ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ। ನಮ್ಮ ಜನ ನಮ್ಮ ಧ್ವನಿ: ಶೇಂಗಾ, ಭತ್ತ ಧಾರಣೆ ಕುಸಿತ; ಅಪಾರ ನಷ್ಟ

ಜಿಲ್ಲೆಯ ವಿವಿಧೆಡೆ ಅಕಾಲಿಕ ಮಳೆಯಿಂದ ಬೆಳೆ ಹಾನಿ; ಸಮೀಕ್ಷೆ ನಡೆಸಿ ಪರಿಹಾರ ನೀಡಲು ಆಗ್ರಹ
Last Updated 2 ಮೇ 2022, 2:41 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಮುಂಗಾರಿಗೆ ಹೋಲಿಸಿದರೆ ಹಿಂಗಾರು ಹಂಗಾಮಿ ನಲ್ಲಿ ಭತ್ತ ಮತ್ತು ಶೇಂಗಾ ಧಾರಣೆ ಕುಸಿದಿದೆ. ಇದರಿಂದ ರೈತರು ಮತ್ತಷ್ಟು ನಷ್ಟಕ್ಕೆ ಸಿಲುಕಿದ್ದಾರೆ. ಒಂದೆಡೆ ಬೆಳೆ ಹಾನಿ ಜೊತೆಗೆ ದರವೂ ಕುಸಿದ ಕಾರಣ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಎರಡನೇ ಬೆಳೆಯಾಗಿ ಭತ್ತ, ಶೇಂಗಾ, ಸಜ್ಜೆ ಬೆಳೆಯಲಾಗುತ್ತಿದೆ. ಕಾಲುವೆ ಜಾಲದ ಮುಂಭಾಗದಲ್ಲಿರುವ ರೈತರು ಭತ್ತ ಬೆಳೆದರೆ, ಇನ್ನುಳಿದ ಕಡೆ ಶೇಂಗಾ, ಸಜ್ಜೆ ಬೆಳೆಯಲಾಗುತ್ತಿದೆ. ಆದರೆ, ಎರಡನೇ ಬೆಳೆಗೆ ಬೆಲೆಯೇ ಇಲ್ಲದಂತಾಗಿದೆ. ಇನ್ನು ಮೋಡ ಕವಿದ ವಾತಾವರಣ ಮುಂದುವರೆದರೆ ಭತ್ತದ ಧಾರಣೆ ಕಡಿಮೆಯಾಗುತ್ತದೆ. ಇದಕ್ಕೆ ಯಾರನ್ನು ದೂಷಿಸಬೇಕು ಎಂದು ತಿಳಿಯದಂತಾಗಿದೆ ಎನ್ನುವುದು ರೈತರ ಅಳಲು.

ಆರ್‌ಎನ್‌ಆರ್‌ ಭತ್ತದ ದರ ಪ್ರತಿ 75 ಕೆಜಿಗೆ ₹1,290 ರಿಂದ 1,400 ಇದ್ದರೆ, ಕಾವೇರಿ ಸೋನಾ ಭತ್ತದ ಬೆಲೆ ₹1,150 ರಿಂದ ₹1,200 ಇದೆ. ಮಾರುಕಟ್ಟೆಗೆ ಬರುವ ಶೇಂಗಾ ಧಾರಣೆ ಇಳಿಮುಖ ಕಾಣುತ್ತಿದ್ದು, ಸದ್ಯಕ್ಕೆ ಪ್ರತಿ ಕ್ವಿಂಟಲ್ ಶೇಂಗಾಕ್ಕೆ ದರ ₹4ರಿಂದ 5 ಸಾವಿರ ಆಸುಪಾಸಿನಲ್ಲಿ ಇದೆ. ಏರುಮುಖ ಕಾಣುತ್ತಿಲ್ಲ. ಶೇಂಗಾದ ದರ ಪ್ರತಿ ಕ್ವಿಂಟಲ್‌ಗೆ ₹ 4,270 ರಿಂದ ₹6,175 ಇದೆ.

ಜಿಲ್ಲೆಯಲ್ಲಿ ‘ಒಂದು ಬೆಳೆ ಒಂದು ಉತ್ಪನ್ನ’ ಯೋಜನೆಯಡಿ ಶೇಂಗಾ ಬೆಳೆ ಆಯ್ಕೆ ಮಾಡಿಕೊಳ್ಳಲಾಗಿದೆ. ಆದರೆ, ದರ ತೀವ್ರ ಇಳಿಕೆಯಾಗಿದ್ದು, ಇದಕ್ಕೆ ಅಧಿಕಾರಿಗಳಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಜಿಲ್ಲೆಯಲ್ಲಿ ಶೇಂಗಾ ಬೆಳೆಯಲು ಉತ್ತಮ ಮಣ್ಣು ಇದ್ದು, ಇದನ್ನು ಆಯ್ಕೆ ಮಾಡಲಾಗಿದೆ. ಆದರೆ, ದರ ಇಳಿಕೆಯಾದಾಗ ಈ ಯೋಜನೆಯು ರೈತರ ನೆರವಿಗೆ ಬರುವುದಿಲ್ಲ ಎಂದು ರೈತರು ಹೇಳುತ್ತಾರೆ.

‘ಒಂದು ಬೆಳೆ ಒಂದು ಉತ್ಪನ್ನ ಯೋಜನೆ ಯಡಿ ಜಿಲ್ಲೆಯಲ್ಲಿ ಶೇಂಗಾ ಬೆಳೆ ಆಯ್ಕೆ ಮಾಡಿಕೊಂಡಿದ್ದು ಹಾಸ್ಯಾಸ್ಪದ. ಧಾರಣೆ ಕುಸಿತದ ಬಗ್ಗೆ ಜಿ‌ಲ್ಲಾಧಿಕಾರಿ ಮಾತನಾಡುತ್ತಿ‌ಲ್ಲ. ಜಿಲ್ಲಾಡಳಿತವು ಸರ್ಕಾರ ಮಾರ್ಗಸೂಚಿ ಯೊಂದನ್ನೇ ಪಾಲಿಸಿದರೆ ಸಾಲದು, ರೈತರ ಬವಣೆ ಕಡೆಗೂ ಗಮನ ಹರಿಸಬೇಕು. ರೈತರ ದುಸ್ಥಿತಿ ಕುರಿತು ಜಿಲ್ಲಾಡಳಿತವು ಸರ್ಕಾರದ ಗಮನಕ್ಕೆ ತಂದಿದ್ದರೆ, ಶೇಂಗಾಕ್ಕೆ ಕನಿಷ್ಠ ಬೆಂಬಲ ಬೆಲೆ ಸಿಗುತಿತ್ತು. ಸಂಕಷ್ಟದ ಸುಳಿಯಿಂದ ರೈತರು ಪಾರಾಗಲು ಸಾಧ್ಯವಾಗುತಿತ್ತು’ ಎಂದು ರೈತ ಸೋಮಣ್ಣ ತಿಳಿಸಿದರು.

ಸಜ್ಜೆ ಬೆಳೆದ ರೈತರ ಪರಿಸ್ಥಿತಿಯೂ ಹೆಚ್ಚೇನೂ ಭಿನ್ನವಾಗಿಲ್ಲ. ಭತ್ತವೂ ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ. 3.23 ಹೆಕ್ಟೇರ್‌ನಷ್ಟು ತೋಟಗಾರಿಕೆ ಬೆಳೆಯೂ ಹಾನಿಯಾಗಿದೆ.

***

ಅಂಕಿ ಅಂಶ

ಜಿಲ್ಲೆಯಲ್ಲಿ ಹಾನಿಯಾದ ಭತ್ತದ ವಿವರ

ತಾಲ್ಲೂಕು;ಭತ್ತ ಹಾನಿ (ಹೆಕ್ಟೇರ್‌ಗಳಲ್ಲಿ)

ಶಹಾಪುರ; 68.87

ವಡಗೇರಾ; 299.99

ಸುರಪುರ; 1,314.78

ಹುಣಸಗಿ; 1,415.26

ಯಾದಗಿರಿ; 291.12

ಗುರುಮಠಕಲ್‌;00

ಒಟ್ಟು; 3,390.02

ಆಧಾರ: ಕೃಷಿ ಇಲಾಖೆ
***
ಶೇಂಗಾ ಧಾರಣೆ ಇಳಿಕೆ: ಎಣ್ಣೆ ಬೆಲೆ ಜಿಗಿತ

ಶಹಾಪುರ: ಕೃಷ್ಣಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯ ಹೆಚ್ಚಿನ ರೈತರು ಬೇಸಿಗೆ ಹಂಗಾಮಿನ ಬೆಳೆಯಾದ ಶೇಂಗಾವನ್ನು ಬಿತ್ತನೆ ಮಾಡಿದ್ದರು. ಧಾರಣೆ ತೀವ್ರ ಕುಸಿತದಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ.

ಬೇಸಿಗೆ ಹಂಗಾಮಿನಲ್ಲಿ ಕಾಲುವೆಗೆ ಸಮರ್ಪಕವಾಗಿ ನೀರು ದೊರಕುವುದು ಅನುಮಾನ. ಇದೇ ಕಾರಣಕ್ಕೆ ಈ ಬಾರಿ ಹೆಚ್ಚಾಗಿ ನೀರಿನ ಲಭ್ಯತೆ ಹೊಂದಿರುವ ರೈತರು ಪ್ರತಿ ಕ್ವಿಂಟಲ್ ಶೇಂಗಾದ ಬೀಜಕ್ಕೆ ₹11 ಸಾವಿರದಂತೆ ಖರೀದಿ ಮಾಡಿ ಬಿತ್ತನೆ ಮಾಡಿದ್ದರು. 120 ದಿನದ ಬೆಳೆ ಇದಾಗಿದೆ. ಆದರೆ, ನಿರೀಕ್ಷೆಯಷ್ಟು ಇಳುವರಿ ಬಂದಿಲ್ಲ. ವೆಚ್ಚ ಹಾಗೂ ಬೀಜದ ಲೆಕ್ಕ ಹಾಕಿದರೆ ನಷ್ಟದ ಯಾದಿ ಕಣ್ಣು ಮುಂದೆ ಕಾಣುತ್ತದೆ.

ಬೆಲೆ ಕುಸಿತವನ್ನು ತಡೆಯಲು ಸರ್ಕಾರ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿ ಎಣ್ಣೆಕಾಳು ನಿಗಮದಿಂದ ಖರೀದಿ ಕೇಂದ್ರವನ್ನು ಸಹ ಸ್ಥಾಪಿಸಲಿಲ್ಲ. ಇದರಿಂದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ ಅಗಿದೆ ಎನ್ನುತ್ತಾರೆ ಶೇಂಗಾ ಬಿತ್ತನೆ ಮಾಡಿ ಕೈಸುಟುಕೊಂಡಿರುವ ರೈತ ಮಾನಪ್ಪ.

‘ಶೇಂಗಾ ಎಣ್ಣೆಯ ದರ ಒಂದು ಲೀಟರ್‌ಗೆ ₹180 ಇದೆ. ಶೇಂಗಾ ಬೀಜವನ್ನು ₹11 ಸಾವಿರ ಕೊಟ್ಟು ಖರೀದಿಸಿದ್ದೇವೆ. ಪ್ರತಿ ಕ್ವಿಂಟಲ್ ಶೇಂಗಾಕ್ಕೆ ₹ 7 ಸಾವಿರದಿಂದದ ₹ 8 ಸಾವಿರ ಧಾರಣೆ ಇದೆ ಎಂದು ಭಾವಿಸಿದ್ದವರಿಗೆ ನಿರಾಸೆ ಆಗುತ್ತದೆ. ರೈತರ ನೆರವಿಗೆ ಜನಪ್ರತಿನಿಧಿಗಳು, ಜಿಲ್ಲಾಡಳಿತವು ನೆರವಿಗೆ ಬರಬೇಕು’ ಎಂದು ರೈತ ಶಿವಪ್ಪ ತಿಳಿಸಿದರು.
***
ಹುಣಸಗಿ: ಕ್ವಿಂಟಲ್‌ಗೆ ₹300 ಇಳಿಕೆ

ಹುಣಸಗಿ: ಭತ್ತದ ಬೆಲೆ ಕಳೆದ ವಾರ 1,200 ರಿಂದ 1,230 ಇದ್ದ ಧಾರಣಿ ಸದ್ಯ ₹ 1,100 ರಿಂದ ₹ 1,150ಕ್ಕೆ ಕುಸಿದಿದೆ ಎಂದು ದ್ಯಾಮನಹಾಳ ಗ್ರಾಮದ ರೈತ ಲಕ್ಷ್ಮಿಕಾಂತ ಕುಲಕರ್ಣಿ ಅಸಮಾಧಾನ ವ್ಯಕ್ತಪಡಿಸಿದರು. ಕಳೆದ ವಾರ ಸುರಿದ ಅಕಾಲಿಕ ಮಳೆಯಿಂದ ತಾಲ್ಲೂಕಿನ ಕೆಲ ಹಳ್ಳಿಗಳಲ್ಲಿ ಬೆಳೆ ಹಾನಿ ಸಂಭವಿಸಿದ್ದು, ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಸಾಲ ಮಾಡಿ ಗೊಬ್ಬರ ಕ್ರಿಮಿನಾಶಕಕ್ಕೆ ಖರ್ಚು ಮಾಡಿಕೊಂಡಿದ್ದರು. ಇನ್ನೇನು ಒಂದೆರಡು ದಿನಗಳಲ್ಲಿ ರಾಶಿ ಮಾಡುವ ಹಂತದಲ್ಲಿದ್ದಾಗ ಅಕಾಲಿಕ ಮಳೆ ಸುರಿದಿದ್ದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ತಾಲ್ಲೂಕಿನ ಹೆಬ್ಬಾಳ ಕೊಡೇಕಲ್ಲ, ಅರಕೇರಾ ಜೆ, ಸದಬ ಸೇರಿದಂತೆ ಇತರ ಗ್ರಾಮಗಳಲ್ಲಿ ಭತ್ತ ಬೆಳೆ ಹಾನಿಯಾಗಿದೆ ಎಂದು ಕಂದಾಯ ಇಲಾಖೆಯ ಮೂಲಗಳು ತಿಳಿಸಿವೆ. ಈಗಾಗಲೇ ಕಂದಾಯ ಇಲಾಖೆ ಹಾಗೂ ಕೃಷಿ ಇಲಾಖೆಯ ಜಂಟಿ ಆಶ್ರಯದಲ್ಲಿ ಬೆಳೆ ಹಾನಿ ಕುರಿತು ಸಮೀಕ್ಷೆ ಪೂರ್ಣಗೊಂಡಿದೆ ಮಾಹಿತಿ ನೀಡಿದರು.

ಬೆಳೆಹಾನಿ ಕುರಿತು ಸಮಗ್ರ ವರದಿ ತಯಾರಿಸಿ ಮೇಲಾಧಿಕಾರಿಗೆ ಸಲ್ಲಿಸಲಾಗುತ್ತಿದೆ ಎಂದು ಹುಣಸಗಿ ತಹಶೀಲ್ದಾರ್ ಅಶೋಕ ಸುರಪುರಕರ್ ತಿಳಿಸಿದರು.

ಅಕಾಲಿಕ ಮಳೆಗೆ ರಾಶಿ ಮಾಡಿ ಹಾಕಿದ್ದ ಭತ್ತವೂ ಹಾನಿಯಾಗಿ ಭತ್ತದ ರಾಶಿಗೆ ನೀರು ನುಗ್ಗಿದ್ದರಿಂದಾಗಿ ಭತ್ತ ಖರೀದಿಗೆ ಯಾವುದೇ ಖರೀದಿದಾರರು ಮುಂದೆ ಬರುತ್ತಿಲ್ಲ ಎಂದು ತೆಗ್ಗೇಳ್ಳಿ ಗ್ರಾಮದ ರೈತ ಗಿರೀಶ ಪಾಟೀಲ ತಮ್ಮ ಸಮಸ್ಯೆ ಕುರಿತು ವಿವರಿಸಿದರು.
***
ಸುರಪುರ: ಅಪಾರ ಪ್ರಮಾಣದ ಭತ್ತ ನಷ್ಟ

ಸುರಪುರ: ಅಕಾಲಿಕ ಮಳೆಯಿಂದ ತಾಲ್ಲೂಕಿನಲ್ಲಿ 1,812 ರೈತರ 1,314 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಆಗಿದೆ. ತಾಲ್ಲೂಕಿನಲ್ಲಿ ಹೆಚ್ಚಾಗಿ ಭತ್ತ ಬೆಳೆಯುತ್ತಿದ್ದು, ಹಾನಿಯಾದ ಬೆಳೆಗಳಲ್ಲಿ ಶೇ 95ರಷ್ಟು ಭತ್ತವೇ ಸೇರಿದೆ.

ಅದರಲ್ಲೂ ಆರ್‌ಎನ್‌ಆರ್‌ ಎಂಬ ಭತ್ತದ ತಳಿ ಹೆಚ್ಚು ಹಾನಿಗೊಳಗಾಗಿದೆ. ಈ ಬೆಳೆ ಗಟ್ಟಿ ಆಗಿರದ ಕಾರಣ ಜೋರಾದ ಗಾಳಿ ಮತ್ತು ಮಳೆಗೆ ನೆಲ ಕಚ್ಚುತ್ತದೆ.
ಏಪ್ರಿಲ್ 21ರಂದು ಸುರಿದ ಅಕಾಲಿಕ ಮಳೆ ಈ ಹಾನಿಗೆ ಕಾರಣ.

ಕಕ್ಕೇರಾ ವಲಯದಲ್ಲಿ 25.5 ಮಿ.ಮೀ ಮಳೆ ಸುರಿದರೆ ಸುರಪುರ
ವಲಯದಲ್ಲಿ 11.6 ಮಿ.ಮೀ ಮಳೆಯಾಗಿದೆ. ಹೀಗಾಗಿ ಕಕ್ಕೇರಾ ಹೋಬಳಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಅಂದರೆ 1,345 ರೈತರಿಗೆ ಸಂಬಂಧಿಸಿದ 938 ಹೆಕ್ಟೇರ್ ಭತ್ತ ಹಾನಿಯಾಗಿದೆ. ಸಮೀಕ್ಷೆ ಪೂರ್ಣಗೊಂಡಿದ್ದು ಪರಿಹಾರ ವಿತರಿಸಿಲ್ಲ.
***
4,263 ರೈತರ ಬೆಳೆ ನಷ್ಟ

ಜಿಲ್ಲೆಯಲ್ಲಿ ಅಕಾಲಿಕ ಮಳೆಯಿಂದ 4,263 ರೈತರ ಬೆಳೆ ನಷ್ಟವಾಗಿದೆ. ಶಹಾಪುರ ತಾಲ್ಲೂಕಿನಲ್ಲಿ 69, ವಡಗೇರಾ ತಾಲ್ಲೂಕಿನಲ್ಲಿ 360, ಸುರಪುರ ತಾಲ್ಲೂಕಿನಲ್ಲಿ 1,812, ಹುಣಸಗಿ ತಾಲ್ಲೂಕಿನಲ್ಲಿ 1,673, ಯಾದಗಿರಿ ತಾಲ್ಲೂಕಿನಲ್ಲಿ 349 ಸೇರಿ 4,263 ರೈತರ ಬೆಳೆ ನಷ್ಟವಾಗಿದೆ.

₹1,142 ಕೋಟಿ ನಷ್ಟ: ಜಿಲ್ಲೆಯಲ್ಲಿ ಕಳೆದ ವಾರ ಸುರಿದ ಬಾರಿ ಗಾಳಿಗೆ ಭತ್ತದ ಬೆಳೆ ನೆಲಕಚ್ಚಿದ್ದು, ₹1,142 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಶಹಾಪುರ ತಾಲ್ಲೂಕಿನಲ್ಲಿ ₹18.15 ಲಕ್ಷ, ವಡಗೇರಾ ತಾಲ್ಲೂಕಿನಲ್ಲಿ ₹97.38, ಸುರಪುರ ತಾಲ್ಲೂಕಿನಲ್ಲಿ ₹496.83, ಹುಣಸಗಿ ತಾಲ್ಲೂಕಿನಲ್ಲಿ 441.17, ಯಾದಗಿರಿ ತಾಲ್ಲೂಕಿನಲ್ಲಿ 89.07 ಲಕ್ಷ ನಷ್ಟ ಆಗಿದೆ.

***

ಒಂದು ಜಿಲ್ಲೆ ಒಂದು ಉತ್ಪನ್ನ ಬೆಳೆಗೆ ಶೇಂಗಾ ಬೆಳೆ ಆಯ್ಕೆ ಮಾಡಿದ್ದು, ಇದು ಬೆಂಬಲ ಬೆಲೆ ಕೊಡಿಸಲು ಅಲ್ಲ. ಶೇಂಗಾ ಮೌಲ್ಯವರ್ಧಿತ ಮಾಡಲು ಈ ಯೋಜನೆ ರೂಪಿಸಲಾಗಿದೆ. ರೈತರು ಇದರ ಪ್ರಯೋಜನ ಪಡೆಯಬೇಕು.
ಅಬೀದ್‌ ಎಸ್‌.ಎಸ್‌., ಜಂಟಿ ಕೃಷಿ ನಿರ್ದೇಶಕ

***

ಈಚೆಗೆ ಸುರಿದ ಮಳೆಗೆ ಭತ್ತ ನಾಶವಾಗಿದ್ದು, ಕಂದಾಯ, ಕೃಷಿ ಇಲಾಖೆಯಿಂದ ಜಂಟಿ ಸರ್ವೆ ನಡೆಸಲಾಗಿದೆ. ಜಿಲ್ಲಾಡಳಿತಕ್ಕೆ ವರದಿ ನೀಡಲಾಗುವುದು. ಅಲ್ಲಿಂದ ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ
ಚನ್ನಮಲ್ಲಪ್ಪ ಘಂಟಿ, ಯಾದಗಿರಿ ತಹಶೀಲ್ದಾರ್

***

ಕಂದಾಯ ಇಲಾಖೆಯ ಸಹಯೋಗದಲ್ಲಿ ನಮ್ಮ ಇಲಾಖೆ ಬೆಳೆ ಹಾನಿಯ ಸಂಪೂರ್ಣ ಸಮೀಕ್ಷೆ ಮಾಡಲಾಗಿದೆ. ಕಂದಾಯ ಸಿಬ್ಬಂದಿ ‘ಪರಿಹಾರ’ ವೆಬ್‌ಸೈಟ್‌ನಲ್ಲಿ ಹಾನಿಯ ನಮೂದು ಮಾಡಿದ್ದಾರೆ
ಡಾ. ಭೀಮರಾಯ ಹವಲ್ದಾರ್, ಕೃಷಿ ಅಧಿಕಾರಿ

***

ಅಕಾಲಿಕ ಮಳೆ ಮತ್ತು ಬೆಲೆ ಕುಸಿತ ರೈತನನ್ನು ಹಿಂಡಿ ಹಿಪ್ಪೆ ಮಾಡಿದೆ. ಸರ್ಕಾರ ಭತ್ತ ಖರೀದಿ ಕೇಂದ್ರ ತೆರೆದಿಲ್ಲ. ಸರ್ಕಾರ ತಕ್ಷಣ ರೈತನ ನೆರವಿಗೆ ಬರಬೇಕು
ಮಲ್ಲಿಕಾರ್ಜುನ ಸತ್ಯಂಪೇಟೆ,ರೈತ ಮುಖಂಡ

***

ಕಡಿಮೆ ನೀರು ಹಾಗೂ ಜಾನುವಾರುಗಳಿಗೆ ಮೇವು ಸಿಗುತ್ತದೆ. ಜತೆಗೆ ಉತ್ತಮ ಧಾರಣೆ ಸಿಗುತ್ತದೆ ಎಂಬ ಆಶಾಭಾವನೆಯಿಂದ ಶೇಂಗಾ ಬಿತ್ತನೆ ಮಾಡಿದ್ದೆ. ಧಾರಣೆ ಕುಸಿತದಿಂದ ಸಾಲಕ್ಕೆ ಗುರಿಯಾಗಬೇಕಾಗಿದೆ
ಶಿವಪ್ಪ ಗಂಗನಾಳ, ರೈತ

***

ಧಾರಣೆ ಕುಸಿತವಾಗಿರುವುದು ಕಂಡು ಬಂದಾಗ ಖರೀದಿ ಕೇಂದ್ರ ಸ್ಥಾಪಿಸಿದ್ದರೆ ರೈತರಿಗೆ ಅನುಕೂಲವಾಗುತ್ತಿತ್ತು. ಅದೇ ಎಣ್ಣೆಯ ಧಾರಣೆ ಚಿನ್ನದಂತೆ ಜಿಗಿತವಾಗುತ್ತಿದೆ. ಇದಕ್ಕೆ ಯಾರು ಹೊಣೆ ಎಂಬುವುದು ಅರ್ಥವಾಗುತ್ತಿಲ್ಲ. ನಷ್ಟವನ್ನು ಮಾತ್ರ ನಾವು ಅನುಭವಿಸಬೇಕು ಅಷ್ಟೆ
ಯಲ್ಲಯ್ಯ ದೊರೆ ವನದುರ್ಗ, ರೈತ

***

ಪೂರಕವರದಿ: ಅಶೋಕ ಸಾಲವಾಡಗಿ, ಭೀಮಶೇನರಾವ ಕುಲಕರ್ಣಿ, ಟಿ.ನಾಗೇಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT