ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಶ್ರದ್ಧಾ ಭಕ್ತಿಯ ಹನುಮ ಜಯಂತಿ

ಜಿಲ್ಲೆಯ ವಿವಿಧೆಡೆ ಹನುಮ ಮೂರ್ತಿ ಶೋಭಾಯಾತ್ರೆ, ದೇವಸ್ಥಾನಗಳಲ್ಲಿ ಪವನಸುತನಿಗೆ ವಿಶೇಷ ಪೂಜೆ
Last Updated 17 ಏಪ್ರಿಲ್ 2022, 6:10 IST
ಅಕ್ಷರ ಗಾತ್ರ

ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶ್ರದ್ಧಾ ಭಕ್ತಿಯಿಂದ ಹನುಮ ಜಯಂತಿ ಆಚರಿಸಲಾಯಿತು. ಶನಿವಾರವೇ ಈ ವರ್ಷ ಹನುಮ ಜಯಂತಿ ಬಂದ ಕಾರಣ ಹೆಚ್ಚಿನ ಭಕ್ತರು ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆದರು.

ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ: ನಗರದ ವಿವಿಧ ಹನುಮ ಮಂದಿರಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಕುಟುಂಬ ಸಮೇತರಾಗಿ ಆಗಮಿಸಿದ ಭಕ್ತರು ಬೆಳಿಗ್ಗೆಯಿಂದಲೇ ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದರು. ದೇಗುಲದಲ್ಲಿ ಸ್ವಲ್ಪ ಹೊತ್ತು ವಿರಮಿಸಿದರು.

ನಗರದ ಪದವಿ ಮಹಾವಿದ್ಯಾಲಯದ ಎದುರಿನ ಹನುಮಾನ್ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ವಿವಿಧ ಹೂಗಳಿಂದ ಹನುಮಾನ್‌ ಮೂರ್ತಿ ಅಲಂಕಾರ ಮಾಡಲಾಗಿತ್ತು.

ಹಣ್ಣು ಹಂಪಲು ನೈವೇದ್ಯವಾಗಿ ಇಡಲಾಗಿತ್ತು. ಬಾಳೆಹಣ್ಣು, ನಿಂಬೆಹಣ್ಣು, ಸಂತೂರ್‌, ಸೇಬು, ಪೇರಳೆ, ಕಡುಬು, ಕರ್ಚಿಕಾಯಿ, ಬೂಂದಿ ಇಡಲಾಗಿತ್ತು.ಆರ್ಚಕ ದೊಡ್ಡಪ್ಪ ಸ್ವಾಮಿ ಹನುಮ ವಿಗ್ರಹಕ್ಕೆ ಆರತಿ ಬೆಳಗಿ ಪೂಜೆ ನೆರವೇರಿಸಿದರು. ಇನ್ನುಳಿದಂತೆ ವಿವಿಧ ದೇಗುಲಗಳಲ್ಲಿಯೂ ಪೂಜೆ ನಡೆಯಿತು.
ಅದ್ದೂರಿ ಶೋಭಾಯಾತ್ರೆ: ನಗರದ ಮೈಲಾಪುರ ಗಣೇಶ ತರುಣ ಸಂಘದ ವತಿಯಿಂದ ಮೈಲಾಪುರ ಅಗಸಿಯಿಂದ ಹನುಮಾನ್‌ ಮೂರ್ತಿ ಯಶೋಭಾಯಾತ್ರೆ ನಡೆಯಿತು. ಟ್ರ್ಯಾಕ್ಟರ್‌ನಲ್ಲಿ ಹನುಮಾನ್‌ ವಿಗ್ರಹ ಕೂಡಿಸಿ ಭಕ್ತರು ಮೆರವಣಿಗೆ ಮಾಡಿದರು.

ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಶೋಭಾಯಾತ್ರೆಗೆ ಚಾಲನೆ ನೀಡಿದರು. ಮೈಲಾಪುರ ಅಗಸಿಯಿಂದ ಚಕ್ರಕಟ್ಟಾ, ಗಾಂಧಿವೃತ್ತದ ಮೂಲಕವಾಗಿ ವಿವಿಧೆಡೆ ಶೋಭಾ ಯಾತ್ರೆ ನಡೆಯಿತು.
ಈ ಸಂದರ್ಭದಲ್ಲಿ ವಿಧಾನ ಪರಿಷತ್‌ ಮಾಜಿ ಸದಸ್ಯ ಚನ್ನಾರೆಡ್ಡಿ ಪಾಟೀಲ ತುನ್ನೂರು, ನಗರಸಭೆ ಮಾಜಿ ಅಧ್ಯಕ್ಷ ವಿಲಾಸ ಪಾಟೀಲ, ಬಿಜೆಪಿ ಯುವ ಮುಖಂಡ ಮಹೇಶಗೌಡ ಮುದ್ನಾಳ, ನಗರಸಭೆ ಸದಸ್ಯ ಹಣಮಂತ ಇಟಗಿ, ಅಂಬಯ್ಯ ಶಾಬಾದಿ, ಸುರೇಶ ಅಂಬಿಗೇರ, ಸುರೇಶ ರಾಠೋಡ, ನಾಗರಾಜ ಬಿರನೂರ್, ಮಾರುತಿ ಕಲಾಲ್, ಚಂದ್ರಶೇಖರಗೌಡ ಮಾಗನೂರ, ಲಲಿತಾ ಅನಪುರ, ವಿಜಯಪಾಟೀಲ, ಸುಧೀರ್ ಪಾಟೀಲ, ಅನಿಲ ಕರಾಟೆ ಇದ್ದರು.

ಧಾರ್ಮಿಕ ಕಾರ್ಯಕ್ರಮ

ಹುಣಸಗಿ: ಪಟ್ಟಣದ ಶ್ರೀವರಹಳ್ಳೇರಾಯ ದೇವಸ್ಥಾನದಲ್ಲಿ ಶನಿವಾರ ಹನುಮ ಜಯಂತಿ ಆಚರಿಸಲಾಯಿತು.

ಬೆಳಿಗ್ಗೆ ವರಹಳ್ಳೇರಾಯ ದೇವರಿಗೆ ಅಭಿಷೇಕ, ಪಂಚಾಮೃತ ಅಭಿಷೇಕ ಹಾಗೂ ವಿಶೇಷ ಪೂಜೆ ನೆರವೇರಿಸಲಾಯಿತು.

ನಂತರ ವಿವಿಧ ಮಹಿಳಾ ಭಜನಾ ಮಂಡಳಿಗಳು ಹರಿದಾಸರ ಕೀರ್ತನೆಗಳ ಗಾಯನ ಪ್ರಸ್ತುತಪಡಿಸಿದವು. ಮಾತೆಯರಿಂದ ಹನುಮಂತ ದೇವರ ತೊಟ್ಟಿಲು ಸೇವೆ ನಡೆಯಿತು. ಮಹಾ ಮಂಗಳಾರತಿ ನಡೆದ ಬಳಿಕ ಭಕ್ತರಿಗೆ ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು.

ಪ್ರಧಾನ ಅರ್ಚಕ ಪ್ರಹ್ಲಾದಾಚಾರ್ಯ ಜೋಷಿ ಮಾರ್ಗದರ್ಶನದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಹಿರಿಯರಾದ ರವೀಂದ್ರ ಎಸ್.ಜಮದರಖಾನಾ, ಚಂದ್ರಕಾಂತ ದೇಶಪಾಂಡೆ, ಪ್ರಾಣೇಶ ಕುಲಕರ್ಣಿ, ಶ್ಯಾಮಸುಂದರ ದೇಶಪಾಂಡೆ, ಲಕ್ಷ್ಮಿಕಾಂತ ಕುಲಕರ್ಣಿ, ಶ್ರೀನಿವಾಸ ಕುಲಕರ್ಣಿ, ಪ್ರಾಣೇಶ ದೇಶಪಾಂಡೆ, ಭಾಗ್ಯಶ್ರೀ ದೇಶಪಾಂಡೆ, ವಿದ್ಯಾದೇವಿ ಎಲ್.ಜಮದರಖಾನಾ, ಶಶಿಕಲಾ ಎಸ್.ಕುಲಕರ್ಣಿ, ಮಾಲಾ ಡಿ.ಕುಲಕರ್ಣಿ ಸೇರಿದಂತೆ ವಿಪ್ರ ಸಮಾಜದ ಅನೇಕರು ಭಾಗವಹಿಸಿದ್ದರು.

ಇಲ್ಲಿನ ಹಳ್ಳದ ಹನುಮಾನ್ ದೇವಸ್ಥಾನದಲ್ಲಿ ನಡೆದ ‘ಹನುಮ ಜಯಂತಿ’ ಕಾರ್ಯಕ್ರಮದಲ್ಲಿ ಶನಿವಾರ ಬೆಳಗ್ಗೆಯಿಂದಲೇ ಹಿರಿಯರು, ಯುವಕರು, ಮಾತೆಯರು ಸೇರಿದಂತೆ ಚಿಣ್ಣರು ಗುಂಪು ಗುಂಪಾಗಿ ಭಾಗವಹಿಸಿ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.

ಬೆಳಿಗ್ಗೆ ಹನುಮಾನ್ ದೇವರಿಗೆ ವಿಶೇಷ ಪೂಜೆ, ಅಭಿಷೇಕ, ಮಹಾ ಮಂಗಳಾರತಿ ನಡೆಯಿತು. ಭಕ್ತರು ಸಾಮೂಹಿಕವಾಗಿ ಹನುಮಾನ್ ಚಾಲೀಸ್ ಪಠಣ ಮಾಡಿದರು. ನಂತರ ಆಗಮಿಸಿದ್ದ ಎಲ್ಲರಿಗೂ ಸಿಹಿ ವಿತರಣೆ ಮಾಡಲಾಯಿತು.

ಕಾಮನಟಗಿ: ತಾಲ್ಲೂಕಿನ ಕಾಮನಟಗಿ ಗ್ರಾಮದ ಹನುಮಂತ ದೇವರ ದೇವಸ್ಥಾನದಲ್ಲಿ ಹನುಮ ಜಯಂತಿಯನ್ನು ಶೃದ್ಧಾ, ಭಕ್ತಿಯಿಂದ ಆಚರಿಸಿ ಸಂಭ್ರಮಿಸಲಾಯಿತು.

ಬೆಳಗ್ಗೆಯಿಂದಲೇ ದೇವರಿಗೆ ವಾಯುಸ್ತುತಿ ಪಠಣದೊಂದಿಗೆ ವಿಶೇಷ ಅಭಿಷೇಕ, ಮಹಾಪೂಜೆ, ವಸಂತ ಪೂಜನ, ಸಾಮೂಹಿಕವಾಗಿ ಹನುಮಾನ್ ಚಾಲಿಸ್ ಪಠಣ ಮಾಡಲಾಯಿತು. ಕಲಾವಿದೆ ಆಪೇಕ್ಷಾ ಕುಲಕರ್ಣಿ ಅವರಿಂದ ನಡೆದ ‘ದಾಸವಾಣಿ’ ಎಲ್ಲರ ಗಮನ ಸೆಳೆಯಿತು.

ಜಗನ್ನಾಥಾಚಾರ್ಯ ಜೋಷಿ ಅವರ ನೇತೃತ್ವದಲ್ಲಿ ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.

ಡಾ. ಗೋವಿಂದರಾವ್ ಜಹಗಿರದಾರ, ದತ್ತಾತ್ರೇಯ ಜಹಗೀರದಾರ್, ನರಸಿಂಹರಾವ್ ಜಹಗಿರದಾರ್, ರಮೇಶ ಕುಲಕರ್ಣಿ, ಲಕ್ಷ್ಮೀಕಾಂತ ಕುಲಕರ್ಣಿ ದ್ಯಾಮನಹಾಳ, ದೇವರಾಜ್ ಕುಲಕರ್ಣಿ, ಪ್ರಶಾಂತ, ಮಾರುತಿರಾವ್ ಕುಲಕರ್ಣಿ ಸೇರಿದಂತೆ ಇತರರು ಭಾಗವಹಿಸಿದ್ದರು.

ನಾರಾಯಣಪುರ: ತೊಟ್ಟಿಲು ಸೇವೆ

ನಾರಾಯಣಪುರ: ಪಟ್ಟಣದ ಹನುಮದೇವರ ದೇಗುಲದಲ್ಲಿ ಶನಿವಾರ ಹನುಮ ಜಯಂತಿ ಆಚರಿಸಲಾಯಿತು.

ಮಹಿಳೆಯರು ಹನುಮ ದೇವರ ಭಾವಚಿತ್ರವನ್ನು ತೊಟ್ಟಿಲಲ್ಲಿಟ್ಟು ತೂಗಿ ವಿಶೇಷ ಪೂಜೆ ಸಲ್ಲಿಸಿದರು.

ದೇಗುಲದ ಮುಖ್ಯ ಅರ್ಚಕ ಸಂಗಯ್ಯ ಹಿರೇಮಠ ಮಾತನಾಡಿ,‘ಹನುಮ ದೇವರ ಹುಟ್ಟಿದ ದಿನವನ್ನು ಹನುಮ ಜಯಂತಿ ಎಂದು ಆಚರಿಸಲಾಗುತ್ತಿದೆ. ಹನುಮ ದೇವರಿಗೆ ಅಪಾರ ಭಕ್ತರಿದ್ದಾರೆ. ಹನುಮ ದೇವರನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸುವ ಭಕ್ತ ಗಣಕ್ಕೆ ಆಂಜನೇಯ ಸ್ವಾಮಿ ಸರ್ವಕಾಲಕ್ಕೂ ಒಳ್ಳೆಯದನ್ನು ಮಾಡುತ್ತಾನೆ’ ಎಂದು ಅವರು ಹೇಳಿದರು.

ಹನುಮದೇವರಿಗೆ, ಈಶ್ವರ ಲಿಂಗಕ್ಕೆ, ಶ್ರೀರಾಮ, ಸೀತಾಮಾತೆ, ಲಕ್ಷ್ಮಣ ದೇವರು, ಅಕ್ಕಮಹಾದೇವಿ ಮೂರ್ತಿಗಳಿಗೆ ಪಂಚಾಮೃತ ಅಭಿಷೇಕ, ಅಲಂಕಾರದೊಂದಿಗೆ ವಿಶೇಷ ಪೂಜೆ ನೆರವೇರಿಸಲಾಗಿದೆ. ಕಾರ್ಯಕ್ರಮದಲ್ಲಿ ಭಾಗಿಯಾದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು ಎಂದು ತಿಳಿಸಿದರು.

ಅರ್ಚಕರಾದ ಈರಯ್ಯ ಸ್ವಾಮಿ, ಅಂದಾನಪ್ಪ ಚಿನಿವಾಲರ ಸೇರಿ ದೇಗುಲದ ಭಕ್ತರು ಹಾಗೂ ಮಹಿಳೆಯರು ಈ ವೇಳೆ ಭಾಗವಹಿಸಿದ್ದರು.

‘ಹನುಮ ಅಂತಃಶಕ್ತಿಯ ಪ್ರತೀಕ’

ಗುರುಮಠಕಲ್: ‘ಪ್ರತಿ ಗ್ರಾಮಗಳಲ್ಲೂ ಹನುಮ ಮಂದಿರವಿರುತ್ತದೆ. ಹನುಮ ಎಂದರೆ ಅಂತಃ ಶಕ್ತಿಯ ಪ್ರತೀಕ’ ಎಂದು ಅಬ್ಬೆತುಮಕೂರಿನ ಡಾ.ಗಂಗಾಧರ ಶ್ರೀಗಳು ಅಭಿಪ್ರಾಯಪಟ್ಟರು.

ತಾಲ್ಲೂಕಿನ ಸಿದ್ದಾಪುರ ಗ್ರಾಮದಲ್ಲಿ ಶನಿವಾರ ಹನುಮ ಜಯಂತಿಯ ಅಂಗವಾಗಿ ನಡೆದ ನೂತನ ಕಳಸಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,‘ ಜೀವನದಲ್ಲಿ ಕೇವಲ ಹಣ ಸಂಪಾದಿಸಿದರೆ ನೆಮ್ಮದಿ ಸಿಗದು. ಭಕ್ತಿ, ಸತ್ಸಂಗ, ದಾನ, ಧರ್ಮ, ಆಧ್ಯಾತ್ಮ ಚಿಂತನೆಗಳಿಂದ ನೆಮ್ಮದಿ ಸಿಗುತ್ತದೆ. ಅದನ್ನೇ ಮುಕ್ತಿ ಎನ್ನುವರು’ ಎಂದು ಹೇಳಿದರು.

ಮನುಷ್ಯ ಹುಟ್ಟವಾಗ ಹೇಗೆ ಖಾಲಿಯಾಗಿ ಬುರುವನೋ ಮರಣದಲ್ಲಿಯೂ ಖಾಲಿಯಾಗಿಯೇ ಹೋಗುತ್ತಾನೆ. ಆದರೆ ಈ ನಡುವಿನ ಜೀವನದಲ್ಲಿ ನಾವು ಮಾಡುವ ಧರ್ಮ ಕಾರ್ಯಗಳು ಹಾಗೂ ದೇವತಾ ಕಾರ್ಯಗಳು ನಮ್ಮ ಜೀವನವನ್ನು ಸಾರ್ಥಕಗೊಳಿಸುತ್ತದೆ ಎಂದರು.

ಖಾಸಾಮಠದ ಶಾಂತವೀರ ಗುರು ಮುರುಘರಾಜೇಂದ್ರ ಶ್ರೀ ಹಾಗೂ ಹೆಡಗಿಮದ್ರಾದ ಶಾಂತಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀ ಸಾನಿಧ್ಯವಹಿಸಿದ್ದರು.

ಪುರಸಭೆ ಅಧ್ಯಕ್ಷ ಪಾಪಣ್ಣ ಮನ್ನೆ, ಜೆಡಿಎಸ್ ಬ್ಲಾಕ್ ಘಟಕದ ಅಧ್ಯಕ್ಷ ಪ್ರಕಾಶ ನಿರೇಟಿ, ಎಪಿಎಂಸಿ ಸದಸ್ಯ ಅನಂತಪ್ಪ ಯದ್ಲಾಪುರ, ಬಸಣ್ಣ ದೇವರಳ್ಳಿ, ನಾರಾಯಣ, ತಿಪ್ಪಣ್ಣ ಗುಟ್ಟಲ್, ಬಸಿರೆಡ್ಡಿ ಎಂಟಿಪಲ್ಲಿ ಸೇರಿದಂತೆ ಪ್ರಮುಖರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT