ಕೆಂಭಾವಿ (ಯಾದಗಿರಿ ಜಿಲ್ಲೆ): ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳಂಕರಹಿತ ರಾಜಕಾರಣಿ. ಜೀವನದುದ್ದಕ್ಕೂ ಭ್ರಷ್ಟಾಚಾರದ ವಿರುದ್ಧ ಹೋರಾಡಿದವರು. ಅಂತಹವರ ವಿರುದ್ಧ ಇಂದು ವಿರೋಧ ಪಕ್ಷದವರು ಷಡ್ಯಂತ್ರ ರೂಪಿಸಿ ಮುಖ್ಯಮಂತ್ರಿ ಗಾದಿಯಿಂದ ಕೆಳಗಿಳಿಸಲು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ದ ಅದೇ ಪಕ್ಷದ ನಾಯಕರು ಹೇಳಿಕೆ ನೀಡುತ್ತಿದ್ದರೂ ಇದುವರೆಗೂ ಯಾಕೆ ಕ್ರಮ ಜರುಗಿಸಿಲ್ಲ’ ಎಂದು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಪ್ರಶ್ನಿಸಿದರು.
ಪಟ್ಟಣದ ಶಾಸಕರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂಡಾ ಹಗರಣ ರಾಜಕೀಯ ಪ್ರೇರಿತವಾದದ್ದು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರಾಜ್ಯ ಸರ್ಕಾವನ್ನು ಅಸ್ಥಿತರಗೊಳಿಸಲು ಪ್ರಯತ್ನಿಸುತ್ತಿದೆ. ಸುಳ್ಳು ಮೊಕದ್ದಮೆಗಳನ್ನು ಹೂಡಿ ಬೆದರಿಸುವ ತಂತ್ರ ಮಾಡುತ್ತಿದೆ. ಮೂಡಾ ಕೇಸ್ ಒಂದು ಹಗರಣವೇ ಅಲ್ಲ. ಮುಖ್ಯಮಂತ್ರಿಗಳು ಕಾನೂನು ಬಾಹಿರವಾಗಿ ಯಾವುದೇ ಚಟುವಟಿಕೆಯನ್ನು ಅಲ್ಲಿ ಮಾಡಿಲ್ಲ. ತಮ್ಮ ಪತ್ನಿ ಕಳೆದುಕೊಂಡ ಜಾಗಕ್ಕೆ ಪರ್ಯಾಯವಾಗಿ, ಕಾನೂನು ಬದ್ಧವಾಗಿಯೇ ಮೂಡಾದಿಂದ ಸೈಟುಗಳನ್ನು ಪಡೆದಿದ್ದಾರೆ. ಅದು ಬಿಜೆಪಿ ಸರ್ಕಾರವೇ ರಾಜ್ಯದಲ್ಲಿದ್ದಾಗ ಎಂದರು.
ಕೇಂದ್ರ ಸರ್ಕಾರ ರಾಜ್ಯಪಾಲರ ಕಚೇರಿಯನ್ನು ದುರುದ್ದೇಶಕ್ಕೆ ಬಳಸಿಕೊಳ್ಳುತ್ತಿದೆ. ಮಲತಾಯಿ ಧೋರಣೆ ತೋರುತ್ತಿದೆ. ಬಿಜೆಪಿ ಸರ್ಕಾರ ಇರುವ ರಾಜ್ಯಗಳಿಗೆ ಹೆಚ್ಚಿನ ಆರ್ಥಿಕ ಸವಲತ್ತುಗಳನ್ನು ನೀಡುತ್ತಿದೆ. ಬೇರೆ ಪಕ್ಷಗಳು ಇರುವ ರಾಜ್ಯಗಳಿಗೆ ಕಡಿಮೆ ಹಣಕಾಸು ನೀಡುತ್ತಿದೆ. ಕರ್ನಾಟಕದಿಂದ ಹೆಚ್ಚು ತೆರಿಗೆ ಕೇಂದ್ರಕ್ಕೆ ಹೋಗುತ್ತಿದ್ದರೂ ನಮಗೆ ನ್ಯಾಯಸಮ್ಮತವಾದ ನಮ್ಮ ಪಾಲನ್ನು ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯ ಮಾಜಿ ಸಚಿವರ ಮೇಲೆ ಅನೇಕ ದೂರುಗಳಿದ್ದರೂ ರಾಜ್ಯಪಾಲರು ಪ್ರಾಸಿಕ್ಯೂಸನ್‌ಗೆ ಅವಕಾಶ ನೀಡಲಿಲ್ಲ. ಬಿಜೆಪಿ ನಾಯಕರು ಹತಾಶೆಯಿಂದ ನಮ್ಮ ಸರ್ಕಾರ ಬೀಳಿಸಲು, ಮುಖ್ಯಮಂತ್ರಿಗಳ ಹೆಸರು ಕೆಡಿಸಲು ರಾಜ್ಯಪಾಲರ ಮೂಲಕ ಪ್ರಾಸಿಕೂಸನ್ ಅವಕಾಶ ಕೊಡಿಸಿದ್ದಾರೆ. ಇದು ರಾಜಕೀಯ ದುರುದ್ದೇಶದಿಂದ ಮಾಡುತ್ತಿರುವ ಕೆಲಸ ಎಂದು ದೂರಿದರು.
ಸಿದ್ದರಾಮಯ್ಯ ಅವರು ಒಬ್ಬ ಸ್ವಚ್ಛ ರಾಜಕಾರಣಿಯಾಗಿದ್ದಾರೆ. ಅವರ ಜತೆ ಸಚಿವ ಸಂಪುಟ ಸೇರಿದಂತೆ ಇಡೀ ಕಾಂಗ್ರೆಸ್ ಪಕ್ಷ ನಿಲ್ಲುತ್ತದೆ. ಬಿಜೆಪಿಯ ಗೊಡ್ಡು ಬೆದರಿಕೆಗೆ ಬಗ್ಗುವುದಿಲ್ಲ. ಎಲ್ಲವನ್ನು ಕಾನೂನು ರೀತಿಯಲ್ಲೆ ಉತ್ತರ ನೀಡುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಜಿಪಂ ಅಧ್ಯಕ್ಷ ಸಿದ್ದನಗೌಡ ಪಾಟೀಲ, ಶಂಕ್ರಣ್ಣ ವಣಿಕ್ಯಾಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸನಗೌಡ ಪಾಟೀಲ, ವಾಮನರಾವ ದೇಶಪಾಂಡೆ, ಶಿವರಾಜ ಬೂದೂರ, ರಂಗಪ್ಪ ವಡ್ಡರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.