ಭಾನುವಾರ, ಫೆಬ್ರವರಿ 28, 2021
20 °C
ಪದವಿ ಹಂತದ ವಿದ್ಯಾರ್ಥಿಗಳಿಗೆ ಎದುರಾದ ಬೋಧಕರ ಸಮಸ್ಯೆ, ಭವಿಷ್ಯದ ಮೇಲೆ ಪರಿಣಾಮ

ಪದವಿ ಕಾಲೇಜು: ಅತಿಥಿ ಉಪನ್ಯಾಸಕ ಕೊರತೆ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ರಾಜ್ಯ ಸರ್ಕಾರ ಜನವರಿ 15ರಿಂದಲೇ ಎಲ್ಲ ಪದವಿ ಕಾಲೇಜುಗಳ ತರಗತಿಗಳ ಆರಂಭಕ್ಕೆ ಸೂಚಿಸಿದೆ. ಆದರೆ, ಅತಿಥಿ ಉಪನ್ಯಾಸಕರ ಕೊರತೆಯಿಂದ ವಿದ್ಯಾರ್ಥಿಗಳಿದ್ದರೂ ಪಾಠ ನಡೆಯುತ್ತಿಲ್ಲ.

ನಗರ ಪದವಿ ಮಹಾವಿದ್ಯಾಲ ಯದಲ್ಲಿ ಶೇ 70ರಷ್ಟು ವಿದ್ಯಾರ್ಥಿಗಳು ತರಗತಿಗೆ ಹಾಜರಾಗುತ್ತಿದ್ದು, ಸಿಬ್ಬಂದಿ ಕೊರತೆಯಿಂದ ಪಾಠಗಳು ಸರಿಯಾಗಿ ನಡೆಯುತ್ತಿಲ್ಲ. ಇದು ವಿದ್ಯಾರ್ಥಿಗಳ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.

ಜಿಲ್ಲೆಯ ವಿವಿಧ ‍ಪದವಿ ಕಾಲೇಜು ಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ನಗರ ಪ್ರದೇಶಕ್ಕಿಂತ ಗ್ರಾಮಾಂತರ ವಿಭಾಗದಲ್ಲಿ ಕಡಿಮೆ ಇದೆ.

ನಗರದ ಪದವಿ ಮಹಾವಿದ್ಯಾಲಯದಲ್ಲಿ ಸುಮಾರು 1,800 ಪದವಿ ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ. ಸ್ನಾತಕೋತ್ತರ ವಿದ್ಯಾರ್ಥಿಗಳು ಸುಮಾರು 600 ರಷ್ಟಿದ್ದಾರೆ. ಪದವಿ ತರಗತಿಯಲ್ಲಿ ಸುಮಾರು 1,400 ವಿದ್ಯಾರ್ಥಿಗಳಿದ್ದರೆ, 407 ವಿದ್ಯಾರ್ಥಿನಿಯರು ಇದ್ದಾರೆ. 

ಸುರಪುರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ವಿದ್ಯಾರ್ಥಿಗಳ ಹಾಜರಾತಿ ಸಂಖ್ಯೆ ಗಣನೀಯವಾಗಿ ಕಡಿಮೆ ಇತ್ತು. ಗ್ರಾಮಾಂತರ ವಿದ್ಯಾರ್ಥಿಗಳು ಪದವಿ ಕಾಲೇಜಿಗೆ ಬರಲು ಎಲ್ಲ ವಿದ್ಯಾರ್ಥಿಗಳಿಗೆ ವಸತಿ ನಿಲಯ ಪ‍್ರಾರಂಭವಾಗಿಲ್ಲ. ಇದರಿಂದಲೂ ಸಂಖ್ಯೆ ಕಡಿಮೆಯಾಗಿದೆ.

ಬಿ.ಎ ಪ್ರಥಮ ಸೆಮಿಸ್ಟರ್‌ನಲ್ಲಿ ದಾಖಲಾತಿ ಪಡೆದ 90 ವಿದ್ಯಾರ್ಥಿಗಳ ಪೈಕಿ ಕೇವಲ 26 ವಿದ್ಯಾರ್ಥಿಗಳು ಹಾಜರಾಗಿದ್ದರು. 3ನೇ ಸೆಮಿಸ್ಟರ್‌ನಲ್ಲಿ 110 ವಿದ್ಯಾರ್ಥಿಗಳ ಪೈಕಿ 12, 5ನೇ ಸೆಮಿಸ್ಟರ್‌ನ 64 ವಿದ್ಯಾರ್ಥಿಗಳ ಪೈಕಿ 15 ವಿದ್ಯಾರ್ಥಿಗಳು ತರಗತಿಗೆ ಆಗಮಿಸಿದ್ದರು.

ಬಿ.ಕಾಂ ಮೊದಲ ಸೆಮಿಸ್ಟರ್‌ನ 72 ವಿದ್ಯಾರ್ಥಿಗಳಲ್ಲಿ 20, 3ನೇ ಸೆಮಿಸ್ಟರ್‌ನಲ್ಲಿ 50ರ ಪೈಕಿ 15, 5ನೇ ಸೆಮಿಸ್ಟರ್‌ನಲ್ಲಿ 26ರ ಪೈಕಿ 4 ವಿದ್ಯಾರ್ಥಿಗಳು ಕಾಲೇಜಿಗೆ ಆಗಮಿಸಿದ್ದರು.

ಬಿ.ಎಸ್‍ಸಿ ಪ್ರಥಮ ಸೆಮಿಸ್ಟರ್‌ನ 9 ವಿದ್ಯಾರ್ಥಿಗಳಲ್ಲಿ ಕೇವಲ ಇಬ್ಬರು, 3ನೇ ಸೆಮಿಸ್ಟರ್‌ನ 18 ರಲ್ಲಿ 5 ಹಾಜರಾತಿ ಇದ್ದರೆ, 5ನೇ ಸೆಮಿಸ್ಟರ್‌ 23 ವಿದ್ಯಾರ್ಥಿಗಳ ಪೈಕಿ ಒಬ್ಬರೂ ಇರಲಿಲ್ಲ.

ಹುಣಸಗಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸುಮಾರು 325 ವಿದ್ಯಾರ್ಥಿಗಳಲ್ಲಿ 120 ವಿದ್ಯಾರ್ಥಿಗಳು ಕಾಲೇಜಿಗೆ ಬಂದಿದ್ದರು. 65 ಜನ ವಿದ್ಯಾರ್ಥಿನಿಯರು ಆಗಮಿಸಿದ್ದರು. ಅಲ್ಲದೇ ಶೀತ, ಕೆಮ್ಮು ಇರುವ ಒಬ್ಬ ವಿದ್ಯಾರ್ಥಿಗೆ ಗುಣಮುಖರಾದ ಬಳಿಕ ತರಗತಿಗೆ ಆಗಮಿಸುವಂತೆ ತಿಳಿಸಿದ್ದಾಗಿ ಎನ್ಎಸ್ಎಸ್ ಮುಖ್ಯಸ್ಥ ಜಗದೀಶ ಕುಮಾರ ನಾಯಕ ತಿಳಿಸುತ್ತಾರೆ.

ಗುರುಮಠಕಲ್‌ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಪದವಿ ಮಹಾವಿದ್ಯಾಲಯದ ಒಟ್ಟು 1,006 ವಿದ್ಯಾರ್ಥಿಗಳಲ್ಲಿ 353 ಹಾಜರಾಗಿದ್ದರು. ಇದರಲ್ಲಿ 110 ಹುಡುಗರು, 243 ಹುಡುಗಿಯರು ಸೇರಿದ್ದಾರೆ.

‘ಸ್ನಾತಕೋತ್ತರ ಅಧ್ಯಯನ (ಪಿ.ಜಿ) ವಿದ್ಯಾರ್ಥಿಗಳು ತರಗತಿಗೆ ಬರುತ್ತಿಲ್ಲ’ ಎಂದು ಪ್ರಾಂಶುಪಾಲ ಗಚ್ಚಿನಮನಿ ಮೋನಪ್ಪ ಮಾಹಿತಿ ನೀಡುತ್ತಾರೆ.

‘ಬಿ.ಎ ತರಗತಿಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ಬೆಂಚುಗಳ ಕೊರತೆ ಆಗಿದೆ. ಹೀಗಾಗಿ ವಿದ್ಯಾರ್ಥಿಗಳು ಕೆಳಗಡೆ ಕುಳಿತುಕೊಳ್ಳುವ ಸ್ಥಿತಿ ಏರ್ಪಟ್ಟಿದೆ. ಪ್ರತಿವರ್ಷವೂ ಕಾಲೇಜು ಆರಂಭವಾದ ನಂತರ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಈ ಬಾರಿ ತಡವಾಗಿದೆ. ರಸಾಯನಶಾಸ್ತ್ರ, ಹಿಂದಿ ವಿಷಯ ಬೋಧಕರು ಇಲ್ಲ. ಇದರಿಂದ ಇದ್ದ 22 ಸಿಬ್ಬಂದಿ ಮೇಲೆ ಒತ್ತಡ ಬಿದ್ದಿದೆ. ಒಬ್ಬೊಬ್ಬರು ಹಲವಾರು ತರಗತಿಗಳನ್ನು ನಡೆಸಬೇಕಾಗಿದೆ. ಸರ್ಕಾರ ಅತಿಥಿ ಉಪನ್ಯಾಸಕರನ್ನು ನೇಮಿಸಿದರೆ ಸ್ಪಲ್ಪ ಮಟ್ಟಿಗೆ ಹೊರೆ ತಗ್ಗಲಿದೆ. ಸರ್ಕಾರದ ನಿರ್ಧಾರಕ್ಕೆ ಬಿಡಲಾಗಿದೆ’ ಎನ್ನುತ್ತಾರೆ ಯಾದಗಿರಿ ಸರ್ಕಾರಿ ಪದವಿ ಮಹಾವಿದ್ಯಾಲಯ ಪ್ರಾಂಶುಪಾಲ ಡಾ.ಸುಭಾಶ್ಚಂದ್ರ ಕೌಲಗಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು