ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ ಜಿಲ್ಲೆಯಲ್ಲಿ ಹಸಿರಿನಿಂದ ಕಂಗೊಳಿಸುವ ಕಚೇರಿಗಳು

12 ಎಕರೆ ವಿಶಾಲ ಜಾಗದಲ್ಲಿ ಹರಡಿಕೊಂಡಿರುವ ಜಿಲ್ಲಾಧಿಕಾರಿ ಕಚೇರಿ ಆವರಣ, ಆಕರ್ಷಿಸುತ್ತಿರುವ ಆಹ್ಲಾದಕರ ವಾತಾವರಣ
Last Updated 22 ಆಗಸ್ಟ್ 2021, 15:09 IST
ಅಕ್ಷರ ಗಾತ್ರ

ಯಾದಗಿರಿ: ಸರ್ಕಾರಿ ಕಚೇರಿಗಳು ಕೇವಲ ಕಟ್ಟಡ, ಕಡತ, ಕಾರ್ಯನಿರ್ವಹಣೆಗೆ ಮಾತ್ರ ಗುರುತಿಸಿಕೊಳ್ಳದೇ ಹಸಿರಿನಿಂದ ಕೂಡಿದ ವಾತಾವರಣಕ್ಕೂ ಹೆಸರು ವಾಸಿಯಾಗಿವೆ.

ನಗರ ಸೇರಿದಂತೆ ಜಿಲ್ಲೆಯ ವಿವಿಧ ಕಡೆ ಸರ್ಕಾರಿ ಕಚೇರಿ, ಶಾಲೆ–ಕಾಲೇಜುಗಳಲ್ಲಿ ಹಸೀರಿಕರಣ ಪ್ರಕ್ರಿಯೆ ನಡೆದಿದೆ.

ಜಿಲ್ಲಾಧಿಕಾರಿ ಕಚೇರಿ (ಮಿನಿವಿಧಾನಸೌಧ), ಎಪಿಎಂಸಿ ಆವರಣದಲ್ಲಿನ ಅಗ್ನಿಶಾಮಕ ದಳ ಕಚೇರಿ, ಗ್ರಾಮಾಂತರ ಪೊಲೀಸ್‌ ಠಾಣೆಯ ಆವರಣದ ಮಹಿಳಾ ಪೊಲೀಸ್‌ ಠಾಣೆ, ತಹಶೀಲ್ದಾರ್‌ ಕಚೇರಿ ಸೇರಿದಂತೆ ಹಲವೆಡೆ ವಿವಿಧ ಜಾತಿಯ ಗಿಡ, ಮರಗಳಿಂದ ಕೂಡಿದ ಉತ್ತಮ ವಾತಾವರಣ ನಿರ್ಮಾಣಗೊಂಡಿದೆ.

ಜಿಲ್ಲಾಧಿಕಾರಿ ಕಚೇರಿ:ನಿತ್ಯ ನೂರಾರು ಸಾರ್ವಜನಿಕರು, ನೌಕರರು, ಸಿಬ್ಬಂದಿ ತಮ್ಮ ಕೆಲಸ, ಕಚೇರಿಗಾಗಿ ಜಿಲ್ಲಾಧಿಕಾರಿ ಕಚೇರಿಗೆ ಬರುತ್ತಾರೆ. ಕಚೇರಿ ಆವರಣದಲ್ಲಿ ಹಲವು ಮರ, ಗಿಡಗಳನ್ನು ನೋಡಿ ಆನಂದಿಸಿ ತಮ್ಮ ಕೆಲಸಗಳಿಗೆ ತೆರಳುತ್ತಾರೆ.

12 ಎಕರೆ ಪ್ರದೇಶದಲ್ಲಿ ಜಿಲ್ಲಾಧಿಕಾರಿ ಕಚೇರಿ ತಲೆ ಎತ್ತಿದ್ದು, ಕಟ್ಟಡ ಕಟ್ಟುವಾಗಲೇ ನಾನಾ ಬಗೆಯ ಗಿಡ, ಮರಗಳನ್ನು ನೆಟ್ಟಿದ್ದರಿಂದ ಈಗ ಬಹುದೊಡ್ಡದಾಗಿ ಬೆಳೆದಿವೆ.

ಹಸಿರು, ಕೆಂಪು, ಬಿಳಿ ಬಣ್ಣ ಸೇರಿ ವಿವಿಧ ಬಣ್ಣಗಳಿಂದ ಗಿಡ ಮರಗಳು, ಸಸಿಗಳು ಕಂಗೊಳಿಸುತ್ತವೆ. ನೂರಾರು ಬೇವು, ಬದಾಮಿ, ನೀಲಗಿರಿ, ಆಲದ‌ಮರ, ಗುಲ್‌ಮೊಹರ್‌ ಸೇರಿದಂತೆ ವಿವಿಧ ಜಾತಿ ಹೂವುಗಳು, ಅಲಂಕಾರಿಕ ಸಸಿಗಳು ಜಾಗ ಪಡೆದಿವೆ.

ಪಕ್ಷಿಗಳಿಗೆ ಆಶ್ರಯ:ನೂರಾರು ಜಾತಿಯ ಪಕ್ಷಿಗಳಿಗೆ ಕಚೇರಿ ಆವರಣದಲ್ಲಿ ಬೆಳೆದಿರುವ ಮರ, ಗಿಡಗಳು ಆಶ್ರಯವನ್ನು ನೀಡಿವೆ. ಕಚೇರಿಗಳು ನಡುವೆ ಇದ್ದು, ಸುತ್ತಮುತ್ತಲಿನ ಸ್ಥಳಗಳಲ್ಲಿ ಹಸಿರು ಹೊದಿಕೆ ಇದೆ. ವಾಹನಗಳ ನಿಲ್ದಾಣ ಸ್ಥಳದಲ್ಲಿಯೂ ಮರಗಳನ್ನು ಬೆಳೆಸಲಾಗಿದೆ.

12 ಮಹಿಳೆಯರು, 4 ಜನ ಪುರುಷರು:ಕಚೇರಿ ಆವರಣ ಸ್ವಚ್ಛತೆ ಸೇರಿದಂತೆ ಗಿಡ, ಮರಗಳನ್ನು ನೋಡಿಕೊಳ್ಳಲು ಹೊರ ಗುತ್ತಿಗೆ ಆಧಾರದ ಮೇಲೆ 12 ಮಹಿಳೆಯರು ಹಾಗೂ 4 ಜನ ಪುರುಷರನ್ನು ನೇಮಿಸಿಕೊಳ್ಳಲಾಗಿದೆ. ಕಚೇರಿಯ ಎಡ ಮತ್ತು ಬಲ ಭಾಗವೆಂದು ವಿಂಗಡಿಸಿ, ತಲಾ 6 ಜನ ಮಹಿಳೆಯರು ಉದ್ಯಾನ, ತೋಟದ ನಿರ್ವಹಣೆ ಹೊತ್ತಿದ್ದಾರೆ. ನಗರವಲ್ಲದೇ ನೆರೆಯ ಗ್ರಾಮಗಳಿಂದಲೂ ಕೆಲಸಕ್ಕೆ ಬರುತ್ತಿದ್ದಾರೆ. ಬೆಳಿಗ್ಗೆ 8ರಿಂದ ಸಂಜೆ 4ರವರೆಗೆ ಕೆಲಸದಲ್ಲಿ ನಿರತವಾಗಿರುತ್ತಾರೆ.

ಹಳೆ ಜಿಲ್ಲಾಧಿಕಾರಿ ಕಚೇರಿ ಈಗಿನ ತಹಶೀಲ್ದಾರ್‌ ಕಚೇರಿ ಆವರಣದಲ್ಲಿಯೂ ವಿವಿಧ ಜಾತಿಯ ಗಿಡಗಳು, ಅಲಂಕಾರಿ ಸಸಿಗಳನ್ನು ಬೆಳೆಸಲಾಗಿದೆ.

ಅಗ್ನಿಶಾಮಕ ದಳ ಕಚೇರಿ:ನಗರದ ಎಪಿಎಂಸಿ ಆವರಣದಲ್ಲಿರುವ ಅಗ್ನಿಶಾಮಕದಳ ಕಚೇರಿಯಲ್ಲಿ ನೂರಾರು ಗಿಡ, ಮರಗಳಿಂದ ತುಂಬಿದ್ದು, ಹಸಿರು ವಾತಾವರಣ ಎದ್ದು ಕಾಣುತ್ತದೆ.

ಕಚೇರಿ 3 ಎಕರೆ ಜಾಗದಲ್ಲಿ ನಿರ್ಮಾಣಗೊಂಡಿದ್ದು, ಇದರಲ್ಲಿ ಅಗ್ನಿಶಾಮಕ ಠಾಣೆ, ವಸತಿ ಗೃಹಗಳು ಇವೆ. ಅಲ್ಲಿಯೇ ನೂರಾರು ವಿವಿಧ ಜಾತಿಯ ಮರಗಳನ್ನು ಪಾಲನೆ ಪೋಷಣೆ ಮಾಡಲಾಗುತ್ತಿದೆ.

ತೆಂಗಿನ ಸಸಿ 14, ಮೆಹಂದಿ ಗಿಡ 2, ಬಿಲ್ವಪತ್ರಿ 2, ದಾಳಿಂಬೆ ಗಿಡ 5, ಸಾಗುವಾನಿ ಗಿಡ 10, ಬೇವಿನ ಗಿಡ 10, ಸೀತಾಫಲ ಗಿಡ 5, ಕಾಜು ಗಿಡ 2, ಹುಣಸೆ ಗಿಡ 2, ನಿಂಬು ಗಿಡ 4, ನೆಲ್ಲೆಕಾಯಿ ಗಿಡ 5, ಮಾವಿನ ಸಸಿ 5, ಹಲಸಿನ ಸಸಿ 2, ಕರಿಬೇವು ಸಸಿ 5, ಗುಲಾಬಿ ಹೂವಿನ ಗಿಡ 5 ಸೇರಿದಂತೆ ಒಟ್ಟು 78 ಸಸಿಗಳಿವೆ.

ತೆಂಗಿನ ಮರ 24, ತಪ್ಸಿ ಮರ 23, ಗಾಳಿ ಮರ 11, ನೇರಳೆ ಮರ 10, ಬಾದಾಮಿ ಮರ 3, ಬೇವಿನ ಮರ 23, ಅರಳಿ ಮರ 13, ಸಾಗುವಾನಿ ಮರ 30, ಹೊಂಗೆ ಮರ 2, ಕಾಡು ಮರ 62, ನೇರಳೆ ಮರ 10, ಬಾಲ ಹೂವಿನ ಮರ 3, ಅಶೋಕ ಗಿಡ 13, ಸಪೋಟ ಹಣ್ಣಿನ ಗಿಡ 4, ನಿಂಬೆ ಗಿಡ 8, ಸೀತಾಫಲ ಹಣ್ಣಿನ ಗಿಡ 4, ಗಜನಿಂಬೆ ಹಣ್ಣಿನಗಿಡ 2, ಪೇರಲೆ ಹಣ್ಣಿನ ಗಿಡ 5, ನೆಲ್ಲೆಕಾಯಿ ಗಿಡ 5, ಮಲ್ಲಿಗೆ ಹೂವಿನ ಗಿಡ 1, ಕೆಂಪು ದಾಸವಾಳ ಗಿಡ 6, ಬಿಳಿ ದಾಸವಾಳ ಗಿಡ 2, ಕಣಗಲಿ ಹೂವಿನ ಗಿಡ 2, ಶೋ ಹೂವಿನ ಗಿಡ 2, ಬಿಳಿ ಎಕ್ಕೆ ಹೂವಿನ ಗಿಡ 2 ಸೇರಿದಂತೆ 270 ಗಿಡಗಳು ಸೇರಿ 348 ಸಸಿ, ಗಿಡಗಳಿವೆ.

ಮಹಿಳಾ ಪೊಲೀಸ್‌ ಠಾಣೆ:ನಗರದ ಗ್ರಾಮೀಣ ಪೊಲೀಸ್‌ ಠಾಣೆ ಆವರಣದಲ್ಲಿರುವ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಹಸಿರು ಬಳ್ಳಿಗಳನ್ನು ಪ್ಲಾಸ್ಟಿಕ್‌ ಬಾಟಲಿಗಳಲ್ಲಿ ಬೆಳೆಸಿ ನೇತುಹಾಕಲಾಗಿದ್ದು, ಕಣ್ಮನ ಸೆಳೆಯುತ್ತವೆ.

ಕೊಪ್ಪಳ ಜಿಲ್ಲೆಯ ಮುನಿರಾಬಾದ್ ತೋಟಗಾರಿಕೆ ಇಲಾಖೆಯಿಂದ ಬಳ್ಳಿಗಳನ್ನು ತಂದು ಬೆಳೆಸಲಾಗಿದೆ. ಹೂ ಕುಂಡ, ಬಳ್ಳಿಗಳಲ್ಲಿ ಹಸಿರು ಕಂಗೊಳಿಸುತ್ತಿದೆ. ಪೊಲೀಸ್‌ ಸಿಬ್ಬಂದಿ ನೀರು ಹಾಕಿ ಪೋಷಣೆ ಮಾಡುತ್ತಿದ್ದಾರೆ.

***

ಬರದ ನಡುವೆ ಒಂದಿಷ್ಟು ಹಸಿರು

ಶಹಾಪುರ: ಕೋವಿಡ್ ನಡುವೆ ಶಾಲೆಗೆ ಬೀಗ ಹಾಕಿದ್ದರೂ ಶಿಕ್ಷಕರ ಹಿತಾಸಕ್ತಿಯಿಂದ ತಾಲ್ಲೂಕಿನ ಹಲವು ಶಾಲೆಯ ಆವರಣದಲ್ಲಿ ಬೆಳೆದು ನಿಂತ ಮರ ಹಾಗೂ ಹಸಿರು ಕಣ್ಣಿಗೆ ತಂಪು ನೀಡುತ್ತಲಿವೆ.

ಅದರಲ್ಲಿ ತಾಲ್ಲೂಕಿನ ರಸ್ತಾಪುರ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಬೆಳೆಸಿದ ವಿವಿಧ ಜಾತಿಯ ಮರ, ಹಸಿರು ಹೊದಿಗೆ ಕಾಣಿಸುತ್ತಲಿದೆ. ಅಲ್ಲದೆ ತಾಲ್ಲೂಕಿನ ದೋರನಹಳ್ಳಿ ಪ್ರೌಢಶಾಲೆ, ದರ್ಶನಾಪುರ ಪ್ರೌಢಶಾಲೆಯಲ್ಲಿ ಉತ್ತಮ ಪರಿಸರದ ಜೊತೆ ವಾತಾವರಣವು ಇದೆ.

ಅಲ್ಲದೆ ನಗರದ ನ್ಯಾಯಾಲಯದ ಸಂಕೀರ್ಣದಲ್ಲಿ 150ಕ್ಕೂ ಹೆಚ್ಚು ಗಿಡಗಳನ್ನು ಬೆಳೆಸಲಾಗಿದೆ. ಸಾಕಷ್ಟು ಗಿಡಗಳು ದೊಡ್ಡದಾಗಿ ಬೆಳೆದು ನಿಂತಿವೆ. ಸಂಜೆ ಆಗುತ್ತಿದ್ದಂತೆ ಹಕ್ಕಿಗಳ ಕಲರವ ಮನಸ್ಸಿಗೆ ಮುದ ನೀಡುತ್ತದೆ.
********
ಹಸಿರು ವನದಲ್ಲಿ ವಸತಿ ಶಾಲೆ

ವಡಗೇರಾ: ತಾಲ್ಲೂಕಿನ ಬೆಂಡೆಬೆಂಬಳಿ ಗ್ರಾಮದ ಮೊರಾರ್ಜಿ ದೇಸಾಯಿ ಶಾಲೆಯು ಹಸಿರು ವಾತಾವರಣದಿಂದ ಕೂಡಿದ್ದು, ಸುಂದರ ಸರ್ಕಾರಿ ವಸತಿ ಶಾಲೆಯಾಗಿದೆ.

ಶಾಲೆಯ ಶಿಕ್ಷಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಶ್ರಮದಿಂದ ಈ ಶಾಲೆಯು ಹಚ್ಚ ಹಸಿರಿನಿಂದ ಕಂಗೊಳಿಸಿ ಇತರೆ ಖಾಸಗಿ ಮತ್ತು ಸರ್ಕಾರಿ ಶಾಲೆಗೆ ಮಾದರಿಯಾಗಿದೆ.

ಈ ಶಾಲೆಯ ಆವರಣ ಸುಮಾರು 8 ಎಕರೆ ವಿಶಾಲವಾದ ಜಾಗದಲ್ಲಿ ತಲೆ ಎತ್ತಿದೆ. ಬೇವಿನ ಮರ 30, ಹೊಂಗೆ 40, ಗುಲ್‌ ಮೊಹರ್‌ 15, ಸಿರ್ಸಲ್ ಗಿಡ 10, ಅರಳಿ ಮರ 10, ನೇರಳ ಹಣ್ಣು ಗಿಡ 10, ಬಾದಾಮಿ 10, ಇಚಲು ಹಣ್ಣಿನ ಗಿಡ 5, ಸೀತಾಫಲ ಗಿಡ 10 ಸೇರಿದಂತೆ ವಿವಿಧ ಗಿಡಗಳನ್ನು ಬೆಳೆಸಲಾಗಿದೆ. ಇದು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾದ ವಾತಾವರಣವಾಗಿದೆ.

‘ನಮ್ಮ ಶಾಲೆಯ ವಿಶಾಲವಾದ ಆವರಣದಲ್ಲಿ ಮಕ್ಕಳಿಂದ ಮತ್ತು ಸಿಬ್ಬಂದಿ ಸಹಾಯದಿಂದ ಇಷ್ಟು ಗಿಡಮರಗಳನ್ನು ಬೆಳಿಸಿದ್ದೇವೆ. ನಮ್ಮ ಶಾಲೆಗೆ ಮೂರು ಕಡೆ ತಡೆಗೋಡೆ ಇದೆ. ಪಶ್ಚಿಮ ಕಡೆ ಒಂದು ತಡೆಗೋಡೆಯಾದರೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಗಿಡಗಳನ್ನು ಬೆಳೆಸಬಹುದು. ಅಲ್ಲಿಂದ ದನಕರುಗಳು ಬಂದು ಗಿಡಗಳಿಗೆ ಹಾನಿ ಮಾಡುತ್ತಿವೆ’ ಎಂದು ಶಾಲೆಯ ಪ್ರಾಂಶುಪಾಲ ಮಲ್ಲಿಕಾರ್ಜುನ ಪಾಟೀಲ ಮಾಹಿತಿ ನೀಡಿದರು.

ತಾಲ್ಲೂಕಿನ ಮಾಚನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿಯೂ ಹಲವಾರು ಜಾತಿಯ ಗಿಡ, ಮರಗಳಿವೆ. ಆವರಣ ಹಸಿರು ತುಂಬಿಕೊಂಡಿದೆ.

***

ಕಚೇರಿ ಆವರಣಲ್ಲಿರುವ ಗಿಡ ಮರಗಳು ಸಾರ್ವಜನಿಕರಿಗೆ ಸಂತಸವನ್ನುಂಟು ಮಾಡುತ್ತವೆ. ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯತೆಯಾಗಲಿ
ಡಾ.ರಾಗಪ್ರಿಯಾ ಆರ್‌., ಜಿಲ್ಲಾಧಿಕಾರಿ

***

ಕಚೇರಿ ಆವರಣದಲ್ಲಿ 300ಕ್ಕೂ ಹೆಚ್ಚು ಸಸಿ, ಗಿಡ ಮರಗಳಿವೆ. ಸಿಬ್ಬಂದಿ ಸೇರಿದಂತೆ ನಾವೆಲ್ಲರೂ ಪೋಷಣೆ ಮಾಡುತ್ತೇವೆ. ಇದು ಖುಷಿ ಕೊಡುವ ಸಂಗತಿ
ಹನುಮನಗೌಡ ಪಾಟೀಲ, ಜಿಲ್ಲಾ ಅಗ್ನಿಶಾಮಕ ದಳ ಅಧಿಕಾರಿ

***

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬೆಳೆದಿರುವ ಮರ, ಗಿಡ ಅಲಂಕಾರಿಕ ಸಸಿಗಳನ್ನು ನೋಡಿದರೆ ಮನಸ್ಸು ಪ್ರಫುಲ್ಲವಾಗುತ್ತದೆ
ಪಪ್ಯಾ ಚವಾಣ್, ಕಂಚೆಗಾರನಹಳ್ಳಿ ತಾಂಡಾ

***

ಪೂರಕ ಮಾಹಿತಿ: ಟಿ.ನಾಗೇಂದ್ರ, ದೇವೀಂದ್ರಪ್ಪ ಬಿ ಕ್ಯಾತನಾಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT