ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ | ಅವಧಿಗೆ ಮುನ್ನವೇ ಭತ್ತ ಕೊಯ್ಲು

ಆಲಿಕಲ್ಲು ಮಳೆಗೆ ಹಾನಿಯಾದ ಬೆಳೆ, ಆತಂಕಕ್ಕೆ ಒಳಗಾದ ರೈತರು
Last Updated 25 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಆಕಾಲಿಕ ಆಲಿಕಲ್ಲು ಮಳೆ, ಬಿರುಗಾಳಿಯಿಂದ ಕೊಯ್ಲಿಗೆ ಬಂದ ಭತ್ತ ನೆಲಕಚ್ಚಿದ್ದು, ಆತಂಕಗೊಂಡ ರೈತರು ಅವಧಿಗೆ ಮುನ್ನವೇ ಭತ್ತದ ಕೊಯ್ಲುಆರಂಭಿಸಿದ್ದಾರೆ.

ಕೃಷ್ಣಾ ನದಿ ಪಾತ್ರ ಮತ್ತು ಕೊಳವೆ ಬಾವಿ ಹೊಂದಿರುವ ರೈತರು ಬೇಸಿಗೆ ಹಂಗಾಮಿನ ಭತ್ತ ಬೆಳೆದಿದ್ದಾರೆ. ಅಲ್ಲದೆ ನಾರಾಯಣಪುರ ಜಲಾಶಯದಿಂದ ನೀರು ಲಭ್ಯವಾಗಿದ್ದರಿಂದ ರೈತರಿಗೆ ಅನುಕೂಲವಾಗಿತ್ತು. ಆದರೆ, ಗಾಳಿ, ಮಳೆಯಿಂದ ಪೈರು ಇನ್ನೂ ಹಸಿರು ಇರುವಾಗಲೇ ರೈತರು ಭತ್ತದ ಕೊಯ್ಲು ಆರಂಭಿಸಿದ್ದಾರೆ.

‘ಐದು ಎಕರೆಯಲ್ಲಿ ಭತ್ತ ನಾಟಿ ಮಾಡಿದ್ದೇವೆ. ಭರ್ಜರಿ ಲಾಭದ ನಿರೀಕ್ಷೆ ಇತ್ತು. ಆದರೆ, ಮಳೆ, ಗಾಳಿಯಿಂದ ನಮ್ಮೆಲ್ಲ ನಿರೀಕ್ಷೆಗಳು ಮಣ್ಣು ಪಾಲಾಗಿವೆ. ಹೀಗಾಗಿ ಪೈರು ಹಸಿರಿದ್ದರೂ ಕೊಯ್ಲು ಮಾಡುತ್ತಿದ್ದೇವೆ. ಬಂದಷ್ಟು ಬರಲಿ. ಮತ್ತೊಂದು ಬಾರಿ ಮಳೆ, ಬಿರುಗಾಳಿ ಬೀಸಿದರೆ ಕಾಳುಗಳೆಲ್ಲ ಉದುರಿ ಹೋಗುತ್ತಿವೆ. ಇತ್ತೀಚೆಗೆ ಸುರಿದ ಮಳೆಗೆ ಕಾಳು ಮೊಳಕೆ ಬಂದಿವೆ’ ಎಂದು ತಾಲ್ಲೂಕಿನ ಜೀನಕೇರಾ ರೈತ ತಾಯಪ್ಪ ಹೊಸಮನಿ ನೋವಿನಿಂದ ನುಡಿದರು.

‘ಎಕರೆಗೆ ₹20ರಿಂದ 30 ಸಾವಿರ ಖರ್ಚು ಮಾಡಿದ್ದೇವೆ. ಕೂಲಿ, ಗೊಬ್ಬರ, ಎಲ್ಲ ತೆಗೆದರೆ ಯಾವುದಕ್ಕೂ ಸಾಲುವುದಿಲ್ಲ. ಆದರೆ, ದನಕರುಗಳಿಗೆ ಮೇವು ಸಿಗುತ್ತದೆ. ಮೋಡ ಕವಿದ ವಾತಾವರಣ ಇರುವುದರಿಂದ ಆತಂಕಗೊಂಡುಕೊಯ್ಲು ಮಾಡುತ್ತಿದ್ದೇವೆ’ ಎಂದು ಪ್ರಜಾವಾಣಿ ಪ್ರತಿನಿಧಿ ಮಾತಿಗಿಳಿದಾಗ ರೈತ ನಿಟ್ಟಿಸಿರು ಬಿಟ್ಟು ಹೇಳಿದರು.

ಬೇಸಿಗೆ ಮಳೆ ಹಾನಿ ಮಾಡಲು ಬರುತ್ತದೆ. ಮತ್ತೆ ಮಳೆ ಬಿದ್ದರೆ ಸಮಸ್ಯೆ ಆಗುತ್ತದೆ. ಹೀಗಾಗಿಯೇ ರೈತರು ಜಿಲ್ಲೆಯ ಹಲವೆಡೆ ಕೊಯ್ಲು ಆರಂಭಿಸಿದ್ದಾರೆ.25 ಚೀಲ ಬರುವ ಫಸಲು 8–9 ಚೀಲ ಬಂದರೆ ಹೆಚ್ಚು ಎನ್ನುವಂತಾಗಿದೆ.

ಇನ್ನೊಂದೆಡೆ ಖರೀದಿದಾರರು ಇಲ್ಲದೆ ರೈತರು ಸಮಸ್ಯೆ ಅನುಭವಿಸುತ್ತಿದ್ದಾರೆ. ಗೊಬ್ಬರ ಖರೀದಿ ಮಾಡಿದ ಅಂಗಡಿಗಳ ಮಾಲೀಕರಿಗೆ ಫಸಲು ಮಾರಿದ್ದಾರೆ. ₹1200, 1,300ಕ್ಕೆ ಮಾರಾಟ ಮಾಡಿದ್ದಾರೆ. ಲಾಕ್‌ಡೌನ್‌ ಪರಿಣಾಮ ಅಕ್ಕಿ ಮಿಲ್‌ಗಳು ತೆರೆಯದಿದ್ದರಿಂದ ತೊಂದರೆ ಆಗಿದೆ ಎಂದು ರೈತರು ಪ್ರತಿಕ್ರಿಯಿಸಿದರು.

***

ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತೆ ನಮ್ಮ ಸ್ಥಿತಿಯಾಗಿದೆ. ಬೆಳೆಯಿಂದ ನಷ್ಟವಾಗಿದೆ ಹೊರತು ಲಾಭವಾಗಲಿಲ್ಲ
-ಯಲ್ಲಮ್ಮ ಮಲ್ಲಯ್ಯ ಪರಮಯ್ಯ, ರೈತ ಮಹಿಳೆ

***

ಸರ್ಕಾರಕ್ಕೆ ಈಗಾಗಲೇ ಭತ್ತ ನಾಶವಾದ ಬಗ್ಗೆ ಸರ್ವೆ ಮಾಡಿ ವರದಿ ಕೊಟ್ಟಿದ್ದೇವೆ. ಹಣ ಬಂದ ನಂತರ ರೈತರಿಗೆ ತಲುಪಿಸಲಾಗುವುದು
-ದೇವಿಕಾ ಆರ್., ಜಂಟಿ ಕೃಷಿ ನಿರ್ದೇಶಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT