ವಹಿವಾಟಿಗೆ ಪಾರದರ್ಶಕತೆ ನೀಡಿದ ಜಿಎಸ್‌ಟಿ

7
ವರ್ಷ ಕಳೆದ ಜಿಎಸ್‌ಟಿ ತೆರಿಗೆ ವ್ಯವಸ್ಥೆ: ಚಿಲ್ಲರೆ ವ್ಯಾಪಾರಿಗಳಲ್ಲಿ ಬಗೆಹರಿಯದ ಗೊಂದಲ

ವಹಿವಾಟಿಗೆ ಪಾರದರ್ಶಕತೆ ನೀಡಿದ ಜಿಎಸ್‌ಟಿ

Published:
Updated:
Deccan Herald

ಯಾದಗಿರಿ:‘ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೊಂಡ ಬಳಿಕ ದುಪ್ಪಟ್ಟು ತೆರಿಗೆ ಕಟ್ಟೋದು ತಪ್ಪಿದೆ. ನಿರ್ದಿಷ್ಟ ಮತ್ತು ನಿಖರ ವಹಿವಾಟಿಗೆ ಅನುಕೂಲಕರವಾಗಿದೆ..’

ನಗರದ ಚಿನ್ನಾಭರಣ ಅಂಗಡಿಗಳಲ್ಲಿ ಶನಿವಾರ ‘ಪ್ರಜಾವಾಣಿ’ ಒಂದು ಸುತ್ತು ಹಾಕಿದಾಗ ವ್ಯಾಪಾರಿಗಳಿಂದ ಕೇಳಿಬಂದ ಅಭಿಪ್ರಾಯ ಇದು.

ಜಿಎಸ್‌ಟಿ ಜಾರಿಯಾಗಿ ವರ್ಷ ಕಳೆದಿದೆ. ಆರಂಭದ ದಿನಗಳಲ್ಲಿ ವ್ಯಾಪಾರಿಗಳು ಮತ್ತು ಗ್ರಾಹಕರು ಕಿರಿಕಿರಿ ಅನುಭವಿಸಿದ್ದರು. ಚಿಲ್ಲರೆ ವ್ಯಾಪಾರಿಗಳು ದಿಕ್ಕೇ ತೋಚದಂತಾಗಿದ್ದರು. ವಹಿವಾಟಿನ ಮೇಲೆ ಹೊಡೆತವೂ ಬಿದ್ದಿತ್ತು. ಆದರೆ, ದಿನ ಕಳೆದಂತೆ ಎಲ್ಲವೂ ಸಹಜ ಸ್ಥಿತಿಗೆ ಬಂದಿದೆ. ಇದೀಗ ವಹಿವಾಟು ಸುಗಮವಾಗಿ ನಡೆದಿದೆ. ಗ್ರಾಹಕರಿಗೂ ಸಂತೃಪ್ತಿ ತಂದಿದೆ ಎಂಬ ಅನಿಸಿಕೆ ವ್ಯಕ್ತಪಡಿಸಿದವರೇ ಹೆಚ್ಚು.

‘ಜಿಎಸ್‌ಟಿ ಅನುಷ್ಠಾನಕ್ಕೂ ಮುಂಚೆ ಚಿನ್ನಾಭರಣಗಳ ಮೇಲೆ ಕೇವಲ ಶೇ1ರಷ್ಟು ತೆರಿಗೆ ವಿಧಿಸಲಾಗಿತ್ತು. ಇದ್ದಕ್ಕಿದ್ದಂತೆ ಶೇ 3ಕ್ಕೆ ಹೆಚ್ಚಿಸಿದಾಗ ವ್ಯಾಪಾರಿಗಳಿಗೆ ಹೆಚ್ಚು ಆತಂಕ ಕಾಡಿತ್ತು. ವಹಿವಾಟಿನ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಬಹುದು ಎಂದೇ ಊಹಿಸಿದ್ದೇವು. ಆರಂಭದಲ್ಲಿ ವಹಿವಾಟು ಸ್ಥಗಿತವಾದಂತೆ ಕಂಡಿತು. ಬೆರಳೆಣಿಕೆಯಷ್ಟು ಗ್ರಾಹಕರು ಅಂಗಡಿಗೆ ಬರುತ್ತಿದ್ದರು. ಬದಲಾದ ಕಾಲಘಟ್ಟಕ್ಕೆ ನಮ್ಮ ಜತೆಗೆ ಗ್ರಾಹಕರೂ ಹೊಂದಿಕೊಂಡಿದ್ದಾರೆ. ಈಗ ವಹಿವಾಟು ಸರಾಗ ಮತ್ತು ನಿರಾಳ’ ಎಂದು ನಗರದ ಚಿನ್ನಾಭರಣ ವ್ಯಾಪಾರಿ ಆಶಿಶ್‌ ಜೈನ್ ಹೇಳಿದರು.

‘ಪಾರದರ್ಶಕ ವಹಿವಾಟಿಗಾಗಿ ಜಿಎಸ್‌ಟಿ ವ್ಯವಸ್ಥೆ ಉತ್ತಮ. ಚೀಟಿ ಮೇಲಿನ ವ್ಯವಹಾರ ಸಂಪೂರ್ಣ ಬಂದ್‌ ಆಗಿದೆ. ಏನಿದ್ದರೂ ಬಿಲ್ಲಿಂಗ್‌ ಲೆಕ್ಕಾಚಾರ. ಕ್ಯಾಷ್‌ಲೆಸ್‌ ವ್ಯವಹಾರವೂ ಈಚೆಗಿನ ದಿನಗಳಲ್ಲಿ ಹೆಚ್ಚಿದೆ. ಅದರ ಜತೆಗೆ ಗ್ರಾಹಕರ ಜಾಗೃತಿಯೂ ಹೆಚ್ಚಿದೆ’ ಎನ್ನುತ್ತಾರೆ ಚಿನ್ನಾಭರಣ ಗಾಂಧಿವೃತ್ತದ ವ್ಯಾಪಾರಿ ಮೋಹನ.

ತೆರಿಗೆ ಗೊತ್ತಾಯಿತು:

‘ಇದ್ದ ಹಣದಲ್ಲೇ ಅಲ್ಪ ಚಿನ್ನ ಖರೀದಿಸಬೇಕು ಎಂಬುದು ಆಸೆ ಇತ್ತು. ಆದರೆ, ಚಿನ್ನಕ್ಕೆ ತೆರಿಗೆ ಎಷ್ಟು? ಅಂತ ತಿಳಿಯುತ್ತಿರಲಿಲ್ಲ. ಎಲ್ಲವೂ ಚಿನ್ನದ ವ್ಯಾಪಾರಿಯ ಲೆಕ್ಕದ ಪುಸ್ತಕದಲ್ಲಿ ಇರುತ್ತಿತ್ತು. ಆದರೆ, ಇದೀಗ ಸಂಪೂರ್ಣ ಬದಲಾಗಿದೆ. ಎಷ್ಟು ಪ್ರಮಾಣದಲ್ಲಿ ತೆರಿಗೆ ನಮೂದಿಸುತ್ತಾರೆ ಎಂಬುದು ಮೊದಲು ಗೊತ್ತಾಗುತ್ತಿದೆ’ ಎಂದು ಬಹುತೇಕ ಗ್ರಾಹಕರು ಅನಿಸಿಕೆ ವ್ಯಕ್ತಪಡಿಸಿದರು.

‘ಮೊದಲು ಚಿನ್ನ ಖರೀದಿಗೆ ಅಂಗಡಿ ಮಾಲೀಕ ಕೊಟ್ಟ ಚೀಟಿಯೇ ಆಧಾರವಾಗಿತ್ತು. ಈಗ ಎಲ್ಲವೂ ಬದಲಾಗಿದೆ. ಧಾರಣೆಯಲ್ಲಿ ವ್ಯತ್ಯಾಸವಾಗಲ್ಲ. ದರ, ತೆರಿಗೆ ಮೊತ್ತ ಎಲ್ಲದರ ಲೆಕ್ಕ ಸಿಗುತ್ತಿದೆ. ಜಿಎಸ್‌ಟಿ ಅನುಷ್ಠಾನಕ್ಕೆ ಮುನ್ನ ಒಂದೊಂದೆಡೆ ಒಂದೊಂದು ಧಾರಣೆ ಕಂಡುಬರುತ್ತಿತ್ತು. ಇದೀಗ ಎಲ್ಲೆಡೆ ಒಂದೇ ಧಾರಣೆ. ಬಿಲ್ಲಿಂಗ್‌ ಇಲ್ಲದೇ ವ್ಯಾಪಾರವಿಲ್ಲ. ಅಂಗಡಿಯವರು ಉದ್ರಿ ಕೊಡೋದು ನಿಂತಿದೆ’ ಎಂದು ಗ್ರಾಹಕ ಮಂಜುನಾಥ್ ಮಗ್ಗದ ತಿಳಿಸಿದರು.

‘ಮೊದಲು ಚಿನ್ನಾಭರಣಗಳ ಮೇಲಿನ ಬೆಲೆಯೇ ಬೇರೆ, ತೆರಿಗೆಯೇ ಬೇರೆ ಇರುತ್ತಿತ್ತು. ಇದೀಗ ತೆರಿಗೆಯ ಸ್ಪಷ್ಟ ಚಿತ್ರಣ ಖರೀದಿಸುವವರಿಗೆ ಗೊತ್ತಾಗುತ್ತಿದೆ. ಜಿಎಸ್‌ಟಿ ಪಾರದರ್ಶಕತೆಯನ್ನು ತಂದಿದೆ’ ಎನ್ನುತ್ತಾರೆ ಅವರು.

ಜಿಎಸ್‌ಟಿಯಡಿ ಚಿನ್ನಾಭರಣಗಳ ಮೇಲೆ ಶೇ 3 ತೆರಿಗೆ ಇದೆ. ಅದನ್ನು ಶೇ 2ಕ್ಕೆ ಇಳಿಸಿದರೆ ವ್ಯಾಪಾರಿಗಳಿಗೆ ಅನುಕೂಲಕರ. ಈ ಲಾಭ ಗ್ರಾಹಕರಿಗೆ ವರ್ಗಾವಣೆಯಾಗಲಿದೆ ಎನ್ನುತ್ತಾರೆ ಜಿಲ್ಲಾ ಚೇಂಬರ್ ಆಫ್‌ ಕಾಮರ್ಸ್‌ ಅಧ್ಯಕ್ಷ ಹನುಮದಾಸ ಮುಂದಡ.

ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅನಕ್ಷರಸ್ಥರೇ ಹೆಚ್ಚಿದ್ದಾರೆ. ಅವರಿಗೆ ಜಿಎಸ್‌ಟಿ ಇನ್ನೂ ಅರ್ಥವಾಗಿಲ್ಲ. ನಿಧಾನವಾಗಿ ಅವರಿಗೂ ಅರ್ಥೈಸಲಾಗುತ್ತಿದೆ.
- ಆಶಿಶ್ ಜೈನ್, ಧನಲಕ್ಷ್ಮಿ ಚಿನ್ನಾಭರಣ ಅಂಗಡಿ ಮಾಲೀಕ
 

Tags: 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !