಮ ಶಾಲೆ ಆರಂಭಿಸುವ ಶಾಲೆಗಳ ಶಿಕ್ಷಕರಿಗೆ ಡಯಟ್ ವತಿಯಿಂದ ತರಬೇತಿ ನೀಡಲಾಗಿದೆ. ಇಂಗ್ಲಿಷ್ ಮಾಧ್ಯಮ ಶಾಲೆಗೆ ಒಂದು ಕೊಠಡಿ ನಿಗದಿಪಡಿಸಲಾಗಿದೆ. ಇದರಿಂದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಕೊಠಡಿ ಕೊರತೆ ಕಾಡುತ್ತಿದೆ.

ಯಾದಗಿರಿಯ ಅಂಬೇಡ್ಕರ್‌ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪದವಿ ಪೂರ್ವ ಕಾಲೇಜು ಆವರಣದಲ್ಲಿರುವ ಸರ್ಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆಗೆ ‘ಪ್ರಜಾವಾಣಿ’ ಪ್ರತಿನಿಧಿ ಭೇಟಿ ನೀಡಿದಾಗ ಕೊಠಡಿ, ಶಿಕ್ಷಕರ ಕೊರತೆ ಇರುವುದು ಕಂಡು ಬಂದಿತು.

ಅಂಬೇಡ್ಕರ್‌ ನಗರದ ಶಾಲೆಯಲ್ಲಿ 1ಮತ್ತು 2ನೇ ತರಗತಿಯನ್ನು ಒಂದೇ ಕೊಠಡಿಯಲ್ಲಿ ನಡೆಸಲಾಗುತ್ತಿದೆ. ಸರ್ಕಾರ ಏಕಾಏಕಿ ಇಂಗ್ಲಿಷ್ ಮಾಧ್ಯಮ ತರಗತಿಯನ್ನು ಘೋಷಣೆ ಮಾಡಿದ್ದರಿಂದ ಪ್ರತ್ಯೇಕ ಕೊಠಡಿ ಇಲ್ಲದೇ ವಿದ್ಯಾರ್ಥಿಗಳು, ಶಿಕ್ಷಕರು ಸಮಸ್ಯೆ ಅನುಭವಿಸುತ್ತಿದ್ದಾರೆ.

1ನೇ ತರಗತಿಯಲ್ಲಿ 17, 2ರಲ್ಲಿ 25, 3ರಲ್ಲಿ 16, 4ರಲ್ಲಿ 21 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಒಟ್ಟು 9 ಜನ ಶಿಕ್ಷಕರಿದ್ದು, ನಾಲ್ಕು ಜನರನ್ನು ಇಂಗ್ಲಿಷ್ ಮಾಧ್ಯಮಕ್ಕೆ ನೇಮಕ ಮಾಡಲಾಗಿದೆ. ಮೂವರು ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಇದೇ ಶಾಲೆಯ ಕನ್ನಡ ಮಾಧ್ಯಮದಲ್ಲಿ 121 ಮಕ್ಕಳು ಕಲಿಯುತ್ತಿದ್ದಾರೆ. ಇದರ ಜೊತೆಗೆ ಇಲ್ಲಿ ಬಾಲಕಿಯರ ಶೌಚಾಲಯ ಮಾತ್ರ ಇದ್ದು, ಬಾಲಕರಿಗೆ ಬಯಲೇ ಗತಿ ಎನ್ನುವಂತೆ ಆಗಿದೆ. ಜಿಲ್ಲಾ ಪಂಚಾಯಿತಿ ವತಿಯಿಂದ ಎರಡು ಕೊಠಡಿಗಳನ್ನು ಅರ್ಧಕ್ಕೆ ನಿರ್ಮಿಸಲಾಗಿದೆ. ಈಗ ಆ ಕೊಠಡಿಗಳು ಪಾಳು ಬಿದ್ದಿವೆ.

ಸರ್ಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆ 2021–22ನೇ ಸಾಲಿನಲ್ಲಿ ಆರಂಭವಾಗಿದ್ದು, ಇಬ್ಬರು ಶಿಕ್ಷಕರು ಇದ್ದಾರೆ. ಇಲ್ಲಿ ನಾಲ್ಕು ಕೋಣೆಗಳಲ್ಲಿ ವಿವಿಧ ಶಾಲೆಗಳಿಗೆ ಪೂರೈಸುವ ಪಠ್ಯ ಪುಸ್ತಕ ಇಟ್ಟಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ತಾತ್ಕಾಲಿಕವಾಗಿ ಕೊಠಡಿ ಕೊರತೆ ಆಗಿದೆ.

ಸರ್ಕಾರ ಇಂಗ್ಲಿಷ್ ಮಾಧ್ಯಮ ಶಾಲೆಯನ್ನು ಆರಂಭಿಸಿ ಜವಾಬ್ದಾರಿಯಿಂದ ಕೈ ತೊಳೆದುಕೊಂಡಿದೆ. ಆದರೆ, ಕಲಿಯುತ್ತಿರುವ ಮಕ್ಕಳು ಮಾತ್ರ ಸಮಸ್ಯೆ ಅನುಭವಿಸುತ್ತಿದ್ದಾರೆ. ಒಂದೇ ಕೊಠಡಿಯಲ್ಲಿ ಕುಳಿತು ಇಬ್ಬರು ಶಿಕ್ಷಕರು ಹೇಳುವ ಪಾಠಗಳನ್ನು ಕೇಳುವ ಅನಿವಾರ್ಯತೆ ಸೃಷ್ಟಿಯಾಗಿದೆ.

***

ಎಲ್ಲೆಲ್ಲಿ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳಿವೆ?

ಯಾದಗಿರಿ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆ, ಸ್ಟೇಷನ್‌ ಬಜಾರ್‌, ಉರ್ದು ಕೇಂದ್ರೀಯ ಶಾಲೆ, ತಾಲ್ಲೂಕಿನ ಬದ್ದೇಪಲ್ಲಿ, ಬಂದಳ್ಳಿ, ಹೊನಗೇರಾ, ಯರಗೋಳ, ರಾಮಸಮುದ್ರ, ಅರಕೇರಾ (ಕೆ), ಬಾಡಿಯಾಳ, ಕಡೇಚೂರು, ಗುರುಮಠಕಲ್ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ಯಾ ಶಾಲೆ, ತಾಲ್ಲೂಕಿನ ಗಾಜರಕೋಟ್, ಕಂದಕೂರ, ಚಂಡ್ರಕಿ, ಕೊಂಕಲ್‌, ಪುಟಪಾಕ, ಶಹಾಪುರ ತಾಲ್ಲೂಕಿನ ಶಿರವಾಳ, ಹೊಸಕೇರ, ಬಾಲಕರ ಶಾಲೆ ಸಗರ, ಗಾಂಧಿ ಚೌಕ್‌ ಶಹಾಪುರ ಶಾಲೆ, ಹುರಸಗುಂಡಗಿ, ರಸ್ತಾಪುರ, ಹೋತಪೇಟ, ಕವಸ್ತಾಪುರ, ವಡಗೇರಾ ತಾಲ್ಲೂಕಿನ ತಡಿಬಿಡಿ, ಸುರಪುರ ತಾಲ್ಲೂಕಿನ ಯಾಳಗಿ, ರಂಗಂಪೇಟೆ, ಕನ್ಯಾ ಎಂಪಿಎಸ್‌ ಶಾಲೆ ಸುರಪುರ, ಆಲ್ದಾಳ, ಹೇಮನೂರ, ತಿಮ್ಮಾಪುರ, ಕನ್ನೇಳ್ಳಿ, ಪರಸನಹಳ್ಳಿ, ವಾಗಣಗೇರಾ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆ ಆರಂಭಿಸಲಾಗಿದೆ.
*****
ಶಾಲೆಗಳಲ್ಲಿ ಶಿಕ್ಷಕರ ಕೊರತೆ

ಸುರಪುರ: ತಾಲ್ಲೂಕಿನ ಸರ್ಕಾರಿ ಕನ್ಯಾ ಮಾದರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಯಾಳಗಿ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ರಂಗಂಪೇಟೆ, ಆಲ್ದಾಳ, ಹೆಮನೂರ, ತಿಮ್ಮಾಪುರ, ಕನ್ನೆಳ್ಳಿಗಳಲ್ಲಿ ಆಂಗ್ಲ ಮಾಧ್ಯಮ ತರಗತಿಗಳು ನಡೆಯುತ್ತಿವೆ.

ಈಗ 4ನೇ ತರಗತಿವರೆಗೆ ಇಂಗ್ಲಿಷ್ ಮಾಧ್ಯಮ ಶಾಲೆ ಇದೆ. ಪ್ರತಿ ತರಗತಿಗೆ 30 ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಅವಕಾಶ ಇದೆ. ಪ್ರತ್ಯೇಕ ಕೊಠಡಿ, ಪ್ರತ್ಯೇಕ ಪ್ರವೇಶ ಅರ್ಜಿ, ಪ್ರವೇಶ ರಿಜಿಸ್ಟರ್ ನಿರ್ವಹಣೆ ಮಾಡಬೇಕು.

ಈ ಬಗ್ಗೆ ಪ್ರಚಾರದ ಕೊರತೆ ಇರುವುದರಿಂದ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ. ಇಂಗ್ಲಿಷ್ ಮಾಧ್ಯಮ ಓದಿದ ಶಿಕ್ಷಕರು ಇಲ್ಲ. ಕೊಠಡಿಗಳ ಕೊರತೆ ಇದೆ. ಕನ್ನಡದ ಶಿಕ್ಷಕರೇ ಈ ಮಕ್ಕಳಿಗೂ ಓದಿಸುತ್ತಾರೆ. ಕೆಲ ಶಾಲೆಗಳಲ್ಲಿ ಕನ್ನಡ ಮಾಧ್ಯಮ ಮಕ್ಕಳೊಂದಿಗೆ ಕೂಡಿಸಲಾಗುತ್ತಿದೆ.

‘ಪ್ರಜಾವಾಣಿ’ ನಗರದ ಸರ್ಕಾರಿ ಕನ್ಯಾ ಮಾದರಿಯ ಶಾಲೆಗೆ ರಿಯಾಲಿಟಿ ಚೆಕ್‌ಗೆ ಹೋದಾಗ 1ನೇ ತರಗತಿಯಲ್ಲಿ 28, 2ನೇ ತರಗತಿಯಲ್ಲಿ 25, 3ನೇ ತರಗತಿಯಲ್ಲಿ 26, 4ನೇ ತರಗತಿಯಲ್ಲಿ 24 ಮಕ್ಕಳು ಇದ್ದರು. ಪ್ರತ್ಯೇಕ ಇಂಗ್ಲಿಷ್ ಮಾಧ್ಯಮ ಎಂದು ಬಿಂಬಿಸುವ ಯಾವುದೇ ಚಟುವಟಿಕೆಗಳು ಇರಲಿಲ್ಲ.
****
ಗುಂಪಿನಲ್ಲಿ ಗೋವಿಂದ ಸ್ಥಿತಿಯಲ್ಲಿ ಮಕ್ಕಳು...!

ಶಹಾಪುರ: 2019ರಿಂದ ತಾಲ್ಲೂಕಿನ ಶಿರವಾಳ, ಹೊಸಕೇರಾ, ಸಗರ, ಗಾಂಧಿಚೌಕ್ ಶಾಲೆ ಶಹಾಪುರದಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಸರ್ಕಾರ ಆರಂಭಿಸಿದೆ. ವಿದ್ಯಾರ್ಥಿಗಳು ಮಾತ್ರ ಡೋಲಾಯಮಾನ ಸ್ಥಿತಿಯಲ್ಲಿ ಇದ್ದಾರೆ.

ಮೂರು ವರ್ಷದ ಹಿಂದೆ ಆರಂಭಗೊಂಡಿರುವ ಶಾಲೆಯಲ್ಲಿ ಪ್ರತಿ ವರ್ಷ 30 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ, ಮಕ್ಕಳಿಗೆ ಕಲಿಕೆಗೆ ಪೂರಕವಾದ ವಾತಾವರಣ ಇಲ್ಲವಾಗಿದೆ. ಶಿಕ್ಷಣ ಇಲಾಖೆಯ ಸಿಬ್ಬಂದಿಯೂ ಶಿಕ್ಷಕರಿಗೆ ತರಬೇತಿ ನೀಡಿ ಪಾಠ ಹೇಳಲು ಅನುಕೂಲ ಮಾಡಿಕೊಟ್ಟಿದ್ದಾರೆ ವಿನಃ ವಿಷಯವಾರು ಶಿಕ್ಷಕರು ಇಲ್ಲ. ಒಬ್ಬ ಶಿಕ್ಷಕರು ಮಾತ್ರ ಎಲ್ಲ ವಿಷಯಗಳನ್ನು ಮಕ್ಕಳಿಗೆ ಬೋಧಿಸಲು ಹೇಗೆ ಸಾಧ್ಯ? ನಮ್ಮ ಮಕ್ಕಳ ಸ್ಥಿತಿಯು ಗುಂಪಿನಲ್ಲಿ ಗೋವಿಂದ ಎನ್ನುವಂತೆ ಆಗಿದೆ ಎಂದು ಪಾಲಕರಿಂದ ಆರೋಪ ಕೇಳಿ ಬರುತ್ತಲಿದೆ.

ಈಗ ಒಂದರಿಂದ ಮೂರನೇಯ ತರಗತಿಗೆ ವಿದ್ಯಾರ್ಥಿಗಳು ಆಗಮಿಸಿದ್ದಾರೆ. ಕಳೆದ ವರ್ಷ 15 ದಿನಗಳ ಕಾಲ ಶಿಕ್ಷಕರಿಗೆ ತರಬೇತಿ ನೀಡಿದ್ದರು. ಪ್ರಸಕ್ತ ವರ್ಷ ಯಾವುದೇ ತರಬೇತಿಯನ್ನು ಸಹ ನೀಡಿಲ್ಲ. ಪ್ರತ್ಯೇಕವಾದ ಶಾಲೆ ಇಲ್ಲವೆ ಕೋಣೆಗಳನ್ನು ನಿರ್ಮಿಸಿ ಅಗತ್ಯ ಸೌಲಭ್ಯಗಳನ್ನು ನೀಡಬೇಕು. ಆದರೆ ಶಾಲೆಯಲ್ಲಿ ಶಾಲಾ ಕೋಣೆಯಿಂದ ಹಿಡಿದು ಶಿಕ್ಷಕರ ಕೊರತೆ ಇರುವಾಗ ಇನ್ನೂ ಆಂಗ್ಲ ಮಾಧ್ಯಮ ಮಕ್ಕಳಿಗೆ ವಿಶೇಷ ಗಮನ ಕೊಡಲು ಸಾಧ್ಯವಾಗುತ್ತಿಲ್ಲ. ಕನ್ನಡವೂ ಇಲ್ಲ ಇನ್ನೂ ಇಂಗ್ಲಿಷ್ ಸಹ ಕಲಿಯದ ಸ್ಥಿತಿ ನಿರ್ಮಾಣ ಆಗಬಾರದು. ಸರ್ಕಾರ ಎಚ್ಚೆತ್ತುಕೊಂಡು ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎನ್ನುತ್ತಾರೆ ಪಾಲಕರು.
***
ಯಾಳಗಿ: ಶಿಕ್ಷಕರ ಕೊರತೆ

ಕೆಂಭಾವಿ: ಸಮೀಪದ ಯಾಳಗಿ ಗ್ರಾಮದ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 4 ನೇ ತರಗತಿವರೆಗೆ ಇಂಗ್ಲಿಷ್ ಮಾಧ್ಯಮ ಶಾಲೆಯಿದ್ದು, ಒಟ್ಟು 96 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಾರೆ. 1 ನೇ ತರಗತಿಯಲ್ಲಿ 5, 2 ನೇ ತರಗತಿಯಲ್ಲಿ 16, 3ನೇ ತರಗತಿಯಲ್ಲಿ 29, 4ನೇ ತರಗತಿಯಲ್ಲಿ 46 ವಿದ್ಯಾರ್ಥಿಗಳಿದ್ದು, ಶಿಕ್ಷಕರ ಕೊರತೆ ಎದ್ದು ಕಾಣುತ್ತದೆ.

ಈ ಶಾಲೆಯಲ್ಲಿ ಕೇವಲ ಇಬ್ಬರು ಶಿಕ್ಷಕರಿದ್ದು, ಅವರೂ ಕನ್ನಡ ಮಾಧ್ಯಮ ಶಾಲೆಯ ಶಿಕ್ಷಕರಾಗಿದ್ದಾರೆ. ಶಾಲೆ ಪ್ರಾರಂಭವಾಗಿ ಒಂದೂವರೆ ತಿಂಗಳು ಕಳೆದಿದ್ದು, ಇನ್ನು ಪುಸ್ತಕಗಳನ್ನು ನೀಡಿಲ್ಲ. ಇದರಿಂದ ವಿದ್ಯಾರ್ಥಿ ಗಳ ಅಭ್ಯಾಸದ ಮೇಲೆ ಪರಿಣಾಮ ಬೀರಲಿದೆ ಎನ್ನುತ್ತಾರೆ ಪಾಲಕರು.

***

ಸರ್ಕಾರಿ ಇಂಗ್ಲಿಷ್ ಮಾಧ್ಯಮ ತರಗತಿಗಳಲ್ಲಿ ಶಿಕ್ಷಕರ ಕೊರತೆ ಇದೆ. ಕೊಠಡಿ ಕೊರತೆ ಇರುವ ಕಡೆ ಒಂದೇ ಕಡೆ ಕುಳ್ಳಿರಿಸಿ ಪಾಠ ಮಾಡಲಾಗುತ್ತಿದೆ. ಅತಿಥಿ ಶಿಕ್ಷರಕನ್ನು ನೇಮಿಸಿಕೊಳ್ಳಲಾಗಿದೆ
ಶಾಂತಗೌಡ ಪಾಟೀಲ, ಉಪನಿರ್ದೇಶಕ, ಸಾರ್ವಜನಿಕ ಶಿಕ್ಷಣ ಇಲಾಖೆ

***

ಕೊಠಡಿ ಕೊರತೆಯಿಂದ 1 ಮತ್ತು 2ನೇ ತರಗತಿ ಮಕ್ಕಳನ್ನು ಒಂದೇ ಕೊಠಡಿಯಲ್ಲಿ ಕೂಡಿಸಲಾಗಿದೆ. ನಾಲ್ಕು ತರಗತಿಗಳಲ್ಲಿ 79 ಮಕ್ಕಳಿದ್ದಾರೆ
ಸುಮತಿ ಪಾಪು, ಮುಖ್ಯಶಿಕ್ಷಕಿ, ಅಂಬೇಡ್ಕರ್‌ ನಗರ ಶಾಲೆ

***

ಸರ್ಕಾರಿ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಯಾವುದೇ ಮೂಲ ಸೌಕರ್ಯಗಳ ಕೊರತೆ ಇಲ್ಲ. ತರಬೇತಿ ಪಡೆದ ಶಿಕ್ಷಕರು ಪಾಠ ಮಾಡುತ್ತಾರೆ. ಪ್ರತ್ಯೇಕ ವಿಷಯವಾರು ಶಿಕ್ಷಕರು ಇನ್ನೂ ಬಂದಿಲ್ಲ
ರುದ್ರಗೌಡ ಪಾಟೀಲ, ಬಿಇಒ, ಶಹಾಪುರ

***

ಇಲಾಖೆ ಆಂಗ್ಲ ಮಾಧ್ಯಮ ಮಕ್ಕಳಿಗೆ ಅರ್ಹ ಶಿಕ್ಷಕರನ್ನು ನಿಯೋಜಿಸಬೇಕು. ಅನಿವಾರ್ಯವಾಗಿ ಕನ್ನಡ ಮಾಧ್ಯಮ ಶಿಕ್ಷಕರಿಂದಲೇ ಬೋಧಿಸುತ್ತಿದ್ದೇವೆ
ಸುಭಾಷ ಕೊಂಡಗೂಳಿ, ಮುಖ್ಯ ಶಿಕ್ಷಕ ಎಂಪಿಎಸ್ ಸುರಪುರ

***

ಅಂದಿನ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಇಂಗ್ಲಿಷ್ ಮಾಧ್ಯಮ ಶಾಲೆ ಯೋಜನೆ ಜಾರಿಗೆ ತಂದಿತು. ಆದರೆ, ನಂತರದ ಸರ್ಕಾರಗಳು ಇದಕ್ಕೆ ಪುಷ್ಟಿ ನೀಡಲಿಲ್ಲ. ಇದು ವಿಪರ್ಯಾಸ
ರಮೇಶ ಬಾಚಿಮಟ್ಟಿ, ದಲಿತ ಪ್ಯಾಂಥರ್ ಅಧ್ಯಕ್ಷ ಸುರಪುರ

***

ಒಂದು ವಾರದಲ್ಲಿ ಡಯಟ್‌ನಿಂದ ಪುಸ್ತಕಗಳು ತರಿಸಿಕೊಡಲಾಗುವುದು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಶಾಲೆಯಲ್ಲಿ ಶಿಕ್ಷಕರ ಕೊರತೆ ಇದೆ. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ
ಬೀರಪ್ಪ ಕಟ್ಟಿಮನಿ, ಮುಖ್ಯ ಶಿಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT