ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಗೌರಿ ಗಣೇಶ ಉತ್ಸವಕ್ಕೆ ಅಬ್ಬರದ ಸಿದ್ಧತೆ

ಪಿಒಪಿ ವಿಗ್ರಹ ಬಳಕೆಗೆ ಪರ, ವಿರೋಧ ಚರ್ಚೆ l ಸಡಗರದಿಂದ ಹಬ್ಬ ಆಚರಣೆಗೆ ಸಿದ್ಧರಾದ ಯುವಕರು
Last Updated 28 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

ಯಾದಗಿರಿ: ಗೌರಿ ಗಣೇಶ ಉತ್ಸವವನ್ನು ಸಂಭ್ರಮದಿಂದ ಆಚರಿಸಲು ಗಣೇಶ ಉತ್ಸವ ಸಮಿತಿಗಳು ಸಿದ್ಧತೆಯಲ್ಲಿ ತೊಡಗಿದ್ದು, ಗಣೇಶ ಭಕ್ತರು ಕೂಡ ಮೂರ್ತಿ ಖರೀದಿಯಲ್ಲಿ ನಿರತವಾಗಿದ್ದಾರೆ.

ಕೋವಿಡ್ ಕಾರಣ ಕಳೆದ ಎರಡೂ ವರ್ಷ ಉತ್ಸವಗಳಿಗೆ ನಿರ್ಬಂಧ ಹೇರಲಾಗಿತ್ತು. ಈ ವರ್ಷ ಕೆಲವು ನಿರ್ಬಂಧಿತ ಮಾರ್ಗಸೂಚಿಗಳಿಗೆ ಬದ್ಧರಾಗಿ ಯುವಕರು ಸಡಗರದಿಂದ ಹಬ್ಬ ಆಚರಿಸಲು ಮುಂದಾಗಿದ್ದಾರೆ.

ಆಗಸ್ಟ್‌ 31ರ ಗಣೇಶ ಚತುರ್ಥಿಗೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಆಗಲಿವೆ. ಕೆಲವೆಡೆ ಪ್ರತಿಷ್ಠಾಪನೆಯ ದಿನವೇ ವಿಸರ್ಜನೆಯಾದರೆ ಹಲವು ಕಡೆಗಳಲ್ಲಿ 3, 5, 9 ಮತ್ತು 11ನೇ ದಿನಕ್ಕೆ ವಿಸರ್ಜನೆ ಕಾರ್ಯ ನಡೆಯಲಿದೆ.

ನಿಷೇಧದ ನಡುವೆಯೂ ಅಲ್ಲಲ್ಲಿ ಪಿಒಪಿ ಗಣೇಶ ಮೂರ್ತಿಗಳ ವಿತರಣೆ ಅಲ್ಲಲ್ಲಿ ನಡೆಯುತ್ತಿದೆ.

ನಗರದ ವಿಜಯ ವಿಠ್ಠಲ ಸೇವಾ ಸಂಸ್ಥೆ, ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕ, ಪಾರ್ಲಿಮೆಂಟ್ ಗೆಳೆಯರ ಬಳಗ, ಶಶಿ ಗೆಳೆಯರ ಬಳಗದ ವತಿಯಿಂದ ಸುಮಾರು 400 ಪರಿಸರ ಸ್ನೇಹಿ ಮೂರ್ತಿಗಳನ್ನು ಯಾವುದೇ ಶುಲ್ಕವಿಲ್ಲದೆ ವಿತರಿಸಲಾಗುತ್ತಿದೆ.

ಯುವಕರಾದ ವೀರೇಶ ಪುಲಮಮ್ಮಡಿ, ವಿಠ್ಠಲ ಕುಲಕರ್ಣಿ, ಸೂಗುರೇಶ ಯಾಟಗಲ್, ಪ್ರಭು ಬಳಿಚಕ್ರ, ಹರೀಶ ಕುಲಕರ್ಣಿ ಉಚಿತ ವಿತರಣೆಗಾಗಿ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನಿಂದ 400 ಮೂರ್ತಿಗಳನ್ನು ತಂದಿದ್ದಾರೆ. ಕಳೆದ ವರ್ಷ ಸುಮಾರು 150 ಮೂರ್ತಿಗಳನ್ನು ವಿತರಿಸಿದ್ದರು.

ಕೋವಿಡ್‌ ಅವಧಿಯಲ್ಲಿ ಚಿತ್ರಕಲಾ ಶಿಕ್ಷಕ ಭೀಮೇಶ ಮಿರ್ಜಾಪುರ ಅವರ ಕೈ ಹಿಡಿದಿದ್ದು ಪರಿಸರ ಸ್ನೇಹಿ ಗಣೇಶ ಮೂರ್ತಿಗಳು. ಹಳೆ ಜಿಲ್ಲಾಸ್ಪತ್ರೆಯ ವಸತಿ ಗೃಹದಲ್ಲಿ 200 ಮೂರ್ತಿಗಳನ್ನು ತಯಾರಿಸಿದ್ದು, ಈಗಾಗಲೇ 40ಕ್ಕೂ ಹೆಚ್ಚು ಮೂರ್ತಿಗಳು ಮಾರಾಟವಾಗಿವೆ.

‘ಗಣೇಶ ಮೂರ್ತಿ ತಯಾರಿಕೆಗಾಗಿ ಬೆಂಗಳೂರಿನಿಂದ ಜೇಡಿ ಮಣ್ಣು ತರಿಸಲಾಗಿದೆ. ಕೋವಿಡ್‌ ವೇಳೆಯಲ್ಲಿಯೂ ಮಣ್ಣಿನ ಮೂರ್ತಿಗಳಿಗೆ ಬೇಡಿಕೆ ಇತ್ತು. ಈ ವರ್ಷ ಹೆಚ್ಚು ಮೂರ್ತಿಗಳು ತಯಾರಿಸಲಾಗಿದೆ. ಅವುಗಳ ಆಕರ್ಷಣೆಗಾಗಿ ಬಣ್ಣ ಹಚ್ಚಲಾಗಿದೆ’ ಎನ್ನುತ್ತಾರೆ ಭೀಮೇಶ.

ಕೋವಿಡ್‌ ಕಾರಣ ಕಳೆದ ಎರಡೂ ವರ್ಷ ವಹಿವಾಟು ಕುಸಿದಿತ್ತು. ಈ ಬಾರಿ ಯಾವುದೇ ನಿರ್ಬಂಧ ಇಲ್ಲದ ಕಾರಣ ಹೆಚ್ಚಿನ ಮೂರ್ತಿಗಳ ಮಾರಾಟವಾಗುವ ನಿರೀಕ್ಷೆಯನ್ನು ವರ್ತಕರು ಇರಿಸಿಕೊಂಡಿದ್ದಾರೆ.

***

ನಿಲ್ಲದ ಪಿಒಪಿ ಗಣೇಶ ಮೂರ್ತಿಗಳು

ಸುರಪುರ: ನಗರಸಭೆ ವ್ಯಾಪ್ತಿಯಲ್ಲಿ 25ರಿಂದ 30 ಸಾರ್ವಜನಿಕ ಗಣೇಶಗಳನ್ನು ಸ್ಥಾಪಿಸಲಾಗುತ್ತದೆ. ಅಂದಾಜು 3 ಸಾವಿರಕ್ಕೂ ಹೆಚ್ಚು ಮನೆಗಳಲ್ಲಿ ಗಣೇಶ ಪೂಜೆ ಜರುಗಲಿದೆ. ನಿಷೇಧದ ಹೊರತಾಗಿಯೂ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ (ಪಿಒಪಿ) ಮೂರ್ತಿ ತಯಾರಿಸಲಾಗುತ್ತದೆ. ಪರಿಸರ ಸ್ನೇಹಿ ಮೂರ್ತಿಗಳ ತಯಾರಿಕೆ ಬಹಳ ಕಡಿಮೆ ಇದೆ. ಮೊದಲು ಗಣೇಶ ಮೂರ್ತಿ ವಿಸರ್ಜಿಸುತ್ತಿದ್ದ ದೊಡ್ಡ ಬಾವಿಗಳ ಮುಂದೆ ಪೊಲೀಸ್ ಗಸ್ತು ಇರುತ್ತದೆ. ಈ ಬಾವಿಗಳಲ್ಲಿ ವಿಸರ್ಜನೆಗೆ ಅವಕಾಶ ನೀಡುವುದಿಲ್ಲ.

ನಗರಸಭೆ ನೀರು ಶುದ್ಧೀಕರಣ ಘಟಕದಲ್ಲಿ ಹಳೆಯ ಟ್ಯಾಂಕ್‌ನ್ನು (25 ಉದ್ದ, 20 ಅಡಿ ಅಗಲ ಮತ್ತು 15 ಅಡಿ ಆಳ) ವಿಸರ್ಜನೆ ಮಾಡಲು ಸಿದ್ಧಪಡಿಸಿದೆ. ಸಾರ್ವಜನಿಕರು ಈ ಟ್ಯಾಂಕ್‌ನಲ್ಲಿ ಮೂರ್ತಿ ವಿಸರ್ಜನೆ ಮಾಡಲು ಅವಕಾಶ ಇದೆ. ಮೂರ್ತಿಗಳು ಕರಗಿದ ನಂತರ ಉಳಿದ ಕೆಸರನ್ನು ತ್ಯಾಜ್ಯ ವಿಲೇವಾರಿ ಘಟಕಕ್ಕೆ ರವಾನಿಸಲಾಗುವುದು ಎಂದು ಅಧಿಕಾರಿಯೊಬ್ಬರು ಹೇಳಿದರು.

***

ಮುಂದುವರೆದ ಪಿಒಪಿ ಮೂರ್ತಿ ಬಳಕೆ

ಗುರುಮಠಕಲ್: ಪಟ್ಟಣದಲ್ಲಿ ₹4,000ದಿಂದ ₹25 ಸಾವಿರದವರೆಗೆಪಿಒಪಿ ಮೂರ್ತಿಗಳ ಮಾರಾಟವಾಗುತ್ತಿದ್ದು, ನೆರೆಯ ತೆಲಂಗಾಣ ರಾಜ್ಯದಿಂದಲೂ ಗ್ರಾಹಕರು ಆಗಮಿಸುತ್ತಿದ್ದಾರೆ.

‘ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಸ್ನೇಹಿ ಮೂರ್ತಿ ಪ್ರತಿಷ್ಠಾಪಿಸಿ ಹಬ್ಬವನ್ನು ಆಚರಿಸುವಂತೆ ಆದೇಶಿಸಿದೆ. ಆದರೂ ಪಿಒಪಿ ಮಾರಾಟ ಮುಂದುವರೆದಿದೆ. ನಮ್ಮ ಆಚರಣೆಗಳು ಪರಿಸರಕ್ಕೆ ಪೂರಕವಾಗಿದ್ದರೆ ಉತ್ತಮ. ಸ್ವಾತಂತ್ರ್ಯದ ಹೋರಾಟದ ಸಂದರ್ಭದಲ್ಲಿ ಮೂರ್ತಿಗಳು ಪರಿಸರ ಸ್ನೇಹಿ ಆಗಿದ್ದವು. ನಾವೂ ಅದೇ ಮಾರ್ಗದಲ್ಲಿ ಸಾಗಿದರೆ ಉತ್ತಮ’ ಎನ್ನುತ್ತಾರೆ ಸಂಜೀವಕುಮಾರ ಅಲೆಗಾರ. ‘ಪ್ರಾರ್ಥನೆಗೆ ಬಳಸುವ ಮೂರ್ತಿಗಳು ಪರಿಸರಕ್ಕೆ ಹಾನಿ ಮಾಡಬಾರದು. ಆಚರಣಾ ಸಮಿತಿಗಳು ಪರಿಸರ ಸ್ನೇಹಿ ಮೂರ್ತಿಗಳಿಗೆ ಒತ್ತುನೀಡಲಿ ಎನ್ನುವುದು ನಮ್ಮ ಆಸೆ ಎನ್ನುತ್ತಾರೆ ಲಕ್ಷ್ಮಣ ಕುಂಬಾರ.

********

ಅದ್ಧೂರಿ ಆಚರಣೆಗೆ ತಯಾರಿ

ಹುಣಸಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಗಣೇಶ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದ್ದು, ಗೆಳೆಯರ ಬಳಗದಿಂದ ಪ್ರತಿಷ್ಠಾಪನೆ ಆಗಲಿರುವ ಮೂರ್ತಿ ಪರಿಸರ ಸ್ನೇಹಿಯಾಗಿ ಇರಲಿದೆ ಎಂದು ಉತ್ಸವ ಸಮಿತಿ ಮುಖಂಡ ತಿಳಿಸಿದರು. ಪಟ್ಟಣದ ಒಳ ಅಗಸಿಯಲ್ಲಿ ಮಣ್ಣಿನಿಂದ ತಯಾರಿಸಿದ ಬೆನಕನ ಮೂರ್ತಿಯನ್ನು ಏಳು ದಿನ ಪ್ರತಿಷ್ಠಾಪಿಸಿ, ಪೂಜಿಸಲಾಗುವುದು. ಸಂಜೆ ವೇಳೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ

ಪಟ್ಟಣದ ಹಿರೇಹಳ್ಳದ ದಂಡೆಯಲ್ಲಿ ಗಣಪತಿ ವಿಸರ್ಜನೆಗೆ ಪಟ್ಟಣ ಪಂಚಾಯಿತಿಯಿಂದ ವ್ಯವಸ್ಥೆ ಮಾಡಲಾಗುವುದು ಎಂದು ಪ.ಪಂ ಮುಖ್ಯಾ ಧಿಕಾರಿ ಪ್ರಕಾಶ್ ಬಾಗ್ಲಿ ತಿಳಿಸಿದರು‌.

******

ಗಣೇಶ ಮೂರ್ತಿ ವಿಸರ್ಜನೆಗೆ 2 ತಂಡ

ಶಹಾಪುರ:ಗಣೇಶನ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಪರಿಸರಕ್ಕೆ ಧಕ್ಕೆ ಆಗದಂತೆ ಎಚ್ಚರ ವಹಿಸಲು ನಗರಸಭೆಯು ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ.

‘ನಗರ ಸಭೆಯು ಮೂರ್ತಿ ವಿಸರ್ಜನೆಗಾಗಿ ನಾಗರ ಕೆರೆಯ ಪ್ರದೇಶದಲ್ಲಿ ಪ್ರತ್ಯೇಕ ಸ್ಥಳವನ್ನು ನಿಗದಿಪಡಿಸಿದೆ. ಮೆರವಣಿಗೆ ನಂತರ ಪೂಜೆ ನೆರವೇರಿಸಿದ ಬಳಿಕ ನೇರವಾಗಿ ನಮ್ಮ ಸಿಬ್ಬಂದಿ ಮೂರ್ತಿಯನ್ನು ತಮ್ಮ ವಶಕ್ಕೆ ಪಡೆದು, ಅವುಗಳನ್ನು ಬೇರೆಡೆ ಸ್ಥಳಾಂತರಿಸಲಾಗುತ್ತದೆ’ ಎನ್ನುತ್ತಾರೆ ನಗರಸಭೆಯ ಪರಿಸರ ಎಂಜಿನಿಯರ್ ಹರೀಶ ಸಜ್ಜನಶೆಟ್ಟಿ.

‘ಮನೆಯಲ್ಲಿ ಪ್ರತಿಷ್ಠಾಪಿಸಿದ ಮೂರ್ತಿಯನ್ನು ನಗರ ಸಭೆ ಸಿಬ್ಬಂದಿಗೆ ನೀಡಬಹುದು. ವಿವಿಧ ಬಡಾವಣೆಗಳಿಗೆ ವಾಹನವನ್ನು ಕಳುಹಿಸುತ್ತಿದ್ದೇವೆ. ಪೂಜೆ ಸಲ್ಲಿಸಿದ ಬಳಿಕ ಸಿಬ್ಬಂದಿಗೆ ಹಸ್ತಾಂತರಸಬೇಕು. ಇದಕ್ಕಾಗಿ ಎರಡು ಪ್ರತ್ಯೇಕ ತಂಡ ರಚಿಸಲಾಗಿದೆ’ ಎಂದು ಮಾಹಿತಿ ನೀಡಿದರು.

***

ಪಿಒಪಿ ಗಣೇಶ ಮೂರ್ತಿಗಳಿಂದ ಪರಿಸರಕ್ಕೆ, ಜಲಮೂಲಕ್ಕೆ ಹಾನಿಯಾಗುತ್ತದೆ. ಹೀಗಾಗಿ ನಾವು ಮಣ್ಣಿನ ಮೂರ್ತಿಗಳನ್ನು ಉಚಿತವಾಗಿ ನೀಡುತ್ತಿದ್ದೇವೆ. ಮೂರ್ತಿಯಲ್ಲಿ ತುಳಸಿ ಬೀಜ ಇಟ್ಟಿದ್ದರಿಂದ ವಿಸರ್ಜನೆ ನಂತರ ಸಸಿ ಬೆಳೆಸಬಹುದು

-ಶರಣು ಪಡಶೆಟ್ಟಿ, ಯುವ ಘಟಕ ಕೋಶಾಧ್ಯಕ್ಷ ಅಖಿಲ ಭಾರತ ವೀರಶೈವ ಮಹಾಸಭಾ ಯಾದಗಿರಿ ತಾಲ್ಲೂಕು

***

ಕಳೆದ ವರ್ಷದಿಂದ ಮಣ್ಣಿನ ಮೂರ್ತಿಗಳನ್ನು ತಯಾರಿಸಲಾಗುತ್ತಿದೆ. ₹101ರಿಂದ ₹4,001 ರತನಕ ಬೆಲೆ ನಿಗದಿ ಮಾಡಲಾಗಿದೆ. 8 ಇಂಚುನಿಂದ 3 ಅಡಿ ತನಕ ಮೂರ್ತಿಗಳನ್ನು ತಯಾರಿಸಲಾಗಿದೆ

-ಭೀಮೇಶ ಮಿರ್ಜಾಪುರ, ಚಿತ್ರಕಲಾ ಶಿಕ್ಷಕ

***

ಮೊದಲದಿನ ಗಣೇಶ ಮೂರ್ತಿ ವಿಸರ್ಜನೆಗೆ ಗಾಂಧಿ ವೃತ, ಜಿಲ್ಲಾಧಿಕಾರಿ ಮನೆ ಹತ್ತಿರ ಎರಡು ಟ್ರ್ಯಾಕ್ಟರ್‌ನಲ್ಲಿ ಡ್ರಮ್ ಇಟ್ಟು ವಿಸರ್ಜನೆಗೆ ಅವಕಾಶ ಕಲ್ಪಿಸಲಾಗಿದೆ. 3, 5, 7, 9 ಮತ್ತು 11 ದಿನದಲ್ಲಿ ಸಣ್ಣಕೆರೆ, ದೊಡ್ಡಕೆರೆಯಲ್ಲಿ ವ್ಯವಸ್ಥೆ ಮಾಡಲಾಗಿದೆ

-ಶರಣಪ್ಪ, ಯಾದಗಿರಿ ನಗರಸಭೆ ಪೌರಾಯುಕ್ತ

***

ಗಣೇಶ ವಿಸರ್ಜನೆಗೆ ಈಗಾಗಲೇ ಟ್ಯಾಂಕ್ ಸಿದ್ಧಪಡಿಸಲಾಗಿದೆ. ಸಾರ್ವಜನಿಕರು, ಸಂಘ, ಸಂಸ್ಥೆಗಳು ಬಾವಿಗಳಲ್ಲಿ ಹಾಕದೆ ಈ ಟ್ಯಾಂಕಿನಲ್ಲಿ ವಿಸರ್ಜಿಸಿ ಬಾವಿಗಳನ್ನು ಸಂರಕ್ಷಿಸಿ

-ಜೀವನಕುಮಾರ ಕಟ್ಟಿಮನಿ, ಪೌರಾಯುಕ್ತ, ಸುರಪುರ

***

ಕೋವಿಡ್ ಮತ್ತು ಇತರ ಕಾರಣಗಳಿಗೆ ಗಣೇಶ ಮಾರಾಟ ಕಡಿಮೆಯಾಗಿದೆ. ಸಂಕಷ್ಟದಲ್ಲಿರುವ ಮೂರ್ತಿ ತಯಾರಕರ ನೆರವಿಗೆ ಸರ್ಕಾರ ಬರಬೇಕು

-ಮಲ್ಲುನಾಯಕ ಕಬಾಡಗೇರಾ, ಜಯಕರ್ನಾಟಕ ಅಧ್ಯಕ್ಷ, ಸುರಪುರ

***

ಸಾಮಾಜಿಕ ಬದ್ಧತೆಯೊಡನೆ ಸೇವೆ ಮಾಡುಬೇಕಿದ್ದ ಮುಖಂಡರೊಬ್ಬರು ನ್ಯಾಯಾಲಯದಿಂದ ನಿಷೇಧಿತ ಪಿಒಪಿ ವಿಗ್ರಹಗಳನ್ನು ವಿತರಿಸುತ್ತಿರುವುದು ಸರಿಯಲ್ಲ. ವಿತರಿಸುವುದಕ್ಕೆ ಮಣ್ಣಿನ ವಿಗ್ರಹಗಳನ್ನು ತರಿಸಬಹುದಿತ್ತು

-ನಾಗೇಶ ಗದ್ದಗಿ, ಅಧ್ಯಕ್ಷ, ಜಯಕರ್ನಾಟಕ ಸಂಘಟನೆ

***

ಪಿಒಪಿ ನಿಷೇಧಿಸಿದ್ದು 2017ರಲ್ಲಿ. ಇಲ್ಲಿಗೆ 5 ವರ್ಷಗಳಾದರೂ ಇನ್ನೂ ಪಿಒಪಿ ವಿಗ್ರಹಗಳೇ ಬಳಕೆ ಮಾಡುತ್ತಿರುವುದು ಮುಂದುವರೆದಿದೆ. ಇದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ, ಕ್ರಮ ಕೈಗೊಳ್ಳುತ್ತಿಲ್ಲ ಏಕೆ?

-ಮಹದೇವ ಎಂಟಿಪಲ್ಲಿ, ಸಾಮಾಜಿಕ ಕಾರ್ಯಕರ್ತ

***

ಜನರಿಗೆ ಜಾಗೃತಿ ಮೂಡಿಸಲು ನಾಲ್ಕು ವರ್ಷಗಳಿಂದ ಮಣ್ಣಿನ ಮೂರ್ತಿ ತರಿಸುತ್ತಿದ್ದೇವೆ. ಮೂರ್ತಿ ಬೆಲೆ ಮತ್ತು ಸಾಗಾಟದ ವೆಚ್ಚ ಮಾತ್ರ ಪಡೆಯುತ್ತಿದ್ದು ಲಾಭ ಮಾಡುವ ಆಸೆಯಿಲ್ಲ

-ಅಮರ ಕುಂಬಾರ, ಮಣ್ಣಿನ ಮೂರ್ತಿ ವರ್ತಕ

***

ನಗರಸಭೆಯು ಗಣೇಶ ಮೂರ್ತಿಗಳನ್ನು ತನ್ನ ವಶಕ್ಕೆ ಪಡೆದುಕೊಂಡು ನಿಗದಿಪಡಿಸಿದ ಸ್ಥಳದಲ್ಲಿ ಇಡಲಾಗುತ್ತದೆ. ಕೆರೆ, ಹಳ್ಳ, ಬಾವಿಯಲ್ಲಿ ಗಣೇಶನ ವಿಸರ್ಜನೆ ಮಾಡದಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದೆ

-ಹರೀಶ ಸಜ್ಜನಶೆಟ್ಟಿ, ಪರಿಸರ ಎಂಜಿನಿಯರ್, ನಗರಸಭೆ ಶಹಾಪುರ

***

ಜಿಲ್ಲಾಧಿಕಾರಿ ನೇತೃತ್ವದಲ್ಲಿ 40 ಇಲಾಖೆಗಳ ಸಭೆ ನಡೆಸಲಾಗಿದ್ದು, ಪಿಒಪಿ ಮೂರ್ತಿಗಳ ನಿಯಂತ್ರಣಕ್ಕೆ ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರ ನೀಡಲಾಗಿದೆ. ಪರಿಸರ ಸ್ನೇಹಿ ಮಣ್ಣಿನ ಗಣೇಶ ಪ್ರತಿಷ್ಠಾಪನೆಗೆ ಪ್ರೋತ್ಸಾಹ ನೀಡಲಾಗಿದೆ

-ಕೆ.ರಾಜು, ಪರಿಸರ ಅಧಿಕಾರಿ, ಮಾಲಿನ್ಯ ನಿಯಂತ್ರಣ ಮಂಡಳಿ

***

ಪೂರಕ ವರದಿ: ಟಿ.ನಾಗೇಂದ್ರ, ಅಶೋಕ ಸಾಲವಾಡಗಿ, ಭೀಮಶೇನರಾವ ಕುಲಕರ್ಣಿ, ಎಂ.ಪಿ.ಚಪೆಟ್ಲಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT