ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಸೀದಿ ಪಡೆಯದೇ ವಸ್ತು ಖರೀದಿಸದಿರಿ’

ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಕಾಶ ಅರ್ಜುನ ಬನಸೊಡೆ ಅಭಿಮತ
Last Updated 15 ಮಾರ್ಚ್ 2019, 15:23 IST
ಅಕ್ಷರ ಗಾತ್ರ

ಯಾದಗಿರಿ: ‘ಗ್ರಾಹಕರು ಯಾವುದೇ ಸರಕು ಅಥವಾ ವಸ್ತುಗಳನ್ನು ಖರೀದಿ ಮಾಡಿದಾಗ ತಪ್ಪದೇ ರಸೀದಿ ಪಡೆಯಬೇಕು’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಕಾಶ ಅರ್ಜುನ ಬನಸೊಡೆ ಹೇಳಿದರು.

ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಗಂಜ್ ವರ್ತಕರ ಸಂಘದ ಸಭಾಂಗಣದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆಶ್ರಯದಲ್ಲಿ ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ಗ್ರಾಹಕರ ರಕ್ಷಣಾ ವೇದಿಕೆ ಸ್ಥಾಪನೆ ಮಾಡಲಾಗಿದೆ. ಗ್ರಾಹಕರು ಖರೀದಿಸಿದ ವಸ್ತುಗಳು ಮೋಸದಿಂದ ಕೂಡಿದ್ದಲ್ಲಿ ಖರೀದಿ ಮಾಡಿದ ವಸ್ತುವಿನ ರಸೀದಿಯ ಜತೆಗೆ ಜಿಲ್ಲಾ ಗ್ರಾಹಕ ರಕ್ಷಣಾ ವೇದಿಕೆಯಲ್ಲಿ ದೂರು ಸಲ್ಲಿಸಿ, ನ್ಯಾಯ ಪಡೆಯಬಹುದು’ ಎಂದು ತಿಳಿಸಿದರು.

‘ಗ್ರಾಹಕರು ಕಾನೂನು ತಿಳಿದುಕೊಂಡು ಜಾಗೃತರಾಗಬೇಕು. ವಸ್ತುಗಳ ಗುಣಮಟ್ಟ ಮತ್ತು ಪ್ರಮಾಣ ಬಗ್ಗೆ ತಿಳಿದುಕೊಂಡು ಖರೀದಿ ಮಾಡಬೇಕು. ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ತಮ್ಮ ಲಾಭಕ್ಕಾಗಿ ಕಲಬೆರಕೆ, ಕಳಪೆ ವಸ್ತುಗಳನ್ನು ಮಾರಾಟ ಮಾಡುವುದು ಅಪರಾಧವಾಗಿದೆ. ಗ್ರಾಹಕರು ಖರೀದಿಸಿದ ವಸ್ತಗಳು ಮೋಸದಿಂದ ಕೂಡಿದ್ದರೆ ಅಂತಹ ವಸ್ತುಗಳ ಮೌಲ್ಯ ₹20 ಲಕ್ಷ ಒಳಗೆ ಇದ್ದಲ್ಲಿ ಜಿಲ್ಲಾ ಗ್ರಾಹಕರ ರಕ್ಷಣಾ ವೇದಿಕೆಯಲ್ಲಿ ಹಾಗೂ ₹20 ಲಕ್ಷದಿಂದ ಒಂದು ಕೋಟಿ ರೂಪಾಯಿ ಒಳಗೆ ಇದ್ದಲ್ಲಿ ರಾಜ್ಯ ಗ್ರಾಹಕ ರಕ್ಷಣಾ ವೇದಿಕೆಯಲ್ಲಿ ಮತ್ತು ಒಂದು ಕೋಟಿ ರೂಪಾಯಿಗೂ ಅಧಿಕ ಮೌಲ್ಯ ಹೊಂದಿದ್ದಲ್ಲಿ ರಾಷ್ಟ್ರ ಗ್ರಾಹಕ ರಕ್ಷಣಾ ವೇದಿಕೆಯಲ್ಲಿ ದೂರು ಸಲ್ಲಿಸಬಹುದು’ ಎಂದು ಮಾಹಿತಿ ನೀಡಿದರು.

ಸಂಪನ್ಮೂಲ ವ್ಯಕ್ತಿ ವಕೀಲ ಎಸ್.ಬಿ.ಪಾಟೀಲ್ ಮಾತನಾಡಿ,‘ಗ್ರಾಹಕರು ವಸ್ತುಗಳನ್ನು ಖರೀದಿಸುವ ಮೊದಲು ಪೂರ್ವಾಪರ ವಿಚಾರಿಸಬೇಕು. ಗ್ರಾಹಕರು ಸಲ್ಲಿಸಿದ ದೂರಿಗೆ ಜಿಲ್ಲಾ ಗ್ರಾಹಕರ ರಕ್ಷಣಾ ವೇದಿಕೆಯಲ್ಲಿ ನ್ಯಾಯ ಸಿಗದಿದ್ದರೆ 30 ದಿನಗಳಲ್ಲಿ ರಾಜ್ಯ ಗ್ರಾಹಕರ ರಕ್ಷಣಾ ವೇದಿಕೆಯ ಮೊರೆ ಹೋಗಬಹುದು. ಅಲ್ಲಿಯೂ ನ್ಯಾಯ ಸಿಗದಿದ್ದಲ್ಲಿ ೩೦ ದಿನಗಳಲ್ಲಿ ರಾಷ್ಟ್ರ ಗ್ರಾಹಕರ ರಕ್ಷಣಾ ವೇದಿಕೆಯ ಮೊರೆ ಹೋಗಬಹುದು’ ಎಂದು ಹೇಳಿದರು.

ಒಂದು ವೇಳೆ ಗ್ರಾಹಕ ಸುಳ್ಳು ದೂರು ನೀಡಿರುವುದು ಕಂಡುಬಂದಲ್ಲಿ ₹ 2 ಸಾವಿರದಿಂದ ₹10 ಸಾವಿರದವರೆಗೆ ದಂಡ ಮತ್ತು ಮೂರು ತಿಂಗಳು ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ’ ಎಂದರು.

ವಕೀಲ ಎಸ್.ಪಿ ನಾಡೇಕರ್ ಮಾತನಾಡಿ, ‘ಆಧುನಿಕ ಮಾರುಕಟ್ಟೆಯಲ್ಲಿ ಗ್ರಾಹಕನನ್ನು ಮಾರುಕಟ್ಟೆಯ ರಾಜನೆಂದು ಕರೆಯಲಾಗುತ್ತದೆ. ಗ್ರಾಹಕರ ರಕ್ಷಣೆಗಾಗಿ ಸುರಕ್ಷತೆ ಹಕ್ಕು, ಮಾಹಿತಿ ಪಡೆಯುವ ಹಕ್ಕು, ಆಯ್ಕೆಯ ಹಕ್ಕು, ಆಲಿಸುವ ಹಕ್ಕು, ಕುಂದುಕೊರತೆಗಳ ನಿವಾರಿಸುವ ಹಕ್ಕು, ಗ್ರಾಹಕರ ಶಿಕ್ಷಣದ ಹಕ್ಕು ಎಂಬ ಆರು ಹಕ್ಕುಗಳನ್ನು ನೀಡಲಾಗಿದೆ’ ಎಂದು ಹೇಳಿದರು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಶರಣಗೌಡ ಕಾಳೆಬೆಳಗುಂದಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವರ್ತಕರ ಸಂಘದ ಅಧ್ಯಕ್ಷ ವಿಶ್ವನಾಥರೆಡ್ಡಿ ಜೋಳದಡಗಿ, ವರ್ತಕರ ಕ್ಷೇತ್ರದ ಸದಸ್ಯ ಸೋಮನಾಥ ಜೈನ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಶ್ರೀನಿವಾಸರಾವ್ ಕುಲಕರ್ಣಿ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಸಿ.ಎಸ್. ಮಾಲಿಪಾಟೀಲ್, ವಕೀಲ ಶಾಂತಪ್ಪ ಎಸ್. ಖಾನಹಳ್ಳಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಸಿದ್ದಯ್ಯಸ್ವಾಮಿ ಇದ್ದರು.

ವಕೀಲರಾದ ಭೀಮರಾಯ ಅಚೋಲಾ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT