ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿರು ಬೇಸಿಗೆಯಲ್ಲೂ ಬತ್ತದ ತೀರ್ಥ: ಭಕ್ತಿಯ ದ್ಯೋತಕ ಹಲವುಕಲ್ಲೇಶ್ವರ ಬಾವಿ

ಭಕ್ತಿಯ ದ್ಯೋತಕ ಹಲವುಕಲ್ಲೇಶ್ವರ ಬಾವಿ: ಕೊಡೇಕಲ್ ಬಸವೇಶ್ವರರು ತಂಗಿದ ಸ್ಥಳ
Last Updated 8 ಮೇ 2022, 3:17 IST
ಅಕ್ಷರ ಗಾತ್ರ

ನಾರಾಯಣಪುರ: ಸಮೀಪದ ಆರ್.ದಾಸರಗೋಟ್‌ನ ಗುಡ್ಡಗಾಡು ಪ್ರದೇಶದಲ್ಲಿರುವ ಹಲವುಕಲ್ಲೇಶ್ವರ ಮಂದಿರ ಪಕ್ಕದ (ಬಾವಿ) ತೀರ್ಥ ದಲ್ಲಿರುವ ಜಲವು ಸರ್ವಕಾಲಕ್ಕೂ ಬತ್ತದ ಗಂಗೆಯಾಗಿ ಜನತೆಗೆ ಭಕ್ತಿಯ ದ್ಯೋತಕವಾಗಿದೆ.

ಹಲವುಕಲ್ಲೇಶ್ವರ ಎಂಬ ಪವಿತ್ರ ಸ್ಥಳವು ತನ್ನದೇ ಆದ ಐತಿಹಾಸಿಕ ಹಿರಿಮೆ ಗರಿಮೆಯನ್ನೇ ತನ್ನ ಮಡಿಲಲ್ಲಿ ಇಟ್ಟುಕೊಂಡಿದೆ. 16ನೇ ಶತಮಾನದಲ್ಲಿ ಕೊಡೇಕಲ್ ಕಾಲಜ್ಞಾನಿ ಬಸವೇಶ್ವರರು ತಮ್ಮ ಶಿಷ್ಯ ಬಳಗದೊಂದಿಗೆ ಲೋಕ ಸಂಚಾರ ಮಾಡುತ್ತಾ ಕಡಿದಾದ ಗುಡ್ಡಗಾಡುಗಳಿಂದ ಆವೃತ ನಿಸರ್ಗದ ರಮಣೀಯವಾದ, ಮರಗಿಡಗಳ ಮಧ್ಯೆ ಕಂಗೊಳಿಸುವ ಈ ಹಲವುಕಲ್ಲು ಎಂಬ ಸ್ಥಳದಲ್ಲಿ ವಿಶ್ರಾಂತಿ ಪಡೆದು ಈ ಸ್ಥಳವನ್ನು ಪಾವನ ಗೊಳಿಸಿದರು ಎಂದು ‘ನಂದಿಯಾಗಮ ಲೀಲೆ’ ಗ್ರಂಥದಲ್ಲಿ ಉಲ್ಲೇಖಿಸಿದೆ.

ಸಾರ್ವಕಾಲಿಕ ಬತ್ತದ ಗಂಗೆ: ಹಲವುಕಲ್ಲೇಶ್ವರ ದೇಗುಲಕ್ಕೆ ಹೊಂದಿಕೊಂಡಂತೆ ತೀರ್ಥ (ಬಾವಿ) ಕೊಂಡವಿದೆ. ಹಲವು ಮೆಟ್ಟಿಲುಗಳು, ಚೌಕಾಕಾರದ ವಿನ್ಯಾಸಯುಳ್ಳ ಬಾವಿಯ ನೀರು ಸರ್ವಕಾಲದಲ್ಲೂ ಬತ್ತದ ಜಲಧಾರೆಯಾಗಿ ಸದಾ ತುಂಬಿರುತ್ತದೆ. ಬಹು ಕಾಲದಿಂದಲೂ ಜನತೆ ಭಯ, ಭಕ್ತಿಯಿಂದ ಇಲ್ಲಿಗೆ ಆಗಮಿಸಿ ದರ್ಶನ ಪಡೆದುಕೊಳ್ಳುತ್ತಾರೆ. ಪ್ರತಿ ಶನಿವಾರ, ಅಮಾವಾಸ್ಯೆ ಹಬ್ಬ ಹರಿದಿನಗಳಲ್ಲಿ ಜನಸಂದಣಿಯೇ ಇಲ್ಲಿ ನೆರೆದು ಆಚಾರ–ವಿಚಾರಗಳೆಂಬ ಧಾರ್ಮಿಕ ಕಾರ್ಯಕೈಗೊಂಡು ಪುನೀತರಾಗುತ್ತಾರೆ.

ಕಲ್ಲು ಹಾಗೂ ಗಚ್ಚನ್ನು ಬಳಸಿ ಬಹಳ ವಿಶಿಷ್ಟವಾಗಿ ನಿರ್ಮಿಸಿರುವ ಈ ಬಾವಿಯಲ್ಲಿ ಈಜಾಡುವುದನ್ನು ನಿರ್ಬಂಧಿಸಲಾಗಿದೆ. ಭಕ್ತರು ಪೂಜ್ಯ ಭಾವದಿಂದ ಈ ಜಲವನ್ನು ಕುಡಿದು ತಮ್ಮ ಮನೆಗಳಿಗೆ ತುಂಬಿಕೊಂಡು ಹೊರಟು ದೇವರ ಜಗುಲಿ ಮೇಲೆ ಪೂಜೆ ಸಲ್ಲಿಸುವುದರಿಂದ ಜಲವು ಮಲೀನವಾಗದಿರಲಿ ಎಂದು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಂದಿರದ ಅರ್ಚಕರು ಹೇಳುತ್ತಾರೆ.

ಸುತ್ತಲೂ ಬೃಹತ್ ಬೆಟ್ಟಗುಡ್ಡಗಳ ಮಧ್ಯೆ ತಳಮಟ್ಟದಲ್ಲಿರುವ ಈ ಬಾವಿಯು ಸುತ್ತಮುತ್ತಲಿನ ಹಲವು ಗ್ರಾಮಗಳ ಜನತೆಗೆ ಆಸರೆಯ ಅಕ್ಕರೆಯ ಮೂಲಾಧಾರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT