ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಅತಿವೃಷ್ಟಿಯಿಂದ ಹಾಳಾದ ‘ಹೆಸರು’

ಸಾಲ ಮಾಡಿ ಬಿತ್ತಿದ್ದವರಿಗೆ ಮಳೆರಾಯನ ಅವಕೃಪೆ, ಶೀಘ್ರ ಪರಿಹಾರಕ್ಕೆ ಒತ್ತಾಯ
Last Updated 2 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿದ ಮಳೆಗೆ ಹೆಸರು, ಹತ್ತಿ, ತೊಗರಿ ಬೆಳೆಗಾರರು ಅತಿವೃಷ್ಟಿಗೆ ನಲುಗಿದ್ದಾರೆ.

ಜುಲೈ ತಿಂಗಳಲ್ಲಿ 220.01 ಮಿಲಿಮೀಟರ್‌ (ಎಂಎಂ) ಮಳೆಯಾಗಿದ್ದು, ವಾಡಿಕೆ ಮಳೆ 120.8 ಎಂಎಂ ಮಳೆಯಾಗಬೇಕಿತ್ತು. ಆದರೆ, ಹೆಚ್ಚುವರಿಯಾಗಿ 99.3 ಎಂಎಂ ಹೆಚ್ಚುವರಿ ಮಳೆಯಾಗಿದೆ. ಆಗಸ್ಟ್‌ ತಿಂಗಳಲ್ಲಿ 136.06 ವಾಡಿಕೆ ಮಳೆಯಿದ್ದು, 243.6 ಎಂಎಂ ಮಳೆಯಾಗಿದೆ. 107 ಎಂಎಂ ಹೆಚ್ಚುವರಿ ಮಳೆ ಸುರಿದಿದೆ.

ಕಳೆದ 7 ದಿನಗಳಿಂದ ಆಗಸ್ಟ್‌ 27ರಿಂದ ಸೆಪ್ಟೆಂಬರ್ 2ರ ವರೆಗೆ 27.04 ಎಂಎಂ ಮಳೆಯಾಗಬೇಕಿತ್ತು. ಆದರೆ, 125.5 ಎಂಎಂ ಮಳೆಯಾಗಿದೆ. ಸೆಪ್ಟೆಂಬರ್ 1, 2ರಂದು 8.2 ಎಂಎಂ ಮಳೆಯಾಗಬೇಕಿತ್ತು. 11.09 ಎಂಎಂಎ ಮಳೆಯಾಗಿದೆ. ಜೂನ್‌ 1ರಿಂದ ಸೆಪ್ಟೆಂಬರ್ 2ರ ವರೆಗೆ 364.9 ಎಂಎಂ ವಾಡಿಕೆ ಮಳೆಯಿದ್ದು, 562.3 ಎಂಎಂ ಮಳೆಯಾಗಿದೆ. ಜನವರಿ 1ರಿಂದ ಸೆಪ್ಟೆಂಬರ್ 2ರ ವರೆಗೆ 432.4 ಎಂಎಂ ಮಳೆಯಾಗಿದ್ದು, 664.4 ಎಂಎಂ ಮಳೆಯಾಗಿದೆ.

ಈಚೆಗೆ ಸುರಿದ ಮಳೆಗೆ ಯಾದಗಿರಿ ಮತಕ್ಷೇತ್ರದ ಅರಕೇರಾ (ಕೆ), ನಾಯ್ಕಲ್‌, ಸುರಪುರ ಮತಕ್ಷೇತ್ರದ ಹುಣಸಗಿ ತಾಲ್ಲೂಕಿನ ಹಲವಾರು ಗ್ರಾಮಗಳ ಜಮೀನುಗಳಲ್ಲಿ ನೀರು ನುಗ್ಗಿ ಬೆಳೆಗಳು ಹಾಳಾಗಿವೆ.

ಸಾಲ ಮಾಡಿ ಬಿತ್ತನೆ: ಅತಿವೃಷ್ಟಿಯಿಂದ ಸಾವಿರಾರು ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತಿದ ಹತ್ತಿ, ಹೆಸರು, ತೊಗರಿ ಬೆಳೆ ನಾಶವಾಗಿದೆ. ಒಂದು ಎಕರೆಗೆ ₹15ರಿಂದ 20 ಸಾವಿರ ಖರ್ಚು ಮಾಡಿದ್ದಾರೆ. ಆದರೆ, ಮಳೆಯಿಂದ ಹೆಸರು ಬೆಳೆ ಮಳೆಗೆ ಆಹುತಿಯಾಗಿದೆ. ಚೆನ್ನಾಗಿ ಬೆಳೆ ಬಂದಿದೆ. ಸಾಲ ತೀರಿಸಬಹುದು ಎಂದುಕೊಂಡಿದ್ದ ರೈತರಿಗೆ ಭ್ರಮನಿರಸಮವಾಗಿದೆ.

ಬಿತ್ತನೆ ಬೀಜ, ರಸಗೊಬ್ಬರ, ಕೂಲಿ ಸೇರಿದಂತೆ ಸಾವಿರಾರು ರೂಪಾಯಿ ಖರ್ಚು ಮಾಡಿದರೂ ಯಾವುದೇ ಲಾಭವಿಲ್ಲದಂತೆ ಆಗಿದೆ. ಮತ್ತೆ ಸಾಲದ ಸುಳಿಯಲ್ಲಿ ಸಿಲುಕುವಂತೆ ಆಗಿದೆ.

‘ಕೂಡಲೇ ಪರಿಹಾರವನ್ನು ಮಂಜೂರು ಮಾಡಬೇಕು. ಸಾಲ ಪಡೆದುಕೊಂಡು ಪ್ರತಿ ಎಕರೆಗೆ ₹15 ಸಾವಿರದಂತೆ ಖರ್ಚು ಮಾಡಿದ್ದೇವೆ. ಹೆಸರು, ಹತ್ತಿ ಬೆಳೆಗಳು ಸಂಪೂರ್ಣವಾಗಿ ಹಾನಿ ಯಾಗಿರುವುದರಿಂದ ಸಂಬಂಧಪಟ್ಟ ಅಧಿಕಾರಿಗಳು ಪರಿಹಾರ ಮಂಜೂರು ಮಾಡಿಕೊಡಬೇಕು. ಒಂದು ವೇಳೆ ನಿರ್ಲಕ್ಷ್ಯಿಸಿದರೆ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಏರ್ಪಟ್ಟಿದೆ’ ಅರಕೇರಾ (ಕೆ) ಗ್ರಾಮದ ರೈತ ಮಲ್ಲಿನಾಥ ಡಿ ಬೇಗಾರ ಹೇಳುತ್ತಾರೆ.

****

ಪರಿಹಾರ ವಿಳಂಬಕ್ಕೆ ಆಕ್ರೋಶ

ಯಾದಗಿರಿ: ಮಳೆಯಿಂದ ಯಾದಗಿರಿ ವಿಧಾನಸಭೆ ಕ್ಷೇತ್ರದಲ್ಲಿ ಅಪಾರ ಪ್ರಮಾಣದಲ್ಲಿ ಬೆಳೆಹಾನಿ ಆಗಿದ್ದರೂ ಪರಿಹಾರ ನೀಡಲು ಸರ್ಕಾರ ವಿಳಂಬ ಧೋರಣೆ ಮಾಡುತ್ತಿರುವುದು ರೈತರನ್ನು ಮತ್ತಷ್ಟು ಸಂಕಷ್ಟಕ್ಕೀಡು ಮಾಡಿದೆ ಎಂದು ಕಾಂಗ್ರೆಸ್ ನಾಯಕ ಡಾ. ಶರಣಬಸವಪ್ಪ ಕಾಮರೆಡ್ಡಿ ಬೆಂಡೆಬೆಂಬಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಧಾರಾಕಾರ ಮಳೆಗೆ ಬೆಳೆಗಳು ಜಲಾವೃತ ಆಗಿವೆ. ಮನೆಗಳಿಗೆ ಹಾನಿ ಆಗಿದೆ. ಶಾಲೆ ಮತ್ತು ಅಂಗನವಾಡಿ ಕೇಂದ್ರಗಳು ಜಖಂಗೊಂಡಿವೆ. ಆದರೆ, ಪರಿಹಾರ ನೀಡುವಲ್ಲಿ ಮಾತ್ರ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ದೂರಿದ್ದಾರೆ.

ನೊಂದವರ ಬೆನ್ನಿಗೆ ನಿಲ್ಲುವುದು ಸರ್ಕಾರದ ಪ್ರಮುಖವಾದ ಜವಾಬ್ದಾರಿ. ಆದರೆ, ಇದಕ್ಕೂ ತನಗೂ ಯಾವುದೇ ರೀತಿಯಿಂದ ಸಂಬಂಧವೇ ಇಲ್ಲ ಎಂಬಂತೆ ವರ್ತನೆ ಮಾಡುತ್ತಿದೆ. ಇದಕ್ಕೆ ಜನರೇ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

***

ಅತಿವೃಷ್ಟಿಯಿಂದ ಹಾನಿಯಾದ ಪ್ರದೇಶದಲ್ಲಿ ಜಂಟಿ ಸಮೀಕ್ಷೆ ನಡೆಯುತ್ತಿದೆ. ಈಗಾಗಲೇ 14 ಸಾವಿರಕ್ಕೂ ಹೆಚ್ಚು ಹಾನಿಯಾಗಿದೆ. ಈಚೆಗೆ ಸುರಿದ ಮಳೆ ಹಾನಿ ವರದಿ ಬರಬೇಕಿದೆ
ಆಬಿದ್‌ ಎಸ್‌ .ಎಸ್‌, ಜಂಟಿ ಕೃಷಿ ನಿರ್ದೇಶಕ

***

ನಮ್ಮ 8 ಎಕರೆ ಜಮೀನಿನಲ್ಲಿ ಬಿತ್ತಿದ ಹೆಸರು, ಹತ್ತಿ ಬೆಳೆಗಳು ಸಂಪೂರ್ಣ ಹಾನಿಯಾಗಿವೆ. ಪ್ರತಿ ಎಕರೆಗೆ ₹15 ಸಾವಿರದಂತೆ ಖರ್ಚು ಮಾಡಿದ್ದು ಮಳೆರಾಯ ಅವಕೃಪೆ ತೋರಿದೆ
ಮಲ್ಲಿನಾಥ ಡಿ ಬೇಗಾರ, ಅರಕೇರಾ (ಕೆ) ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT