ಜಿಎಸ್‌ಟಿ: ವ್ಯಾಪಾರಿಗಳ ಸಕಾರಾತ್ಮಕ ಧೋರಣೆ

7
ಸಣ್ಣಪುಟ್ಟ ಬದಲಾವಣೆ, ತೆರಿಗೆ ಕಡಿತ ನಿರೀಕ್ಷೆ; ನಿರಾಳಗೊಂಡ ವಹಿವಾಟು

ಜಿಎಸ್‌ಟಿ: ವ್ಯಾಪಾರಿಗಳ ಸಕಾರಾತ್ಮಕ ಧೋರಣೆ

Published:
Updated:
Deccan Herald

ಯಾದಗಿರಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೊಳಿಸಿದಾಗ ಉಂಟಾಗಿದ್ದ ಆತಂಕ, ಗೊಂದಲಗಳು ಬಹುತೇಕ ಈಗ ಸಲ್ಪಮಟ್ಟಿಗೆ ನಿವಾರಣೆಯಾಗಿವೆ ಎಂಬುದಾಗಿಯೇ ನಗರದ ವ್ಯಾಪಾರಿಗಳು ಹೇಳುತ್ತಾರೆ.

ಈ ವ್ಯವಸ್ಥೆ ಜಾರಿಗೊಂಡ ನಂತರ ದಾಖಲೆಗಳ ನಿರ್ವಹಣೆ ಸ್ವಲ್ಪ ಕಷ್ಟವಾಗುತ್ತಿದ್ದರೂ, ಈಗ ವ್ಯಾಪಾರಿಗಳಲ್ಲಿ ಸಕಾರಾತ್ಮಕ ಭಾವ ಕಂಡುಬರುತ್ತಿದೆ. ಜತೆಗೆ ವ್ಯವಸ್ಥೆಯಡಿ ಆಗಬೇಕಾದ ಸಣ್ಣಪುಟ್ಟ ಬದಲಾವಣೆ ಹಾಗೂ ತೆರಿಗೆ ಕಡಿತದ ಬಗ್ಗೆ ವ್ಯಾಪಾರಿಗಳಲ್ಲಿ ನಿರೀಕ್ಷೆ ಹೆಚ್ಚು ಕಂಡುಬರುತ್ತಿದೆ.

‘ಆರಂಭದಲ್ಲಿ ಜಿಎಸ್‌ಟಿ ಅನುಷ್ಠಾಗೊಂಡಾಗ ಎಲ್ಲಿಯ ಕಿರಿಕಿರಿ ಬಂತು ಅನ್ನಿಸಿದ್ದುಂಟು. ಚಿಲ್ಲರೆ ವ್ಯಾಪಾರಿಗಳನ್ನು ಈ ವ್ಯವಸ್ಥೆಯಿಂದ ಮುಕ್ತಿ ನೀಡಬೇಕಿತ್ತು ಎಂದು ಅಂದುಕೊಂಡದುಂಟು. ಜಿಎಸ್‌ಟಿ ಅನ್ನು ಕ್ರಮೇಣ ಅರ್ಥ ಮಾಡಿಕೊಂಡ ಮೇಲೆ ಈ ವ್ಯವಸ್ಥೆ ಬೇಕಿತ್ತು ಅನ್ನಿಸಿದ್ದುಂಟು. ಇನ್ನೂ ಪರಿಹಾರ ಸಿಗದ ಸಮಸ್ಯೆಗಳೂ ನೂತನ ತೆರಿಗೆ ವ್ಯವಸ್ಥೆಯಲ್ಲಿ ಇವೆ. ಅವಕ್ಕೂ ಪರಿಹಾರ ನೀಡಬೇಕಿದೆ’ ಎಂದು ನಗರದ ಆಟೋಮೊಬೈಲ್‌ ಮಾರಾಟ ಮಳಿಗೆಯ ಮಾಲೀಕ ರಮೇಶ್‌ ಹೇಳುತ್ತಾರೆ.

‘ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಭರ್ತಿ ಮಾಡಿದ ಬಳಿಕ ಅವುಗಳನ್ನು ತಪಾಸಣೆ ಮಾಡಲು ಇನ್ನೂ ಸೂಕ್ತ ತಂತ್ರಾಂಶವನ್ನು ತಂದಿಲ್ಲ. ಸಾವಿರಾರು ಬಿಲ್‌ಗಳು ಸೃಷ್ಟಿಯಾಗುವ ದೊಡ್ಡ ವ್ಯಾಪಾರಿಗಳು ಅಪ್‌ಲೋಡ್‌ ಮಾಡುವ ದಾಖಲೆಗಳನ್ನು ಸುಲಭವಾಗಿ ಪರಾಮರ್ಶೆ ಮಾಡುವ ವ್ಯವಸ್ಥೆಯನ್ನೂ ಮಾಡಬೇಕಿದೆ’ ಎನ್ನುತ್ತಾರೆ ರಮೇಶ್.

‘ಜಿಎಸ್‌ಟಿ ಗ್ರಾಹಕರ ಮೇಲೆ ನೇರವಾಗಿ ತೊಂದರೆ ಉಂಟುಮಾಡಿಲ್ಲ. ಈಗ ವ್ಯಾಪಾರ ಸ್ವಲ್ಪಮಟ್ಟಿಗೆ ಕುಸಿತಗೊಂಡಿದ್ದರೂ ಅದಕ್ಕೆ ಜಿಎಸ್‌ಟಿಯೇ ನೇರ ಹೊಣೆ ಎಂದೂ ಹೇಳಲು ಆಗದು. ಬರಗಾಲ, ಜನರಲ್ಲಿ ತಗ್ಗಿದ ಖರೀದಿ ಸಾಮರ್ಥ್ಯ, ಬ್ಯಾಂಕ್‌ಗಳ ವಹಿವಾಟಿನ ಮೇಲೆ ಆದಾಯ ತೆರಿಗೆ ಇಲಾಖೆ ನಿಗಾ ವಹಿಸುತ್ತಿರುವಂತಹ ಹಲವು ಕಾರಣಗಳಿಂದಲೂ ವಹಿವಾಟಿನ ಮೇಲೆ ಪರಿಣಾಮ ಬೀರಿವೆ’ ಎಂದು ನಗರದ ಸಿಟಿ ಬೇಕರಿ ವ್ಯಾಪಾರಿ ಹರೀಶ್ ವಿಶ್ಲೇಷಿಸುತ್ತಾರೆ.

‘ಸಣ್ಣ ಪ್ರಮಾಣದ ವಹಿವಾಟು ನಡೆಸುವ ವ್ಯಾಪಾರಿಗಳಿಗೆ ಮೂರು ತಿಂಗಳ ಒಳಗೆ ರಿಟರ್ನ್‌ ಫೈಲ್‌ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದರಿಂದಾಗಿ ಅವರ ಬಳಿ ವ್ಯಾಪಾರ ಮಾಡಿದ ಬಿಲ್‌ನ ದಾಖಲೆ ಅಪ್‌ಡೇಟ್‌ ಆಗಿರುವುದಿಲ್ಲ. ಅವರೊಂದಿಗೆ ವ್ಯವಹಾರ ನಡೆಸುವ ದೊಡ್ಡ ವ್ಯಾಪಾರಿಗಳ ಬಿಲ್‌ಗಳನ್ನು ತಪಾಸಣೆ ಮಾಡುವಾಗ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಸಂಪೂರ್ಣ ಸಿದ್ಧತೆ ಮಾಡಿಕೊಳ್ಳದೇ ಜಾರಿಗೊಳಿಸಿದ್ದರಿಂದ ನಿಯಮಾವಳಿಗಳನ್ನು ಪಾಲಿಸುವುದು ಸ್ವಲ್ಪ ಕಷ್ಟವಾಗುತ್ತಿದೆ’ ಎಂಬುದು ಅವರ ಅನುಭವದ ಮಾತು.

‘ನೂತನ ವ್ಯವಸ್ಥೆಯಲ್ಲಿ ವ್ಯಾಪಾರಸ್ಥರ ಹೊಣೆಗಾರಿಕೆ (ಅಕೌಂಟೆಬಿಲಿಟಿ) ಹೆಚ್ಚಾಗಿದೆ. ಅದರಲ್ಲಿ ಪ್ರತಿಯೊಂದಕ್ಕೂ ಸಮರ್ಪಕವಾಗಿ ದಾಖಲೆ ಇಡಬೇಕು. ಜಿಎಸ್‌ಟಿ. ಉದ್ದೇಶ ಒಳ್ಳೆಯದಿದೆ. ಸರಿಯಾದ ಮಾರ್ಗದಲ್ಲಿ ವ್ಯಾಪಾರ ಮಾಡುವವರಿಗೆ ಈ ವ್ಯವಸ್ಥೆ ಖುಷಿ ತಂದಿದೆ. ‘ವ್ಯಾಟ್‌’ ಇದ್ದಾಗ ರೆಡಿಮೇಡ್‌ ಬಟ್ಟೆಯ ಮೇಲೆ ಶೇ5.5 ತೆರಿಗೆ ವಿಧಿಸಲಾಗುತ್ತಿತ್ತು. ಈಗ ಶೇ 5 ಹಾಕಲಾಗುತ್ತಿದೆ. ದುಬಾರಿ ಬಟ್ಟೆ ಖರೀದಿಸಲು ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ. ಈ ಸ್ಲ್ಯಾಬ್‌ ತೆಗೆದು ಹಾಕಿದರೆ ಗ್ರಾಹಕರಿಗೆ ಹಾಗೂ ವ್ಯಾಪಾರಸ್ಥರಿಗೂ ಅನುಕೂಲವಾಗಲಿದೆ’ ಎನ್ನುತ್ತಾರೆ ಸ್ಟೇಷನ್‌ರಸ್ತೆ ಜವಳಿ ವ್ಯಾಪಾರಿ ರವಿ.

ಹೆಚ್ಚಿದ ಲೆಕ್ಕ ಪರಿಶೋಧಕರ ಶುಲ್ಕ:  ಜಿಎಸ್‌ಟಿ ಜಾರಿಗೊಂಡ ಲೆಕ್ಕ ಪರಿಶೋಧಕರ ಶುಲ್ಕ ಹೆಚ್ಚಿದೆ. ಪ್ರತಿಯೊಬ್ಬರೂ ಇವರನ್ನೇ ಅವಲಂಬಿಸುವಂತಾಗಿದೆ. ಪ್ರತಿತಿಂಗಳು ಆನ್‌ಲೈನ್ ನಲ್ಲಿ ಫೈಲ್‌ ಮಾಡಬೇಕಾಗಿರುವುದರಿಂದ ನಾವುಗಳು ಇದನ್ನು ನಿಭಾಯಿಸಲು ಆಗುತ್ತಿಲ್ಲ. ಲೆಕ್ಕಪರಿಶೋಧಕರ ಮೊರೆ ಹೋಗಿದ್ದೇವೆ. ಒಂದು ವೇಳೆ ಆನ್‌ಲೈನ್ ಫೈಲ್‌ ಕಡೆ ಗಮನಹರಿಸಿದರೆ ಉದ್ಯಮದ ಕಡೆಗೆ ಗಮನಕೇಂದ್ರೀಕರಿಸಲು ಆಗುವುದಿಲ್ಲ ಎಂದು ಹೈದರಾಬಾದ್‌ ಶಶಿ ಸೂಪರ್‌ ಮಾರುಕಟ್ಟೆಯ ಶಶಿಧರ್ ತಮ್ಮ ಅನುಭವ ಹಂಚಿಕೊಂಡರು.

‘ಹೊಸ ವ್ಯವಸ್ಥೆ ಹೊಣೆಗಾರಿಕೆಯನ್ನು ಹೆಚ್ಚಿಸಿದ್ದು, ವ್ಯಾಪಾರದ ದೃಷ್ಟಿಯಿಂದ ಇದು ಒಳ್ಳೆಯದು. ಮೊದಲು ಬೇರೆ ಬೇರೆ ರಾಜ್ಯಗಳಲ್ಲಿ ಪ್ರತ್ಯೇಕವಾಗಿ ತೆರಿಗೆ ಪಾವತಿಸುವುದರಿಂದ ಬಟ್ಟೆಗಳ ಸಾಗಾಟಕ್ಕೆ ತೊಂದರೆಯಾಗುತ್ತಿತ್ತು. ಜಿಎಸ್‌ಟಿ ಬಂದ ಬಳಿಕ ಸರಕು ವಹಿವಾಟು ನಡೆಸಲು ಅನು ಕೂಲವಾಗಿದೆ’ ಎಂಬುದು ಚಾಮರಾಜ ಪೇಟೆಯ ‘ಆಶಾ ದೀಪ’ ಬಟ್ಟೆ ಅಂಗಡಿ ಮಾಲೀಕ ಮಹೇಂದ್ರ ತುಲಸಿಯಾನ್‌ ಅಭಿಪ್ರಾಯ.

‘ಈ ಮೊದಲು ಸಿದ್ಧ ಉಡುಪುಗಳ ಮೇಲೆ ಶೇ 5.5 ವ್ಯಾಟ್‌ ವಿಧಿಸಲಾಗುತ್ತಿತ್ತು. ಈಗ ಎಲ್ಲ ವಿಧಗಳ ಬಟ್ಟೆಗಳ ಮೇಲೂ ಕನಿಷ್ಠ ಶೇ 5 ಜಿಎಸ್‌ಟಿ ತೆರಿಗೆ ಹಾಕಿದ್ದಾರೆ. ಬಿಡಿಬಟ್ಟೆ ಖರೀದಿಸಿದರೂ ಶೇ 5ರಷ್ಟು ತೆರಿಗೆ ಕೊಡುವುದು ಅನಿವಾರ್ಯ. ₹ 999ಗಿಂತ ಹೆಚ್ಚಿನ ಬೆಲೆಯ ಬಟ್ಟೆಗಳ ಮೇಲೆ ಶೇ 12 ತೆರಿಗೆ ವಿಧಿಸಲಾಗುತ್ತಿದೆ. ಈ ತೆರಿಗೆ ನಿಜಕ್ಕೂ ಜನಸಾಮಾನ್ಯರಿಗೆ ಹೊರೆ’ ಎಂಬುದು ಗ್ರಾಹಕ ಶ್ರೀನಿವಾಸ್ ಕಂದಕೂರ ಅವರ ಅನಿಸಿಕೆ.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !